ಅಮೆರಿಕದ ವಿವಿಗೆ 20 ದಶಲಕ್ಷ ಡಾಲರ್ ಕೊಡುಗೆ ನೀಡಿದ ಭಾರತೀಯ ಸಂಜಾತ ದಂಪತಿ
Photo Credit : NDTV
ಅನುರಾಧ ಮತ್ತು ವಿಕಾಸ್ ಸಿನ್ಹಾ UNT ಯ ಹೊಸ ಕಾಲೇಜಿಗೆ ಧನ ಸಹಾಯ ಮಾಡಿದ್ದಾರೆ. ಅಮೆರಿಕಕ್ಕೆ ಬರುವ ಇತರ ವಿದ್ಯಾರ್ಥಿಗಳಿಗೂ ಅವಕಾಶ ಸೃಷ್ಟಿಸಲು ಕೊಡುಗೆ ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ಅನಲಿಟಿಕ್ಸ್ ಪ್ರೋಗ್ರಾಂಗಳಲ್ಲಿ ಬಹುದೊಡ್ಡ ಹೂಡಿಕೆಯಾಗಿ ಭಾರತೀಯ ಮೂಲದ ದಂಪತಿ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ (UNT) 20 ದಶಲಕ್ಷ ಡಾಲರ್ ಕೊಡುಗೆ ನೀಡಿದ್ದಾರೆ. ಅನುರಾಧ ಮತ್ತು ವಿಕಾಸ್ ಸಿನ್ಹಾ ವಿಶ್ವವಿದ್ಯಾಲಯದ ಹೊಸ ಕಾಲೇಜಿಗೆ ಈ ಕೊಡುಗೆ ನೀಡಿದ್ದಾರೆ. ಇಬ್ಬರೂ ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದವರು. ಶಿಕ್ಷಣವು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಿಸಬಹುದು ಎಂಬ ನಂಬಿಕೆಯಲ್ಲಿ ಅವರು ಈ ಕೊಡುಗೆ ನೀಡಿದ್ದಾರೆ.
ಕೊಡುಗೆ ನೀಡಿದ ದಂಪತಿಯ ವಿವರವೇನು?
ದಂಪತಿಯ ಆರಂಭಿಕ ಶಿಕ್ಷಣ ಭಾರತದಲ್ಲಿ ನಡೆದಿದೆ. ಹೆಚ್ಚಿನ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳುವ ಮೊದಲು ಇಬ್ಬರೂ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ನಂತರ ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದಿಂದ ತಮ್ಮ ಪದವಿ ಪಡೆದ ಮೇಲೆ ನಾರ್ತ್ವೆಸ್ಟರ್ನ್ ವಿವಿಯಲ್ಲಿ ಅಧ್ಯಯನ ಮಾಡಿ ನಂತರ UNT ಗೆ ಮರಳಿದರು. ಅಲ್ಲಿ 2023ರಲ್ಲಿ ತಮ್ಮ ಪಿಎಚ್ಡಿ ಪದವಿ ಪೂರ್ಣಗೊಳಿಸಿದ್ದರು. ಇದೀಗ ಅವರು ಬ್ರಾಡ್ಕಾಮ್ನ ಮೇನ್ಫ್ರೇಮ್ ಸಾಫ್ಟ್ವೇರ್ ಉದ್ಯಮದಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2023ರಿಂದ ಯುಎನ್ಟಿ ಕಾಲೇಜ್ ಆಫ್ ಇನ್ಫಾರ್ಮೇಶನ್ ಲೀಡರ್ಶಿಪ್ ಮಂಡಳಿಯ ಭಾಗವಾಗಿದ್ದಾರೆ. ಹೀಗಾಗಿ ಅವರು ವಿವಿ ಜೊತೆಗೆ ದಾನಿಗಳಾಗಿ ಚೆಕ್ ಬರೆಯುವ ಸಂಬಂಧ ಮಾತ್ರ ಹೊಂದಿಲ್ಲ. ವಿಕಾಸ್ ವಿವಿಯ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.
ದಾನ ಮಾಡಿರುವ ಉದ್ದೇಶವೇನು?
ಶಿಕ್ಷಣವು ತಮಗೆ ಸಮೃದ್ಧಿಯ ಬಾಗಿಲು ತೆರೆದಂತೆ ಇತರರಿಗೂ ತೆರೆದಿಡಲು ಸಹಾಯ ಮಾಡಲು ದಂಪತಿ ಬಯಸಿದ್ದಾರೆ. ಇದಕ್ಕೂ ಮೊದಲು ದಂಪತಿ UNT ಯ ಡೇಟಾ ಸೈನ್ಸ್ ಪ್ರೋಗ್ರಾಂಗಳನ್ನೂ ಕೊಡುಗೆ ನೀಡುವ ಮೂಲಕ ಬೆಂಬಲಿಸಿದ್ದರು. 2024ರ ನಿಧಿಯಲ್ಲಿ ವಿವಿ ಅನುರಾಧ ಮತ್ತು ವಿಕಾಸ್ ಸಿನ್ಹಾ ಡೇಟಾ ಸೈನ್ಸ್ ವಿಭಾಗವನ್ನು ಸ್ಥಾಪಿಸಲು ಸಹಾಯವಾಗಿದೆ. 2025ರಲ್ಲಿ ಸಿನ್ಹಾ ಡೇಟಾ ಸೈನ್ಸ್ ಇನ್ನೋವೇಶನ್ ಲ್ಯಾಬ್ಗೆ ಅವರು 2.15 ದಶಲಕ್ಷ ಡಾಲರ್ ಕೊಡುಗೆ ನೀಡಿದ್ದರು.
ಈಗಿನ ಕೊಡುಗೆಯ ಫಲಿತಾಂಶವೇನು?
ಈಗಿನ 20 ದಶಲಕ್ಷ ಡಾಲರ್ ಉಡುಗೊರೆಯು ಅನುರಾಧ ಮತ್ತು ವಿಕಾಸ್ ಸಿನ್ಹಾ ಕಾಲೇಜ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಅಡ್ವಾನ್ಸ್ ಅನಾಲಿಟಿಕ್ಸ್ ರಚನೆಗಾಗಿ ನೀಡಲಾಗಿದೆ. ಕಾಲೇಜು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಡೇಟಾ ಸೈನ್ಸ್, ಹೆಲ್ತ್ ಇನ್ಫಾರ್ಮ್ಯಾಟಿಕ್ಸ್, ಅಡ್ವಾನ್ಸ್ಡ್ ಅನಾಲಿಟಿಕ್ಸ್ ಮತ್ತು ಲರ್ನಿಂಗ್ ಟೆಕ್ನಾಲಜೀಸ್ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ.
ಈಗಿನ ಕೊಡುಗೆಯು ಆರು ಶಾಶ್ವತ ದತ್ತಿಗಳನ್ನು ಸ್ಥಾಪಿಸುತ್ತದೆ. ಅಂದರೆ ವಿದ್ಯಾರ್ಥಿವೇತನಗಳು, ಪ್ರಾಧ್ಯಾಪಕ ಹುದ್ದೆಗಳು, ಸಂಶೋಧನೆ, ಕಾಲೇಜು ನಾಯಕತ್ವ, ಉದ್ಯಮ ಶೀಲತೆ ಮತ್ತು ಉದಯೋನ್ಮುಖ ತಂತ್ರಜ್ಞಗಳಲ್ಲಿ ದತ್ತಿಗಳನ್ನು ಪ್ರಾರಂಭಿಸಲಾಗುವುದು. ಹೀಗೆ ಕೊಡುಗೆಯನ್ನು ವರ್ಷಗಳ ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧನೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.
ವಲಸಿಗರು ಕೇವಲ ಅಮೆರಿಕದ ಕನಸಿನಲ್ಲಿ ಭಾಗವಹಿಸುವುದಿಲ್ಲ ಬದಲಾಗಿ ಅದನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ ಎನ್ನುವುದನ್ನು ಅವರು ಬಂಬಿದ್ದಾರೆ. ತಾವು ವಿದ್ಯಾರ್ಥಿಗಳಾಗಿ ಅಮೆರಿಕಕ್ಕೆ ಬಂದಿದ್ದೇವೆ. ಇದೀಗ ಇತರ ವಿದ್ಯಾರ್ಥಿಗಳಿಗೂ ಅವಕಾಶ ಸೃಷ್ಟಿಸಲು ಕೊಡುಗೆ ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.