90 ವರ್ಷ ಹಳೆಯ ಗಣಿತ ಸಮಸ್ಯೆಯನ್ನು ಪರಿಹಿರಿಸಿದ್ದಾಗಿ ಹೇಳಿದ OpenAI; ತನ್ನ ಕಲ್ಪನೆ ಕದ್ದ ಆರೋಪ ಹೊರಿಸಿದ ಗಣಿತಜ್ಞ!
Photo Credit : timesofindia.indiatimes.com
OpenAI ನ ಇನ್ನೂ ಬಿಡುಗಡೆಯಾಗದ AI ಮಾದರಿ ಅನಿರ್ಧರಿತ 90 ವರ್ಷಗಳ ಹಳೆಯ ಗಣಿತ ಸಮಸ್ಯೆಯೊಂದನ್ನು ಪರಿಹರಿಸಿದೆ ಎಂದು ಘೋಷಿಸಿಕೊಂಡಿದೆ. ಅದಕ್ಕಾಗಿ 10,000 AI ಏಜೆಂಟ್ಗಳನ್ನು ನೇಮಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಸಮಸ್ಯೆಯನ್ನು ಪರಿಹರಿಸಿದವರಿಗೆ ಕ್ಲೇ ಮ್ಯಾಥಮೆಟಿಕ್ಸ್ ಇನ್ಸ್ಟಿಟ್ಯೂಟ್ 1 ದಶಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. OpenAI ನ ಏಜೆಂಟ್ಗಳು ಸೇರಿ ಸಂಶೋಧನೆ ಅಥವಾ ಗಣಿತದ ಲೆಕ್ಕಾಚಾರ ಪೂರ್ಣಗೊಳಿಸಿ ಅದರ ಫಲಿತಾಂಶವನ್ನು 88 ಗಂಟೆಗಳಲ್ಲಿ ಮಂಡಿಸಿದವು. ಮಂಗಳವಾರದ ಘೋಷಣೆಯು ಚಾಟ್ಜಿಪಿಟಿ ನಿರ್ಮಿಸಿದ ಕಂಪನಿಗೆ ಶುದ್ಧ ಗೆಲುವು ಆಗಬೇಕಿತ್ತು. ಆದರೆ ಹಾಗಾಗಿಲ್ಲ.
ನ್ಯೂಯಾರ್ಕ್ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕ ಟ್ರಿಸ್ಟಾನ್ ಬಕ್ಮಾಸ್ಟರ್ ಅವರು ಈ ಸಮಸ್ಯೆಗೆ ಹತ್ತಿರವಾದ ಸಮಸ್ಯೆಯೊಂದರ ಕುರಿತು ತಮ್ಮದೇ ಆದ ಸಂಶೋಧನೆಯ ವರದಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳ ನಂತರ OpenAI ಸಾಧನೆ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಬಕ್ಮಾಸ್ಟರ್ ಅವರು ತಮ್ಮ ಪ್ರಕಟವಾಗದ ಸಂಶೋಧನಾ ಬರಹಗಳಿಂದಲೇ ಕಲ್ಪನೆ ಕದ್ದು OpenAI ತನ್ನ ಗಣಿತದ ಸಮಸ್ಯೆಯನ್ನು ಪರಿಹರಿಸುವ ಹಾದಿಯಲ್ಲಿ ಮುನ್ನುಗ್ಗಿದೆ ಎಂದು ಆರೋಪಿಸಿದ್ದಾರೆ.
ಬಕ್ಮಾಸ್ಟರ್ ಮತ್ತು ಅವರ ಸಹೋದ್ಯೋಗಿ ತಮ್ಮ ಸಂಶೋಧನೆಯ ಕರಡು ಪ್ರತಿಗಳನ್ನು ತಿಂಗಳುಗಟ್ಟಲೆ OpenAIನ ಕೋಡಿಂಗ್ ಉಪಕರಣವಾದ ‘ಕೋಡೆಕ್ಸ್’ ಒಳಗೆ ಅಪ್ಲೋಡ್ ಮಾಡಿ (ಫೀಡ್ ಮಾಡಿ) ಬಳಸುತ್ತಿದ್ದರು. ತಾವೇ ನೀಡಿದ ರಹಸ್ಯ ಡೇಟಾವನ್ನು ಬಳಸಿಕೊಂಡು OpenAI ತನ್ನದೇ ಆದ ಹೊಸ ಮಾದರಿಯನ್ನು ತರಬೇತಿಗೊಳಿಸಿ ತಮಗಿಂತ ಮುಂಚಿತವಾಗಿ ಪರಿಹಾರ ಕಂಡುಹಿಡಿದಿದೆ ಎಂದು ಪ್ರೊಫೆಸರ್ ವಾದಿಸುತ್ತಿದ್ದಾರೆ.
Navier-Stokes ಸಮೀಕರಣಗಳು ದ್ರವ ಮತ್ತು ಅನಿಲ ಹೇಗೆ ಚಲಿಸುತ್ತವೆ ಎಂಬುದನ್ನು ವಿವರಿಸುತ್ತವೆ. ಎಂಜಿನಿಯರ್ಗಳು ದೈನಂದಿನ ಜೀವನದಲ್ಲಿ ವಿಮಾನಗಳ ರೆಕ್ಕೆ ವಿನ್ಯಾಸ, ಹವಾಮಾನ ಮುನ್ಸೂಚನೆ ಮತ್ತು ದೇಹದಲ್ಲಿ ರಕ್ತದ ಹರಿವು ಹೇಗೆ ಆಗುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಲು ಈ ಸಮೀಕರಣವನ್ನು ಬಳಸುತ್ತಾರೆ. ಆದರೆ ಯಾರೂ ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ಪ್ರಶ್ನೆ ಎಂದರೆ ಈ ಸಮೀಕರಣಗಳು ಎಂದಾದರೂ ವಿಫಲಗೊಳ್ಳುತ್ತವೆಯೇ (break down) ಎನ್ನುವುದು.
ಅಂದರೆ ಆರಂಭದಲ್ಲಿ ಶಾಂತವಾಗಿ ಮತ್ತು ಸರಾಗವಾಗಿ ಚಲಿಸುವ ದ್ರವವನ್ನು ಒಂದು ನಿರ್ದಿಷ್ಟ ಸಮಯದಲ್ಲಿ ಅನಂತ ವೇಗಕ್ಕೆ (Infinite speed) ತಳ್ಳಬಹುದೆ? ಗಣಿತಜ್ಞರು ಈ ಸ್ಥಿತಿಯನ್ನು ‘ಸಿಂಗ್ಯುಲಾರಿಟಿ’ ಎಂದು ಕರೆಯುತ್ತಾರೆ. OpenAI ಕಂಪನಿ ನೀಡಿದ ಸಾಕ್ಷ್ಯವು ‘ಹೌದು ಹಾಗೆ ಮಾಡಲು ಸಾಧ್ಯವಿದೆ’ ಎಂದು ಹೇಳುತ್ತದೆ. ಅವರ ಪರಿಹಾರವು ಒಳಮುಖವಾಗಿ ಸುರುಳಿಯಾಕಾರದಲ್ಲಿ ಸುತ್ತುತ್ತಾ, ಉದ್ದವಾಗಿ ವಿಸ್ತರಿಸುತ್ತಾ ಮತ್ತು ಅತಿ ವೇಗವನ್ನು ಪಡೆದುಕೊಳ್ಳುವ ಒಂದು ಸುಳಿಯನ್ನು Vortex) ವಿವರಿಸುತ್ತದೆ. ಆದರೆ, ಆಶ್ಚರ್ಯಕರ ವಿಷಯವೆಂದರೆ ಅದರ ವೇಗ ಹೆಚ್ಚಾದರೂ ಇಡೀ ಪ್ರಕ್ರಿಯೆಯಲ್ಲಿ ಅದರ ಶಕ್ತಿಯು ಮಾತ್ರ ನಿಯಂತ್ರಣ ಮೀರಿ ಹೋಗುವುದಿಲ್ಲ, ಸೀಮಿತವಾಗಿಯೇ ಇರುತ್ತದೆ.
OpenAI ಆಗಸ್ಟ್ 28ರಂದು ಇಂಟರ್ನಲ್ ಮಾಡೆಲ್ಗೆ ತರಬೇತಿ ನೀಡಲು ಪ್ರಾರಂಭಿಸಿತು. ಅದನ್ನು GPT-6-ಅಸ್ಟ್ರಾಗಿಂತ ಗಮನಾರ್ಹವಾಗಿ ಹೆಚ್ಚು ಸಮರ್ಥ ಎಂದು ಹೇಳಿದೆ. ಸೆಪ್ಟೆಂಬರ್ 1ರಂದು ಎರಡು ಮಿಲೇನಿಯಂ ಪ್ರಶಸ್ತಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎನ್ನುವ ವದಂತಿಗಳ ಹಿನ್ನೆಲೆಯಲ್ಲಿ ಉಳಿದವುಗಳ ಕಡೆಗೆ ತನ್ನ ಏಜೆಂಟ್ಗಳನ್ನು ಗುರಿ ಮಾಡಿದೆ. ನೇವಿಯರ್-ಸ್ಟೋಕ್ಸ್ನಲ್ಲಿ ಕೆಲಸ ಮಾಡುವ ತಂಡ ಸೆಪ್ಟೆಂಬರ್ 5ರಂದು ಸಮಸ್ಯೆಯನ್ನು ಪರಿಹರಿಸುವ ಮೊದಲು ಸುಮಾರು 2.7 ದಶಲಕ್ಷ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದೆ ಮತ್ತು ಸರಿಸುಮಾರು 130 ಶತಕೋಟಿ ಔಟ್ಪುಟ್ ಟೋಕನ್ಗಳನ್ನು ಬಳಸಿದೆ. ಅಂದರೆ 17 ಗಂಟೆಗಳನ್ನು ತೆಗೆದುಕೊಂಡಿದೆ. ಇಂತಹ ಪ್ರಯತ್ನದ ಕಂಪ್ಯೂಟ್ ಶುಲ್ಕ ಅಂದಾಜು 10 ದಶಲಕ್ಷ ಡಾಲರ್ನಿಂದ 22.5 ದಶಲಕ್ಷ ಡಾಲರ್ವರೆಗೆ ಇರುತ್ತದೆ. ಇದೀಗ OpenAI ತಾನು ಬಹುಮಾನದ ಹಣಕ್ಕಾಗಿ ವಿನಂತಿಸುವುದಿಲ್ಲ ಎಂದು ಹೇಳಿದೆ.
ನಾಲ್ಕು ದಿನಗಳಲ್ಲಿ ಯಾವುದೇ ಮಾಡೆಲ್ ನಿರ್ದಿಷ್ಟ ಮಾರ್ಗವನ್ನು ಕಂಡುಕೊಳ್ಳುವುದಿಲ್ಲ ಎಂದು ಬಕ್ಮಾಸ್ಟರ್ ಹೇಳುತ್ತಾರೆ. ಅವರು ಆಂಥ್ರೋಪಿಕ್ನಿಂದ ವೈಯಕ್ತಿಕ ಸಾಮರ್ಥ್ಯದಲ್ಲಿ ನೇಮಿಸಲಾದ ಗಣಿತಜ್ಞ ಲೆವೆಂಟ್ ಆಲ್ಪೋಜ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಕೋಡೆಕ್ಸ್ ಮತ್ತು ಕ್ಲೌಡ್ ಎರಡನ್ನೂ ಬಳಸುತ್ತಿದ್ದರು. ಆಗಸ್ಟ್ 15ರಂದು ಈ ಸಂಶೋಧಕರ ಜೋಡಿ ನೇವಿಯರ್-ಸ್ಟೋಕ್ಸ್ನ ಸಮೀಕರಣದ ಫ್ರಿಕ್ಷನ್ಲೆಸ್ ಕಸಿನ್ನಂತಿರುವ ‘ಆಯ್ಲರ್ ಸಮೀಕರಣಗಳು’ ನಿಜಕ್ಕೂ ವಿಫಲಗೊಳ್ಳುತ್ತವೆ ಅಥವಾ ಸಿಂಗ್ಯುಲಾರಿಟಿ ತಲುಪುತ್ತವೆ ಎಂಬುದನ್ನು ಸಾಬೀತುಮಾಡಿದರು.
ಪ್ರೊಫೆಸರ್ ಮತ್ತು ಅವರ ತಂಡ ‘ಫೋರ್ಸಿಂಗ್’ ಎಂಬ ವಿಶಿಷ್ಟ ಗಣಿತದ ತಂತ್ರವನ್ನು ಬಳಸಿ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸುತ್ತಿದ್ದರು. ಜಗತ್ತಿನ ಇನ್ಯಾವುದೇ ಗಣಿತಜ್ಞರಿಗೆ ಈ ಕಲ್ಪನೆ ಇರಲಿಲ್ಲ. ಆದರೆ OpenAI ಸಂಸ್ಥೆಯು ಕೋಡೆಕ್ಸ್ ಡೇಟಾದ ಮೂಲಕ ಈ ರಹಸ್ಯ ಕಲ್ಪನೆಯನ್ನು ಕದ್ದಿದೆ ಎಂದು ಪ್ರೊಫೆಸರ್ ವಾದಿಸಿದ್ದಾರೆ.
ಬಕ್ಮಾಸ್ಟರ್ ಅವರು OpenAI ವಿಜ್ಞಾನಿ ಸೆಬಾಸ್ಟಿಯನ್ ಬಬೆಕ್ ಅವರಲ್ಲಿ, “ನಾವು ಕೋಡೆಕ್ಸ್ ಟೂಲ್ನಲ್ಲಿ ಅಪ್ಲೋಡ್ ಮಾಡಿದ ರಹಸ್ಯ ಸಂಶೋಧನಾ ಪ್ರತಿಗಳನ್ನು ನಿಮ್ಮ ಹೊಸ ಮಾಡೆಲ್ಗೆ ತರಬೇತಿ ಕೊಡಲು ಬಳಸಿಕೊಂಡಿದ್ದೀರಾ?” ಎಂದು ನೇರವಾಗಿ ಕೇಳಿದಾಗ OpenAI ಯಾವುದೇ ಸ್ಪಷ್ಟ ಉತ್ತರ ನೀಡದೆ ಮೌನವಹಿಸಿತು ಎಂದು ಅವರು ಆರೋಪಿಸಿದ್ದಾರೆ.
ವಿವಾದವನ್ನು ಮುಚ್ಚಿಹಾಕಲು OpenAI ಪ್ರೊಫೆಸರ್ಗೆ ಒಂದು ಕೊಡುಗೆ ನೀಡಿತು. “ಸಂಶೋಧನೆಯ ಸಂಪೂರ್ಣ ಕ್ರೆಡಿಟ್ ಮತ್ತು ಹೆಸರನ್ನು ನಿಮಗೇ ಕೊಡುತ್ತೇವೆ. ಆದರೆ ನಿಮ್ಮ ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿ ಅಲ್ಫೋಗೆ ಹೆಸರನ್ನು ಕೈಬಿಡಿ” ಎಂದು ಆಮಿಷ ಒಡ್ಡಿದೆ. ಪ್ರೊಫೆಸರ್ ಈ ಕೊಡುಗೆ ಒಪ್ಪದೆ OpenAI ಮಾಡಿದ ವಂಚನೆಯನ್ನು ಜಗತ್ತಿನ ಮುಂದೆ ತರುವುದಾಗಿ ಹೇಳಿದಾಗ OpenAI ಅಧಿಕಾರಿಗಳು ಪರೋಕ್ಷವಾಗಿ “ನಿಮ್ಮ ವೃತ್ತಿಜೀವನವನ್ನೇಕೆ ಹಾಳುಮಾಡುತ್ತೀರಿ” ಎಂದು ಹೇಳಿದ್ದರು. ಅಂದರೆ, ಜಾಗತಿಕ ಮಟ್ಟದ ದೊಡ್ಡ ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಹೋದರೆ ನಿಮ್ಮ ಭವಿಷ್ಯ ಮುಗಿದು ಹೋಗುತ್ತದೆ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾಗಿ ಪ್ರೊಫೆಸರ್ ಆರೋಪಿಸಿದ್ದಾರೆ.
ಆದರೆ OpenAI ಈ ಆರೋಪಗಳನ್ನು ನಿರಾಕರಿಸಿದೆ. “ಯಾವುದೇ ವಿಶೇಷ ಬಳಕೆದಾರರ ಡೇಟಾವನ್ನು ಈ ಸಮಸ್ಯೆ ಪರಿಹರಿಸಲು ಬಳಸಲಾಗಿಲ್ಲ” ಎಂದು ಹೇಳಿದೆ. ಆದರೆ, “AI ಮಾಡೆಲ್ ಸಮಸ್ಯೆ ಪರಿಹರಿಸಲು ವೈಯಕ್ತಿಕ ಬಳಕೆದಾರರ ಮಾಹಿತಿಯನ್ನು ನೇರವಾಗಿ ಪ್ರವೇಶಿಸಿಲ್ಲ. ಆದರೆ ನಾವು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ. de identified data (ಅಂದರೆ, ಹೆಸರು/ವೈಯಕ್ತಿಕ ಗುರುತು ತೆಗೆದುಹಾಕಿದ ಡೇಟಾ) ನಮ್ಮ ಉತ್ಪನ್ನ ಬಳಕೆಯಿಂದ ಬಂದಿದ್ದು, ಅದು ಮಾದರಿಗಳನ್ನು ಉತ್ತಮಗೊಳಿಸಲು ಸಹಾಯ ಮಾಡಿರಬಹುದು” ಎಂದು ಹೇಳಿದೆ.
ಕ್ಲೇ ಮ್ಯಾಥಮ್ಯಾಟಿಕ್ಸ್ ಇನ್ಸ್ಟಿಟ್ಯೂಟ್ ಈವರೆಗೆ ಈ ವಿಚಾರದಲ್ಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮೊದಲನೆಯಾಗಿ OpenAI ಸಾಬೀತುಮಾಡಿರುವ ಗಣಿತದ ಪರಿಹಾರವನ್ನು ಇನ್ನೂ ಒಪ್ಪಿಕೊಳ್ಳಲಾಗಿಲ್ಲ. ಎರಡನೆಯದಾಗಿ OpenAI ಬಿಡಿಸಿರುವ ಸಮೀಕರಣವು ಅಸಲಿ’ ನೇವಿಯರ್-ಸ್ಟೋಕ್ಸ್’ ಸಮಸ್ಯೆಯಲ್ಲ ಎಂದು ಗಣಿತಜ್ಞರು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಲೆಕ್ಕಕ್ಕೇ ತೆಗೆದುಕೊಳ್ಳದ ಒಂದು ಸಣ್ಣ ಬದಲಾವಣೆ ಸೇರಿಸಿಕೊಂಡು OpenAI ಲೆಕ್ಕ ಬಿಡಿಸಿದೆ. ಹೀಗಾಗಿ ಮೂಲ ಸಮಸ್ಯೆಯನ್ನು ನಿಜವಾಗಿಯೂ ಬಿಡಿಸಿಲ್ಲ.
OpenAI ಬಿಡಿಸಿದೆ ಎಂದು ಹೇಳಿಕೊಳ್ಳುತ್ತಿರುವ ಸಮೀಕರಣದ ಆವೃತ್ತಿಯು ಬಹುತೇಕ ಗಣಿತಜ್ಞರು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಗಿಡುವ ಒಂದು ನಿರ್ದಿಷ್ಟ ಗಣಿತದ ನಿಯಮ ಅಥವಾ ಪದದ ಮೇಲೆ ಆಧರಿಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ನೂ ಈ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಿಲ್ಲ.
ಆದರೆ ಪ್ರಸ್ತುತ ಪ್ರಮುಖ ಫ್ರಂಟಿಯರ್ ಲ್ಯಾಬ್ಗಳ (AI) ಸಾಧನಗಳನ್ನು ಬಳಸಿಕೊಂಡು ತಮ್ಮ ಇನ್ನೂ ಪ್ರಕಟವಾಗದ ರಹಸ್ಯ ಸಂಶೋಧನೆಗಳನ್ನು ಮಾಡುತ್ತಿರುವ ಪ್ರತಿ ಸಂಶೋಧಕರಿಗೂ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಗಣಿತ ಕ್ಷೇತ್ರಕ್ಕೆ ಇದರಿಂದ ಆಗುವ ನಷ್ಟದ ಬಗ್ಗೆ ಈಗಾಗಲೇ ಎಚ್ಚರಿಸಿರುವ ಪ್ರಸಿದ್ಧ ಗಣಿತಜ್ಞ ಟೆರೆನ್ಸ್ ಟಾವೊ ಒಟ್ಟಾರೆ ದುಷ್ಪರಿಣಾಮಗಳನ್ನು ಸರಳವಾಗಿ ಹೇಳಿದ್ದಾರೆ: ಜಿಮ್ನಲ್ಲಿ ನಿಮಗಾಗಿ ತೂಕ ಎತ್ತುವ ಯಂತ್ರಗಳನ್ನು ಇಟ್ಟುಕೊಂಡಂತೆ ಆಗುತ್ತದೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ