Photo Credit : aljazeera.com

ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ಪ್ರಾರಂಭವಾಗುವ ಮೊದಲು ಇದ್ದ ಮಟ್ಟಕ್ಕಿಂತ ಮಧ್ಯಪ್ರಾಚ್ಯದ ತೈಲ ರಫ್ತು ಈಗ ಮತ್ತೆ ಹೆಚ್ಚಾಗಿದೆ. ಇರಾನ್ ಹಾರ್ಮುಝ್ ಜಲಸಂಧಿಯನ್ನು ತಡೆಯಲು ಮತ್ತು ಹಡಗುಗಳ ಮೇಲೆ ದಾಳಿ ಮಾಡಲು ಯತ್ನಿಸಿದರೂ ರಫ್ತು ಹೆಚ್ಚಿರುವುದು ಗಮನಾರ್ಹ.

ಕಡಲ ಸಂಚಾರ ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ (Kpler) ನೀಡಿರುವ ತಾತ್ಕಾಲಿಕ ಡೇಟಾ ಪ್ರಕಾರ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಾಲ್ಕು ದಿನಗಳ ಕಾಲ ಈ ಪ್ರದೇಶದಿಂದ ಕಚ್ಚಾ ತೈಲ ರಫ್ತು ಯುದ್ಧಪೂರ್ವದ ಮಟ್ಟವನ್ನು ಮೀರಿತು. ಪ್ರತಿದಿನ 1.95 ಕೋಟಿಯಿಂದ 2.25 ಕೋಟಿ ಬ್ಯಾರೆಲ್ ತೈಲ ರಫ್ತಾಗಿದೆ. ಯುದ್ಧಕ್ಕೂ ಮೊದಲು ಸರಾಸರಿ ಪ್ರತಿದಿನ 1.8 ಕೋಟಿ ಬ್ಯಾರೆಲ್ ರಫ್ತಾಗುತ್ತಿತ್ತು.

ಈ ತೈಲ ರಫ್ತಿನ ಏರಿಕೆಗೆ ಪ್ರಮುಖ ಕಾರಣವೆಂದರೆ, ಹಾರ್ಮುಝ್ ಜಲಸಂಧಿಯಿಂದ ತೈಲ ಟ್ಯಾಂಕರ್ಗಳನ್ನು ಅಮೆರಿಕದ ಯುದ್ಧನೌಕೆಗಳು ಸುರಕ್ಷಿತವಾಗಿ ಕರೆದೊಯ್ಯುತ್ತಿರುವುದು. ಜತೆಗೆ, ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಅಪಾಯವನ್ನು ತಗ್ಗಿಸಲು ಹಡಗಿನಿಂದ ಹಡಗಿಗೆ ತೈಲ ವರ್ಗಾವಣೆ ಹೆಚ್ಚಾಗಿರುವುದು ಕಾರಣವಾಗಿದೆ. ಇರಾನ್ ದಾಳಿಯ ಭೀತಿಯಿಂದಾಗಿ ವಿಮಾ ದರಗಳು ಇನ್ನೂ ಹೆಚ್ಚಿರುವುದು ಮತ್ತು ಯುದ್ಧ ಮರುಕಳಿಸುವ ಆತಂಕದಿಂದ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿಯೇ ಉಳಿದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ತೈಲ ಬೆಲೆ ಹೆಚ್ಚಿದ್ದರೂ ರಫ್ತು ಏರಿಕೆಯಾಗಿರುವುದಕ್ಕೆ ಕೆಪ್ಲರ್ ಸಂಸ್ಥೆಯ ಹಿರಿಯ ವಿಶ್ಲೇಷಕರೊಬ್ಬರು ಬೇರೆಯೇ ಕಾರಣವನ್ನು ನೀಡಿದ್ದಾರೆ. ಗಲ್ಫ್ ದೇಶಗಳು ತಮ್ಮ ತೈಲ ಸಾಗಣೆಗೆ ಅನುಮತಿ ನೀಡಲು ಇರಾನ್ಗೆ ಹಣ (ಟೋಲ್ ರೀತಿಯಲ್ಲಿ) ಪಾವತಿಸುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ಸರಕುಗಳ ಒಟ್ಟು ಮೌಲ್ಯದ ಸಿಂಹಪಾಲು ಇರಾನ್ ಪಾಲಾಗುವಂತೆ ಮಾಡಬಹುದು.

ಯುದ್ಧಕ್ಕೂ ಮುನ್ನ ಜಗತ್ತಿನ ಶೇಕಡಾ 20ರಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗಿಸಲ್ಪಡುತ್ತಿತ್ತು.

►ಕೆಪ್ಲರ್ ವಿಶ್ಲೇಷಕರು ಹೇಳಿದ್ದೇನು?

ಕೆಪ್ಲರ್ ಸಂಸ್ಥೆಯ ನೀತಿ ಮತ್ತು ಭೌಗೋಳಿಕ ರಾಜಕೀಯ ಅಪಾಯ ವಿಭಾಗದ ಮುಖ್ಯಸ್ಥೆ ಮಿಶೆಲ್ ಬ್ರೋಹಾರ್ಡ್, ಹಾರ್ಮುಝ್ ಜಲಸಂಧಿಯ ಮೂಲಕ ಸಂಚಾರ ನಡೆಸಲು ಕೆಲವು ದೇಶಗಳು ಇರಾನ್ಗೆ ಹಣ ಪಾವತಿಸುತ್ತಿರಬಹುದು ಎಂದು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದರು.

ಕಳೆದ ವಾರ ಇಂಧನ ವಿಶ್ಲೇಷಕ ರೋರಿ ಜಾನ್ಸ್ಟನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಅವರು, "ಸುರಕ್ಷಿತ ಸಂಚಾರಕ್ಕಾಗಿ ಹಡಗುಗಳು ಟೋಲ್ ಪಾವತಿಸುತ್ತಿವೆ ಎಂದು ನಾನು ಶಂಕಿಸುತ್ತೇನೆ" ಎಂದಿದ್ದಾರೆ.

"ಅಮೆರಿಕದ ಯುದ್ಧನೌಕೆಗಳ ಭದ್ರತೆಯಲ್ಲಿ ಸಂಚರಿಸುವುದು ದೀರ್ಘಕಾಲಿಕವಾಗಿ ಸುಲಭವಲ್ಲ ಹಾಗೂ ಇರಾನ್ಗೆ ತಮ್ಮ ಸರಕುಗಳ ಶೇಕಡಾ 10 ಅಥವಾ 20ರಷ್ಟು ಭಾಗವನ್ನು ಟೋಲ್ ರೂಪದಲ್ಲಿ ನೀಡುವುದು ಕೂಡ ದೀರ್ಘಕಾಲಿಕವಾಗಿ ಸಾಧ್ಯವಿಲ್ಲ ಎಂಬುದು ಈ ದೇಶಗಳಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

"ಹೀಗಾಗಿ, ಯುದ್ಧವು ಮತ್ತೆ ಆರಂಭವಾಗುವ ಮುನ್ನ ಸಾಧ್ಯವಾದಷ್ಟು ಹೆಚ್ಚಿನ ತೈಲವನ್ನು ಆದಷ್ಟು ಬೇಗ ಹೊರತೆಗೆಯಲು ಇವರು ಮುಂದಾಗುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ಈ ವಾದವು ಸ್ವತಂತ್ರವಾಗಿ ದೃಢಪಟ್ಟಿಲ್ಲ ಮತ್ತು ಬ್ರೋಹಾರ್ಡ್ ಅವರು ಇದನ್ನು ಯಾವುದೇ ಸಾಕ್ಷ್ಯಾಧಾರಗಳಿರುವ ಸಂಶೋಧನೆಗಿಂತ ಹೆಚ್ಚಾಗಿ ಒಂದು ಊಹೆಯಾಗಿಯೇ ವ್ಯಕ್ತಪಡಿಸಿದ್ದಾರೆ.

ಆದರೆ, ಮಾರ್ಚ್ ತಿಂಗಳ ಆರಂಭದಲ್ಲೇ 'ಲಾಯ್ಡ್ಸ್ ಲಿಸ್ಟ್' (Lloyd’s List) ಶಿಪ್ಪಿಂಗ್ ಜರ್ನಲ್, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜಲಸಂಧಿಯ ಮೂಲಕ ಹಡಗುಗಳ ಸಂಚಾರವನ್ನು ನಿಯಂತ್ರಿಸಲು ಈಗಾಗಲೇ ಒಂದು 'ಟೋಲ್ ಬೂತ್' ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ವರದಿ ಮಾಡಿತ್ತು.

ಯುದ್ಧದ ಸಮಯದಲ್ಲಿ ಟ್ರಂಪ್ ಆಡಳಿತವು, ವಾಷಿಂಗ್ಟನ್ ಜೊತೆಗಿನ ಯಾವುದೇ ಸಂಭಾವ್ಯ ಒಪ್ಪಂದದ ಅಡಿಯಲ್ಲಿ ಇರಾನ್ಗೆ ಟೋಲ್ ವಿಧಿಸಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ.

ಜಲಸಂಧಿಯ ಮುಚ್ಚುವಿಕೆಯಿಂದಾಗಿ ಜಾಗತಿಕ ಇಂಧನ ವೆಚ್ಚವು ಗಗನಕ್ಕೇರಿದೆ ಮತ್ತು ಪ್ರಪಂಚದಾದ್ಯಂತದ ಕೃಷಿ ವಲಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

►ಹಾರ್ಮುಝ್ ನಲ್ಲಿ ಸಂಚಾರ ಹೇಗಿದೆ?

ಮಧ್ಯಪ್ರಾಚ್ಯದಿಂದ ತೈಲ ಹೊರಹೋಗುವಿಕೆ ಕ್ರಮೇಣ ಹೆಚ್ಚುತ್ತಿದೆ ಎಂದು ಕಡಲ ಸಂಚಾರ ಟ್ರ್ಯಾಕರ್ಗಳು ವರದಿ ಮಾಡಿವೆ.

ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಏಳು ದಿನಗಳ ಸರಾಸರಿ ರಫ್ತು ಯುದ್ಧಪೂರ್ವದಲ್ಲಿದ್ದ ಸುಮಾರು 1.8 ಕೋಟಿ ಬ್ಯಾರೆಲ್ ಅನ್ನು ದಾಟಿದೆ.

ಇರಾನ್ ಅನ್ನು ಹೊರತುಪಡಿಸಿ ಇತರ ದೇಶಗಳ ಕಚ್ಚಾ ತೈಲ ರಫ್ತು ಕೂಡ ಸೆಪ್ಟೆಂಬರ್ನಲ್ಲಿ ಸರಾಸರಿ ಕನಿಷ್ಠ 1.65 ಕೋಟಿ ಬ್ಯಾರೆಲ್ಗೆ ಚೇತರಿಸಿಕೊಂಡಿದೆ ಎಂದು ಕೆಪ್ಲರ್ ತಿಳಿಸಿದೆ.

ತೈಲ ರಫ್ತು ಹೆಚ್ಚುತ್ತಿರುವ ಈ ಧೋರಣೆಯು ಅಕ್ಟೋಬರ್ನಲ್ಲೂ ಮುಂದುವರಿದಿದೆ. ಇರಾಕ್ನ ಸರ್ಕಾರಿ ಸ್ವಾಮ್ಯದ ಆಯಿಲ್ ಟ್ಯಾಂಕರ್ ಕಂಪನಿಯು ಶನಿವಾರದಂದು, ಹಾರ್ಮುಝ್ ಜಲಸಂಧಿಯ ಮೂಲಕ ಅತಿ ದೊಡ್ಡ ಕಚ್ಚಾ ತೈಲವಾಹಕ (VLCC) ಹಡಗಿನಲ್ಲಿ ಎರಡು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಾಗಿಸಿರುವುದಾಗಿ ಘೋಷಿಸಿದೆ. ದಶಕಗಳಲ್ಲಿ ತಮ್ಮ ಕಂಪನಿ ನಡೆಸಿದ ಇಂತಹ ಮೊದಲ ಕಾರ್ಯಾಚರಣೆ ಇದಾಗಿದೆ ಎಂದು ಅದರ ಮಹಾನಿರ್ದೇಶಕರು ತಿಳಿಸಿದ್ದಾರೆ.

ಕೆಪ್ಲರ್ ಪ್ರಕಾರ, "ಈಗ ಶೇಕಡಾ 40ರಷ್ಟು ತೈಲವು ಹಾರ್ಮುಝ್ ಜಲಸಂಧಿಯನ್ನು ಬೈಪಾಸ್ ಮಾಡಿ ಸಾಗುತ್ತಿದೆ ಮತ್ತು ಹಾರ್ಮುಝ್ ದಾಟುವ ಹೆಚ್ಚಿನ ಕಚ್ಚಾ ತೈಲವು ಕಡಲಿನಲ್ಲಿಯೇ ಟ್ಯಾಂಕರ್ಗಳನ್ನು ಬದಲಾಯಿಸಿಕೊಳ್ಳುತ್ತಿದೆ." ಇದರ ಬಹುಪಾಲು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪೈಪ್ಲೈನ್ಗಳ ಮೂಲಕ ಹರಿಯುತ್ತಿದೆ.

ಈ ರಫ್ತು ಅಂಕಿಅಂಶಗಳು ಕೆಂಪು ಸಮುದ್ರದ ಮೂಲಕ ಸಾಗಿಸಲಾದ ಸರಬರಾಜುಗಳನ್ನು ಸಹ ಒಳಗೊಂಡಿವೆ. ಕೆಂಪು ಸಮುದ್ರವು ಈಗ ಹಾರ್ಮುಝ್ ಜಲಸಂಧಿಗೆ ಪ್ರಮುಖ ಮತ್ತು ವಿಶ್ವಾಸಾರ್ಹ ಪರ್ಯಾಯ ಮಾರ್ಗವಾಗಿ ಹೊರಹೊಮ್ಮಿದೆ.

ಇದಲ್ಲದೆ, ಪತ್ತೆಯಾಗುವುದನ್ನು ತಪ್ಪಿಸಲು ತಮ್ಮ ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆಯ ಟ್ರಾನ್ಸ್ಪಾಂಡರ್ಗಳನ್ನು ಆಫ್ ಮಾಡಿಕೊಂಡು ಈ ಪ್ರಮುಖ ಸಾರಿಗೆ ಮಾರ್ಗವನ್ನು ದಾಟಿರುವ ಹಡಗುಗಳನ್ನು ಕೆಪ್ಲರ್ ಅಂಕಿಅಂಶಗಳು ಒಳಗೊಂಡಿಲ್ಲ.

ಏತನ್ಮಧ್ಯೆ, ಜಲಸಂಧಿಯ ಮೇಲಿನ ನಿಯಂತ್ರಣವನ್ನು ತಾನು ಕಳೆದುಕೊಂಡಿಲ್ಲ ಎಂದು ಇರಾನ್ ವಾದಿಸಿದೆ.

ಅಮೆರಿಕದ ಮೇಲ್ವಿಚಾರಣೆಯ ಮಾರ್ಗದಲ್ಲಿ ಕೇವಲ ಮೂರರಿಂದ ನಾಲ್ಕು ಮಿಲಿಯನ್ ಬ್ಯಾರೆಲ್ಗಳು ಮಾತ್ರ ಸಂಚರಿಸುತ್ತಿವೆ ಎಂದು ಹಿರಿಯ ಐಆರ್ಜಿಸಿ ಕಮಾಂಡರ್ ಅಲಿ ಫದಾವಿ ರವಿವಾರ ತಿಳಿಸಿದ್ದಾರೆ. ಯುದ್ಧಪೂರ್ವದ ಸಂಚಾರಕ್ಕೆ ಹೋಲಿಸಿದರೆ ಈ ಪ್ರಮಾಣವು "ತುಂಬಾ ಕಡಿಮೆ" ಎಂದಿದ್ದಾರೆ ಅವರು.

ಏಳು ತಿಂಗಳ ಹಿಂದೆ ಯುದ್ಧ ತೀವ್ರತೆ ಪಡೆಯುವ ಮುನ್ನ, ಈ ಜಲಸಂಧಿಯಲ್ಲಿ ಟ್ಯಾಂಕರ್ಗಳು, ಗ್ಯಾಸ್ ಕ್ಯಾರಿಯರ್ಗಳು, ಬಲ್ಕ್ ಕ್ಯಾರಿಯರ್ಗಳು ಮತ್ತು ಕಂಟೈನರ್ ಹಡಗುಗಳು ಸೇರಿದಂತೆ ಪ್ರತಿದಿನ ಸುಮಾರು 125 ದೊಡ್ಡ ವಾಣಿಜ್ಯ ಹಡಗುಗಳು ಸಂಚರಿಸುತ್ತಿದ್ದವು.

►ತೈಲ ಬೆಲೆಗಳು ಈಗ ಹೇಗಿವೆ?

ಮಧ್ಯಪ್ರಾಚ್ಯದಿಂದ ತೈಲ ರಫ್ತು ಚೇತರಿಸಿಕೊಳ್ಳುತ್ತಿದ್ದಂತೆ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕಳೆದ ವಾರ, G7 ದೇಶಗಳು ತುರ್ತು ಮೀಸಲು ನಿಧಿಯಿಂದ 100 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ.

ಆದರೆ ಕಚ್ಚಾ ತೈಲ ಬೆಲೆಗಳು ಯುದ್ಧಪೂರ್ವದ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಿವೆ. ಸೋಮವಾರ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ ಸುಮಾರು 101.59 ಡಾಲರ್ನಂತೆ ವಹಿವಾಟು ನಡೆಸುತ್ತಿದ್ದು, ಶೇಕಡಾ 0.71ರಷ್ಟು ಕುಸಿದಿದೆ. ಹಾಗೆಯೇ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಶೇಕಡಾ 1.2ರಷ್ಟು ಇಳಿಕೆಯಾಗಿ ಸುಮಾರು 90.05 ಡಾಲರ್ಗೆ ತಲುಪಿದೆ.

ವೆಲ್ತ್ ಕ್ಲಬ್ನ ಮುಖ್ಯ ಹೂಡಿಕೆ ತಂತ್ರಜ್ಞರಾದ ಸುಸನ್ನಾ ಸ್ಟ್ರೀಟರ್ ಮಾತನಾಡಿ, "ಈ ಪ್ರದೇಶದಿಂದ ರಫ್ತು ಪುನರುಜ್ಜೀವನಗೊಂಡಿದ್ದರೂ, ದೀರ್ಘಕಾಲೀನವಾಗಿ ಇದು ಇಂಧನ ಪೂರೈಕೆಯ ಭದ್ರತೆಯನ್ನು ಅವಲಂಬಿಸಿದೆ ಮತ್ತು ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ" ಎಂದು ತಿಳಿಸಿದ್ದಾರೆ.

"ಹಾರ್ಮುಝ್ ಜಲಸಂಧಿಯು ಪ್ರಮುಖ ಸಂಘರ್ಷದ ಕೇಂದ್ರವಾಗಿ ಮುಂದುವರಿದಿದೆ. ರವಿವಾರ ಮತ್ತೊಂದು ಟ್ಯಾಂಕರ್ ಮೇಲೆ ದಾಳಿ ನಡೆದಿರುವುದು ಪೂರೈಕೆಗೆ ಮತ್ತಷ್ಟು ಅಡ್ಡಿಯಾಗುವ ಆತಂಕವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಹಡಗು ಕಂಪನಿಗಳು ಈ ನಿರ್ಣಾಯಕ ಜಲಸಂಧಿಯ ಮೂಲಕ ಹಡಗುಗಳನ್ನು ಕಳುಹಿಸಲು ಹಿಂದೆಮುಂದೆ ನೋಡುವಂತಾಗಿದೆ" ಎಂದು ಅವರು ಹೇಳಿದ್ದಾರೆ.

ಶಿಪ್ಪಿಂಗ್ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡುವ ಯುನೈಟೆಡ್ ಕಿಂಗ್ಡಮ್ ಮರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಗುಂಪಿನ ಪ್ರಕಾರ, ಸೋಮವಾರ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ತೈಲ ಟ್ಯಾಂಕರ್ಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಿಂದೆ ತಿರುಗುವಂತೆ ಅಥವಾ ದಾಳಿಯ ಅಪಾಯ ಎದುರಿಸುವಂತೆ ಸೂಚನೆ ನೀಡಿತ್ತು.

►ಕೆಪ್ಲರ್ ವಿಶ್ಲೇಷಕರ ಹೇಳಿಕೆಯಲ್ಲಿ ಹುರುಳಿದೆಯೇ?

ಟ್ರಾನ್ಸಿಟ್-ಫೀ (ಸಂಚಾರ ಶುಲ್ಕ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂಬ ಕೆಪ್ಲರ್ ವಿಶ್ಲೇಷಕರ ಊಹೆಯು "ಸಂಭವನೀಯ"ವಾಗಿದ್ದರೂ, ಇದನ್ನು ಔಪಚಾರಿಕ ಕಡಲ ತೆರಿಗೆಗಿಂತ ಹೆಚ್ಚಾಗಿ "ಅನೌಪಚಾರಿಕ ಭದ್ರತಾ ವ್ಯವಸ್ಥೆ" ಎಂದು ಕರೆಯುವುದು ಸೂಕ್ತ ಎಂದು ಶೈಕ್ಷಣಿಕ ತಜ್ಞ ಅಬ್ದುಲ್ ಖಲಿಕ್ ಹೇಳಿದ್ದಾರೆ.

ಲಿವರ್ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯದ ಮರಿಟೈಮ್ ಸೆಂಟರ್ ಮುಖ್ಯಸ್ಥರಾದ ಖಲಿಕ್ ಅಲ್ ಜಝೀರಾ ಜೊತೆ ಮಾತನಾಡುತ್ತಾ, "ವ್ಯವಸ್ಥಿತವಾದ, ಸರ್ಕಾರಿ ಸ್ವಾಮ್ಯದ ಇರಾನ್ ಟೋಲ್ ವ್ಯವಸ್ಥೆಯನ್ನು ದೃಢಪಡಿಸುವ ಯಾವುದೇ ಸಾರ್ವಜನಿಕ ಪುರಾವೆಗಳಿಲ್ಲ" ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಜಲಸಂಧಿಗಳ ಮೂಲಕ ಸಂಚಾರದ ಹಕ್ಕನ್ನು ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದವು (UNCLOS) ರಕ್ಷಿಸುತ್ತದೆ. ಇದು "ಔಪಚಾರಿಕ ಟೋಲ್ಗಳನ್ನು ಕಾನೂನುಬದ್ಧವಾಗಿ ಸಂದೇಹಾಸ್ಪದವಾಗಿಸುತ್ತದೆ" ಎಂದು ಅವರು ಹೇಳಿದರು.

ಅಲ್ ಜಝೀರಾ ಜೊತೆ ಮಾತನಾಡಿದ IG ಗ್ರೂಪ್ನ ಮುಖ್ಯ ಮಾರುಕಟ್ಟೆ ವಿಶ್ಲೇಷಕ ಕ್ರಿಸ್ ಬ್ಯೂಚಾಂಪ್, ಬ್ರೋಹಾರ್ಡ್ ಅವರು ಸಂದೇಹ ವ್ಯಕ್ತಪಡಿಸಿರುವ ಸನ್ನಿವೇಶವು "ಭಾಗಶಃ" ಸಾಧ್ಯವಿರಬಹುದು ಎಂದಿದ್ದಾರೆ.

"ಅಮೆರಿಕದ ಬೆಂಗಾವಲು ಹಡಗುಗಳಿಂದ ಹಿಡಿದು ಇರಾನ್ ರಹಸ್ಯವಾಗಿ ಟೋಲ್ ವಸೂಲಿ ಮಾಡುವವರೆಗೆ ಮಧ್ಯಪ್ರಾಚ್ಯದಲ್ಲಿ ಎಲ್ಲವೂ ತೆರೆಮರೆಯಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ನಲ್ಲಿ, ಅಮೆರಿಕ ಸರ್ಕಾರವು 'ಬಿಟ್ಬ್ಯಾಂಕ್' ಎಂಬ ಡಿಜಿಟಲ್ ಆಸ್ತಿ ಸಂಸ್ಥೆಯ ಮೇಲೆ ತಡೆ ಹಾಗೂ ನಿರ್ಬಂಧಗಳನ್ನು ವಿಧಿಸಿತ್ತು. ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಶುಲ್ಕ ಸಂಗ್ರಹಿಸಲು ಇರಾನ್ ಸರ್ಕಾರದಿಂದ ಸ್ಥಾಪಿಸಲ್ಪಟ್ಟ 'ಹಾರ್ಮುಝ್ ಸೇಫ್ ಮೆರೈನ್ ಸರ್ವಿಸಸ್ ಅಥಾರಿಟಿ'ಯು ಟೆಹ್ರಾನ್ಗೆ ಹಣ ವರ್ಗಾಯಿಸಲು ಈ ಸಂಸ್ಥೆಯನ್ನು ಬಳಸುತ್ತಿತ್ತು ಎಂದು ಅಮೆರಿಕ ಆರೋಪಿಸಿತ್ತು.

ಆದರೆ, ತೈಲ ರಫ್ತಿಗೆ ಈಗಿರುವ ದೊಡ್ಡ ಸವಾಲು "ಶಿಪ್ಪಿಂಗ್ ಸಮಸ್ಯೆ" ಎಂದು ಬ್ಯೂಚಾಂಪ್ ಹೇಳಿದ್ದಾರೆ.

"ಗಲ್ಫ್ನಲ್ಲಿರುವ ಶಟಲ್ ವ್ಯವಸ್ಥೆಯು ತೈಲವನ್ನು ಹೊರತೆಗೆಯುವಲ್ಲಿ ಅದ್ಭುತಗಳನ್ನು ಮಾಡುತ್ತಿದೆ. ಆದರೆ ಇದಕ್ಕೆ ಸಾಕಷ್ಟು ಹಡಗುಗಳ ಅಗತ್ಯವಿದೆ. ಇದು ಸರಕು ಸಾಗಣೆ ದರವನ್ನು ಹೆಚ್ಚಿಸುವುದರ ಜೊತೆಗೆ ಆ ಪ್ರದೇಶದ ಹೊರಗಿನ ಪೂರೈಕೆಯನ್ನು ಕಡಿಮೆ ಮಾಡಿದೆ" ಎಂದಿದ್ದಾರೆ.

ಬ್ಯೂಚಾಂಪ್ ಅವರ ಪ್ರಕಾರ, ಏಷ್ಯಾದ ಖರೀದಿದಾರರು ದೂರದ ಪ್ರದೇಶಗಳಿಂದ ಕಚ್ಚಾ ತೈಲವನ್ನು ಹುಡುಕಿಕೊಳ್ಳಬೇಕಾಗಿ ಬಂದಿದೆ, ಇದರಿಂದ "ಸಂಚಾರದ ಸಮಯವೂ ದೀರ್ಘವಾಗುತ್ತಿದೆ".

"ಮೊದಲೆಲ್ಲಾ ಇದು ಕೇವಲ ಪೂರೈಕೆಯ ಸಮಸ್ಯೆಯಾಗಿತ್ತು, ಆದರೆ ಈಗ ಇದು ಶಿಪ್ಪಿಂಗ್ನ ಆಂತರಿಕ ಕಾರ್ಯವಿಧಾನಕ್ಕೆ ಸಂಬಂಧಿಸಿದ್ದಾಗಿದೆ. ಇದು ಕಡಿಮೆ ರೋಮಾಂಚನಕಾರಿ ಎನಿಸಿದರೂ, ಹೆಚ್ಚು ಮುಖ್ಯವಾದುದು ಮತ್ತು ಪರಿಹರಿಸಲು ಕಷ್ಟಕರವಾಗಿದೆ. ಹಡಗುಗಳು ರಾತ್ರೋರಾತ್ರಿ ನಿರ್ಮಾಣವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor