Photo: x.com/Showbiz_IT

ನಟಿಯಾಗಿ ಕಂಗನಾ ಇಷ್ಟವಾಗುತ್ತಾರೆ, ಆದರೆ ರಾಜಕೀಯ ಪ್ರವೇಶದ ನಂತರ ಅವರ ವ್ಯಕ್ತಿತ್ವವು ‘ನಟಿ’ಯನ್ನು ಮರೆಮಾಚಿದೆ ಎಂದು ಮಾಜಿ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಹೇಳಿದ್ದಾರೆ.

ಮಾಜಿ ಚಲನಚಿತ್ರ ವಿಮರ್ಶಕ ಮತ್ತು ಪ್ರಸ್ತುತ ‘ಧರ್ಮಾ ಕೊಲ್ಯಾಬ್ ಆರ್ಟಿಸ್ಟ್ ಏಜೆನ್ಸಿ’ಯ CEO ಆಗಿರುವ ರಾಜೀವ್ ಮಸಂದ್ ಅವರು ನಟಿ-ರಾಜಕಾರಣಿ ಕಂಗನಾ ರಾಣಾವತ್ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಇದೀಗ ವೈರಲ್ ಆಗಿದೆ. “ಕಂಗನಾ ರಾಣಾವತ್ ತಮ್ಮ ಹಾದಿ ತಪ್ಪಿದ್ದಾರೆ” ಎಂದು ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಟಿಯಾಗಿ ಕಂಗನಾ ಇಷ್ಟವಾಗುತ್ತಾರೆ. ಆದರೆ ರಾಜಕೀಯ ಪ್ರವೇಶದ ನಂತರ ಅವರ ವ್ಯಕ್ತಿತ್ವವು ‘ನಟಿ’ಯನ್ನು ಮರೆಮಾಚಿದೆ ಎಂದು ರಾಜೀವ್ ಹೇಳಿದ್ದಾರೆ. “ನನಗೆ ನಟಿ ಕಂಗನಾರ ಕೊರತೆ ಕಾಡುತ್ತಿದೆ. ಈಗ ಅವರೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಗೆದ್ದು ಕಂಗನಾ ಸಂಸದೆಯಾಗಿದ್ದಾರೆ. ಬಾಲಿವುಡ್ ನ ಪ್ರಭಾವಿ ವ್ಯಕ್ತಿಗಳು ತಮಗೆ ಅವಕಾಶಗಳನ್ನು ನಿರಾಕರಿಸಿದರು ಎಂಬ ಕಂಗನಾ ಅವರ ನಿರಂತರ ವಾದವನ್ನೂ ರಾಜೀವ್ ತಳ್ಳಿ ಹಾಕಿದ್ದಾರೆ.

“ನನಗೆ ತಿಳಿದಿಲ್ಲ. ಪದೇಪದೇ ಹೇಳಿಕೊಳ್ಳಲು ಅದೊಂದು ಉತ್ತಮ ಕತೆಯಷ್ಟೆ. ಆದರೆ ನನಗೆ ಹಾಗೆ ಅನಿಸುವುದಿಲ್ಲ. ವಾಸ್ತವ ಒಪ್ಪಿಕೊಳ್ಳೋಣ. ಬಾಲಿವುಡ್ ಯಶಸ್ಸನ್ನು ಗೌರವಿಸುತ್ತದೆ. ಆರಂಭದಲ್ಲಿ ಅನೇಕರು ಕಷ್ಟ ಎದುರಿಸುತ್ತಾರೆ” ಎಂದು ರಾಜೀವ್ ಹೇಳಿದ್ದಾರೆ.

ವಿಕಾಸ್ ಬಹ್ಲ್ ಅವರ 2014ರ ಪ್ರಮುಖ ಸಿನಿಮಾ ‘ಕ್ವೀನ್’ನಲ್ಲಿನ ಕಂಗನಾ ಅಭಿನಯವನ್ನು ‘ಅದ್ಭುತ’ ಎಂದು ಶ್ಲಾಘಿಸಿದ ಅವರು, ಮುಂದುವರಿದ ಭಾಗವಾದ ‘ಕ್ವೀನ್ 2’ನಲ್ಲಿ ಅವರು ಮತ್ತೆ ಬಹ್ಲ್ ಅವರೊಂದಿಗೆ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. “ಉತ್ತಮ ಚಿತ್ರ ಎಂಬ ಕಾರಣಕ್ಕೆ ಅವರು ಸಿನಿಮಾ ಮಾಡಿದಾಗಲೆಲ್ಲ ಅದ್ಭುತವಾಗಿರುತ್ತಿದ್ದರು. ಆದರೆ ಅಂದಿನಿಂದ ಅದು ಕೇವಲ ‘ಕಂಗನಾ ಶೋ’ ಆಗಿಬಿಟ್ಟಿದೆ” ಎಂದು ರಾಜೀವ್ ‘ಸೈರಸ್ ಸೇಸ್’ ಪಾಡ್ ಕಾಸ್ಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅವರನ್ನು “ಉತ್ತಮ ನಟಿ” ಎಂದು ಕರೆದ ರಾಜೀವ್ ಅವರು, ಪಾತ್ರವಾಗಿ ಸಂಪೂರ್ಣವಾಗಿ ಬದಲಾಗಬಲ್ಲ ಕಂಗನಾಳನ್ನು ನೋಡುವ ಅವಕಾಶ ಈಗ ಸಿಗುತ್ತಿಲ್ಲ ಎಂಬ ಕೊರತೆ ವ್ಯಕ್ತಪಡಿಸಿದರು. “ಅವರ ಸಿನಿಮಾದಲ್ಲಿ ನಟಿಯ ಯಾವುದೇ ನೆರಳೂ ಕಾಣಿಸುತ್ತಿರಲಿಲ್ಲ. ಅವರೇ ಪಾತ್ರವಾಗುತ್ತಿದ್ದರು. ಹಾಗಿದ್ದರೂ ನಾನು ಭರವಸೆ ಕಳೆದುಕೊಂಡಿಲ್ಲ. ಕಂಗನಾ ಭವಿಷ್ಯದಲ್ಲಿ ತಮ್ಮ ಕಳೆದುಹೋದ ಖ್ಯಾತಿ ಮರಳಿ ಪಡೆಯಬಹುದು” ಎಂದು ಅವರು ಅಭಿಪ್ರಾಯಪಟ್ಟರು.

ಕಂಗನಾ ತಮ್ಮ ಪ್ರಸ್ತುತ ಸ್ಥಿತಿಯಿಂದ ಹೊರಬರಲು ಮೊದಲು ರಾಜಕೀಯ ಜೀವನ ತ್ಯಜಿಸಬೇಕು ಎಂಬುದನ್ನು ರಾಜೀವ್ ಒಪ್ಪಿಕೊಂಡರು. ಕಂಗನಾ ಅವರು ಆಲಿಯಾ ಭಟ್ ಅವರಿಗೆ ಸಮನಾದ ನಟಿ ಎಂದು ಹೇಳಿದ ಅವರು, ಇಬ್ಬರೂ ಹಿಂದಿ ಚಿತ್ರರಂಗದ ಅತ್ಯುತ್ತಮ ನಟಿಯರು ಎಂದು ಹೇಳಿದರು.

“ಕಂಗನಾ ಅವರಂತಹ ಸೆಲೆಬ್ರಿಟಿಗಳು ತಮ್ಮ ಮುಚ್ಚುಮರೆಯಿಲ್ಲದ ಅಭಿಪ್ರಾಯಗಳ ಮೂಲಕ ಟ್ಯಾಬ್ಲಾಯ್ಡ್ ಗಳನ್ನು ಜೀವಂತವಾಗಿರಿಸಿದ್ದಾರೆ” ಎಂಬುದನ್ನೂ ರಾಜೀವ್ ಉಲ್ಲೇಖಿಸಿದರು. ಕಂಗನಾ, ರಿಯಾಲಿಟಿ ಟಿವಿ ತಾರೆ ರಾಖಿ ಸಾವಂತ್ ಮತ್ತು ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರನ್ನು “ಗಟ್ಟಿಯಾಗಿ ಮಾತನಾಡುವ, ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಮನರಂಜನೆ ನೀಡುವ” ವ್ಯಕ್ತಿಗಳೆಂದು ಹೇಳಿದ ಅವರು, ಇವರು “ಹಳೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ” ಎಂದರು.

ವರ್ಷಾಂತ್ಯದಲ್ಲಿ ನಟಿಯರ ಜೊತೆಗೆ ನಡೆಸುವ ಪ್ರತಿಷ್ಠಿತ ‘ರೌಂಡ್ ಟೇಬಲ್’ ಚರ್ಚೆಗೆ ತಮ್ಮನ್ನು ಆಹ್ವಾನಿಸದೆ ಇದ್ದಾಗ ಕಂಗನಾ ಮತ್ತು ರಾಜೀವ್ ನಡುವೆ ಸಂಘರ್ಷ ಆರಂಭವಾಗಿತ್ತು. ನಿರ್ಮಾಪಕ ಕರಣ್ ಜೋಹರ್ ಜೊತೆಗಿನ ನಿಕಟತೆಯಿಂದಾಗಿ ರಾಜೀವ್ ತಾರತಮ್ಯದಿಂದ ವರ್ತಿಸುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಐದು ವರ್ಷಗಳ ಹಿಂದೆ ಕರಣ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಬ್ಯಾನರ್ ನ ಪ್ರತಿಭೆ ನಿರ್ವಹಣಾ ವಿಭಾಗವಾದ ಡಿಸಿಎಎಗೆ ರಾಜೀವ್ ಸೇರಿದಾಗ ತಮ್ಮ ಹಿಂದಿನ ಆರೋಪಗಳು ಸಮರ್ಥನೆಗೊಂಡಂತಾಯಿತು ಎಂದು ಕಂಗನಾ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor