Photo Credit : aljazeera.com

ದುಬೈ: ಇಸ್ರೇಲ್ ಗಾಝಾದಲ್ಲಿ ಯುದ್ಧ ಆರಂಭಿಸಿ ಸುಮಾರು ಮೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ದಿಗ್ಬಂಧನಕ್ಕೊಳಗಾಗಿರುವ ಗಾಝಾ ಪಟ್ಟಿಯಲ್ಲಿ ಸಂಭವಿಸಿರುವ ವಿನಾಶದ ವ್ಯಾಪ್ತಿಯನ್ನು ಗೂಗಲ್ ಮ್ಯಾಪ್ಸ್ ನ ಹೊಸದಾಗಿ ನವೀಕರಿಸಿದ ಉಪಗ್ರಹ ಚಿತ್ರಗಳು ತೆರೆದಿಟ್ಟಿವೆ.

ಒಂದರ ಹಿಂದೆ ಒಂದರಂತೆ ಬಡಾವಣೆಗಳು ಅವಶೇಷಗಳಾಗಿ ಮಾರ್ಪಟ್ಟಿವೆ. ಮುಖ್ಯ ರಸ್ತೆಗಳ ಮಸುಕಾದ ಗುರುತುಗಳನ್ನು ಹೊರತುಪಡಿಸಿ ಬಹುತೇಕ ಏನೂ ಉಳಿದಿಲ್ಲ. ಗಾಝಾದ ಒಂದು ಪ್ರದೇಶವನ್ನು ಮತ್ತೊಂದು ಪ್ರದೇಶದಿಂದ ಗುರುತಿಸುವುದೂ ಕಷ್ಟವಾಗಿದೆ. ಕೃಷಿ ಭೂಮಿಗಳು ಸುಟ್ಟು ಕರಕಲಾಗಿವೆ. ಶತಮಾನಗಳಷ್ಟು ಹಳೆಯ ಧಾರ್ಮಿಕ ಸ್ಥಳಗಳು ಹಾನಿಗೊಳಗಾಗಿವೆ ಅಥವಾ ಸಂಪೂರ್ಣವಾಗಿ ನಾಶವಾಗಿವೆ.

ವಿಶ್ವಸಂಸ್ಥೆಯ ಉಪಗ್ರಹ ಕೇಂದ್ರ (UNOSAT)ದ ಇತ್ತೀಚಿನ ಮೌಲ್ಯಮಾಪನದ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ 'ಕದನ ವಿರಾಮ' ಜಾರಿಗೆ ಬಂದ ಬಳಿಕ ಗಾಝಾದಾದ್ಯಂತ ನಾಶವಾದ ಕಟ್ಟಡಗಳ ಸಂಖ್ಯೆ ಶೇ. 9ರಷ್ಟು ಹೆಚ್ಚಾಗಿದೆ. ಫೆಲೆಸ್ತೀನಿನ ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಸಂಸ್ಥೆ UNRWA ಪ್ರಕಾರ, ಗಾಝಾದ ಸುಮಾರು ಶೇ. 82ರಷ್ಟು ಕಟ್ಟಡಗಳು, ಅಂದರೆ ಸುಮಾರು 2 ಲಕ್ಷ ಕಟ್ಟಡಗಳು, ಹಾನಿಗೊಳಗಾಗಿವೆ. ಅವುಗಳಲ್ಲಿ ಮೂರನೇ ಎರಡರಷ್ಟು ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.

ಗೂಗಲ್ ಮ್ಯಾಪ್ಸ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಉಪಗ್ರಹ ಚಿತ್ರಗಳನ್ನು Aljazeera, ದಕ್ಷಿಣದ ರಫಾದಿಂದ ಉತ್ತರ ಗಾಝಾದವರೆಗಿನ ಪ್ರದೇಶಗಳ ಯುದ್ಧಕ್ಕೂ ಮುನ್ನದ ಮತ್ತು ಈಗಿನ ಸ್ಥಿತಿಯನ್ನು ಹೋಲಿಕೆ ಮಾಡಿದೆ. ರಫಾ ಪ್ರದೇಶದ ಚಿತ್ರಗಳನ್ನು ಈ ವರ್ಷ ಸೆರೆಹಿಡಿಯಲಾಗಿದ್ದು, ಉತ್ತರ ಗಾಝಾದ ಚಿತ್ರಗಳು 2024 ಮತ್ತು 2025ರ ಅವಧಿಯವು.

 

►ತಾಲ್ ಅಸ್-ಸುಲ್ತಾನ್: ಮನೆಗಳಿದ್ದ ಜಾಗದಲ್ಲೀಗ ಬರೀ ಮರಳು!

ಗಾಝಾದ ಅತ್ಯಂತ ದಕ್ಷಿಣದ ನಗರವಾದ ರಫಾ, ಗಾಝಾದ ವಿವಿಧ ಭಾಗಗಳಿಂದ ಸ್ಥಳಾಂತರಗೊಂಡ ಫೆಲೆಸ್ತೀನಿಯನ್ನರಿಗೆ ಪ್ರಮುಖ ಆಶ್ರಯ ತಾಣವಾಗಿತ್ತು. ಆದರೆ 2024ರ ಮೇ ನಲ್ಲಿ ಅಲ್ಲಿ ಇಸ್ರೇಲಿ ಸೇನಾ ಕಾರ್ಯಾಚರಣೆಗಳು ಆರಂಭವಾದ ಬಳಿಕ ಸುಮಾರು 10 ಲಕ್ಷ ಜನರು ಪ್ರದೇಶವನ್ನು ತೊರೆಯಬೇಕಾಯಿತು.

ರಫಾದಲ್ಲಿದ್ದ UNRWA ಆಶ್ರಯ ತಾಣಗಳು ಖಾಲಿಯಾದ ಬಳಿಕ, ಈಗಾಗಲೇ ಹಲವು ಬಾರಿ ಸ್ಥಳಾಂತರಗೊಂಡಿದ್ದ ಹೆಚ್ಚಿನ ಜನರು ರಫಾದ ಉತ್ತರದಲ್ಲಿರುವ ಖಾನ್ ಯೂನಿಸ್ ಮತ್ತು ಮಧ್ಯ ಗಾಝಾದ ಡೀರ್ ಎಲ್-ಬಲಾಹ್ ಕಡೆಗೆ ತೆರಳಬೇಕಾಯಿತು.

ಪಶ್ಚಿಮ ರಫಾದಲ್ಲಿ ಹಿಂದೆ ಜನನಿಬಿಡವಾಗಿದ್ದ ತಾಲ್ ಅಸ್-ಸುಲ್ತಾನ್ ಬಡಾವಣೆ ಬಹುತೇಕ ಸಂಪೂರ್ಣವಾಗಿ ನಾಶವಾಗಿದೆ. ಹಿಂದೆ ಮನೆಗಳಿದ್ದ ಸ್ಥಳದಲ್ಲಿ ಈಗ ಮರಳು ಮಾತ್ರ ಕಾಣಿಸುತ್ತಿದೆ ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ.

 

► ಡೇರೆಗಳಿಂದ ಆವೃತವಾದ ಅಲ್-ಮವಾಸಿ ಪ್ರದೇಶ

ರಫಾ ಮತ್ತು ಖಾನ್ ಯೂನಿಸ್ ಗವರ್ನರೇಟ್ ಗಳ ಕರಾವಳಿಯುದ್ದಕ್ಕೂ ಹರಡಿಕೊಂಡಿದ್ದ ಅಲ್-ಮವಾಸಿ ಹಿಂದೆ ಕಡಿಮೆ ಜನಸಂಖ್ಯೆ ಹೊಂದಿದ್ದ ಮರಳು ಮತ್ತು ಕೃಷಿ ಭೂಮಿಯ ಕರಾವಳಿ ಪ್ರದೇಶವಾಗಿತ್ತು. ಯುದ್ಧ ಆರಂಭದಲ್ಲಿ ಇಸ್ರೇಲ್ ಇದನ್ನು 'ಮಾನವೀಯ ವಲಯ' ಎಂದು ಘೋಷಿಸಿತ್ತು. ಸ್ಥಳಾಂತರಗೊಂಡ ಫೆಲೆಸ್ತೀನಿಯನ್ನರು ಇಲ್ಲಿ ಸುರಕ್ಷತೆ ಪಡೆಯಬಹುದು ಎಂದು ಇಸ್ರೇಲ್ ಸೂಚಿಸಿತ್ತು.

2024ರ ಮೇ ನಲ್ಲಿ ಇಸ್ರೇಲ್ ರಫಾ ನಗರದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ, ಅಂದಿನ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ರಫಾಕ್ಕೆ ಪ್ರವೇಶಿಸಿದರೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ ಎಂದು ಎಚ್ಚರಿಸಿದ್ದರು.

ಆದರೂ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತು. ಲಕ್ಷಾಂತರ ಜನರನ್ನು ಅಲ್-ಮವಾಸಿಗೆ ತೆರಳುವಂತೆ ಮಾಡಿತು. ಬಳಿಕ ಈ ಪ್ರದೇಶದಲ್ಲೂ ಪದೇ ಪದೇ ಬಾಂಬ್ ದಾಳಿಗಳು ನಡೆದಿವೆ.

ಇತ್ತೀಚಿನ ಉಪಗ್ರಹ ಚಿತ್ರಗಳು ಹಿಂದೆ ಬಹುತೇಕ ಖಾಲಿಯಾಗಿದ್ದ ಅಲ್-ಮವಾಸಿ ಪ್ರದೇಶವು ಈಗ ಡೇರೆಗಳಿಂದ ಆವೃತವಾಗಿರುವುದನ್ನು ತೋರಿಸುತ್ತವೆ. ಬೇರೆಡೆಗೆ ತೆರಳಲು ದಾರಿಯಿಲ್ಲದ ಕುಟುಂಬಗಳು ಇಲ್ಲಿ ನೆಲೆಸಿವೆ.

 

►ಖಾನ್ ಯೂನಿಸ್: 51,885 ಕಟ್ಟಡಗಳಿಗೆ ಹಾನಿ

UNOSATನ ಅಕ್ಟೋಬರ್ 2025ರ ಮೌಲ್ಯಮಾಪನದ ಪ್ರಕಾರ, ಗಾಝಾದ ಎಲ್ಲ ಗವರ್ನರೇಟ್ಗಳ ಪೈಕಿ ಖಾನ್ ಯೂನಿಸ್ ನಲ್ಲಿ ಅತಿ ಹೆಚ್ಚು ಸಂಖ್ಯೆಯ, ಅಂದರೆ 51,885 ಕಟ್ಟಡಗಳು ಹಾನಿಗೊಳಗಾಗಿವೆ.

ಖಾನ್ ಯೂನಿಸ್ ಗಾಝಾದ ಪ್ರಮುಖ ಕೃಷಿ ಕೇಂದ್ರಗಳಲ್ಲೊಂದಾಗಿತ್ತು. ಗಾಝಾ ಪಟ್ಟಿಯಲ್ಲಿ ಹಾನಿಗೊಳಗಾದ ಕೃಷಿ ಭೂಮಿಯ ಒಟ್ಟು ವಿಸ್ತೀರ್ಣದಲ್ಲೂ ಖಾನ್ ಯೂನಿಸ್ ಅಗ್ರಸ್ಥಾನದಲ್ಲಿದೆ.

ಖಾನ್ ಯೂನಿಸ್ನ ಮಾನ್ (Ma’an) ಪ್ರದೇಶದಲ್ಲಿರುವ ಇಂಡೋನೇಷಿಯಾದ ಇಸ್ತಿಕ್ಲಾಲ್ ಮಸೀದಿ, ಪುನಃ ತೆರೆಯಲ್ಪಟ್ಟು ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲೇ ನಡೆದ ಯುದ್ಧದಲ್ಲಿ ನಾಶವಾಗಿದೆ.

 

►ಗಾಝಾ ನಗರದ ಬಂದರು: ಮೀನುಗಾರಿಕಾ ಉದ್ಯಮಕ್ಕೆ ಭಾರಿ ಹೊಡೆತ

UNOSATನ ಅಕ್ಟೋಬರ್ 2025ರ ಮೌಲ್ಯಮಾಪನದ ಪ್ರಕಾರ, ಗಾಝಾ ಗವರ್ನರೇಟ್ ನಲ್ಲಿ 51,530 ಹಾನಿಗೊಳಗಾದ ರಚನೆಗಳು ದಾಖಲಾಗಿವೆ. ಈ ಪೈಕಿ 41,663 ರಚನೆಗಳು ಗಾಝಾ ನಗರದಲ್ಲೇ ಇವೆ.

ಅತಿ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಗಾಝಾ ನಗರದ ಬಂದರು ಕೂಡ ಸೇರಿದೆ. ಹಿಂದೆ ಸುಮಾರು 1.10 ಲಕ್ಷ ಜನರಿಗೆ ಆಧಾರವಾಗಿದ್ದ ಮೀನುಗಾರಿಕೆ ಉದ್ಯಮದ ಕೇಂದ್ರವಾಗಿದ್ದ ಬಂದರು ಈಗ ತೀವ್ರವಾಗಿ ಹಾನಿಗೊಳಗಾಗಿದೆ.

ಬಹುತೇಕ ಮೀನುಗಾರಿಕಾ ದೋಣಿಗಳು ನಾಶವಾಗಿವೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.

 

►ಜಬಲಿಯಾ ನಿರಾಶ್ರಿತರ ಶಿಬಿರವೂ ನಾಶ

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿಯ ಪ್ರಕಾರ, 2025ರ ಜುಲೈ ವೇಳೆಗೆ ಉತ್ತರ ಗಾಝಾ ಗವರ್ನರೇಟ್ ನಲ್ಲಿ ಶೇ 94ರಷ್ಟು ಕೃಷಿ ಭೂಮಿ ಹಾನಿಗೊಳಗಾಗಿತ್ತು.

ಯುದ್ಧದ ವೇಳೆ ಬೇಟ್ ಲಾಹಿಯಾ, ಜಬಲಿಯಾ ಮತ್ತು ಉತ್ತರ ಗಾಝಾದ ಇತರ ಪ್ರದೇಶಗಳು ಇಸ್ರೇಲಿ ಸೇನಾ ಕಾರ್ಯಾಚರಣೆಗಳು, ಬಲವಂತದ ಸ್ಥಳಾಂತರಗಳು ಮತ್ತು ಮಾನವೀಯ ನೆರವಿನ ಮೇಲಿನ ತೀವ್ರ ನಿರ್ಬಂಧಗಳಿಗೆ ಒಳಪಟ್ಟಿದ್ದವು.

ಗಾಝಾದ ಎಂಟು ನಿರಾಶ್ರಿತರ ಶಿಬಿರಗಳ ಪೈಕಿ ಅತಿದೊಡ್ಡದಾದ ಜಬಲಿಯಾ ನಿರಾಶ್ರಿತರ ಶಿಬಿರವೂ ನಾಶವಾಗಿದೆ. ಉಪಗ್ರಹ ಚಿತ್ರಗಳಲ್ಲಿ ಅಲ್ಲಿನ ಕಟ್ಟಡಗಳು ಭಗ್ನಾವಶೇಷಗಳಾಗಿ ಬದಲಾಗಿರುವುದು ಕಾಣಿಸುತ್ತದೆ.

►74,000ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಮೃತ್ಯು

2023ರ ಅಕ್ಟೋಬರ್ 7ರಂದು ಗಾಝಾ ವಿರುದ್ಧ ಇಸ್ರೇಲ್ ಯುದ್ಧ ಆರಂಭಿಸಿದ ಬಳಿಕ 74,000ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 1,75,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭಗ್ನಾವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ನಾಪತ್ತೆಯಾಗಿರುವುದರಿಂದ ಸಾವಿನ ನೈಜ ಸಂಖ್ಯೆ ಇದಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ.

2025ರ ಅಕ್ಟೋಬರ್ನಲ್ಲಿ ಜಾರಿಗೆ ಬಂದ 'ಕದನ ವಿರಾಮ'ದ ಬಳಿಕವೂ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 5,000 ಮಂದಿ ಗಾಯಗೊಂಡಿದ್ದಾರೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor