Photo Credit : X

ಬಾಗ್ದಾದ್: ಎರಡು ದಶಕಗಳಿಗೂ ಹೆಚ್ಚು ಕಾಲ ನಡೆದ ಯುದ್ಧದಲ್ಲಿ 4,500 ಅಮೆರಿಕನ್ ಸೈನಿಕರು ಮೃತಪಟ್ಟಿರುವ ಇರಾಕ್‌ ನಿಂದ ಅಮೆರಿಕದ ಪಡೆಗಳು ಬುಧವಾರದ ವೇಳೆಗೆ ತಮ್ಮ ಕೊನೆಯ ನೆಲೆಗಳಿಂದಲೂ ನಿರ್ಗಮಿಸಲು ಸಜ್ಜಾಗಿವೆ. ಅಮೆರಿಕದ ಈ ನಿರ್ಗಮನವು ಇರಾನ್ ಮತ್ತು ಅದರ ಮಿತ್ರ ಸಶಸ್ತ್ರ ಗುಂಪುಗಳಿಗೆ ಇರಾಕ್ ನಲ್ಲಿ ಮತ್ತಷ್ಟು ಪ್ರಭಾವ ಸಾಧಿಸಲು ಅವಕಾಶ ಕಲ್ಪಿಸಬಹುದು ಎಂದು ಇರಾಕಿನ ರಕ್ಷಣಾ ತಜ್ಞರು ಹೇಳಿದ್ದಾರೆ.

ಅಮೆರಿಕದ ಅಂದಿನ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ಅವಧಿಯಲ್ಲಿ 2024ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಅಮೆರಿಕದ ಪಡೆಗಳ ವಾಪಸಾತಿ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಈ ಒಪ್ಪಂದ ಜಾರಿಗೆ ಬರುತ್ತಿದೆ. ಇರಾನ್ ವಿರುದ್ಧ ಅಮೆರಿಕ ಯುದ್ಧ ನಡೆಸುತ್ತಿರುವ ಸಂದರ್ಭದಲ್ಲೇ ಇರಾಕ್‌ ನಿಂದ ಅಮೆರಿಕದ ಪಡೆಗಳು ಹೊರಹೋಗುತ್ತಿರುವುದು ಗಮನಾರ್ಹ.

‘ಇರಾನ್ ನೊಂದಿಗೆ ಗುರುತಿಸಿಕೊಂಡಿರುವ ಶಿಯಾ ಸಶಸ್ತ್ರ ಗುಂಪುಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಇರಾಕಿನ ಭದ್ರತಾ ವಿಶ್ಲೇಷಕ ಜಾಸಿಮ್ ಅಲ್-ಬಹದ್ಲಿ, ‘ಒಕ್ಕೂಟದ ನಿರ್ಗಮನದಿಂದ ಇರಾನ್ ಕಾರ್ಯತಂತ್ರದ ಲಾಭ ಪಡೆಯಲಿದೆ. ಹಲವು ವರ್ಷಗಳಿಂದ ಇರಾಕ್ ನಲ್ಲಿ ಟೆಹ್ರಾನ್ ನ ಪ್ರಭಾವಕ್ಕೆ ಎದುರಾಳಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಿಲಿಟರಿ ಉಪಸ್ಥಿತಿ ಈಗ ಕೊನೆಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ.

ಇರಾನ್ ಪರ ಸಶಸ್ತ್ರ ಗುಂಪುಗಳು ಈ ನಿರ್ಗಮನವನ್ನು ತಮ್ಮ ಚಳವಳಿಯ ಗೆಲುವು ಎಂದು ಬಿಂಬಿಸುವುದಷ್ಟೇ ಅಲ್ಲದೆ, ಆ ವೇಗವನ್ನು ಭದ್ರತೆ ಮತ್ತು ರಾಜಕೀಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಪ್ರಭಾವವಾಗಿ ಪರಿವರ್ತಿಸಲು ಪ್ರಯತ್ನಿಸಲಿವೆ ಎಂದು ಅವರು ಹೇಳಿದ್ದಾರೆ.

ಇರಾನ್ ಬೆಂಬಲಿತ ಸಶಸ್ತ್ರ ಬಣಗಳ ಒಕ್ಕೂಟವಾದ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್’ನ ಕಮಾಂಡರ್ ಅಬು ಮೊಜ್ತಾಬಾ ಅಲ್-ಯಸಿರಿ, ಅಮೆರಿಕದ ನಿರ್ಗಮನವನ್ನು ‘ಇರಾಕಿನ ಇಸ್ಲಾಮಿಕ್ ಪ್ರತಿರೋಧ ಗುಂಪುಗಳು ಮತ್ತು ಗೌರವಾನ್ವಿತ ಇರಾಕಿಗಳಿಗೆ ಐತಿಹಾಸಿಕ ಗೆಲುವು ಹಾಗೂ ಅಮೆರಿಕದ ಯೋಜನೆಗೆ ಭಾರಿ ಸೋಲು’ ಎಂದು ಹೇಳಿದ್ದಾರೆ.

‘ಸೆಪ್ಟೆಂಬರ್ 30ರಂದು ನಾವು ಇರಾಕ್ ನ ಇತಿಹಾಸದ ಕರಾಳ ಅಧ್ಯಾಯವೊಂದರ ಅಂತ್ಯವನ್ನು ಮತ್ತು ನಮ್ಮ ದೇಶದ ಮೇಲೆ ತನ್ನ ಇಚ್ಛೆಯನ್ನು ಹೇರುವಲ್ಲಿ ಆಕ್ರಮಣಕಾರಿ ಶಕ್ತಿಯ ವೈಫಲ್ಯವನ್ನು ಸಂಭ್ರಮಿಸುತ್ತೇವೆ. ವಿದೇಶಿ ಪಡೆಗಳಿಂದಲ್ಲ, ಪ್ರತಿರೋಧ ಮತ್ತು ಜನರ ಇಚ್ಛಾಶಕ್ತಿಯಿಂದ ಮಾತ್ರ ಇರಾಕ್ ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಬಹುದು ಎಂಬುದನ್ನು ಇರಾಕ್ ಸಾಬೀತುಪಡಿಸಿದೆ’ ಎಂದು ಅವರು ರಾಯಿಟರ್ಸ್ ಗೆ ತಿಳಿಸಿದ್ದಾರೆ.

►‘ಇರಾಕ್ ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ’

ಅಮೆರಿಕದ ಪಡೆಗಳ ಅಂತಿಮ ನಿರ್ಗಮನವನ್ನು ಹಲವು ಇರಾಕಿಗಳು ಸ್ವಾಗತಿಸಿದ್ದರೂ, ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ಬಲದ ಬಗ್ಗೆ ಕಳವಳ ಹೊಂದಿರುವವರು ಈ ನಿರ್ಗಮನವು ಅವಸರದ ಕ್ರಮವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಫಲ್ಲುಜಾದ ಸುನ್ನಿ ಬುಡಕಟ್ಟು ನಾಯಕ ಅಬ್ದುಲ್ ರೆಹಮಾನ್ ಅಲ್-ಜೊಬೈ, ‘ಈ ಸಮಯದಲ್ಲಿ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇರಾಕ್ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ’ ಎಂದು ಹೇಳಿದ್ದಾರೆ. ಫಲ್ಲುಜಾ ಒಂದು ಕಾಲದಲ್ಲಿ ಅಮೆರಿಕ ವಿರೋಧಿ ಪ್ರತಿರೋಧದ ಪ್ರಮುಖ ಕೇಂದ್ರವಾಗಿತ್ತು.

‘ಎಲ್ಲಾ ಇರಾಕಿಗಳು ಸಂಪೂರ್ಣ ಸಾರ್ವಭೌಮತ್ವವನ್ನು ಬಯಸುತ್ತಾರೆ. ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅಮೆರಿಕ ನೇತೃತ್ವದ ಒಕ್ಕೂಟವು ಈ ರೀತಿಯಾಗಿ ನಿರ್ಗಮಿಸುವುದು ಮತ್ತು ಅಧಿಕಾರದ ನಿರ್ವಾತ ಸೃಷ್ಟಿಸುವುದು ಎಲ್ಲ ಇರಾಕಿಗಳಲ್ಲೂ ಆತಂಕಕ್ಕೆ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.

ಸುನ್ನಿ ಮುಸ್ಲಿಂ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸಲು ಅಮೆರಿಕದ ಪಡೆಗಳು 2003ರಲ್ಲಿ ಇರಾಕ್ ಮೇಲೆ ಆಕ್ರಮಣ ನಡೆಸಿದ್ದವು. ಬಳಿಕ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಶಿಯಾ ನೇತೃತ್ವದ ಸರಕಾರವನ್ನು ಸ್ಥಾಪಿಸಿದವು. ದೀರ್ಘಕಾಲ ಬಂಡಾಯ-ವಿರೋಧಿ ಹೋರಾಟ ನಡೆಸಿದ ಬಳಿಕ 2011ರ ಅಂತ್ಯದಲ್ಲಿ ಅಲ್ಲಿಂದ ನಿರ್ಗಮಿಸಿದ್ದವು.

ಆದರೆ, 2014ರಿಂದ 2017ರವರೆಗೆ ನಡೆದ ಪ್ರಮುಖ ಯುದ್ಧದಲ್ಲಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ ಅನ್ನು ಸೋಲಿಸಲು ಇರಾಕಿ ಪಡೆಗಳಿಗೆ ನೆರವಾಗಲು ಅಮೆರಿಕದ ಪಡೆಗಳು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲೇ ಮತ್ತೆ ಇರಾಕ್ ಗೆ ಮರಳಿದ್ದವು.

ಅಫ್ಘಾನಿಸ್ತಾನದಲ್ಲಿ ನಡೆದ ಸಮಾನಾಂತರ ಯುದ್ಧದಲ್ಲಿ 2021ರಲ್ಲಿ ಅಮೆರಿಕದ ಹಠಾತ್ ನಿರ್ಗಮನದೊಂದಿಗೆ ಯುದ್ಧ ಅಂತ್ಯಗೊಂಡಿತ್ತು. ಅಲ್ಲಿ ಮೃತಪಟ್ಟ ಅಮೆರಿಕನ್ನರ ಸಂಖ್ಯೆಗೆ ಹೋಲಿಸಿದರೆ ‘ಆಪರೇಷನ್ ಇರಾಕಿ ಫ್ರೀಡಂ’ನಲ್ಲಿ ಮೃತಪಟ್ಟ ಅಮೆರಿಕನ್ನರ ಸಂಖ್ಯೆ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಮತ್ತು ಇರಾನ್ ಎರಡರೊಂದಿಗೂ ನಿಕಟ ರಾಜಕೀಯ ಮತ್ತು ಮಿಲಿಟರಿ ಮೈತ್ರಿ ಹೊಂದಿರುವ ಏಕೈಕ ದೇಶವಾಗಿ ಇರಾಕ್ ಉಳಿದಿದೆ. ಆದರೂ, ಎರಡೂ ದೇಶಗಳು ಕೆಲ ಸಂದರ್ಭಗಳಲ್ಲಿ ಇರಾಕ್ ನ ಭೂಪ್ರದೇಶವನ್ನು ತಮ್ಮ ಪರೋಕ್ಷ ಯುದ್ಧಭೂಮಿಯಾಗಿ ಬಳಸಿಕೊಂಡಿವೆ.

2020ರಲ್ಲಿ ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕವು ಇರಾನ್ ನ ಉನ್ನತ ಕಮಾಂಡರ್ ಖಾಸೆಮ್ ಸುಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಇರಾನ್ ನ ಮಿತ್ರಪಕ್ಷಗಳು ಅಮೆರಿಕದ ನೆಲೆಗಳ ಮೇಲೆ ಪದೇ ಪದೇ ದಾಳಿ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಪ್ರತಿದಾಳಿ ನಡೆಸಿತ್ತು.

ಈ ವರ್ಷದ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಾಗಿರುವ 18 ಅಮೆರಿಕದ ಸೇನಾ ಸಿಬ್ಬಂದಿಯಲ್ಲಿ ಏಳು ಮಂದಿ ಇರಾಕ್ ನಲ್ಲಿದ್ದರು. ಅವರಲ್ಲಿ ಕೊನೆಯದಾಗಿ ಮೃತಪಟ್ಟವರು ಆರ್ಮಿ ಸಾರ್ಜೆಂಟ್. ಜುಲೈನಲ್ಲಿ ಅರ್ಬಿಲ್ ಸಮೀಪದ ನೆಲೆಯೊಂದರಲ್ಲಿ ಡ್ರೋನ್ ವೊಂದನ್ನು ನಿಯಂತ್ರಿತ ಸ್ಫೋಟದ ಮೂಲಕ ನಿಷ್ಕ್ರಿಯಗೊಳಿಸುವ ವೇಳೆ ಅವರು ಮೃತಪಟ್ಟಿದ್ದರು.

►ಇರಾನ್ ನ ‘ಪ್ರತಿರೋಧದ ಮೈತ್ರಿಕೂಟ’ಕ್ಕೆ ಜಯ

ಅಮೆರಿಕದ ಪಡೆಗಳನ್ನು ಇಡೀ ಮಧ್ಯಪ್ರಾಚ್ಯದಿಂದ ಹೊರಹಾಕುವುದೇ ತಮ್ಮ ಅಂತಿಮ ಗುರಿ ಎಂದು ಹೇಳುತ್ತಿರುವ ಇರಾನ್, ಇರಾಕ್‌ ನಿಂದ ಅಮೆರಿಕದ ನಿರ್ಗಮನವನ್ನು ಈ ಪ್ರದೇಶದಲ್ಲಿರುವ ತನ್ನ ಮಿತ್ರ ಸಶಸ್ತ್ರ ಗುಂಪುಗಳ ‘ಪ್ರತಿರೋಧದ ಮೈತ್ರಿಕೂಟ’ಕ್ಕೆ (ಆಕ್ಸಿಸ್ ಆಫ್ ರೆಸಿಸ್ಟೆನ್ಸ್) ದೊರೆತ ಜಯ ಎಂದು ಹೇಳಿದೆ.

ಅಮೆರಿಕದ ಪಡೆಗಳು ದೇಶ ಮತ್ತು ಪ್ರದೇಶವನ್ನು ತೊರೆದ ಬಳಿಕ ‘ಇರಾಕ್ ನಲ್ಲಿ ಶಾಶ್ವತ ಭದ್ರತೆ ನೆಲೆಗೊಳ್ಳಲಿದೆ’ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಉಪಾಧ್ಯಕ್ಷ ಅಮೀರ್ ಹಯಾತ್ ಮೊಕದ್ದಮ್ ಹೇಳಿದ್ದಾರೆ.

ಸೋಮವಾರ ಅವರು ಈ ಹೇಳಿಕೆ ನೀಡಿದ್ದಾರೆ. ಇರಾಕ್‌ ನಿಂದ ಅಮೆರಿಕದ ಪಡೆಗಳ ವಾಪಸಾತಿಯನ್ನು ಇರಾನ್ ‘ಸ್ವಾಗತಿಸುತ್ತದೆ ಮತ್ತು ನಿಸ್ಸಂದೇಹವಾಗಿ ಬೆಂಬಲಿಸುತ್ತದೆ’ ಎಂದು ಅವರು ಇರಾನ್ ನ ಸಂಸದೀಯ ಸುದ್ದಿ ಸೇವೆಗೆ ತಿಳಿಸಿದ್ದಾರೆ.

‘ಪ್ರತಿರೋಧ ಗುಂಪುಗಳು ಪ್ರಸ್ತುತ ಕ್ರಮ ಕೈಗೊಳ್ಳುತ್ತಿವೆ. ಕೆಲವೊಮ್ಮೆ ಅವು ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಎದುರಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.

ಟೆಹ್ರಾನ್ ನ ನಿರ್ದೇಶನದ ಮೇರೆಗೆ ನೆರೆಯ ದೇಶಗಳ ಮೇಲೆ ದಾಳಿ ನಡೆಸುವ ಮೂಲಕ ಮಧ್ಯಪ್ರಾಚ್ಯದ ವ್ಯಾಪಕ ಸಂಘರ್ಷದಲ್ಲಿ ಪಾತ್ರ ವಹಿಸುತ್ತಿರುವುದಾಗಿ ಇರಾಕ್ ನಲ್ಲಿನ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ವಿರುದ್ಧ ವಾಷಿಂಗ್ಟನ್ ಆರೋಪಿಸಿದೆ. ಇತ್ತೀಚೆಗೆ ಈ ತಿಂಗಳಲ್ಲೇ ಸೌದಿ ಅರೇಬಿಯಾದ ಪ್ರಮುಖ ತೈಲ ಪೈಪ್ ಲೈನ್ ಮೇಲೂ ಈ ಗುಂಪುಗಳು ದಾಳಿ ನಡೆಸಿವೆ ಎಂದು ಅಮೆರಿಕ ಆರೋಪಿಸಿದೆ. ಈ ಗುಂಪುಗಳ ಪ್ರಭಾವವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದಾಗಿ ಬಾಗ್ದಾದ್ ಸರಕಾರ ಹೇಳಿದೆ.

►ಇಸ್ಲಾಮಿಕ್ ಸ್ಟೇಟ್ ಗೆ ಮರುಜೀವ ಸಿಗುವ ಆತಂಕ

ಅಮೆರಿಕದ ಪಡೆಗಳ ವಾಪಸಾತಿಯಿಂದ ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕರು ಮತ್ತೆ ಚೇತರಿಸಿಕೊಳ್ಳುವ ಅಪಾಯವಿದೆ ಎಂದು ಇರಾಕ್ ನ ಫೆಡರಲ್ ಸರಕಾರ ಹಾಗೂ ಅರೆ-ಸ್ವಾಯತ್ತ ಉತ್ತರ ಕುರ್ದಿಷ್ ಪ್ರದೇಶದ ಕೆಲವು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು ಒಂದು ದಶಕದ ಹಿಂದೆ ತಮ್ಮ ಸ್ವಯಂಘೋಷಿತ ‘ಖಲೀಫತ್’ ಕಳೆದುಕೊಂಡಿದ್ದರೂ, ಇಸ್ಲಾಮಿಕ್ ಸ್ಟೇಟ್ ತನ್ನ ಸ್ಲೀಪರ್ ಸೆಲ್ ಗಳನ್ನು ಉಳಿಸಿಕೊಂಡಿದೆ.

ತಮ್ಮ ಪ್ರಭಾವದ ಉತ್ತುಂಗದಲ್ಲಿ ಈ ಭಯೋತ್ಪಾದಕರು ಇರಾಕ್ ನ ಸುಮಾರು ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಸಾವಿರಾರು ಜನರನ್ನು ಹತ್ಯೆ ಮಾಡಿದ್ದರು. ಅಮೆರಿಕದ ಸೇನಾ ನೆಲೆಯೊಂದರೊಳಗೆ ನೂರಾರು ಜನರನ್ನು ಗುಂಡಿಕ್ಕಿ ಕೊಂದ ದೃಶ್ಯಗಳನ್ನು ಕೂಡ ಸಂಘಟನೆ ಸ್ವತಃ ವೀಡಿಯೋ ಮಾಡಿತ್ತು.

ಅಮೆರಿಕದ ಗುಪ್ತಚರ ಮಾಹಿತಿ, ಲಾಜಿಸ್ಟಿಕಲ್ ಬೆಂಬಲ ಮತ್ತು ಡ್ರೋನ್ ಗಳ ಕೊರತೆಯು ಇಸ್ಲಾಮಿಕ್ ಸ್ಟೇಟ್ ಗೆ ಮತ್ತೆ ಸಂಘಟಿತವಾಗಲು ಅವಕಾಶ ನೀಡಬಹುದು ಎಂದು ಕುರ್ದಿಷ್ ಕಮಾಂಡರ್ ಸಿರ್ವಾನ್ ಬರ್ಜಾನಿ ಹೇಳಿದ್ದಾರೆ.

‘ಸೆಪ್ಟೆಂಬರ್ ಅಂತ್ಯದ ವೇಳೆಗೆ ಇರಾಕ್‌ ನಿಂದ ಅಂತರರಾಷ್ಟ್ರೀಯ ಮೈತ್ರಿಕೂಟದ ಪಡೆಗಳು ಅಧಿಕೃತವಾಗಿ ವಾಪಸಾಗಲಿವೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕಳೆದ ಎರಡು ವಾರಗಳಿಂದ ಇಸ್ಲಾಮಿಕ್ ಸ್ಟೇಟ್ ನ ಸ್ಲೀಪರ್‌ ಸೆಲ್ ಗಳ ಚಟುವಟಿಕೆಗಳನ್ನು ನಾವು ಗಮನಿಸಿದ್ದೇವೆ. ಇದರಿಂದ ಹೋರಾಟಗಾರರ ಮನೋಸ್ಥೈರ್ಯ ಹೆಚ್ಚಾಗಿದೆ ಎಂಬುದು ನನ್ನ ಅಭಿಪ್ರಾಯ’ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಪಡೆಗಳ ವಾಪಸಾತಿಯ ಸಮಯದಲ್ಲೇ ಆತ್ಮಹತ್ಯಾ ದಾಳಿಗಳನ್ನು ನಡೆಸಲು ಇಸ್ಲಾಮಿಕ್ ಸ್ಟೇಟ್ ನ ಶಂಕಿತ ಗುಂಪೊಂದು ಸಿದ್ಧತೆ ನಡೆಸುತ್ತಿತ್ತು ಎಂದು ಇರಾಕಿ ಭದ್ರತಾ ಪಡೆಗಳು ತಿಳಿಸಿವೆ.

ಹಲವು ವರ್ಷಗಳ ಮಿಲಿಟರಿ ಹಿನ್ನಡೆಗಳ ಹೊರತಾಗಿಯೂ ಇಸ್ಲಾಮಿಕ್ ಸ್ಟೇಟ್ ಭದ್ರತಾ ಲೋಪಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಇನ್ನೂ ಹೊಂದಿದೆ ಎಂಬ ಕಳವಳವನ್ನು ಈ ಸಂಚು ಹೆಚ್ಚಿಸಿದೆ ಎಂದು ನಾಲ್ವರು ಇರಾಕಿ ಭದ್ರತಾ ಮತ್ತು ಸೇನಾ ಅಧಿಕಾರಿಗಳು ಹೇಳಿದ್ದಾರೆ.

‘ತಾನು ಇನ್ನೂ ಪ್ರಬಲವಾಗಿದ್ದೇನೆ ಮತ್ತು ರಕ್ತಸಿಕ್ತ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂಬ ಸಂದೇಶವನ್ನು ರವಾನಿಸಲು ಇಸ್ಲಾಮಿಕ್ ಸ್ಟೇಟ್ ಪ್ರಯತ್ನಿಸುತ್ತಿದೆ’ ಎಂದು ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾಗಿರುವ ತೈಲ ಪಟ್ಟಣ ಕಿರ್ಕುಕ್ ನ ಹಿರಿಯ ಭದ್ರತಾ ಅಧಿಕಾರಿ ಕರ್ನಲ್ ಖಾಲಿದ್ ಅಲ್-ಬಯಾತಿ ಹೇಳಿದ್ದಾರೆ.

ಸೌಜನ್ಯ: reuters.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor