ನಟ ನಾನಾ ಪಾಟೇಕರ್ | Photo Credit : PTI 

ಭಾರತೀಯ ಚಿತ್ರರಂಗದ ಅಪ್ರತಿಮ ಪ್ರತಿಭೆ, ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ನಾನಾ ಪಾಟೇಕರ್ ಗೋವಾದ ದೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ಮುಂಜಾನೆ ಸುಮಾರು 5.20ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.

ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 45 ನಿಮಿಷಗಳ ಕಾಲ ಸತತವಾಗಿ CPR ನಡೆಸಿದರೂ ವೈದ್ಯರಿಗೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಪುತ್ರ ಮಲ್ಹಾರ್ ಪಾಟೇಕರ್ ಅವರು ಈ ದುಃಖದ ಸುದ್ದಿಯನ್ನು ದೃಢಪಡಿಸಿದ್ದಾರೆ. ಅವರ ನಿಧನದಿಂದ ಇಡೀ ಭಾರತೀಯ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.

ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ನಾಯಕನ ಕಲ್ಪನೆಯನ್ನೇ ಮುರಿದ ನಟ ನಾನಾ. ಕೇವಲ ಕಣ್ಣುಗಳ ತೀಕ್ಷ್ಣತೆ, ಅಸಾಧಾರಣ ಮುಖಭಾವ ಮತ್ತು ಸಿಡಿಲಿನಂಥ ಸಂಭಾಷಣೆಯ ಧಾಟಿಯಿಂದಲೇ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಅವರ ಅಭಿನಯಕ್ಕೆ ಸರಿಸಾಟಿಯೇ ಇರಲಿಲ್ಲ.

ಮುಂಬೈನ ಜೆ.ಜೆ. ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್ಸ್ ನಲ್ಲಿ ಓದುತ್ತಿದ್ದ ದಿನಗಳಲ್ಲೇ ಅವರು ಬಡತನ ಮತ್ತು ಹಸಿವಿನ ಕಷ್ಟ ಅನುಭವಿಸಿದ್ದರು. ದಿನಗೂಲಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕಾದ ಸ್ಥಿತಿಯನ್ನೂ ಕಂಡಿದ್ದರು. ಬಾಲ್ಯದಿಂದಲೇ ನೋವು, ಅಸಮಾನತೆ ವಿರುದ್ಧ ಅವರೊಳಗೆ ಆಕ್ರೋಶವಿತ್ತು.

ರಂಗಭೂಮಿಯಿಂದ ಆರಂಭವಾದ ಅವರ ಕಲಾಯಾನ 1978ರಲ್ಲಿ ಮುಝಫರ್ ಅಲಿ ನಿರ್ದೇಶನದ ‘ಗಮನ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ವಿಸ್ತರಿಸಿತು. ಅಲ್ಲಿಂದ ಆರಂಭವಾದ ಐದು ದಶಕಗಳ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪರೂಪದ ಅಧ್ಯಾಯವಾಗಿ ದಾಖಲಾಗಿದೆ.

1980ರ ದಶಕದ ಮಧ್ಯಭಾಗದಲ್ಲಿ ಬಿಡುಗಡೆಯಾದ ‘ಅಂಕುಶ್’, ‘ಪ್ರತಿಘಾತ್’ ಹಾಗೂ ಮೀರಾ ನಾಯರ್ ನಿರ್ದೇಶನದ ‘ಸಲಾಂ ಬಾಂಬೆ’ ಚಿತ್ರಗಳು ನಾನಾ ಅವರಲ್ಲಿದ್ದ ಅಸಲೀ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದವು. ಆದರೆ ಅವರಿಗೆ ರಾಷ್ಟ್ರಮಟ್ಟದ ಅಪಾರ ಖ್ಯಾತಿ ತಂದುಕೊಟ್ಟಿದ್ದು ವಿಧು ವಿನೋದ್ ಚೋಪ್ರಾ ಅವರ ‘ಪರಿಂದಾ’.

ಮುಂಬೈ ಭೂಗತ ಜಗತ್ತಿನ ಕ್ರೂರ ಗ್ಯಾಂಗ್ ಸ್ಟರ್ ‘ಅಣ್ಣಾ’ ಪಾತ್ರದಲ್ಲಿ ನಾನಾ ತೋರಿದ ಭಯಾನಕ ಆವೇಶ ಅವರಿಗೆ ಅತ್ಯುತ್ತಮ ಪೋಷಕ ನಟನಾಗಿ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಕೇವಲ ನಟನಾಗಿ ಉಳಿಯಲು ಬಯಸದ ಅವರು 1991ರಲ್ಲಿ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರವನ್ನು ತಾವೇ ನಿರ್ದೇಶಿಸಿ, ನಟಿಸಿದರು. ಭಾರತೀಯ ಸೇನೆಯ ಶಿಸ್ತು, ಕರ್ತವ್ಯ ಪ್ರಜ್ಞೆ ಹಾಗೂ ನಾಗರಿಕ ಸಮಾಜದ ಮೌಲ್ಯಗಳ ಕುಸಿತವನ್ನು ಮುಖಾಮುಖಿಯಾಗಿಸಿದ ಈ ಚಿತ್ರ ಇಂದಿಗೂ ಒಂದು ಕ್ಲಾಸಿಕ್ ಆಗಿ ಉಳಿದಿದೆ.

1994ರಲ್ಲಿ ತೆರೆಕಂಡ ‘ಕ್ರಾಂತಿವೀರ್’ ಅವರ ಸಿನಿ ಬದುಕಿನ ಪರಮೋಚ್ಛ ಸಿನೆಮಾ. ಭ್ರಷ್ಟಾಚಾರ, ರಾಜಕೀಯ ವಂಚನೆ ಹಾಗೂ ಕೋಮುಗಲಭೆ ವಿರುದ್ಧ ಗುಡುಗುವ ಪ್ರತಾಪ್ ನಾರಾಯಣ್ ತಿಲಕ್ ಪಾತ್ರದಲ್ಲಿ ನಾನಾ ಅಕ್ಷರಶಃ ಜೀವಿಸಿದ್ದರು. ಈ ಪಾತ್ರ ಅವರಿಗೆ ಅತ್ಯುತ್ತಮ ನಟನಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಕೋಮು ಗಲಭೆಯ ದೃಶ್ಯವೊಂದರಲ್ಲಿ ತಮ್ಮದೇ ರಕ್ತ ಹಾಗೂ ಇನ್ನೊಬ್ಬ ವ್ಯಕ್ತಿಯ ರಕ್ತವನ್ನು ಕೈಯಲ್ಲಿ ಹಿಡಿದು, ‘ಇದು ಮುಸ್ಲಿಂ ರಕ್ತ, ಇದು ಹಿಂದೂ ರಕ್ತ... ಯಾವುದು ಬೇರೆ ಹೇಳು?’ ಎಂದು ಮತಾಂಧತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಇಂದಿಗೂ ಜಾತ್ಯತೀತತೆಯ ಅತ್ಯಂತ ಶಕ್ತಿಯುತ ಸಂಕೇತವಾಗಿ ಜನರ ನೆನಪಿನಲ್ಲಿ ಉಳಿದಿದೆ.

ಅವರ ಪ್ರತಿಭೆ ಕೇವಲ ಆಕ್ರೋಶಭರಿತ ಪಾತ್ರಗಳಿಗೆ ಸೀಮಿತವಾಗಿರಲಿಲ್ಲ. ‘ಅಗ್ನಿಸಾಕ್ಷಿ’ಯಲ್ಲಿ ಭಯಾನಕ ಅನುಮಾನದ ಗಂಡನಾಗಿ, ಸಂಜಯ್ ಲೀಲಾ ಬನ್ಸಾಲಿ ಅವರ ‘ಖಾಮೋಶಿ: ದಿ ಮ್ಯೂಸಿಕಲ್’ನಲ್ಲಿ ಮಾತು-ಕಿವಿ ಬಾರದ ಜೋಸೆಫ್ ಆಗಿ ನೀಡಿದ ಸೂಕ್ಷ್ಮ ಅಭಿನಯ, ‘ಅಪಹರಣ್’ ಚಿತ್ರದಲ್ಲಿ ಬಿಹಾರದ ರಾಜಕಾರಣಿಯ ಪಾತ್ರ ಹಾಗೂ ರಾಮ್ ಗೋಪಾಲ್ ವರ್ಮಾ ನಿರ್ಮಾಣದ ‘ಅಬ್ ತಕ್ ಛಪ್ಪನ್’ನಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಸಾಧು ಅಗಾಶೆಯಾಗಿ ಮೌನದಲ್ಲೇ ತೋರಿಸಿದ ತೀವ್ರತೆ ಅವರ ಬಹುಮುಖಿ ಅಭಿನಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

‘ಅಗ್ನಿಸಾಕ್ಷಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಮೂರನೇ ರಾಷ್ಟ್ರ ಪ್ರಶಸ್ತಿ ಪಡೆದರು. 2013ರಲ್ಲಿ ಭಾರತ ಸರಕಾರ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ನೀಡಿ ಅವರನ್ನು ಗೌರವಿಸಿತು.

ತೀವ್ರವಾದ ಹಾಗೂ ಗಂಭೀರ ಪಾತ್ರಗಳಲ್ಲೇ ಮುಳುಗಿದ್ದ ನಾನಾ, ಅನೀಸ್ ಬಾಜ್ಮಿ ಅವರ ‘ವೆಲ್ಕಮ್’ ಮೂಲಕ ಹಾಸ್ಯಪ್ರೇಕ್ಷಕರನ್ನೂ ನಗೆಗಡಲಲ್ಲಿ ತೇಲಿಸಿದರು. ಉದಯ್ ಶೆಟ್ಟಿ ಎಂಬ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಅವರು ನೀಡಿದ ಡೆಡ್ ಪ್ಯಾನ್ ಮುಖಭಾವ, ಮುಗ್ಧ ನಟನೆ ಮತ್ತು ಸಂಭಾಷಣೆಗಳು ಇಂದಿಗೂ ಸಾಮಾಜಿಕ ಜಾಲತಾಣಗಳ ಮೀಮ್ ಸಂಸ್ಕೃತಿಯಲ್ಲಿ ಜೀವಂತವಾಗಿವೆ.

ಮರಾಠಿ ರಂಗಭೂಮಿ ಹಾಗೂ ಚಿತ್ರರಂಗದಲ್ಲೂ ಅವರು ಬರೆದ ಇತಿಹಾಸ ಅಷ್ಟೇ ದೊಡ್ಡದು. 2016ರಲ್ಲಿ ಬಿಡುಗಡೆಯಾದ ‘ನಟಸಮ್ರಾಟ್’ ಚಿತ್ರದಲ್ಲಿ ಗಣಪತ್ ರಾವ್ ಬೆಳ್ವಲ್ಕರ್ ಆಗಿ ನಾನಾ ನೀಡಿದ ಭಾವಪರವಶ ಅಭಿನಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿತ್ತು.

ತಮ್ಮ ಎಪ್ಪತ್ತರ ಹರೆಯದಲ್ಲೂ ವಿಶಾಲ್ ಭಾರದ್ವಾಜ್ ಅವರ ‘ಒ ರೋಮಿಯೋ’, ಅನಿಲ್ ಕಪೂರ್ ನಟನೆಯ ‘ಸುಬೇದಾರ್’ ಹಾಗೂ ಪ್ರಕಾಶ್ ಝಾ ಅವರ ‘ಸಂಕಲ್ಪ್’ ಸರಣಿಯಲ್ಲಿ ಅವರು ನಟಿಸಿದ್ದರು. ಆದರೆ ನಾನಾ ಪಾಟೇಕರ್ ಅವರನ್ನು ಭಾರತದ ಕೋಟ್ಯಂತರ ಜನ ಪ್ರೀತಿಸಿದ್ದು ಕೇವಲ ತೆರೆಯ ಮೇಲಿನ ಡೈಲಾಗ್ ಗಳಿಗಾಗಿ ಅಲ್ಲ. ಅವರ ಎದೆಯಾಳದಲ್ಲಿದ್ದ ಜನಪರ ಕಾಳಜಿಗಾಗಿ.

ಸಾರ್ವಜನಿಕ ವೇದಿಕೆಗಳಲ್ಲಿ ಅವರು ಎಂದಿಗೂ ಅಧಿಕಾರಶಾಹಿಯ ಗುಲಾಮರಾಗಲಿಲ್ಲ. ಭ್ರಷ್ಟಾಚಾರ, ಬಡತನ ಹಾಗೂ ಮತಾಂಧತೆಯ ವಿರುದ್ಧ ನಿರ್ಭೀತಿಯಿಂದ ಧ್ವನಿ ಎತ್ತುತ್ತಿದ್ದರು.

ಮಹಾರಾಷ್ಟ್ರದ ಮರಾಠ್ವಾಡ ಹಾಗೂ ವಿದರ್ಭ ಭಾಗಗಳಲ್ಲಿ ತೀವ್ರ ಬರಗಾಲದಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ, ಮುಂಬೈನ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಕಣ್ಣೀರು ಸುರಿಸುವ ಬದಲು ಅವರು ಹಳ್ಳಿಗಳಿಗೆ ಧಾವಿಸಿದರು. 2015ರಲ್ಲಿ ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ಸೇರಿ ‘ನಾಮ್ ಫೌಂಡೇಶನ್’ ಸ್ಥಾಪಿಸಿದರು. ಆತ್ಮಹತ್ಯೆ ಮಾಡಿಕೊಂಡ ಬಡ ರೈತರ ಮನೆ ಬಾಗಿಲಿಗೆ ತೆರಳಿ, ವಿಧವೆಯರ ಕೈಹಿಡಿದು ಸಾಂತ್ವನ ಹೇಳಿ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರು.

ಸಾವಿರಾರು ಹಳ್ಳಿಗಳಲ್ಲಿ ಕೆರೆ-ಕಟ್ಟೆಗಳ ಹೂಳೆತ್ತುವ ಹಾಗೂ ನದಿಗಳ ಪುನಶ್ಚೇತನ ಮಾಡುವ ಅಭಿಯಾನವನ್ನು ಜನಪರ ಚಳವಳಿಯನ್ನಾಗಿ ರೂಪಿಸಿದರು. ದೇಶಕ್ಕೆ ಅನ್ನ ನೀಡುವ ಅನ್ನದಾತ ಬೀದಿಯಲ್ಲಿ ಸಾಯುತ್ತಿರುವಾಗ ನಾವೆಲ್ಲ ಬದುಕಿರುವುದಕ್ಕೆ ಅರ್ಥವಿಲ್ಲ ಎಂದು ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರಿಡುತ್ತಾ ಜನರನ್ನು ಎಚ್ಚರಿಸಿದ ನಾಯಕ ಅವರು.

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಗಡಿಗೆ ತೆರಳಿ ಯೋಧರೊಂದಿಗೆ ನಿಂತು ದೇಶಪ್ರೇಮದ ನೈಜ ಅರ್ಥವನ್ನು ಬದುಕಿ ತೋರಿಸಿದ್ದರು. ವೈಯಕ್ತಿಕ ಬದುಕಿನಲ್ಲಿ ನಾನಾ ಅತ್ಯಂತ ಸರಳ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು. ನೂರಾರು ಕೋಟಿಗಳ ಗ್ಲಾಮರ್ ಜಗತ್ತಿನ ನಡುವೆಯೂ ಸಾಮಾನ್ಯ ಮನೆಯಲ್ಲಿ, ಅಮ್ಮ ನೀಡಿದ ಸಂಸ್ಕಾರ ಹಾಗೂ ಜನಸಾಮಾನ್ಯರ ಕಷ್ಟಗಳ ನೆನಪಿನಲ್ಲೇ ಬದುಕಿದ್ದರು.

ವೈಯಕ್ತಿಕ ಕಾರಣಗಳಿಂದ ಪತ್ನಿ ನೀಲಕಾಂತಿ ಅವರಿಂದ ದಶಕಗಳ ಹಿಂದೆಯೇ ಪ್ರತ್ಯೇಕಗೊಂಡಿದ್ದರೂ, ಅವರು ಔಪಚಾರಿಕವಾಗಿ ವಿಚ್ಛೇದನ ಪಡೆದಿರಲಿಲ್ಲ. ಪುತ್ರ ಮಲ್ಹಾರ್ ಅವರ ಒಡನಾಟದಲ್ಲಿ ನಾನಾ ಬದುಕುತ್ತಿದ್ದರು.

ಅವರ ನಿಧನದಿಂದ ಅನ್ಯಾಯದ ವಿರುದ್ಧ ರೋಷಾವೇಶದಿಂದ ಸಿಡಿಯುತ್ತಿದ್ದ, ನೊಂದವರ ಕಷ್ಟಕ್ಕೆ ಮಗುವಿನಂತೆ ಕರಗುತ್ತಿದ್ದ, ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಎದೆಕೊಟ್ಟು ನಿಲ್ಲುತ್ತಿದ್ದ ಭಾರತೀಯ ಚಿತ್ರರಂಗದ ಒಬ್ಬ ನಿಜ ಹೀರೋ ಮರೆಯಾದಂತಾಗಿದೆ.

ತೆರೆಯ ಮೇಲಷ್ಟೇ ವಿಜೃಂಭಿಸುವ, ಅದರಾಚೆ ನಿಜ ಬದುಕಿನಲ್ಲಿ ಜನಸಾಮಾನ್ಯರ ನೋವಿಗೆ ಸ್ಪಂದಿಸದೆ, ಜನಹಿತ ಕಾಯದ ಸರಕಾರಗಳ ವಿರುದ್ಧ ಒಂದು ಮಾತಾಡುವ ಧೈರ್ಯವನ್ನೂ ತೋರಿಸದೆ, ತಮ್ಮ ಸಂಪತ್ತು ಮತ್ತು ದುರಹಂಕಾರದಲ್ಲಿ ಮುಳುಗಿರುವ ಸಿನಿಮಾ ಮಂದಿಯ ನಡುವೆ ನಾನಾ ಪಾಟೇಕರ್ ಎಂಬ ಮನುಷ್ಯನ ಚಿತ್ರ ಬಹಳ ದೊಡ್ಡದಾಗಿ ಬಹುಕಾಲ ಉಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor