ಗಾಝಾದಲ್ಲಿ ಇಸ್ರೇಲ್ ನ ಮೂರು ವರ್ಷಗಳ ನರಮೇಧ: ಅಂಕಿಅಂಶಗಳಲ್ಲಿ ಸಾವು–ನೋವುಗಳು
►ಮರಿಯಮ್ ಅಲಿ ಮತ್ತು AJLabs – Aljazeera. com ವರದಿ
Photo credit: al jazeera.com
ಗಾಝಾದಲ್ಲಿ ಫೆಲೆಸ್ತೀನಿಯನ್ನರ ವಿರುದ್ಧ ಇಸ್ರೇಲ್ ತನ್ನ ನರಮೇಧವನ್ನು ಆರಂಭಿಸಿ ಮೂರು ವರ್ಷಗಳು ಪೂರ್ಣಗೊಂಡಿವೆ.
ಹಮಾಸ್ ನ ಸಶಸ್ತ್ರ ಪಡೆ ಖಸ್ಸಾಮ್ ಬ್ರಿಗೇಡ್ಸ್ ಮತ್ತು ಇತರ ಫೆಲೆಸ್ತೀನಿಯನ್ ಗುಂಪುಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿ, 1,139 ಜನರನ್ನು ಕೊಂದು ಮತ್ತು ಸುಮಾರು 240 ಜನರನ್ನು ಒತ್ತೆಯಾಳಾಗಿರಿಸಿದ ನಂತರ, ಅಕ್ಟೋಬರ್ 7, 2023ರಂದು ಇಸ್ರೇಲ್ ನ ದಾಳಿ ಆರಂಭವಾಯಿತು.
ಇಸ್ರೇಲ್ ತಡೆರಹಿತವಾಗಿ ಬಾಂಬ್ ದಾಳಿ ನಡೆಸುವ ಮೂಲಕ ಪ್ರತಿಕ್ರಿಯಿಸಿತು ಮತ್ತು ತನ್ನ 16 ವರ್ಷಗಳ ದಿಗ್ಬಂಧನವನ್ನು ಸಂಪೂರ್ಣ ಉಸಿರುಗಟ್ಟಿಸುವ ಹಂತಕ್ಕೆ ತಲುಪಿಸಿತು.
ಅಕ್ಟೋಬರ್ 10, 2025ರಂದು ‘ಕದನ ವಿರಾಮ’ ಜಾರಿಗೆ ಬಂದಿತು, ಆದರೆ ದಾಳಿಗಳು ಮತ್ತು ಹತ್ಯೆಗಳು ಮುಂದುವರೆದಿವೆ.
ಅಂಕಿಅಂಶಗಳ ಪ್ರಕಾರ ಪ್ರಸ್ತುತ ಪರಿಸ್ಥಿತಿ ಇಲ್ಲಿದೆ:
►ಗಾಝಾದಲ್ಲಿ ಪ್ರತಿ 30 ಜನರಲ್ಲಿ ಒಬ್ಬರ ಸಾವು
ಇಸ್ರೇಲ್ ನ ಮೂರು ವರ್ಷಗಳ ದಾಳಿಯಲ್ಲಿ ಕನಿಷ್ಠ 21,000 ಮಕ್ಕಳು ಸೇರಿದಂತೆ ಕನಿಷ್ಠ 74,000 ಫೆಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಇದು ಯುದ್ಧಪೂರ್ವ ಜನಸಂಖ್ಯೆಯ ಪ್ರತಿ 30 ಜನರಲ್ಲಿ ಒಬ್ಬರು ಅಥವಾ ಶೇಕಡಾ 3ರಷ್ಟು ಜನರಿಗೆ ಸಮಾನವಾಗಿದೆ.
ಫೆಲೆಸ್ತೀನಿಯನ್ ಆರೋಗ್ಯ ಸಚಿವಾಲಯವು ಆಸ್ಪತ್ರೆಗಳಲ್ಲಿ ದಾಖಲಾದ ಅಥವಾ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಸಾವುಗಳನ್ನು ಮಾತ್ರ ಲೆಕ್ಕಹಾಕುತ್ತದೆ. ಇನ್ನೂ ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಅವರನ್ನು ಇದು ಒಳಗೊಂಡಿಲ್ಲವಾದ್ದರಿಂದ, ನಿಜವಾದ ಸಾವಿನ ಸಂಖ್ಯೆ ಬಹುಶಃ ಇದಕ್ಕಿಂತ ಬಹಳ ಹೆಚ್ಚಿರಬಹುದು.
►ಗಾಝಾದಲ್ಲಿ ಪ್ರತಿ 13 ಜನರಲ್ಲಿ ಒಬ್ಬರು ಗಾಯಗೊಂಡಿದ್ದಾರೆ
ಮಾನವೀಯ ನಷ್ಟವು ಕೇವಲ ಸಾವಿಗೆ ಮಾತ್ರ ಸೀಮಿತವಾಗಿಲ್ಲ.
175,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಇದು ಗಾಝಾದಲ್ಲಿ ಪ್ರತಿ 13 ಜನರಲ್ಲಿ ಸುಮಾರು ಒಬ್ಬರಿಗೆ ಸಮಾನವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಕನಿಷ್ಠ ಅಂದಾಜಿನ ಪ್ರಕಾರ, ಗಾಯಗೊಂಡವರಲ್ಲಿ ಶೇಕಡಾ 24ರಷ್ಟು ಜನರಿಗೆ ದೀರ್ಘಕಾಲದ ಚಿಕಿತ್ಸೆ ಮತ್ತು ಆರೈಕೆಯ ಅಗತ್ಯವಿರುವ ತೀವ್ರ ಸ್ವರೂಪದ ಗಾಯಗಳಾಗಿವೆ ಮತ್ತು ಇವರಲ್ಲಿ ಕಾಲು ಭಾಗದಷ್ಟು ಮಕ್ಕಳು ಸೇರಿದ್ದಾರೆ.
ಗಾಝಾದಲ್ಲಿ ಉಳಿದಿರುವ ಕೆಲವೇ ಕೆಲವು ಆರೋಗ್ಯ ಕೇಂದ್ರಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಅಗತ್ಯ ಸಾಮಗ್ರಿಗಳ ಕೊರತೆಯನ್ನು ಎದುರಿಸುತ್ತಿವೆ.
►ಹೆಸರಿಗೆ ಮಾತ್ರ ‘ಕದನ ವಿರಾಮ’
2025ರ ಅಕ್ಟೋಬರ್ 10ರಂದು ‘ಕದನ ವಿರಾಮ’ ಜಾರಿಗೆ ಬಂದಾಗಿನಿಂದ, ಇಸ್ರೇಲ್ ಪ್ರತಿದಿನದಂತೆ ದಾಳಿಗಳನ್ನು ನಡೆಸಿ ಇದನ್ನು ಉಲ್ಲಂಘಿಸಿದ್ದು, 1,000ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ.
ಅಲ್ ಜಝೀರಾದ ವಿಶ್ಲೇಷಣೆಯ ಪ್ರಕಾರ, ಕಳೆದ 361 ದಿನಗಳಲ್ಲಿ ಇಸ್ರೇಲ್ 325 ದಿನಗಳ ಕಾಲ ಗಾಝಾ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ದಾಳಿಗಳು, ಸಾವುಗಳು ಅಥವಾ ಗಾಯಗಳ ವರದಿಯಾಗದ ದಿನಗಳು ಕೇವಲ 36 ಮಾತ್ರ ಉಳಿದಿವೆ.
ದಾಳಿಗಳು ಮುಂದುವರೆದಿದ್ದರೂ ಸಹ, ‘ಕದನ ವಿರಾಮ’ ಇನ್ನೂ ಜಾರಿಯಲ್ಲಿದೆ ಎಂದು ಅಮೆರಿಕ ವಾದಿಸುತ್ತಿದೆ.
►ಇಸ್ರೇಲ್ ನಿಂದ ಫೆಲೆಸ್ತೀನಿಯನ್ನರ ಹತ್ಯೆ ಮುಂದುವರಿಕೆ
ಅಕ್ಟೋಬರ್ 10ರ ಮಧ್ಯಾಹ್ನ ಕದನ ವಿರಾಮ ಜಾರಿಗೆ ಬಂದಾಗಿನಿಂದ, ಫೆಲೆಸ್ತೀನಿಯನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಇಸ್ರೇಲ್ ಕನಿಷ್ಠ 1,460 ಫೆಲೆಸ್ತೀನಿಯನ್ನರನ್ನು ಹತ್ಯೆ ಮಾಡಿದೆ ಮತ್ತು 5,116 ಜನರನ್ನು ಗಾಯಗೊಳಿಸಿದೆ.
►ಶೇಕಡಾ 94ರಷ್ಟು ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಧ್ವಂಸ
ಇಸ್ರೇಲ್ ಗಾಝಾದ ಬಹುತೇಕ ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಮೇಲೆ ದಾಳಿ ಮಾಡಿದೆ.
ಮೂರು ವರ್ಷಗಳ ನಂತರ, ಶೇಕಡಾ 94ರಷ್ಟು ಕೇಂದ್ರಗಳು ಸಂಪೂರ್ಣವಾಗಿ ಅಥವಾ ಭಾಗಶಃ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ತಿಳಿಸಿದ್ದು, ಇದರಿಂದ ರೋಗಿಗಳಿಗೆ ಅತ್ಯಗತ್ಯ ವೈದ್ಯಕೀಯ ಆರೈಕೆ ಸಿಗದಂತಾಗಿದೆ. ಒಟ್ಟು 666 ಕೇಂದ್ರಗಳಲ್ಲಿ ಕೇವಲ 42 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ.
ನಾಲ್ಕನೇ ಜೆನಿವಾ ಒಡಂಬಡಿಕೆಯ ಪ್ರಕಾರ ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನು ವೈದ್ಯಕೀಯ ಘಟಕಗಳು ಹಾಗೂ ಸಿಬ್ಬಂದಿಗೆ ವಿಶೇಷ ರಕ್ಷಣೆ ನೀಡುತ್ತದೆ. ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ರೋಮ್ ಶಾಸನದ ಪ್ರಕಾರ, ಉದ್ದೇಶಪೂರ್ವಕವಾಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ಯುದ್ಧ ಅಪರಾಧವಾಗಿದೆ.
►ಗಾಝಾದ ಶೇಕಡಾ 91ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಅಭಾವ
ಅಕ್ಟೋಬರ್ 2023ರಿಂದ, ಇಸ್ರೇಲ್ ಗಾಝಾದ ಈಗಾಗಲೇ ಹದಗೆಟ್ಟಿರುವ ನೀರು ಸರಬರಾಜು ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು, ಬಾವಿಗಳು, ಪೈಪ್ಲೈನ್ಗಳು, ಡಿಸೆಲಿನೇಷನ್ (ಉಪ್ಪು ನೀರನ್ನು ಸಿಹಿನೀರಾಗಿ ಪರಿವರ್ತಿಸುವ) ಸ್ಥಾವರಗಳು ಮತ್ತು ಒಳಚರಂಡಿ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದೆ.
ಹೆಚ್ಚಿನ ನೀರು ಮತ್ತು ನೈರ್ಮಲ್ಯ ಜಾಲಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ವಿಶ್ವಸಂಸ್ಥೆಯ ತಜ್ಞರು ತಿಳಿಸಿದ್ದಾರೆ. ಒಳಚರಂಡಿ ನೀರು ಬೆರೆತು ಕಲುಷಿತಗೊಂಡಿರುವ ಅಥವಾ ಯುದ್ಧ ಹಾಗೂ ಸ್ಥಳಾಂತರದಿಂದಾಗಿ ಕಡಿತಗೊಂಡಿರುವ ಪೈಪ್ಗಳು ಮತ್ತು ಬಾವಿಗಳು ಹಾಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ವರದಿ ಮಾಡಿದ್ದಾರೆ.
ಪ್ರಸ್ತುತ ಗಾಝಾದ ಸುಮಾರು ಅರ್ಧದಷ್ಟು ಜನಸಂಖ್ಯೆಯು ಕುಡಿಯಲು ಮತ್ತು ಅಡುಗೆ ಮಾಡಲು ದಿನಕ್ಕೆ 6 ಲೀಟರ್ಗಿಂತ (1.6 ಗ್ಯಾಲನ್) ಕಡಿಮೆ ನೀರನ್ನು ಬಳಸಿ ಬದುಕುಳಿಯುವಂತಾಗಿದೆ. ‘ಅಲ್ಪ ಸಮಯ ಬದುಕುಳಿಯುವುದಕ್ಕೆ’ ತುರ್ತು ಕನಿಷ್ಠ 20 ಲೀಟರ್ (5.3 ಗ್ಯಾಲನ್) ಅಗತ್ಯವಿದೆ.
►ಬಹುತೇಕ ಎಲ್ಲಾ ಮನೆಗಳು ಧ್ವಂಸ ಅಥವಾ ಹಾನಿ
ಗಾಝಾದಾದ್ಯಂತ ವಿನಾಶವು ಸಂಪೂರ್ಣ ಹಂತದಲ್ಲಿದ್ದು, ಎಲ್ಲಾ ಕಟ್ಟಡಗಳ ಶೇಕಡಾ 82ರಷ್ಟು ಭಾಗವು ನಾಶವಾಗಿದೆ.
OCHA ಪ್ರಕಾರ, ಇಡೀ ನೆರೆಹೊರೆಗಳು ಸಂಪೂರ್ಣವಾಗಿ ಅಳಿದುಹೋಗಿದ್ದು, 1.98 ಮಿಲಿಯನ್ ಫೆಲೆಸ್ತೀನಿಯನ್ನರು ನಿರಾಶ್ರಿತರಾಗಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 90ರಷ್ಟಿದೆ.
ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ನರಮೇಧದ ಯುದ್ಧಕ್ಕೆ ಮೂರು ವರ್ಷಗಳು ಸಮೀಪಿಸುತ್ತಿರುವಾಗ, ಗೂಗಲ್ ಮ್ಯಾಪ್ ನ ಹೊಸದಾಗಿ ನವೀಕರಿಸಿದ ಉಪಗ್ರಹ ಚಿತ್ರಗಳು ವಿನಾಶದ ಭೀಕರತೆಯನ್ನು ತೋರಿಸುತ್ತಿವೆ.
►ಶೇಕಡಾ 93ರಷ್ಟು ಶಾಲೆಗಳಿಗೆ ಮರುನಿರ್ಮಾಣದ ಅಗತ್ಯ
ಗಾಝಾದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. OCHA ಪ್ರಕಾರ, ಸುಮಾರು ಶೇಕಡಾ 93ರಷ್ಟು ಶಾಲೆಗಳಿಗೆ ಸಂಪೂರ್ಣ ಮರುನಿರ್ಮಾಣದ ಅಗತ್ಯವಿದ್ದು, 700,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಕನಿಷ್ಠ 63 ವಿಶ್ವವಿದ್ಯಾಲಯದ ಕಟ್ಟಡಗಳು ಧ್ವಂಸಗೊಂಡಿವೆ. ಇನ್ನೂ ಗಟ್ಟಿಯಾಗಿ ನಿಂತಿರುವ ಕಟ್ಟಡಗಳನ್ನು ನಿರಾಶ್ರಿತರಿಗೆ ಆಶ್ರಯ ತಾಣಗಳಾಗಿ ಬಳಸಿಕೊಳ್ಳಲಾಗುತ್ತಿದೆ.
►ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳ
ಶಿರೀನ್ ಅಬು ಅಕ್ಲೆ ವೀಕ್ಷಣಾಲಯದ ಪ್ರಕಾರ, ಅಕ್ಟೋಬರ್ 7ರಿಂದ ಗಾಝಾದಲ್ಲಿ ಅಲ್ ಜಝೀರಾದ 12 ಮಂದಿ ಸೇರಿದಂತೆ ಸುಮಾರು 300 ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ.
►ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾದ ಅಲ್ ಜಝೀರಾ ಸಿಬ್ಬಂದಿ:
ಸಾಮರ್ ಅಬುದಕಾ
ಹಮ್ಜಾ ದಹ್ಧೌಹ್
ಇಸ್ಮಾಯಿಲ್ ಅಲ್-ಘೌಲ್
ಅಹ್ಮದ್ ಅಲ್-ಲೌಹ್
ಹೊಸ್ಸಮ್ ಶಬತ್
ಇಬ್ರಾಹಿಂ ಠಾಹೆರ್
ಮೊಹಮ್ಮದ್ ಖ್ರೈಕೆಹ್
ಮೊಹಮ್ಮದ್ ನೊಫಲ್
ಅನಾಸ್ ಅಲ್-ಶರೀಫ್
ಮೊಹಮ್ಮದ್ ಸಲಾಮಾ
ಮೊಹಮ್ಮದ್ ವಿಶಾಹ್
ಅಹ್ಮದ್ ವಿಶಾಹ್
ಕಟ್ಟುನಿಟ್ಟಿನ ಸೇನಾ ಸೆನ್ಸಾರ್ ಶಿಪ್ ಅಡಿಯಲ್ಲಿ ತನ್ನ ಸೈನಿಕರೊಂದಿಗೆ ಇರುವ ಕೆಲವೇ ಕೆಲವು ವರದಿಗಾರರನ್ನು ಹೊರತುಪಡಿಸಿ, ಇಸ್ರೇಲ್ ವಿದೇಶಿ ಮಾಧ್ಯಮಗಳಿಗೆ ಗಾಝಾ ಪ್ರವೇಶಿಸುವುದನ್ನು ನಿಷೇಧಿಸಿದೆ.
ಸೌಜನ್ಯ: Aljazeera.com