Photo Credit : scroll.in

2025ರ ಎಪ್ರಿಲ್‌ ನಲ್ಲಿ ಮೋದಿ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡು, ಭಾರತದ ಮುಂಬರುವ ಗಣತಿಯಲ್ಲಿ ಜಾತಿ ಎಣಿಕೆಯನ್ನೂ ಸೇರಿಸುವುದಾಗಿ ಘೋಷಿಸಿತು. ಆ ಸಮಯದಲ್ಲಿ, 2011ರ ಗಣತಿಯಲ್ಲಿ ಜಾತಿಯನ್ನು ಸೇರಿಸದಿದ್ದಕ್ಕಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಟೀಕಿಸಲು ಅದು ಮರೆಯಲಿಲ್ಲ. "ಹೆಚ್ಚಿನ ರಾಜಕೀಯ ಪಕ್ಷಗಳು ಜಾತಿ ಗಣತಿ ನಡೆಸಲು ಶಿಫಾರಸು ಮಾಡಿದ್ದವು. ಹೀಗಿದ್ದರೂ, ಹಿಂದಿನ ಸರ್ಕಾರ ಜಾತಿ ಗಣತಿಯ ಬದಲು 'ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ' ಎಂಬ ಸಮೀಕ್ಷೆಯನ್ನು ಆಯ್ದುಕೊಂಡಿತು" ಎಂದು ಸಂಪುಟವು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿತ್ತು.

ಒಂದು ವರ್ಷದ ನಂತರ, ಮೋದಿ ಸರ್ಕಾರವೂ ಜಾತಿ ಎಣಿಕೆಗೆ ಮನಮೋಹನ್ ಸಿಂಗ್ ಸರ್ಕಾರ ಬಳಸಿದ ವಿಧಾನವನ್ನೇ ಅನುಸರಿಸುವುದಾಗಿ ಹೇಳಿದೆ. 2011ರಲ್ಲಿ ಸಂಗ್ರಹಿಸಿದ ದತ್ತಾಂಶವು ಎಷ್ಟು ದೋಷಪೂರಿತವಾಗಿತ್ತೆಂದರೆ, ಅದನ್ನು ಎಂದಿಗೂ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ, ಈಗ ಸರ್ಕಾರದ ಮೇಲೆ ಕುಮ್ಮಕ್ಕಿನ ಆರೋಪಗಳು ಕೇಳಿಬರುತ್ತಿವೆ.

ಈ ಆರೋಪಗಳು ಏಕೆ ಎದ್ದಿವೆ ಎಂಬುದನ್ನು ತಿಳಿಯಲು 'scroll.in' ಜಾತಿ ಗಣತಿಯನ್ನು ಬೆಂಬಲಿಸುವ ವಿಶ್ಲೇಷಕರು, ಹೋರಾಟಗಾರರು ಮತ್ತು ರಾಜಕಾರಣಿಗಳೊಂದಿಗೆ ಮಾತನಾಡಿದೆ. ಅವರಲ್ಲಿ ಹೆಚ್ಚಿನವರು ಆಯ್ಕೆ ಮಾಡಿದ ವಿಧಾನವನ್ನು ದೋಷಪೂರಿತ ಎಂದು ಕರೆದಿದ್ದಾರೆ. ಬಿಹಾರ ಮತ್ತು ತೆಲಂಗಾಣದಂತಹ ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಮರ್ಪಕವಾದ ಜಾತಿ ಸಮೀಕ್ಷೆಗಳನ್ನು ನಡೆಸಿದ್ದರೂ, ಮೋದಿ ಸರ್ಕಾರ 2011ರ ಮಾದರಿಯನ್ನೇ ಹಿಡಿದಿಟ್ಟುಕೊಂಡಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಈ ಗಣತಿಯಲ್ಲಿ ಸಂಗ್ರಹಿಸಿದ ಜಾತಿ ದತ್ತಾಂಶವು ನಿರುಪಯುಕ್ತವಾಗುತ್ತದೆ ಎಂದು ಕೆಲ ವಿಮರ್ಶಕರು ವಾದಿಸಿದ್ದಾರೆ. ಆದರೆ ಸಂಶೋಧಕರು ಈ ಡೇಟಾವನ್ನು ಸರಿಪಡಿಸಿದ ನಂತರ ಇದು ಬಳಸಲು ಯೋಗ್ಯವಾಗುತ್ತದೆ ಎಂಬ ಭರವಸೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

►‘ವಿಫಲಗೊಳ್ಳಲು ಮಾಡಿದ ಯೋಜನೆ’

ಜನಸಂಖ್ಯೆಯ ಮಾಹಿತಿ ಸಂಗ್ರಹಿಸುವ ಹಂತವು ಮುಂದಿನ ತಿಂಗಳು ಉತ್ತರ ಭಾರತದ ಹಿಮಾವೃತ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಈ ಪ್ರಕ್ರಿಯೆಯಲ್ಲಿ ಗಣತಿದಾರರು ಪ್ರತಿಯೊಬ್ಬರ ಮನೆಮನೆಗೆ ತೆರಳಿ ಡೇಟಾ ಸಂಗ್ರಹಿಸುತ್ತಾರೆ. 1931ರ ನಂತರ ಇದೇ ಮೊದಲ ಬಾರಿಗೆ ಗಣತಿಯ ಭಾಗವಾಗಿ ಜಾತಿಯನ್ನು ಎಣಿಕೆ ಮಾಡಲಾಗುತ್ತಿದೆ.

ಇದಕ್ಕಾಗಿ, ಗಣತಿದಾರರು ಮೊದಲು ಜನರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಯೇ ಎಂದು ಕೇಳುತ್ತಾರೆ, ನಂತರ ಅವರ ಜಾತಿಯನ್ನು ತಿಳಿಸಲು ಕೋರುತ್ತಾರೆ. ಜನರಿಗೆ ತಮ್ಮ ಜಾತಿ ಇಲ್ಲವೆಂದು ಅಥವಾ ಜಾತಿಯನ್ನು ಬಹಿರಂಗಪಡಿಸಲು ಇಷ್ಟವಿಲ್ಲವೆಂದು ಹೇಳುವ ಆಯ್ಕೆಯೂ ಇರಲಿದೆ ಎಂದು ‘the hindu’ ವರದಿ ಮಾಡಿದೆ.

ಜಾತಿಯ ಬಗ್ಗೆ ನಿರ್ದಿಷ್ಟವಲ್ಲದ ಮುಕ್ತ ಪ್ರಶ್ನೆಯನ್ನು ಕೇಳುವುದರಿಂದ ಅಪಾರ ಪ್ರಮಾಣದ ವೈವಿಧ್ಯಮಯ ಉತ್ತರಗಳು ಬರುತ್ತವೆ. ಇದು ಯಾವುದೇ ಅರ್ಥಪೂರ್ಣ ವಿಶ್ಲೇಷಣೆಯನ್ನು ಕಷ್ಟಕರವಾಗಿಸುತ್ತದೆ ಎಂದು ಟೀಕಾಕಾರರು ವಾದಿಸುತ್ತಾರೆ. 2011ರ ಸಮೀಕ್ಷೆಯಲ್ಲೂ ಇದೇ ರೀತಿಯ ಪ್ರಶ್ನೆ ಕೇಳಲಾಗಿತ್ತು. ಅದು ಬರೋಬ್ಬರಿ 46 ಲಕ್ಷ ವಿಭಿನ್ನ ಜಾತಿ ನಮೂದುಗಳನ್ನು ಸೃಷ್ಟಿಸಿತ್ತು.

ಜಾತಿ ವ್ಯವಸ್ಥೆಯ ಬಗ್ಗೆ ವಿಸ್ತೃತವಾಗಿ ಬರೆದಿರುವ ಹಾಗೂ 2001ರ ಗಣತಿಯಿಂದಲೂ ಜಾತಿ ಎಣಿಕೆಯನ್ನು ಬೆಂಬಲಿಸುತ್ತಿರುವ ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ, ಇದನ್ನು "ಯೋಜಿತ ವೈಫಲ್ಯ" ಎಂದು ಕರೆದಿದ್ದಾರೆ.

ಕೇವಲ ಕಾಗುಣಿತದ ವ್ಯತ್ಯಾಸಗಳೇ ಹತ್ತಾರು ಸಾವಿರ ನಮೂದುಗಳಿಗೆ ಕಾರಣವಾಗುತ್ತವೆ. ಬಳಕೆಗೆ ಬರುವಂತಹ ದತ್ತಾಂಶ ಹೊರಬರದಂತೆ ತಡೆಯಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

ಕಾಗುಣಿತ ತಪ್ಪುಗಳ ಜೊತೆಗೆ, ಈ ರೀತಿಯ ಮುಕ್ತ ಪ್ರಶ್ನೆಯಿಂದ ಒಂದೇ ಸಮುದಾಯದ ಜನರು ಬೇರೆ ಬೇರೆ ಜಾತಿ ಹೆಸರುಗಳನ್ನು ಹೇಳುವ ಸಾಧ್ಯತೆಯಿದೆ. ಆಗಸ್ಟ್ 17ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅನಿಲ್ ಜೈಹಿಂದ್ ತಮ್ಮ ತವರು ರಾಜ್ಯ ಹರಿಯಾಣದ ಬಡಗಿಗಳ ಉದಾಹರಣೆ ನೀಡಿ ಇದನ್ನು ವಿವರಿಸಿದರು.

"ಈ ಜಾತಿಯ ಕೆಲವರು ತಮ್ಮನ್ನು 'ಬಧಾಯಿ' ಎಂದು ಗುರುತಿಸಿಕೊಂಡರೆ, ಇನ್ನು ಕೆಲವರು 'ಜಾಂಗಿಡ್' ಎಂದು ಹೇಳುತ್ತಾರೆ. ಅದೇ ಜಾತಿ ಸಮೂಹದ ಇತರರು ಜಾಂಗಡಾ, ಖಾತಿ, ಧೀಮಾನ್, ಸುತಾರ್, ತಾರ್ಖಾನ್, ರಾಮ್ಗಢಿಯಾ ಮತ್ತು ವಿಶ್ವಕರ್ಮ ಎಂದು ಹೇಳಿಕೊಳ್ಳುತ್ತಾರೆ.

ಈ ಮುಕ್ತ ಪ್ರಶ್ನೆಗೆ ಪರ್ಯಾಯವಾಗಿ, ರಾಜ್ಯಗಳ ಬಳಿ ಈಗಾಗಲೇ ಲಭ್ಯವಿರುವ ಜಾತಿ ಹೆಸರುಗಳ ಪಟ್ಟಿಯನ್ನು (ಡ್ರಾಪ್-ಡೌನ್ ಲಿಸ್ಟ್) ನೀಡಬಹುದು ಎಂದು ದೇಶಪಾಂಡೆ ಸಲಹೆ ನೀಡಿದ್ದಾರೆ. ಜನರು ಆ ಪಟ್ಟಿಯಿಂದ ತಮ್ಮ ಜಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪಟ್ಟಿಯಲ್ಲಿ ತಮ್ಮ ಜಾತಿ ಸಿಗದವರಿಗೆ "ಇತರೆ" ಎಂಬ ಆಯ್ಕೆಯನ್ನು ನೀಡಬಹುದು. "ಇತರೆ" ಎಂದು ಆಯ್ಕೆ ಮಾಡಿದವರು ನಂತರದ ಪ್ರಶ್ನೆಗೆ ಉತ್ತರವಾಗಿ ತಮ್ಮ ಜಾತಿಯನ್ನು ನಮೂದಿಸಬಹುದು.

"ಗಣತಿಯಲ್ಲಿ ಭಾಷೆ, ಧರ್ಮ ಮತ್ತು ಉದ್ಯೋಗದ ಡೇಟಾ ಸರಿಪಡಿಸುವಂತೆ, ಈ ಡೇಟಾವನ್ನು ತಜ್ಞರ ಸಮಿತಿಗಳನ್ನು ರಚಿಸಿ ಪ್ರಾದೇಶಿಕ ಮಟ್ಟದಲ್ಲಿ ವರ್ಗೀಕರಿಸಬಹುದು" ಎಂದು ಅವರು ಶಿಫಾರಸು ಮಾಡಿದ್ದಾರೆ.

ಡ್ರಾಪ್-ಡೌನ್ ಪಟ್ಟಿ ಇಲ್ಲದಿರುವುದರಿಂದ, ಬಂದ ಎಲ್ಲಾ ಉತ್ತರಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಬೇಕಾಗುತ್ತದೆ. ಜಾತಿಯನ್ನು ಎಣಿಸುವ "ರಾಜಕೀಯ ಇಚ್ಛಾಶಕ್ತಿ" ಮೋದಿ ಸರ್ಕಾರಕ್ಕೆ ಇಲ್ಲ ಎಂಬುದಕ್ಕೆ ಗಣತಿಯ ಈ ವಿನ್ಯಾಸವೇ ಸ್ಪಷ್ಟ ಸಾಕ್ಷಿ ಎಂದು ಹೋರಾಟಗಾರ ಹಾಗೂ ರಾಜಕಾರಣಿ ಯೋಗೇಂದ್ರ ಯಾದವ್ ವಾದಿಸಿದ್ದಾರೆ.

"ಡ್ರಾಪ್-ಡೌನ್ ಪಟ್ಟಿಯನ್ನು ಸಿದ್ಧಪಡಿಸುವ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದಿರುವಾಗ, ಅವರು ಅಂಕಿಅಂಶಗಳನ್ನು ವಿಶ್ಲೇಷಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಎಲ್ಲಿಂದ ತರುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ. "ದತ್ತಾಂಶವನ್ನು ನಿರುಪಯುಕ್ತಗೊಳಿಸುವುದೇ ಇದರ ಮೂಲ ಉದ್ದೇಶ. ಇದನ್ನು ವಿಫಲಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿದೆ" ಎಂದಿದ್ದಾರೆ ಅವರು.

►ಮೀಸಲಾತಿ ಸಮರ

ಹಲವು ಹೋರಾಟಗಾರರಿಗೆ ಇದು ಕೇವಲ ಕಳಪೆ ದತ್ತಾಂಶ ಸಂಗ್ರಹದ ಸಮಸ್ಯೆಯಷ್ಟೇ ಅಲ್ಲ, ಹಿಂದುಳಿದ ವರ್ಗಗಳ (OBC) ಸಾಮಾಜಿಕ ನ್ಯಾಯದ ಪ್ರಶ್ನೆಯೂ ಆಗಿದೆ.

ಹಿಂದುಳಿದ ವರ್ಗಗಳನ್ನು ಪ್ರತ್ಯೇಕ ವರ್ಗವೆಂದು ಗುರುತಿಸದಿರುವುದರಿಂದ, ಈ ಗಣತಿಯು ಜನಸಂಖ್ಯೆಯಲ್ಲಿ ಅವರ ನೈಜ ಪಾಲನ್ನು ಬಿಂಬಿಸುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಗಣತಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಯೇ ಎಂದು ಮಾತ್ರ ಕೇಳುತ್ತಾರೆ ಹೊರತು ಹಿಂದುಳಿದ ವರ್ಗಗಳ ಬಗ್ಗೆ ಕೇಳುವುದಿಲ್ಲ.

1980ರಲ್ಲಿ ಮಂಡಲ ಆಯೋಗವು ಭಾರತದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರ ಪಾಲು ಶೇಕಡಾ 52ರಷ್ಟಿದೆ ಎಂದು ಅಂದಾಜಿಸಿತ್ತು. ಇದೇ ಕಾರಣಕ್ಕೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರಿಗೆ ಈಗಿರುವ ಶೇಕಡಾ 27ರಷ್ಟು ಮೀಸಲಾತಿ ಸಾಲದು ಎಂದು ಕೆಲವು ವಿರೋಧ ಪಕ್ಷಗಳು ದೀರ್ಘಕಾಲದಿಂದ ವಾದಿಸುತ್ತಿವೆ.

ಕಾಂಗ್ರೆಸ್ ಪಕ್ಷವೂ ಇತ್ತೀಚಿನ ವರ್ಷಗಳಲ್ಲಿ ಈ ನಿಲುವಿಗೆ ಬಂದಿದೆ. ಅಧಿಕಾರಕ್ಕೆ ಬಂದರೆ ಮೀಸಲಾತಿಯ ಮೇಲಿರುವ ಶೇ. 50ರಷ್ಟು ಸುಪ್ರೀಂ ಕೋರ್ಟ್ ಮಿತಿಯನ್ನು ತೆರವುಗೊಳಿಸುವುದಾಗಿ ಅದರ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಆದರೆ ನ್ಯಾಯಾಂಗ ಪರಿಶೀಲನೆಯನ್ನು ದಾಟಲು ಖಚಿತವಾದ ಡೇಟಾದ ಅಗತ್ಯವಿದೆ ಎಂದು ಹೋರಾಟಗಾರರು ಹೇಳುತ್ತಾರೆ.

"ಸುಪ್ರೀಂ ಕೋರ್ಟ್ ಪದೇ ಪದೇ ಡೇಟಾ ಕೇಳುತ್ತದೆ" ಎಂದು ಉತ್ತರ ಪ್ರದೇಶದ ಮೀರತ್ ನ ಅಂಬೇಡ್ಕರ್ ವಾದಿ ಹೋರಾಟಗಾರ ಸುಶೀಲ್ ಗೌತಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸರಿಯಾದ ಜಾತಿ ಗಣತಿ ಎಂದಿಗೂ ನಡೆಯದ ಕಾರಣ ಆ ಡೇಟಾಗಳು ಲಭ್ಯವಿಲ್ಲ. ಹಿಂದುಳಿದ ವರ್ಗದವರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದರೂ, ಅವರಿಗೆ ಅನುಕೂಲಕರವಾದ ಕಾನೂನುಗಳು ಜಾರಿಯಾಗುತ್ತಿಲ್ಲ."

ಬಿಜೆಪಿಗೆ ಜಾತಿ ಗಣತಿ ನಡೆಸುವ ಉದ್ದೇಶವೇ ಇರಲಿಲ್ಲ. ನವೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆದ ಬಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ವಿಷಯದಲ್ಲಿ ಉಲ್ಟಾ ಹೊಡೆದಿತ್ತು ಎಂದಿದ್ದಾರೆ ಗೌತಮ್.

ಬಿಹಾರ ಈಗಾಗಲೇ ಜಾತಿ ಸಮೀಕ್ಷೆ ನಡೆಸಿದ್ದು, ಅಲ್ಲಿ ಹಿಂದುಳಿದ ವರ್ಗದವರು ಶೇಕಡಾ 63ಕ್ಕಿಂತ ಹೆಚ್ಚಿದ್ದಾರೆ ಎಂದು ತಿಳಿದುಬಂದಿದೆ. ಬಿಹಾರದ ಈ ದೊಡ್ಡ ಮತಬ್ಯಾಂಕ್ ಓಲೈಸಲು, ದೇಶಾದ್ಯಂತ ಜಾತಿ ಗಣತಿ ನಡೆಸುವುದಾಗಿ ಹೇಳಲು ಬಿಜೆಪಿ ಪೀಠಿಕೆಗೆ ಒಳಗಾಯಿತು ಎಂದು ಗೌತಮ್ ಅಭಿಪ್ರಾಯಪಟ್ಟಿದ್ದಾರೆ. ಈ ವರದಿಗೆ ಸಂಬಂಧಿಸಿದಂತೆ scroll.in ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿಯ ಹಲವು ವಕ್ತಾರರು ನಿರಾಕರಿಸಿದ್ದಾರೆ.

ಗಣತಿಯ ಈ ದೋಷಪೂರಿತ ವಿನ್ಯಾಸವು ಹಿಂದುಳಿದ ವರ್ಗಗಳಿಂದ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದೇ ಎಂದು ಕೇಳಿದರೆ, ಖಂಡಿತವಾಗಿಯೂ ಆಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅನಿಲ್ ಜೈಹಿಂದ್ ಖಚಿತವಾಗಿ ಹೇಳಿದ್ದಾರೆ. ಈ ವಿಷಯವನ್ನು ಶೀಘ್ರದಲ್ಲೇ ಮತದಾರರ ಬಳಿಗೆ ಕೊಂಡೊಯ್ಯಲು "ವಿಶೇಷ ಕಾರ್ಯಕ್ರಮ"ವನ್ನು ಪ್ರಾರಂಭಿಸಲು ವಿರೋಧ ಪಕ್ಷ ಯೋಜನೆ ರೂಪಿಸುತ್ತಿದೆ ಎಂದು ಅವರು ಸ್ಕ್ರಾಲ್ಗೆ ತಿಳಿಸಿದ್ದಾರೆ.

ಸಮುದಾಯದ ಹೋರಾಟಗಾರರು ಅಷ್ಟಾಗಿ ಆಶಾವಾದಿಯಾಗಿಲ್ಲ. "ಹಿಂದುಳಿದ ವರ್ಗದವರು ದಲಿತರಂತಿದ್ದರೆ, ಅವರು ರಸ್ತೆಗಿಳಿದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಈ ಸಮುದಾಯವು ನಿದ್ದೆ ಮಾಡುತ್ತಿದೆ. ಅದಕ್ಕೆ ಹಕ್ಕುಗಳ ಬಗ್ಗೆ ಕಾಳಜಿಯಿಲ್ಲ" ಎಂದು ಗ್ವಾಲಿಯರ್ ಮೂಲದ ವಕೀಲ ಹಾಗೂ OBC ಮಹಾಸಭಾದ ಕೋರ್ ಕಮಿಟಿ ಸದಸ್ಯ ಧರ್ಮೇಂದ್ರ ಕುಶ್ವಾಹ್ ಹೇಳಿದ್ದಾರೆ.

ಗಣತಿಯಲ್ಲಿ ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಮಾನವಾಗಿ ಕಾಣದೆ ಮೋದಿ ಸರ್ಕಾರ "ದ್ರೋಹ" ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿರ್ದಿಷ್ಟವಲ್ಲದ ಜಾತಿ ಪ್ರಶ್ನೆಯು ಗಣತಿಯಿಂದ ಸೂಕ್ತ ತೀರ್ಮಾನಗಳಿಗೆ ಬರುವುದನ್ನು "ಕಷ್ಟಕರವಾಗಿಸುತ್ತದೆ" ಎಂದು ಅವರು ಆರೋಪಿಸಿದ್ದಾರೆ.

 On August 20, Dharmendra Kushwah (centre) and other members of the OBC Mahasabha burnt an effigy of Home Minister Amit Shah in Gwalior, Madhya Pradesh, and demanded that a drop-down list of castes be included in Census 2027. Credit: Special Arrangement

►ಕೃತಕ ಬುದ್ಧಿಮತ್ತೆಯ ಪ್ರವೇಶ

ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಪ್ರವೀಣ್ ಚಕ್ರವರ್ತಿ ಅವರ ಮಾತನ್ನು ನಂಬುವುದಾದರೆ, ಕೆಲಸ ಕಷ್ಟವಾಗಿರಬಹುದು, ಆದರೆ ಅಸಾಧ್ಯವೇನಲ್ಲ. ಮಾಜಿ ಹೂಡಿಕೆ ಬ್ಯಾಂಕರ್ ಆಗಿರುವ ಇವರು, ಕಾಂಗ್ರೆಸ್ ಪಕ್ಷದ ಡೇಟಾ ವಿಶ್ಲೇಷಣಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ತೆಲಂಗಾಣದ ಜಾತಿ ಸಮೀಕ್ಷೆಯ ಡೇಟಾವನ್ನು ಅಧ್ಯಯನ ಮಾಡಿದ 11 ಸದಸ್ಯರ ತಜ್ಞರ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಾತಿಗಳ ಡ್ರಾಪ್-ಡೌನ್ ಪಟ್ಟಿಗಳು "ಸಂಘಟಿತ" ದತ್ತಾಂಶವನ್ನು ನೀಡಲು ನೆರವಾಗುತ್ತವೆ ಎಂಬುದನ್ನು ಚಕ್ರವರ್ತಿ ಒಪ್ಪಿಕೊಳ್ಳುತ್ತಾರೆ. ಆದರೆ ಅವುಗಳ ಇಲ್ಲದಿರುವಿಕೆಯೇ ವಿಶ್ಲೇಷಣೆಯ ಸಾಧ್ಯತೆಯನ್ನು ಪೂರ್ಣವಾಗಿ ಬಂದ್ ಮಾಡುವುದಿಲ್ಲ ಎಂದು ಅವರು ವಾದಿಸುತ್ತಾರೆ.

"ಉದಾಹರಣೆಗೆ, ನೀವು ನಿಮ್ಮ ಜಾತಿಯನ್ನು 'ರಜಪೂತ್' ಎಂದು ನಮೂದಿಸಿ, ಮತ್ತೊಬ್ಬರು 'ರೇಜಪೂತ್' ಎಂದು ಹೇಳಿದರೆ, ಇಂದಿನ AI ಇವೆರಡೂ ಒಂದೇ ಎಂದು ಗುರುತಿಸುತ್ತದೆ. ಆದರೆ 2011ರಲ್ಲಿ ಇವೆರಡನ್ನೂ ಎರಡು ವಿಭಿನ್ನ ಜಾತಿಗಳೆಂದು ಎಣಿಸಲಾಗುತ್ತಿತ್ತು. ಹೀಗಾಗಿ, ಪ್ರಶ್ನೆಯನ್ನು ಮುಕ್ತವಾಗಿ ಬಿಡುವುದು ಒಳ್ಳೆಯ ಆಲೋಚನೆಯಲ್ಲದಿದ್ದರೂ, 2011ರಲ್ಲಿದ್ದಷ್ಟು ಕೆಟ್ಟದಾಗಿಲ್ಲ" ಎಂದಿದ್ದಾರೆ ಅವರು.

ಸಮಾಜಶಾಸ್ತ್ರಜ್ಞ ದೇಶಪಾಂಡೆ ಕೂಡ ಡೇಟಾವನ್ನು ಸರಿಪಡಿಸುವುದು ಸಾಧ್ಯ, ಆದರೆ ಅದಕ್ಕೆ ಅಪಾರ ಪ್ರಮಾಣದ ಶ್ರಮ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಡ್ರಾಪ್-ಡೌನ್ ಪಟ್ಟಿ ಇಲ್ಲದ ಪೂರ್ಣ ಪ್ರಮಾಣದ ಮುಕ್ತ ಪ್ರಶ್ನೆಯು "ನಾವು ಮಾಡಬೇಕಾದ ಕೆಲಸವನ್ನು ಹತ್ತಾರು ಪಟ್ಟು ಹೆಚ್ಚಿಸುತ್ತದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಜಾತಿ ಗಣತಿಯು ಕೇವಲ ಡೇಟಾಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಇರುವ ರಾಜಕೀಯ ಇಚ್ಛಾಶಕ್ತಿಗೆ ಸಂಬಂಧಿಸಿದ್ದಾಗಿದೆ.

"ಇದು 2011ರ ಘಟನೆಯ ಪುನರಾವರ್ತನೆ ಎನ್ನಬಹುದು. ಸರ್ಕಾರವೇ ತನ್ನ ಸ್ವಂತ ಯೋಜನೆಯನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ. ಇವು ತಾಂತ್ರಿಕ ಲೋಪಗಳಲ್ಲ, ಬದಲಿಗೆ ಯೋಜಿತ ನಿರ್ಧಾರಗಳು. ನಮ್ಮ ಆಡಳಿತ ವ್ಯವಸ್ಥೆಯು ಎಷ್ಟರಮಟ್ಟಿಗೆ ಜಾತಿ ಆಧಾರಿತವಾಗಿದೆ ಎಂಬುದನ್ನು ಇವು ತೋರಿಸುತ್ತವೆ" ಎಂದು ದೇಶಪಾಂಡೆ ಹೇಳಿದ್ದಾರೆ.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor