ಮಿಂಚಿನ ಓಟ ಪ್ರದರ್ಶಿಸಿದ ರೋಬೋಟ್; ಚೀನಾ ರೋಬೋಟ್ ಗಳಿಗೆ ಓಡುವುದನ್ನು ಕಲಿಸುತ್ತಿರುವುದೇಕೆ?
Photo Credit : X
ಉಸೇನ್ ಬೋಲ್ಟ್ ದಾಖಲೆ ಮುರಿದಿರುವ ‘ಟಿಯಾಂಗಾಂಗ್ ಅಲ್ಟ್ರಾ’ ಆಗಸ್ಟ್ 22ರಂದು ಬೀಜಿಂಗ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಾಥಮಿಕ ಸುತ್ತಿನಲ್ಲಿ 9.39 ಸೆಕೆಂಡುಗಳಲ್ಲಿ 100 ಮೀಟರ್ಗಳನ್ನು ಕ್ರಮಿಸಿದೆ. ಈ ರೋಬೋಟ್ ಓಟದ ಹಿಂದಿರುವ ಅಸಲಿ ರಹಸ್ಯವೇನು?
ಚೀನಾದ ಹುಮನಾಯ್ಡ್ ರೋಬೋಟ್ ಉಸೇನ್ ಬೋಲ್ಟ್ ಗಿಂತಲೂ ವೇಗವಾಗಿ 100 ಮೀಟರ್ ಓಟವನ್ನು ಓಡಿದೆ. ಬೀಜಿಂಗ್ ಹುಮನಾಯ್ಡ್ ರೋಬೋಟ್ ಇನ್ನೋವೇಶನ್ ಸೆಂಟರ್ ಅಭಿವೃದ್ಧಿಪಡಿಸಿದ ಟಿಯಾಂಗಾಂಗ್ ಅಲ್ಟ್ರಾ, ಆಗಸ್ಟ್ 22ರಂದು ಬೀಜಿಂಗ್ ನಲ್ಲಿ ನಡೆದ ವಿಶ್ವ ಹುಮನಾಯ್ಡ್ ರೋಬೋಟ್ ಗೇಮ್ಸ್ನಲ್ಲಿ ಪ್ರಾಥಮಿಕ ಸುತ್ತಿನಲ್ಲಿ 9.39 ಸೆಕೆಂಡುಗಳಲ್ಲಿ 100 ಮೀಟರ್ಗಳನ್ನು ಕ್ರಮಿಸಿದೆ. ಮಾನವ ದಾಖಲೆ 9.58 ಸೆಕೆಂಡುಗಳಾಗಿದ್ದು, 2009ರಲ್ಲಿ ಉಸೇನ್ ಬೋಲ್ಟ್ ಸ್ಥಾಪಿಸಿದ್ದರು.
ಟಿಯಾಂಗಾಂಗ್ ಅಲ್ಟ್ರಾ ಮಾತ್ರವಲ್ಲ, ಚೀನಾದ ಸ್ಮಾರ್ಟ್ ಫೋನ್ ತಯಾರಕ ಹಾನರ್ ತಯಾರಿಸಿದ ಲೈಟ್ನಿಂಗ್ ಎಂಬ ಮತ್ತೊಂದು ರೋಬೋಟ್ 9.47 ಸೆಕೆಂಡುಗಳಲ್ಲಿ 100 ಮೀಟರ್ ಪೂರ್ಣಗೊಳಿಸಿದೆ. ಆದರೂ ಅದನ್ನು ಸ್ಟ್ರೆಚರ್ ನಿಂದ ತೆಗೆದುಕೊಂಡು ಹೋಗಬೇಕಾಗಿ ಬಂದಿತ್ತು. ಈ ವೇಗದ ಓಟಗಾರ ರೋಬೋಟ್ ಗಳು ವೈಜ್ಞಾನಿಕ ಸಾಧನೆ ಮತ್ತು ಉದ್ಯಮದ ಮೇಲೆ ಚೀನಾದ ಸಂಪೂರ್ಣ ಪ್ರಾಬಲ್ಯದ ಸಂಕೇತವಾಗಿದೆ. ಆದರೆ ರೋಬೋಟ್ ಅನ್ನು ಏಕೆ ಓಡಿಸಬೇಕು ಮತ್ತು ಅವು ಯಾರಿಗೆ ಸಹಾಯ ಮಾಡುತ್ತವೆ ಮತ್ತು ಹೇಗೆ?
ವಿಶ್ವ ಹುಮನಾಯ್ಡ್ ರೋಬೋಟ್ ಕ್ರೀಡಾಕೂಟದ ಎರಡನೇ ಆವೃತ್ತಿಯನ್ನು ಆಗಸ್ಟ್ ನಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಓಟದ ಜೊತೆಗೆ ಫುಟ್ಬಾಲ್ ಆಡುವುದು, ಕೇಬಲ್ಗಳನ್ನು ಸಂಪರ್ಕಿಸುವುದು, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವುದು ಮತ್ತು ವಸ್ತುಗಳನ್ನು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಗಳಲ್ಲಿ ರೋಬೋಟ್ ಗಳು ಸ್ಪರ್ಧಿಸಿವೆ. ಇದು ಪ್ರದರ್ಶನ ಮಾತ್ರವಾಗಿರಲಿಲ್ಲ. ಮಾನವರು ದೈನಂದಿನ ಜೀವನದಲ್ಲಿ ಎದುರಿಸುವ ಸನ್ನಿವೇಶಗಳನ್ನು ನಿಭಾಯಿಸಲು ರೋಬೋಟ್ ಗಳು ಎಷ್ಟು ಸಮರ್ಥವಾಗಿವೆ ಎಂಬುದನ್ನು ವಿವರಿಸುವ ಒಂದು ಮಾರ್ಗವಾಗಿದೆ.
ಮಾನವ ದೇಹವು ಕಣ್ಣುಗಳು, ಕಿವಿಗಳು, ಮೂಗು ಮತ್ತು ಸ್ನಾಯುಗಳಿಂದ ಮಾಹಿತಿಯನ್ನು ನಿರಂತರವಾಗಿ ಪ್ರಕ್ರಿಯೆಗೊಳಿಸುವಾಗ ಗೊಂದಲಮಯ, ಅನಿರೀಕ್ಷಿತ ಪರಿಸರದ ಮೂಲಕವೂ ಚಲಿಸಬಹುದಾಗಿದೆ.
ಎಡವಿ ಬೀಳುವಂತಹ ಸಾಮಾನ್ಯವಾದ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಒಬ್ಬ ವ್ಯಕ್ತಿ ಅಸಮ ಮೇಲ್ಮೈಯಲ್ಲಿ ಕಾಲ್ಬೆರಳಿಗೆ ತಾಗಿ ಮುಗ್ಗರಿಸಿ ಬೀಳುತ್ತಾರೆ. ಆಗ ಒಂದು ಸೆಕೆಂಡಿನ ಒಂದು ಭಾಗದಲ್ಲಿ ಮೆದುಳು ದೇಹದ ಸಮತೋಲನ ಬದಲಾಗಿದೆ ಎಂದು ನೋಂದಾಯಿಸಿಕೊಳ್ಳಬೇಕು. ದೇಹವು ಎಲ್ಲಿ ಚಲಿಸುತ್ತಿದೆ ಎಂಬುದನ್ನು ಕಂಡುಹಿಡಿಯಬೇಕು. ಅದನ್ನು ಸರಿಪಡಿಸಬೇಕು. ಪಾದ ಕೆಳಗೆ ಇಡಲು, ತೂಕ ಬದಲಿಸಲು ಮತ್ತು ನೇರವಾಗಿರಲು ಡಝನ್ ಗಟ್ಟಲೆ ಸ್ನಾಯುಗಳನ್ನು ಸಂಯೋಜಿಸಬೇಕು. ಕೆಲವೊಮ್ಮೆ ನಾವು ಒಂದು ಕೈ ಚಾಚುತ್ತೇವೆ ಅಥವಾ ಭಂಗಿ ಬದಲಿಸುತ್ತೇವೆ. ಕೆಲವೊಮ್ಮೆ ಮತ್ತೊಂದು ಕಾಲಿನಿಂದ ಸಮತೋಲನ ತಂದುಕೊಂಡು ಹೆಚ್ಚುವರಿ ಹೆಜ್ಜೆ ಇಡುತ್ತೇವೆ.
ಹೀಗಾಗಿ ಎಡವಿ ಬೀಳುವ ಮತ್ತು ನಿಮ್ಮನ್ನು ನೀವು ಸರಿಪಡಿಸಿಕೊಳ್ಳುವ ವಿಚಿತ್ರವಾದ ಕ್ರಿಯೆಯು ಒಂದು ಸೆಕೆಂಡಿನ ಒಂದು ಭಾಗದಲ್ಲಿ ಸಂವೇದನೆ, ಭವಿಷ್ಯ ನುಡಿಯುವಿಕೆ, ನಿರ್ಧಾರ ಕೈಗೊಳ್ಳುವುದು ಮತ್ತು ದೈಹಿಕ ಕ್ರಿಯೆಯನ್ನು ಒಳಗೊಂಡಿರುತ್ತದೆ. ಆದರೆ ಇವೆಲ್ಲವನ್ನೂ ವಿಶ್ವಾಸಾರ್ಹವಾಗಿ ರೋಬೋಟ್ ಗೆ ಮಾಡುವಂತೆ ಕಲಿಸುವುದು ಬಹಳ ಕಷ್ಟ. 100 ಮೀಟರ್ ವೇಗದ ಓಟ ಅಥವಾ ಇತರ ಆಟಗಳ ಮೂಲಕ ಎಂಜಿನಿಯರ್ಗಳು ಇಂತಹ ಅನೇಕ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಬಹುದು. ರೋಬೋಟ್ ವೇಗವನ್ನು ಹೆಚ್ಚಿಸಬೇಕು, ತನ್ನ ಅಂಗಗಳನ್ನು ಸಂಯೋಜಿಸಬೇಕು, ಸಮತೋಲನ ಕಾಯ್ದುಕೊಳ್ಳಬೇಕು, ತನ್ನ ಸ್ಥಾನದ ಸಣ್ಣ ಬದಲಾವಣೆಗಳಿಗೆ ಪ್ರತಿಕ್ರಿಯಿಸಬೇಕು ಮತ್ತು ವೇಗವನ್ನು ನಿಧಾನಗೊಳಿಸಬೇಕು.
ಒಂದು ರೋಬೋಟ್ ಇದನ್ನು ಮಾಡಲು ಸಾಧ್ಯವಾದರೆ, ರೆಸ್ಟೊರೆಂಟ್ ಗಳಲ್ಲಿ ಆಹಾರ ತಲುಪಿಸುವುದರಿಂದ ತೊಡಗಿ ನಿಮ್ಮ ಮನೆ ಸ್ವಚ್ಛಗೊಳಿಸುವುದು, ಗಣಿ ಗುಡಿಸುವುದು, ಅವಶೇಷಗಳಡಿ ಸಿಕ್ಕ ಜನರನ್ನು ರಕ್ಷಿಸುವುದು ಮೊದಲಾದ ಕಾರ್ಯಗಳನ್ನು ನಿರ್ವಹಿಸಬಹುದು.
ವಿಪತ್ತುಗಳಿಂದ ರಕ್ಷಣೆಯನ್ನು ಪರಿಗಣಿಸಿದಲ್ಲಿ, ಉರಿಯುತ್ತಿರುವ ಕಟ್ಟಡ, ಕುಸಿದ ರಚನೆ ಅಥವಾ ಅಪಾಯಕಾರಿ ಕೈಗಾರಿಕಾ ಸ್ಥಳಕ್ಕೆ ಕಳುಹಿಸಲಾದ ರೋಬೋಟ್ ಮೆಟ್ಟಿಲುಗಳು, ಶಿಥಿಲ ಮತ್ತು ಅಸಮ ಮೇಲ್ಮೈಗಳನ್ನು ದಾಟಬೇಕಾಗುತ್ತದೆ. ಇಳಿಜಾರಾದ ಮೇಲ್ಮೈಗಳಲ್ಲಿ ಚಲಿಸಬೇಕಾಗಿ ಬರಬಹುದು, ಏನಾದರೂ ಹುಡುಕಬೇಕಾಗಬಹುದು. ಎತ್ತಿಕೊಳ್ಳುವುದು, ಬಾಗಿಲು ತೆರೆಯುವುದು ಮತ್ತು ವಾಲ್ವ್ ತಿರುಗಿಸುವುದು ಮೊದಲಾದ ಕೆಲಸಗಳನ್ನು ಮಾಡಲು ಕಲಿಯಬೇಕಾಗುತ್ತದೆ.
ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯು ವಿಪತ್ತು ಪರಿಹಾರಕ್ಕೆ ಸಹಕರಿಸುವ ರೋಬೋಟ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದೆ. ಅದರ ವೆಬ್ಸೈಟ್ನಲ್ಲಿ ಹೇಳಿರುವ ಪ್ರಕಾರ, “ಎಲಿಮೆಂಟಲ್ ರೋಬೋಟ್ ಕಾರ್ಯಗಳ ವರ್ಗಗಳಲ್ಲಿ ಕುಶಲತೆ, ಚಲನಶೀಲತೆ, ದಕ್ಷತೆ, ಸಂವೇದನೆ, ಸಹಿಷ್ಣುತೆ, ರೇಡಿಯೋ ಸಂವಹನ, ಬಾಳಿಕೆ, ವಿಶ್ವಾಸಾರ್ಹತೆ, ಸ್ವಾಯತ್ತತೆ, ಲಾಜಿಸ್ಟಿಕ್ಸ್ ಮತ್ತು ಸುರಕ್ಷತೆ ಸೇರಿವೆ.”
ಅದೇ ತತ್ವವು ಯುದ್ಧಗಳಿಗೂ ಅನ್ವಯಿಸುತ್ತದೆ. ಡ್ರೋನ್ ಭೌತಿಕ ಪ್ರಪಂಚವನ್ನು ಗ್ರಹಿಸುತ್ತಾ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ಚಲಿಸುವ ಸಾಮರ್ಥ್ಯವಿರುವ ಯಂತ್ರಕ್ಕೆ ಉತ್ತಮ ಉದಾಹರಣೆಯಾಗಿದೆ. ಮಿಲಿಟರಿ ಡ್ರೋನ್ ನ್ಯಾವಿಗೇಟ್ ಮಾಡಬಹುದು, ಗಮನಿಸಬಹುದು, ಉಪಕರಣಗಳನ್ನು ಸಾಗಿಸಬಹುದು ಅಥವಾ ಮನುಷ್ಯರು ಸಾಗುವುದು ಅಪಾಯಕಾರಿಯಾಗಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಹುದು.
ಇಂದು AI ಚಾಟ್ಬಾಟ್ ಗಳು ಎಲ್ಲೆಡೆ ಸಾಮಾನ್ಯವಾಗುತ್ತಿವೆ. ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಗಳು (LLMs) ಬೃಹತ್ ಮಾಹಿತಿ ಸಂಸ್ಕರಿಸಲು ಸಾಧ್ಯವಾಗುತ್ತಿವೆ. ಹೀಗಾಗಿ ಮುಂದಿನ ಹಂತವೆಂದರೆ ಯಂತ್ರಗಳಿಗೆ ಹೆಚ್ಚು ಸುಧಾರಿತ ದೈಹಿಕ ಸಾಮರ್ಥ್ಯ ನೀಡುವುದು. ಭೂಮಿಯ ಮೇಲೆ ಚಲಿಸಬಲ್ಲ, ಸರಕು ಹೊರಬಲ್ಲ, ಸೈನಿಕರೊಂದಿಗೆ ಕೆಲಸ ಮಾಡಬಲ್ಲ ಗ್ರೌಂಡ್ ರೋಬೋಟ್ಸ್ ಅಭಿವೃದ್ಧಿಪಡಿಸುವುದು.
ಚೀನಾ ತನ್ನ ಕೈಗಾರಿಕಾ ವ್ಯವಸ್ಥೆಯನ್ನು ಆಧುನೀಕರಿಸಲು ರೋಬೋಟಿಕ್ಸ್ ಅನ್ನು ಕೇಂದ್ರಭಾಗದಲ್ಲಿರಿಸಿದೆ. ಅಂತರರಾಷ್ಟ್ರೀಯ ರೊಬೊಟಿಕ್ಸ್ ಒಕ್ಕೂಟವು, “ಚೀನಾದ ಇತ್ತೀಚಿನ ಪಂಚವಾರ್ಷಿಕ ಯೋಜನೆ (2026-2030) ರೊಬೊಟಿಕ್ಸ್ ಅನ್ನು ಅದರ ಆಧುನಿಕ ಕೈಗಾರಿಕಾ ವ್ಯವಸ್ಥೆಯ ಹೃದಯಭಾಗದಲ್ಲಿ ಇರಿಸುತ್ತದೆ” ಎಂದು ಹೇಳಿದೆ.
ಈಗಾಗಲೇ ವಿಶ್ವಾದ್ಯಂತ ಪ್ರತಿ ವರ್ಷ ಅಳವಡಿಸಲಾಗುತ್ತಿರುವ ಕೈಗಾರಿಕಾ ರೋಬೋಟ್ಸ್ ಗಳಲ್ಲಿ ಶೇ 54ರಷ್ಟನ್ನು ಚೀನಾದಲ್ಲೇ ಅಳವಡಿಸಲಾಗಿದೆ. 2026-30ರ ಹೊಸ ಪಂಚವಾರ್ಷಿಕ ಯೋಜನೆಯಲ್ಲಿ ಚೀನಾ ತನ್ನ AI ಸಂಶೋಧನೆಯನ್ನು ಭೌತಿಕ ಅನ್ವಯಿಕೆಗಳ ಕಡೆಗೆ ತಿರುಗಿಸಲು ಉದ್ದೇಶಿಸಿದೆ. ಅಂದರೆ, ರೋಬೋಟ್ ಗಳನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ವಾಹಕಗಳನ್ನಾಗಿ ಮಾಡುವುದು ಮುಂದಿನ ಹಂತವಾಗಿದೆ ಎಂದು ವರದಿ ಹೇಳಿದೆ.