ಸಾಂದರ್ಭಿಕ ಚಿತ್ರ | Photo Credit : magnific.com

ಒಣ ಬಾಯಿ ಸಮಸ್ಯೆಗೆ ಹ್ಯುಮಿಡಿಫೈಯರ್ ಬಳಸುವ ಬಗ್ಗೆ ISIC ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ದಂತ ವಿಭಾಗದ ಮುಖ್ಯಸ್ಥ ಡಾ. ಜತಿನ್ ಅರೋರ ಏನು ಹೇಳುತ್ತಾರೆ?

ಒಣಗಿದ ಅಥವಾ ಜಿಗುಟಾದ ಬಾಯಿಯೊಂದಿಗೆ ಎಚ್ಚರಗೊಳ್ಳುವುದು ಅನನುಕೂಲಕರ. ಕೆಲವರಿಗೆ ಚಳಿಗಾಲದಲ್ಲಿ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಮಲಗಿದ ನಂತರ ಇದು ಸಂಭವಿಸುತ್ತದೆ. ಇನ್ನು ಕೆಲವರಿಗೆ ಇದು ದೈನಂದಿನ ಸಮಸ್ಯೆಯಾಗಿರುತ್ತದೆ. ರಾತ್ರಿಯಲ್ಲಿ ಹ್ಯುಮಿಡಿಫೈಯರ್ ಬಳಸುವುದರಿಂದ ಒಣ ಬಾಯಿಯ ಸಮಸ್ಯೆ ಬದಲಾಗಬಹುದೆ?

ಈ ಬಗ್ಗೆ ISIC ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ದಂತ ವಿಭಾಗದ ಮುಖ್ಯಸ್ಥ ಡಾ. ಜತಿನ್ ಅರೋರ ಏನು ಹೇಳುತ್ತಾರೆ? ಅವರ ಪ್ರಕಾರ, ಶುಷ್ಕತೆಗೆ ಕಾರಣವೇನು ಎನ್ನುವುದನ್ನು ಪರಿಹಾರವು ಅವಲಂಬಿಸಿರುತ್ತದೆ. ಒಣಗಾಳಿಯಿಂದಾಗಿ ಒಣ ಬಾಯಿ ಉಂಟಾದರೆ ಹ್ಯುಮಿಡಿಫೈಯರ್ ಬಳಸಬಹುದು. ಅಂದರೆ, ಚಳಿಗಾಲದಲ್ಲಿ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಮಲಗುವುದರಿಂದ ಬಾಯಿ ಒಣಗಿದರೆ ಹ್ಯುಮಿಡಿಫೈಯರ್ ಬಳಸಬಹುದು. ಹ್ಯುಮಿಡಿಫೈಯರ್ ಗಾಳಿಗೆ ತೇವಾಂಶವನ್ನು ಸೇರಿಸುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ಆದರೆ, ಔಷಧಿಗಳು, ಬಾಯಿಯ ಮೂಲಕ ಉಸಿರಾಟ, ಗೊರಕೆ ಅಥವಾ ಯಾವುದೇ ಆರೋಗ್ಯ ಸ್ಥಿತಿಗಳಿಂದ ಉಂಟಾಗುವ ಒಣ ಬಾಯಿ ಸಮಸ್ಯೆಯನ್ನು ಇದು ಪರಿಹರಿಸುವುದಿಲ್ಲ. ಹ್ಯುಮಿಡಿಫೈಯರ್ ಶುಷ್ಕ ವಾತಾವರಣದಲ್ಲಿ ನೆರವಾಗಬಹುದಾದರೂ, ಒಣ ಬಾಯಿಯ ಪ್ರತಿಯೊಂದು ಕಾರಣವನ್ನು ಪರಿಹರಿಸುವುದಿಲ್ಲ.

►ಒಣಗಿದ ಬಾಯಿಯಿಂದ ಎಚ್ಚರಗೊಳ್ಳುವುದೇಕೆ?

ಅನೇಕ ಸಂಭಾವ್ಯ ಕಾರಣಗಳಿವೆ. ತೆರೆದ ಬಾಯಿಯೊಂದಿಗೆ ಮಲಗುವುದು, ಗೊರಕೆ, ಡಿಹೈಡ್ರೇಶನ್, ಕೆಲವು ಔಷಧಿಗಳು ಅಥವಾ ಕಡಿಮೆ ಲಾಲಾರಸದ ಉತ್ಪಾದನೆಯಿಂದ ಬೆಳಿಗ್ಗೆ ಬಾಯಿ ಒಣಗಬಹುದು. ಮಧುಮೇಹ ಅಥವಾ ಕೆಲವು ಸ್ವಯಂ ನಿರೋಧಕ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳೂ ಇದಕ್ಕೆ ಕಾರಣವಾಗಬಹುದು. ಹೀಗಾಗಿ, ನಿಖರ ಕಾರಣವನ್ನು ಗುರುತಿಸುವುದು ಸರಿಯಾದ ನಿರ್ವಹಣೆ ಮತ್ತು ದೀರ್ಘಕಾಲೀನ ಬಾಯಿಯ ಆರೋಗ್ಯಕ್ಕೆ ಮುಖ್ಯವಾಗಿದೆ.

►ಹ್ಯುಮಿಡಿಫೈಯರ್ ಹೇಗೆ ಬಳಸಬೇಕು?

ಹ್ಯುಮಿಡಿಫೈಯರ್ ಬಳಸುತ್ತಿದ್ದರೆ ಕೋಣೆಯ ಹ್ಯುಮಿಡಿಟಿಯನ್ನು ಶೇ. 40ರಿಂದ 60ರ ನಡುವೆ ಇಡಬೇಕಾಗುತ್ತದೆ. ಆದರೆ, ಹ್ಯುಮಿಡಿಫೈಯರ್ ಅನ್ನು ಅತಿಯಾಗಿ ಬಳಸಲೂ ಬಾರದು. ಅತಿಯಾದ ತೇವಾಂಶವೂ ಉತ್ತಮವಲ್ಲ; ಹುಳುಕು (mould) ಬೆಳೆಯಲು ಕಾರಣವಾಗಬಹುದು. ಹ್ಯುಮಿಡಿಫೈಯರ್ ಅನ್ನು ಆರಾಮಕ್ಕಾಗಿ ಬಳಸಬಹುದು, ಆದರೆ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಜೀವನಶೈಲಿ ಬದಲಾವಣೆಗಳ ಹೊರತಾಗಿಯೂ ಒಣ ಬಾಯಿ ಮುಂದುವರಿದಲ್ಲಿ ವೈದ್ಯರನ್ನು ಕಾಣಬೇಕು.

►ಒಣ ಬಾಯಿ ಹಲ್ಲಿಗೆ ಸಮಸ್ಯೆ ತರಬಹುದೆ?

ಅನೇಕ ಮಂದಿ ಒಣ ಬಾಯಿಯನ್ನು ಅನನುಕೂಲತೆ ಎಂದು ಭಾವಿಸುತ್ತಾರೆ. ಆದರೆ, ದೀರ್ಘಕಾಲೀನ ಒಣ ಬಾಯಿಯು ಒಟ್ಟು ಬಾಯಿ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಏಕೆಂದರೆ, ಲಾಲಾರಸವು ಹಲ್ಲು ಮತ್ತು ಒಸಡುಗಳನ್ನು ರಕ್ಷಿಸಲು ಸಹಕರಿಸುತ್ತದೆ. ಲಾಲಾರಸದ ಉತ್ಪಾದನೆ ಕಡಿಮೆಯಾದರೆ ಬಾಯಿ ತನ್ನ ನೈಸರ್ಗಿಕ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಹಲ್ಲುಕುಳಿಗಳು, ಒಸಡು ಸಮಸ್ಯೆಗಳು, ದುರ್ವಾಸನೆ, ಬಾಯಿಯ ಸೋಂಕು, ಅಗಿಯುವಾಗ ತೊಂದರೆ ಮತ್ತು ಮಾತನಾಡುವಾಗ ಹಾಗೂ ನುಂಗುವಾಗ ಅಸ್ವಸ್ಥತೆಯ ಅಪಾಯ ಹೆಚ್ಚುತ್ತದೆ.

►ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ದೀರ್ಘಕಾಲ ಒಣ ಬಾಯಿ ಮುಂದುವರಿದರೆ, ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದರೆ ಅಥವಾ ಆಗಾಗ್ಗೆ ಹಲ್ಲುಕುಳಿಗಳು, ಬಾಯಿ ಹುಣ್ಣುಗಳು ಕಂಡುಬಂದಲ್ಲಿ, ನುಂಗುವಲ್ಲಿ ತೊಂದರೆ, ಅತಿಯಾದ ಬಾಯಾರಿಕೆ ಅಥವಾ ಇತರ ರೋಗಲಕ್ಷಣಗಳ ಜೊತೆಗೆ ಒಣ ಬಾಯಿಯ ಸಮಸ್ಯೆ ಇದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ. ವೈದ್ಯರು ಕಾರಣವನ್ನು ಗುರುತಿಸಿ, ಒಟ್ಟು ಆರೋಗ್ಯವನ್ನು ರಕ್ಷಿಸಲು ಸೂಕ್ತ ಚಿಕಿತ್ಸೆ ಸೂಚಿಸಬಹುದು.

ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಪಡೆದ ಮಾಹಿತಿಯಿಂದ ಬರೆಯಲಾಗಿದೆ. ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor