ಭಾರತ ಹೆಚ್ಚು ಬಿಸಿಯಾಗುತ್ತಿದೆಯೇ? ಹವಾಮಾನ ಬದಲಾವಣೆಯ ವಿಶ್ಲೇಷಣೆ ಇಲ್ಲಿದೆ…
Photo Credit : PTI
ಜೂನ್-ಸೆಪ್ಟೆಂಬರ್ ಮುಂಗಾರು ತಿಂಗಳುಗಳಲ್ಲಿ ಮುಂಗಾರು ವಿಳಂಬವಾಗಿರುವುದು ಮತ್ತು ಎಲ್ನಿನೊ ಸ್ಥಿತಿ ಖಚಿತವಾಗಿರುವುದು ಶಾಖ-ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಭಾರತದ ಅನೇಕ ನಗರಗಳು ಶಾಖದ ಅಲೆಗಳು ಅಥವಾ ಅರೆ-ಶಾಖದ ಅಲೆಗಳಂತಹ ಪರಿಸ್ಥಿತಿಗಳಿಂದ ಬಳಲುತ್ತಿವೆ. ಜೂನ್-ಸೆಪ್ಟೆಂಬರ್ ಮುಂಗಾರು ತಿಂಗಳುಗಳಲ್ಲಿ ಮುಂಗಾರು ವಿಳಂಬವಾಗಿರುವುದು ಮತ್ತು ಎಲ್ನಿನೊ ಸ್ಥಿತಿ ಖಚಿತವಾಗಿರುವುದು ಶಾಖ-ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಭಾರತದಲ್ಲಿ 2026ರ ಮೇ ಅಸಹಜವಾಗಿ ಬಿಸಿಯಾಗಿದೆಯೇ?
ಹಗಲಿನ ತಾಪಮಾನದ ದೃಷ್ಟಿಯಿಂದ ಅಲ್ಲ. ಅಲ್ಲದೆ ರಾಷ್ಟ್ರವ್ಯಾಪಿ ಹವಾಮಾನವೂ ಒಂದೇ ರೀತಿಯಲ್ಲಿಲ್ಲ. 2026ರ ಮೇ ತಿಂಗಳಿಗೆ ಭಾರತದ ಹವಾಮಾನ ಇಲಾಖೆ (IMD) ನೀಡಿದ್ದ ಮುನ್ನೋಟದ ಪ್ರಕಾರ, ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ‘ಸಾಮಾನ್ಯ’ದಿಂದ ‘ಸಾಮಾನ್ಯಕ್ಕಿಂತ ಕಡಿಮೆ’ ಮಟ್ಟದಲ್ಲಿರಲಿದೆ ಎಂದು ನಿರೀಕ್ಷಿಸಲಾಗಿತ್ತು. ದಕ್ಷಿಣ ಪರ್ಯಾಯ ದ್ವೀಪ ಹಾಗೂ ಈಶಾನ್ಯ ಮತ್ತು ವಾಯುವ್ಯದ ಕೆಲವು ಭಾಗಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ನಿರೀಕ್ಷಿಸಲಾಗಿತ್ತು. ಬಹುತೇಕ ಸಂದರ್ಭಗಳಲ್ಲಿ ‘ಸಾಮಾನ್ಯ’ ಎಂಬುದು ನಿರ್ದಿಷ್ಟ ಕೇಂದ್ರದಲ್ಲಿ 30 ವರ್ಷಗಳ ಸರಾಸರಿ ತಾಪಮಾನವನ್ನು ಸೂಚಿಸುತ್ತದೆ.
ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳ ಮುನ್ಸೂಚನೆಗಳನ್ನು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ನೀಡಲಾಗಿತ್ತು. ಅವುಗಳೆಂದರೆ ಹಿಮಾಲಯದ ತಪ್ಪಲು ಪ್ರದೇಶಗಳು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್ ಮತ್ತು ಮಹಾರಾಷ್ಟ್ರ. ಆದರೆ ಮೇ ತಿಂಗಳಲ್ಲಿ ಭಾರತಾದ್ಯಂತ ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಯ ಶೇ 110ರಷ್ಟು ಮೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
►ಶಾಖದ ಅಲೆಗಳ ಕೇಂದ್ರ ವಲಯ
ದೀರ್ಘಾವಧಿಯ ಸ್ಪಷ್ಟ ಸಂಕೇತವೆಂದರೆ: 1961–2020ರ ಅವಧಿಯಲ್ಲಿ ಕೋರ್ ಹೀಟ್ ವೇವ್ ಜೋನ್ (CHZ) ಕುರಿತು IMD ನಡೆಸಿದ ಅಧ್ಯಯನವು, ಪ್ರತಿ ದಶಕಕ್ಕೆ ಶಾಖದ ಅಲೆಗಳ ಆವರ್ತನವು 0.1 ದಿನ ಮತ್ತು ಶಾಖದ ಅಲೆಗಳ ಅವಧಿಯು 0.44 ದಿನಗಳಷ್ಟು ಹೆಚ್ಚಾಗುತ್ತಿದೆ ಎಂದು ಕಂಡುಹಿಡಿದಿದೆ. ಇವೆರಡೂ ಅಂಕಿಅಂಶಗಳ ದೃಷ್ಟಿಯಿಂದ ಮಹತ್ವದ ಪ್ರವೃತ್ತಿಗಳಾಗಿವೆ.
ಅಧ್ಯಯನದ ಪ್ರಕಾರ, ರಾತ್ರಿಗಳು ಹಗಲುಗಳಿಗಿಂತ ಪ್ರತಿ ದಶಕಕ್ಕೆ ಸರಿಸುಮಾರು 0.21°Cರಷ್ಟು ವೇಗವಾಗಿ ಬೆಚ್ಚಗಾಗುತ್ತಿವೆ. CHZನಲ್ಲಿ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ಸೇರಿವೆ. ಜೊತೆಗೆ ತೆಲಂಗಾಣ ಹವಾಮಾನ ಉಪವಿಭಾಗ ಹಾಗೂ ಮರಾಠವಾಡ, ವಿದರ್ಭ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಆಂಧ್ರಪ್ರದೇಶದ ಪ್ರದೇಶಗಳೂ ಒಳಗೊಂಡಿವೆ.
ದಶಕಗಳಿಂದ ಶಾಖದ ಅಲೆಗಳು ಹೆಚ್ಚಾಗುತ್ತಿವೆ ಮತ್ತು ಅವುಗಳ ಅವಧಿಯೂ ದೀರ್ಘವಾಗುತ್ತಿದೆ. ಆದರೆ 2026ರ ಮೇ ತಿಂಗಳು ದಾಖಲೆ ಮಟ್ಟದ ಬಿಸಿಯನ್ನು ದಾಖಲಿಸುವ ಬದಲು, ಹೆಚ್ಚಿನ ಆರ್ದ್ರತೆ ಮತ್ತು ಪ್ರಾದೇಶಿಕ ಅಸಮಾನತೆಗಳಿಂದ ಕೂಡಿದ ತಿಂಗಳಾಗಿತ್ತು.
►ಎಪ್ರಿಲ್ ನಲ್ಲಿ ವಿಶ್ವದ 50 ಅತ್ಯಂತ ಬಿಸಿ ನಗರಗಳು ಭಾರತದಲ್ಲಿವೆಯೇ?
ಎಪ್ರಿಲ್ ನಲ್ಲಿ ವಿಶ್ವದ 50 ಅತ್ಯಂತ ಬಿಸಿ ನಗರಗಳು ಭಾರತದಲ್ಲಿವೆ ಎಂಬ ಮಾಹಿತಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಆದರೆ ಆ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ. ವಾಯು ಗುಣಮಟ್ಟದ ವೆಬ್ಸೈಟ್ವೊಂದು ಸಂಗ್ರಹಿಸಿದ ರ್ಯಾಂಕಿಂಗ್, ಕೇವಲ ಒಂದೇ ದಿನವಾದ 2026ರ ಎಪ್ರಿಲ್ 27ರ ಉಷ್ಣತೆಯನ್ನು ಆಧರಿಸಿ ಸಿದ್ಧಪಡಿಸಲಾಗಿತ್ತು. ಒಂದು ದಿನದ ಉಷ್ಣತೆಯನ್ನು ದೀರ್ಘಾವಧಿಯ ಹವಾಮಾನ ಪ್ರವೃತ್ತಿಯೆಂದು ಪರಿಗಣಿಸಲು ಸಾಧ್ಯವಿಲ್ಲ.
ಆ ಪಟ್ಟಿಯು ಮುಖ್ಯವಾಗಿ ಉತ್ತರ ಮತ್ತು ಮಧ್ಯ ಭಾರತದ ನಗರಗಳನ್ನು ಒಳಗೊಂಡಿತ್ತು. ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಪ್ರದೇಶಗಳ ವಿವರಗಳು ಅದರಲ್ಲಿ ಇರಲಿಲ್ಲ. ಹೀಗಾಗಿ ಒಟ್ಟಾರೆ ರ್ಯಾಂಕಿಂಗ್ ವಿಧಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿರುವ ರಾಜಸ್ಥಾನದ ಕೆಲವು ಪ್ರದೇಶಗಳು ಪಟ್ಟಿಯಲ್ಲಿ ಕೆಳಭಾಗದಲ್ಲಿದ್ದವು. ಅಲ್ಲದೆ, ಅಂಕಿ-ಅಂಶಗಳು ಪ್ರಾಥಮಿಕವಾಗಿ IMD ಕೇಂದ್ರಗಳಿಂದ ಬಂದಿರಲಿಲ್ಲ; ವೆಬ್ಸೈಟ್ನ ಸ್ವಂತ ಸೂಚ್ಯಂಕಗಳ ಆಧಾರದ ಮೇಲೆ ಪ್ರಕಟಿಸಲಾಗಿತ್ತು.
►2025ಕ್ಕೆ ಹೋಲಿಸಿದರೆ 2026 ಹೆಚ್ಚು ಬಿಸಿಯಾಗಿತ್ತೇ?
2026ರ ಎಪ್ರಿಲ್ ನಲ್ಲಿ ಹಗಲಿನ ತಾಪಮಾನ ತುಲನಾತ್ಮಕವಾಗಿ ತಂಪಾಗಿಯೇ ಇತ್ತು. IMD ಪ್ರಕಾರ, ಈ ಬಾರಿ ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿತ್ತು ಎಂದು IMD ತಿಳಿಸಿತ್ತು. ದೆಹಲಿಯಲ್ಲಿ ಸಾಮಾನ್ಯಕ್ಕಿಂತ ಸುಮಾರು 2.2°C ಮತ್ತು ಪಂಜಾಬ್ನಲ್ಲಿ 2.4°C ಹೆಚ್ಚು ತಾಪಮಾನ ದಾಖಲಾಗಿತ್ತು.
►ನಗರ ಪ್ರದೇಶಗಳ ಕೊಡುಗೆ ಹೇಗಿರುತ್ತದೆ?
ನಗರ ಪ್ರದೇಶಗಳಲ್ಲಿ ಮಣ್ಣು ಮತ್ತು ಸಸ್ಯವರ್ಗದ ಜಾಗವನ್ನು ಕಾಂಕ್ರೀಟ್ ಮತ್ತು ಡಾಂಬರು ಆವರಿಸಿದಾಗ, ಆ ಮೇಲ್ಮೈಗಳು ಹಗಲಿನಲ್ಲಿ ಹೆಚ್ಚಿನ ಶಾಖವನ್ನು ಹೀರಿಕೊಂಡು ರಾತ್ರಿ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಆವಿಯಾಗುವಿಕೆಯ ಮೂಲಕ ದೊರೆಯುವ ತಂಪಾಗಿಸುವಿಕೆಯ ಕಡಿಮೆ ಪ್ರಮಾಣ, ಕಡಿಮೆ ಮೇಲ್ಮೈ ಪ್ರತಿಫಲನ, ಕಳಪೆ ಗಾಳಿಯಾಡುವಿಕೆ ಮತ್ತು ತ್ಯಾಜ್ಯ ಶಾಖದ ಸಂಯೋಜನೆಯು ಭಾರತೀಯ ನಗರಗಳನ್ನು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗಿಂತ 2–10°C ಹೆಚ್ಚು ಬಿಸಿಯಾಗಿಸಬಹುದು.
ಹವಾನಿಯಂತ್ರಣ (ಏರ್ ಕಂಡೀಷನರ್) ಬಳಕೆಯೂ ಇದಕ್ಕೆ ಕಾರಣವಾಗುತ್ತದೆ. ಅದು ಒಳಾಂಗಣವನ್ನು ತಂಪಾಗಿಸುವ ವೇಳೆ ಶಾಖವನ್ನು ಹೊರಾಂಗಣಕ್ಕೆ ಬಿಡುಗಡೆ ಮಾಡುತ್ತದೆ.
► ಎಲ್ನಿನೊ ಹೇಗೆ ಪರಿಣಾಮ ಬೀರಲಿದೆ?
ಎಲ್ನಿನೊ ಬಿಸಿಯಾದ ಮತ್ತು ಶುಷ್ಕ ಋತುವಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮುಂಗಾರುವಿನ ತೇವಾಂಶದ ಪರಿಣಾಮವನ್ನು ದುರ್ಬಲಗೊಳಿಸಬಹುದು. ಪರಿಣಾಮವಾಗಿ, ಶುಷ್ಕ ಮತ್ತು ಮಳೆರಹಿತ ಹವಾಮಾನ ಹೆಚ್ಚಾಗಬಹುದು ಹಾಗೂ ವಾಯುವ್ಯ ಭಾರತದಾದ್ಯಂತ ಆರ್ದ್ರ ಶಾಖದ ಅಲೆಗಳನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ.
ಕೃಪೆ: The Hindu