×
Ad

ಮಗನಿಗೆ ಕನ್ನಡ ಕಲಿಸಲು ಹೋಗಿ 21 ಭಾಷೆಗಳಿಗೆ ಕೀಬೋರ್ಡ್ ನಿರ್ಮಿಸಿದ ಡೆವಲಪರ್!

ಮನೆಯಲ್ಲಿ ಕುಳಿತೇ ಕೃಷ್ಣ ಪೆರ್ಮಿ 21 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಉಚಿತ ಕೀಬೋರ್ಡ್ ಅಪ್ಲಿಕೇಶನ್ ‘ಅಕ್ಷರ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.

Update: 2026-05-31 16:21 IST

Photo Credit : indianexpress.com

ಬೆಂಗಳೂರು: ಐಫೋನ್‌ಗಾಗಿ ಸಂಪೂರ್ಣವಾಗಿ ಸಾಧನದಲ್ಲೇ ಕಾರ್ಯನಿರ್ವಹಿಸುವ, ಇಂಟರ್ನೆಟ್ ಅಗತ್ಯವಿಲ್ಲದ ಹಾಗೂ ಯಾವುದೇ ಬಳಕೆದಾರರ ಡೇಟಾವನ್ನು ಸಂಗ್ರಹಿಸದ ಕೀಬೋರ್ಡ್ ಅಪ್ಲಿಕೇಶನ್‌ವೊಂದನ್ನು ಬೆಂಗಳೂರಿನ ಡೆವಲಪರ್ ಕೃಷ್ಣ ಪೆರ್ಮಿ ಅಭಿವೃದ್ಧಿಪಡಿಸಿದ್ದಾರೆ. ‘ಅಕ್ಷರ್’ ಹೆಸರಿನ ಈ ಉಚಿತ ಅಪ್ಲಿಕೇಶನ್ 21 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ.

ತಮ್ಮ ಮಗನಿಗೆ ಕನ್ನಡ ಅಭ್ಯಾಸ ಮಾಡಲು ಸಹಾಯ ಮಾಡುತ್ತಿದ್ದ ವೇಳೆ, ಓದಲು ಮತ್ತು ಟಿಪ್ಪಣಿಗಳನ್ನು ಬರೆಯಲು ಐಫೋನ್‌ ನಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಸುಲಭ ವಿಧಾನವೊಂದರ ಅಗತ್ಯ ಪೆರ್ಮಿಗೆ ಎದುರಾಯಿತು. ಉತ್ತರ ಕರ್ನಾಟಕದಲ್ಲಿ ಬಾಲ್ಯದಿಂದಲೇ ಕನ್ನಡ ಓದು ಮತ್ತು ಬರವಣಿಗೆಯಲ್ಲಿ ಮುಂದಿದ್ದರೂ, ಡಿಜಿಟಲ್ ಮಾಧ್ಯಮದಲ್ಲಿ ಕನ್ನಡ ಟೈಪಿಂಗ್ ಅಷ್ಟು ಸರಳವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಅವರು ಗೂಗಲ್ ಇನ್‌ಪುಟ್ ಟೂಲ್‌ಗಳನ್ನು ಬಳಸಲು ಆರಂಭಿಸಿದರು. ಈ ವೆಬ್ ಆಧಾರಿತ ಸಾಧನವು ಫೋನೆಟಿಕ್ ವಿಧಾನದಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಟೈಪ್ ಮಾಡಿದಾಗ ಅವುಗಳನ್ನು ಕನ್ನಡ ಲಿಪಿಗೆ ಪರಿವರ್ತಿಸುವ ಸೌಲಭ್ಯ ಒದಗಿಸುತ್ತದೆ. ಆದರೆ ಮೊಬೈಲ್ ಬಳಕೆಗೆ ಇದು ಸೂಕ್ತವಾಗಿರಲಿಲ್ಲ. ಜೊತೆಗೆ, ನಿರಂತರ ಇಂಟರ್ನೆಟ್ ಸಂಪರ್ಕದ ಅಗತ್ಯವೂ ಇತ್ತು.

ಹೀಗಾಗಿ ಪೆರ್ಮಿ ಸ್ವತಃ ಅಪ್ಲಿಕೇಶನ್ ನಿರ್ಮಿಸಲು ಮುಂದಾದರು. ಗೂಗಲ್ ಇನ್‌ಪುಟ್ ಟೂಲ್‌ಗಳ API ಬಳಸಿ ಐಫೋನ್‌ಗಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದರು. ಒಂದು ವರ್ಷ ಬಳಕೆ ಮಾಡಿದ ಬಳಿಕ ಅದನ್ನು ಆ್ಯಪ್ ಸ್ಟೋರ್‌ಗೆ ಬಿಡುಗಡೆ ಮಾಡಲು ನಿರ್ಧರಿಸಿದರು. ಆದರೆ ಆ ವೇಳೆ ಒಂದು ಪ್ರಮುಖ ವಿಷಯ ಅವರ ಗಮನಕ್ಕೆ ಬಂತು.

ಡೆವಲಪರ್‌ಗಳು ತಮ್ಮ ಆ್ಯಪ್ ಯಾವ ರೀತಿಯ ಡೇಟಾವನ್ನು ಸಂಗ್ರಹಿಸುತ್ತದೆ ಎಂಬುದನ್ನು ಘೋಷಿಸಬೇಕೆಂದು ಆ್ಯಪಲ್ ಸೂಚಿಸಿದಾಗ, ತಾವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸದಿದ್ದರೂ ಪ್ರತಿಯೊಂದು ಲಿಪ್ಯಂತರ ವಿನಂತಿಯೂ ಬಾಹ್ಯ ಸರ್ವರ್‌ಗೆ ಕಳುಹಿಸಲಾಗುತ್ತಿದೆ ಎಂಬುದು ಅವರಿಗೆ ತಿಳಿಯಿತು. ಆ ಹಂತದಲ್ಲಿ ಗೂಗಲ್‌ಗೆ ಯಾವ ಮಾಹಿತಿಯನ್ನು ಕಳುಹಿಸಲಾಗುತ್ತಿದೆ ಎಂಬುದರ ಮೇಲೆ ಅವರಿಗೆ ಯಾವುದೇ ನಿಯಂತ್ರಣ ಇರಲಿಲ್ಲ. ಹೀಗಾಗಿ ಸಂಪೂರ್ಣ ಖಾಸಗಿ, ಆಫ್‌ಲೈನ್ ಹಾಗೂ ಸಾಧನದಲ್ಲೇ ಕಾರ್ಯನಿರ್ವಹಿಸುವ ಪರ್ಯಾಯದ ಹುಡುಕಾಟ ಆರಂಭಿಸಿದರು.

ಕೀಬೋರ್ಡ್‌ಗಳು ಮತ್ತು ಗೌಪ್ಯತೆ

ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಕೀಬೋರ್ಡ್‌ಗಳಿಗೆ ವಿಶೇಷ ಸ್ಥಾನವಿದೆ. ಬಳಕೆದಾರರು ಟೈಪ್ ಮಾಡುವ ಪ್ರತಿಯೊಂದು ಅಕ್ಷರವೂ ಕೀಬೋರ್ಡ್ ಮೂಲಕವೇ ಸಾಗುತ್ತದೆ. ಮೂರನೇ ಪಕ್ಷದ ಕೀಬೋರ್ಡ್ ಡೆವಲಪರ್‌ಗಳಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒದಗಿಸುವ ‘ಫುಲ್ ಆ್ಯಕ್ಸೆಸ್’ ಮೋಡ್ ಲಭ್ಯವಿರುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಡೇಟಾ ಪ್ರಸರಣದ ಸಾಧ್ಯತೆಯೂ ಇರುತ್ತದೆ. ಇದರಿಂದ ಬಳಕೆದಾರರ ವಿಶ್ವಾಸ ಗಳಿಸುವುದು ಸವಾಲಾಗುತ್ತದೆ.

“ಜನರು ಒಟಿಪಿ, ಕ್ರೆಡಿಟ್ ಕಾರ್ಡ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕೀಬೋರ್ಡ್ ಮೂಲಕ ನಮೂದಿಸುತ್ತಾರೆ. ಹೀಗಾಗಿ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂಬ ಭರವಸೆ ನೀಡಲು ಬಯಸುತ್ತೇನೆ” ಎಂದು ಪೆರ್ಮಿ ಹೇಳಿದ್ದಾರೆ.

ಗೌಪ್ಯತೆಯನ್ನು ಕಾಪಾಡುವ ಪರ್ಯಾಯದ ಹುಡುಕಾಟದಲ್ಲಿದ್ದ ವೇಳೆ ಪೆರ್ಮಿಗೆ AI4Bharat ಸಂಸ್ಥೆಯ ಪರಿಚಯವಾಯಿತು. ಭಾರತೀಯ ಭಾಷೆಗಳ ನೈಸರ್ಗಿಕ ಭಾಷಾ ಸಂಸ್ಕರಣೆಗೆ ಸಂಬಂಧಿಸಿದ ಸಂಶೋಧನಾ ಯೋಜನೆಯಾದ AI4Bharat, ‘IndicXlit’ ಎಂಬ ಮುಕ್ತ ಮೂಲ (ಓಪನ್ ಸೋರ್ಸ್) ಲಿಪ್ಯಂತರ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದು ಫೋನೆಟಿಕ್ ಇಂಗ್ಲಿಷ್ ಇನ್‌ಪುಟ್ ಅನ್ನು 21 ಭಾರತೀಯ ಭಾಷೆಗಳ ಸ್ಥಳೀಯ ಲಿಪಿಗೆ ಪರಿವರ್ತಿಸುತ್ತದೆ.

IndicXlit ಅನ್ನು ವಿವಿಧ ಸಂಸ್ಥೆಗಳು ಬಳಸುತ್ತಿದ್ದರೂ, ಗ್ರಾಹಕ ಮಟ್ಟದ ಯಾವುದೇ ಅಪ್ಲಿಕೇಶನ್‌ನಲ್ಲಿ ಅದರ ಬಳಕೆ ಕಂಡುಬಂದಿರಲಿಲ್ಲ. “ಭಾರತದ ಹೊರಗಿನಿಂದ ಬಂದ ಮಾದರಿಗಳನ್ನು ಗ್ರಾಹಕ ಮಟ್ಟದಲ್ಲಿ ಬಳಸುವುದನ್ನು ಕೇಳುತ್ತೇವೆ. ಆದರೆ ಯಾವುದೇ ಮಾಹಿತಿಯನ್ನು ಸರ್ವರ್‌ಗೆ ಕಳುಹಿಸದೆ ಎಲ್ಲವನ್ನೂ ಸಾಧನದಲ್ಲೇ ನಿರ್ವಹಿಸುವುದು ವಿಶೇಷವೆನಿಸಿತು” ಎಂದು ಪೆರ್ಮಿ ಹೇಳಿದ್ದಾರೆ.

ಆದರೆ ಇದಕ್ಕೆ ಕೆಲವು ತಾಂತ್ರಿಕ ಸವಾಲುಗಳೂ ಇದ್ದವು. iOS ಕೀಬೋರ್ಡ್ ಎಕ್ಸ್‌ಟೆನ್ಷನ್‌ ಗಳಿಗೆ ಸಾಮಾನ್ಯವಾಗಿ 50ರಿಂದ 75 MB ಮೆಮೊರಿ ಮಿತಿ ಇದೆ. ಬಿಡುಗಡೆಯಾಗಿದ್ದ IndicXlit ಮಾದರಿಯ ಗಾತ್ರ ಸುಮಾರು 350 MB ಆಗಿತ್ತು. ಇದನ್ನು ಕೀಬೋರ್ಡ್‌ನಲ್ಲಿ ಬಳಸಲು ಪೆರ್ಮಿ ಮಾದರಿಯ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಅದರ ಗಾತ್ರವನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕಾಯಿತು.

ಇದಕ್ಕಾಗಿ ಅವರು ‘ಕ್ವಾಂಟೈಸೇಶನ್’ ತಂತ್ರಜ್ಞಾನವನ್ನು ಬಳಸಿದರು. ಈ ವಿಧಾನದಲ್ಲಿ ಮಾದರಿಯ ಸಂಖ್ಯಾತ್ಮಕ ನಿಖರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಮೂಲಕ ಮೆಮೊರಿ ಬಳಕೆಯನ್ನು ತಗ್ಗಿಸಲಾಗುತ್ತದೆ. ಆದರೆ ಅದರ ಕಾರ್ಯಕ್ಷಮತೆ ಬಹುತೇಕ ಹಾಗೆಯೇ ಉಳಿಯುತ್ತದೆ.

“ನಿಖರತೆ ಕಳೆದುಕೊಳ್ಳದೆ ಮಾದರಿಯನ್ನು ಸಂಕುಚಿತಗೊಳಿಸಬಹುದು. ಆಗ ಅದನ್ನು ಕೀಬೋರ್ಡ್‌ನಲ್ಲಿ ಬಳಸಲು ಸಾಧ್ಯವಾಗುತ್ತದೆ ಹಾಗೂ ಗಾತ್ರವೂ ಬಳಕೆಗೆ ಅನುಕೂಲಕರವಾಗುತ್ತದೆ” ಎಂದು ಪೆರ್ಮಿ ಹೇಳಿದ್ದಾರೆ.

ಈ ಪ್ರಯತ್ನದ ಫಲವಾಗಿ ‘ಅಕ್ಷರ್’ ಕೀಬೋರ್ಡ್ ಅಸ್ತಿತ್ವಕ್ಕೆ ಬಂದಿದೆ. ಇದು ಸಂಪೂರ್ಣವಾಗಿ ಸಾಧನದಲ್ಲೇ ಕಾರ್ಯನಿರ್ವಹಿಸುವುದರಿಂದ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಜೊತೆಗೆ ಯಾವುದೇ ಬಳಕೆದಾರರ ಡೇಟಾವನ್ನೂ ಸಂಗ್ರಹಿಸುವುದಿಲ್ಲ.

ಕೊಂಕಣಿ, ಬೋಡೋ, ಕಾಶ್ಮೀರಿ, ಡೋಗ್ರಿ, ಮೈಥಿಲಿ, ಮಣಿಪುರಿ, ಸಂಸ್ಕೃತ ಹಾಗೂ ಸಿಂಧಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಈ ಕೀಬೋರ್ಡ್ ಸಪೋರ್ಟ್ ಮಾಡುತ್ತದೆ. ಒಟ್ಟು 21 ಭಾಷೆಗಳಲ್ಲಿ ಬಳಸಬಹುದಾಗಿದ್ದು, ಜಿಬೋರ್ಡ್ ಆರು ಹಾಗೂ ಆ್ಯಪಲ್‌ ನ ಕೀಬೋರ್ಡ್ 11 ಭಾಷೆಗಳಿಗೆ ಮಾತ್ರ ಸಪೋರ್ಟ್ ಮಾಡುತ್ತದೆ ಎಂದು ಪೆರ್ಮಿ ಹೇಳಿದ್ದಾರೆ.

“ಕಾಶ್ಮೀರಿ ಮತ್ತು ಬೋಡೋದಂತಹ ಭಾಷೆಗಳನ್ನು ಮಾತನಾಡುವವರಿಗೆ ತಂತ್ರಜ್ಞಾನ ಉತ್ಪನ್ನಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ಸಾಮಾನ್ಯವಾಗಿ ಬಳಕೆದಾರರ ಸಂಖ್ಯೆ ಆಧರಿಸಿ ಭಾಷಾ ಬೆಂಬಲ ಒದಗಿಸಲಾಗುತ್ತದೆ. ಆದರೆ ಸ್ವತಂತ್ರ ಡೆವಲಪರ್ ಆಗಿ ನಾನು ನಿರಂತರವಾಗಿ ಸುಧಾರಣೆಗಳನ್ನು ಮಾಡುತ್ತಾ ಕೀಬೋರ್ಡ್ ಅನ್ನು ಜನರ ಕೈಗೆ ತಲುಪಿಸಬಹುದು” ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News