Photo Credit : PTI 

ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ 2026ರ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರಕಾರ, 'ಕ್ಷೇತ್ರ ಪುನರ್ವಿಂಗಡಣಾ ಆಯೋಗ'ವು ಮೂವರು ಪ್ರಮುಖ ಸದಸ್ಯರನ್ನು ಒಳಗೊಂಡಿರುತ್ತದೆ. ಕೇಂದ್ರ ಸರಕಾರ ನೇಮಿಸುವ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಮುಖ್ಯ ಚುನಾವಣಾ ಆಯುಕ್ತರು ಅಥವಾ ಅವರು ನಾಮನಿರ್ದೇಶನ ಮಾಡುವ ಚುನಾವಣಾ ಆಯುಕ್ತರು ಸದಸ್ಯರಾಗಿರುತ್ತಾರೆ. ಜೊತೆಗೆ ಆಯಾ ರಾಜ್ಯದ ರಾಜ್ಯ ಚುನಾವಣಾ ಆಯುಕ್ತರು ಸದಸ್ಯರಾಗಿರುತ್ತಾರೆ.

ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿದ ತಕ್ಷಣವೇ ಕ್ಷೇತ್ರ ಪುನರ್ವಿಂಗಡಣಾ ಆಯೋಗವನ್ನು ರಚಿಸಲಾಗುವುದು.

ಸಂವಿಧಾನದ 243ಕೆ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಂದ ನೇಮಕಗೊಂಡ ರಾಜ್ಯ ಚುನಾವಣಾ ಆಯುಕ್ತರು ಆಯೋಗದ ಸದಸ್ಯರಾಗಿರುತ್ತಾರೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಆದರೆ ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ಸಂಬಂಧಿಸಿದಂತೆ, ಈ ಉದ್ದೇಶಕ್ಕಾಗಿ ರಾಜ್ಯಪಾಲರು ನಾಮನಿರ್ದೇಶನ ಮಾಡುವ ವ್ಯಕ್ತಿಯು ರಾಜ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆಯೋಗದ ಕಾರ್ಯಾವಧಿಯನ್ನು ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ಧರಿಸಲಿದೆ. ಆಯೋಗವು ಮನವಿ ಮಾಡಿದರೆ ಮತ್ತು ಅಗತ್ಯವಿದೆ ಎಂದು ಸರಕಾರಕ್ಕೆ ಕಂಡುಬಂದರೆ, ಅದರ ಅವಧಿಯನ್ನು ವಿಸ್ತರಿಸಬಹುದು.

"ಜಮ್ಮು ಮತ್ತು ಕಾಶ್ಮೀರವು ಈಗ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅದಕ್ಕೆ ವಿಶೇಷ ನಿಯಮಗಳಿವೆ" ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿದೆ.

ಪ್ರಸ್ತುತ ಪಾಕಿಸ್ತಾನದ ಆಕ್ರಮಣದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶವು ಮುಂದೆ ಪಾಕಿಸ್ತಾನದ ಹಿಡಿತದಿಂದ ಮುಕ್ತವಾದರೆ, ಆ ಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ನಿರ್ಧರಿಸಲು ಚುನಾವಣಾ ಆಯೋಗವೇ ಕ್ಷೇತ್ರ ಪುನರ್ವಿಂಗಡಣಾ ಆಯೋಗವಾಗಿ ಕಾರ್ಯನಿರ್ವಹಿಸಲಿದೆ.

"ಮಸೂದೆಗಳು ಅಂಗೀಕಾರವಾದ ತಕ್ಷಣ ಕ್ಷೇತ್ರ ಪುನರ್ವಿಂಗಡಣಾ ಆಯೋಗವನ್ನು ರಚಿಸಲಾಗುವುದು ಮತ್ತು 2029ರ ಲೋಕಸಭಾ ಚುನಾವಣೆಗೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಾಗುವುದು. ಇದೇ ವೇಳೆ ರಾಜ್ಯಗಳೂ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಿವೆ. ಇದು ಕಡ್ಡಾಯವಲ್ಲದಿದ್ದರೂ, ಸಂಪ್ರದಾಯದಂತೆ ಶೇ. 50ರಷ್ಟು ರಾಜ್ಯಗಳು ಈ ಮಸೂದೆಯನ್ನು ಅನುಮೋದಿಸಲಿವೆ" ಎಂದು ಆ ಅಧಿಕಾರಿ ವಿವರಿಸಿದ್ದಾರೆ.

ಆಯೋಗದಲ್ಲಿ ಯಾರೆಲ್ಲ ಇರ್ತಾರೆ?

ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗವು ಪ್ರತಿಯೊಂದು ಕ್ಷೇತ್ರದ ಗಡಿಯನ್ನು ಮರುನಿಗದಿಪಡಿಸಲಿದೆ. ಆಯೋಗದ ನಿರ್ಧಾರಗಳನ್ನು ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರ ನೇಮಿಸುವ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳು ಆಯೋಗದ ಅಧ್ಯಕ್ಷರಾಗಿರುತ್ತಾರೆ.

ಮುಖ್ಯ ಚುನಾವಣಾ ಆಯುಕ್ತರು ಅಥವಾ ಅವರು ನಾಮನಿರ್ದೇಶನ ಮಾಡುವ ಚುನಾವಣಾ ಆಯುಕ್ತರು ಮತ್ತು ಆಯೋಗವು ಯಾವ ರಾಜ್ಯದ ಕ್ಷೇತ್ರ ಪುನರ್ವಿಂಗಡಣೆ ಕೆಲಸ ಮಾಡುತ್ತಿದೆಯೋ, ಆ ರಾಜ್ಯದ ಚುನಾವಣಾ ಆಯುಕ್ತರು ಸದಸ್ಯರಾಗಿರುತ್ತಾರೆ.

ಅವಧಿ

ಕೇಂದ್ರ ಸರಕಾರ ಅಧಿಸೂಚನೆಯ ಮೂಲಕ ಆಯೋಗದ ಕಾರ್ಯಾವಧಿಯನ್ನು ನಿಗದಿಪಡಿಸಲಿದೆ. ಆಯೋಗವು ಮನವಿ ಮಾಡಿದರೆ, ಅಗತ್ಯವೆಂದು ಕಂಡುಬಂದಷ್ಟು ಕಾಲ ಕೇಂದ್ರ ಸರ್ಕಾರವು ಅದರ ಅವಧಿಯನ್ನು ವಿಸ್ತರಿಸಬಹುದು.

ಸಲಹೆಗಾರರ ನೇಮಕ

ಪ್ರತಿ ರಾಜ್ಯಕ್ಕೂ, ಆಯಾ ಸದನದ ಪಕ್ಷಗಳ ಬಲಾಬಲದ ಆಧಾರದ ಮೇಲೆ ಲೋಕಸಭಾ ಸ್ಪೀಕರ್ ಐವರು ಸಂಸದರನ್ನು ಹಾಗೂ ವಿಧಾನಸಭಾ ಸ್ಪೀಕರ್ ಐವರು ಶಾಸಕರನ್ನು ನಾಮನಿರ್ದೇಶನ ಮಾಡಲಿದ್ದಾರೆ.

ವಿಧಾನಸಭಾ ಸ್ಪೀಕರ್‌ಗಳಿಗೆ ಇದಕ್ಕಾಗಿ ಒಂದು ತಿಂಗಳ ಕಾಲಾವಕಾಶವಿದ್ದು, ಲೋಕಸಭಾ ಸ್ಪೀಕರ್‌ಗೆ ಎರಡು ತಿಂಗಳ ಸಮಯವಿರುತ್ತದೆ.

ಈ ಸಹಾಯಕ ಸದಸ್ಯರಿಗೆ ಮತದಾನದ ಹಕ್ಕಿರುವುದಿಲ್ಲ, ಆದರೆ ಅವರ ಭಿನ್ನಾಭಿಪ್ರಾಯಗಳನ್ನು ದಾಖಲಿಸಿ ಪ್ರಕಟಿಸಬಹುದು.

ಆಯೋಗವು ಭಾರತದ ಜನಗಣತಿ ಆಯುಕ್ತರು, ಸರ್ವೇಯರ್ ಜನರಲ್ ಆಫ್ ಇಂಡಿಯಾ ಮತ್ತು ನಕ್ಷೆ ತಜ್ಞರನ್ನೂ ಕರೆಸಿಕೊಳ್ಳಬಹುದು.

ಗಡಿ ನಿಗದಿಯಲ್ಲಿ ಆಯೋಗದ ಪಾತ್ರ

ಪ್ರತಿ ರಾಜ್ಯದ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳು ಶೇ. 50ರಷ್ಟು ಹೆಚ್ಚಾಗಲಿವೆ. ಆಯೋಗವು ಪ್ರತಿ ರಾಜ್ಯದ ಪ್ರತಿಯೊಂದು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರದ ಗಡಿಗಳನ್ನು ಗುರುತಿಸಲಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರವೂ ಸಂಪೂರ್ಣವಾಗಿ ಒಂದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಬರಬೇಕು. ಕೇವಲ ಒಂದು ಲೋಕಸಭಾ ಸ್ಥಾನ ಹೊಂದಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಒಂದೇ ಕ್ಷೇತ್ರವಾಗಿರುತ್ತದೆ.

ಮೀಸಲಾತಿ ಮತ್ತು ರೊಟೇಶನ್ ಕುರಿತ ಪಾತ್ರ

ಪ್ರತಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಷ್ಟು ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳನ್ನು ಮೀಸಲಿಡಬೇಕು ಮತ್ತು ಯಾವ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಬೇಕು ಎಂಬುದನ್ನು ಆಯೋಗ ನಿರ್ಧರಿಸಲಿದೆ. ಆಯೋಗ ನಿಗದಿಪಡಿಸುವಂತೆ ಮಹಿಳಾ ಮೀಸಲು ಕ್ಷೇತ್ರಗಳು ಆವರ್ತನ ಪದ್ಧತಿಯಲ್ಲಿ (ರೊಟೇಶನ್) ಬದಲಾಗುತ್ತಿರುತ್ತವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮೀಸಲಾದ ಸ್ಥಾನಗಳು, ಆಯಾ ವರ್ಗಗಳಿಗೆ ಮೀಸಲಾದ ಕ್ಷೇತ್ರಗಳ ನಡುವೆ ಮಾತ್ರ ಆವರ್ತನೆಯಾಗುತ್ತವೆ.

ಗಡಿ ನಿಗದಿ ನಿಯಮಗಳು

ಕ್ಷೇತ್ರಗಳು ಭೌಗೋಳಿಕವಾಗಿ ಒತ್ತೊತ್ತಾಗಿರಬೇಕು . ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಗಡಿಗಳು, ಈಗಿರುವ ಆಡಳಿತಾತ್ಮಕ ಗಡಿಗಳು ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಅನುಸರಿಸಬೇಕು.

ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಸ್ಥಾನಗಳನ್ನು ರಾಜ್ಯಾದ್ಯಂತ ಹರಡುವಂತೆ, ಅವರ ಜನಸಂಖ್ಯೆಯ ಪ್ರಮಾಣ ತುಲನಾತ್ಮಕವಾಗಿ ಹೆಚ್ಚಿರುವ ಕಡೆಗಳಲ್ಲಿ ನೀಡಲಾಗುವುದು.

ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳನ್ನು ಅವರ ಜನಸಂಖ್ಯೆಯ ಪ್ರಮಾಣ ಅತಿ ಹೆಚ್ಚಿರುವ ಕಡೆಗಳಲ್ಲಿ ನಿಗದಿಪಡಿಸಲಾಗುವುದು.

ಕಾಯ್ದೆ ಜಾರಿಗೆ ಬಂದಾಗ ಪ್ರಕಟವಾಗಿರುವ ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಗಡಿಗಳನ್ನು ಗುರುತಿಸಲಾಗುವುದು.

ಆಯೋಗದ ಅಧಿಕಾರಗಳು

ಸಿವಿಲ್ ಕೋರ್ಟ್ ನಂತೆ , ಆಯೋಗವು ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಬಹುದು ಮತ್ತು ದಾಖಲೆಗಳು ಹಾಗೂ ಸಾರ್ವಜನಿಕ ಕಡತಗಳನ್ನು ಹಾಜರುಪಡಿಸುವಂತೆ ಕೇಳಬಹುದು. ಅಂತಿಮ ಆದೇಶ ಹೊರಡಿಸುವ ಮುನ್ನ ಕರಡು ಪ್ರಸ್ತಾವನೆಗಳನ್ನು ಪ್ರಕಟಿಸಿ, ಪ್ರತಿ ರಾಜ್ಯದಲ್ಲೂ ಸಾರ್ವಜನಿಕ ಅಹವಾಲುಗಳನ್ನು ಆಲಿಸಬೇಕು. ಆಯೋಗದ ಅಂತಿಮ ಆದೇಶಗಳಿಗೆ ಕಾನೂನಿನ ಬಲವಿರುತ್ತದೆ ಮತ್ತು ಅವುಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಚುನಾವಣಾ ಆಯೋಗವು ನಂತರದ ದಿನಗಳಲ್ಲಿ ಈ ಆದೇಶಗಳಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಬಹುದೇ ಹೊರತು, ಕ್ಷೇತ್ರದ ಗಡಿಯನ್ನು ಬದಲಾಯಿಸುವಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com