ನೇಪಾಳ ಲಿಪುಲೇಖ್ ಪಾಸ್ ಮೂಲಕ ಸಾಗುವ ಕೈಲಾಸ ಮಾನಸ ಸರೋವರ ಯಾತ್ರೆಗೆ ಅಡ್ಡಪಡಿಸುತ್ತಿರುವುದೇಕೆ?
Photo Credit : NDTV
ಭಾರತ ಮತ್ತು ಚೀನಾ ಲಿಪುಲೇಖ್ ಪಾಸ್ ಮೂಲಕ ಯಾತ್ರೆಯನ್ನು ಸುಗಮಗೊಳಿಸಲು ಸಿದ್ಧತೆ ನಡೆಸಿದಾಗ ನೇಪಾಳವು ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತೀಯ ಪ್ರವಾಸಿಗರನ್ನು ಕೈಲಾಸ ಮಾನಸ ಸರೋವರ ಯಾತ್ರೆಗೆ ಕೊಂಡೊಯ್ಯುವ ದಾರಿ ದಶಕಗಳಿಂದ ಲಿಪುಲೇಖ್ ಮೂಲಕ ಹಾದು ಹೋಗುತ್ತಿತ್ತು. ಇದೀಗ ಆ ದಾರಿಗೆ ಸಂಬಂಧಿಸಿ ವ್ಯಾಜ್ಯ ಆರಂಭವಾಗಿದೆ. ಭಾರತ ಮತ್ತು ಚೀನಾ ಈ ಲಿಪುಲೇಖ್ ಪಾಸ್ ಮೂಲಕ ಯಾತ್ರೆಯನ್ನು ಸುಗಮಗೊಳಿಸಲು ಸಿದ್ಧತೆ ನಡೆಸಿದಾಗ ನೇಪಾಳವು ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಆ ದಾರಿಯಲ್ಲಿ ತನ್ನ ನೆಲದ ಮೇಲೆ ಪ್ರಯಾಣ ಸಾಗಲಾಗುತ್ತಿದೆ ಎಂದು ನೇಪಾಳ ಹೇಳಿದೆ. ತೀರ್ಥಯಾತ್ರೆಯಾಗಬೇಕಿದ್ದ ಪ್ರಯಾಣ ಮತ್ತೊಮ್ಮೆ ರಾಜತಾಂತ್ರಿಕ ಘರ್ಷಣೆಯ ಬಿಂದುವಾಗಿ ಮಾರ್ಪಟ್ಟಿದೆ.
ಈ ಘರ್ಷಣೆಗೆ ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ 1816ರಲ್ಲಿ ಸಹಿ ಹಾಕಲಾದ ಸುಗೌಲಿ ಒಪ್ಪಂದದ ಬಗ್ಗೆ ಅರಿತುಕೊಳ್ಳಬೇಕು. ಆಂಗ್ಲೋ-ನೇಪಾಳ ಯುದ್ಧದ ಸಂದರ್ಭದಲ್ಲಿ ಕಾಳಿ ನದಿಯ ಉದ್ದಕ್ಕೂ ನೇಪಾಳದ ಪಶ್ಚಿಮ ಗಡಿಯನ್ನು ನಿಗದಿಪಡಿಸಲಾಗಿತ್ತು. ಈ ಒಂದು ವಾಕ್ಯವೇ ವ್ಯಾಜ್ಯಕ್ಕೆ ಕಾರಣವಾಗಿದೆ. ಆದರೆ ಕಾಳಿ ನದಿ ನಿಖರವಾಗಿ ಎಲ್ಲಿಂದ ಆರಂಭವಾಗುತ್ತದೆ ಎನ್ನುವ ಪ್ರಶ್ನೆ ಏಳುತ್ತದೆ.
ನೇಪಾಳ ತನ್ನ ವಾದವನ್ನು ಸ್ಪಷ್ಟವಾಗಿ ಮುಂದಿಟ್ಟಿದೆ. ಕಾಳಿ ನದಿಯು ಲಿಪುಖೋಲಾ (ಲಿಪುಲೇಖ್‌ಗೆ ಸಮೀಪ) ಬಳಿ ಭಾರತ ಗುರುತಿಸಿದ ಬಿಂದುವಿಗಿಂತ ವಾಯುವ್ಯದಲ್ಲಿರುವ ಲಿಂಪಿಯಾಧುರದಲ್ಲಿ ಹುಟ್ಟುತ್ತದೆ ಎಂದು ನೇಪಾಳ ವಾದಿಸುತ್ತಿದೆ. 19ನೇ ಶತಮಾನದ ಐತಿಹಾಸಿಕ ನಕ್ಷೆಯಲ್ಲಿ ಕಾಳಿ ನದಿ ಲಿಂಪಿಯಾಧುರದಲ್ಲಿ ಹುಟ್ಟುತ್ತದೆ ಎಂದು ಉಲ್ಲೇಖವಿದೆ ಮತ್ತು ನಂತರ ಅದರ ಗಡಿಯನ್ನು ಪೂರ್ವದ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ನೇಪಾಳದ ಇತಿಹಾಸ ತಜ್ಞರು ವಾದಿಸುತ್ತಾರೆ. ನೇಪಾಳದ ವಾದವನ್ನು ಒಪ್ಪಿಕೊಂಡಲ್ಲಿ ಲಿಂಪಿಯಾಧುರ, ಕಾಲಾಪಾನಿ ಮತ್ತು ಲಿಪುಲೇಖ್ ನೇಪಾಳದ ಪ್ರದೇಶಕ್ಕೆ ಬರುತ್ತವೆ.
ಭಾರತ ವಿಭಿನ್ನ ಅಭಿಪ್ರಾಯ ಹೊಂದಿದೆ. ಅದು ನೇಪಾಳದ ವಾದವನ್ನು ತಿರಸ್ಕರಿಸಿದೆ. ಭಾರತದ ಪ್ರಕಾರ, ಐತಿಹಾಸಿಕ ಬಳಕೆ ಮತ್ತು ಆಡಳಿತಾತ್ಮಕ ನಿಯಂತ್ರಣದ ಆಧಾರದ ಮೇಲೆ ನದಿಯ ಉಗಮವನ್ನು ಲಿಪುಖೋಲಾ ಬಳಿ ಗುರುತಿಸಲಾಗಿದೆ. ಹೀಗಾಗಿ ಲಿಪುಲೇಖ್ ಪಾಸ್ ಪ್ರದೇಶ ಭಾರತದ ನಿಯಂತ್ರಣಕ್ಕೆ ಬರುತ್ತದೆ. ಇದು ಕೇವಲ ನಕ್ಷೆ ಕುರಿತ ಭಿನ್ನಾಭಿಪ್ರಾಯವಲ್ಲ. ಭಾರತ, ನೇಪಾಳ ಮತ್ತು ಚೀನಾ ಸಂಧಿಸುವ ಸಂಗಮ ಪ್ರದೇಶದ ನಿಯಂತ್ರಣವನ್ನೇ ಇದು ಬದಲಾಯಿಸಬಲ್ಲದು.
ನೇಪಾಳದ ವಿದೇಶಾಂಗ ಸಚಿವಾಲಯವು ಲಿಂಪಿಯಾಧುರ, ಲಿಪುಲೇಖ್ ಮತ್ತು ಕಾಲಾಪಾನಿ ನೇಪಾಳದ ಅವಿಭಾಜ್ಯ ಅಂಗವೆಂದು ಪುನರುಚ್ಚರಿಸಿದೆ. ಈ ಹಾದಿಯ ಮೂಲಕ ನಡೆಯುವ ಮಾನಸ ಸರೋವರ ಯಾತ್ರೆ ತನ್ನ ವ್ಯಾಪ್ತಿಗೆ ಒಳಪಡುತ್ತದೆ ಎಂದು ಭಾರತ ಮತ್ತು ಚೀನಾಗೆ ತಿಳಿಸಿದೆ. ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ವ್ಯಾಪಾರ ಅಥವಾ ತೀರ್ಥಯಾತ್ರೆ ನಡೆಸದಂತೆ ನೇಪಾಳ ಭಾರತವನ್ನು ಪದೇಪದೇ ಒತ್ತಾಯಿಸುತ್ತಿದೆ. ಭಾರತ ಮತ್ತು ಚೀನಾ ಈ ಹಾದಿಯಾಗಿ ಯಾತ್ರೆ ಯೋಜಿಸಿದರೆ, ಆ ಪ್ರದೇಶ ಶಾಶ್ವತವಾಗಿ ನೇಪಾಳದ ವ್ಯಾಪ್ತಿಯಿಂದ ಹೊರಗಿದೆ ಎನ್ನುವ ಭಾವನೆ ಮೂಡಬಹುದು. ಇದರಿಂದ ತನ್ನ ವಾದ ದುರ್ಬಲಗೊಳ್ಳುತ್ತದೆ ಎಂದು ನೇಪಾಳ ಹೇಳಿದೆ. ಯಾತ್ರೆಗೆ ಮೊದಲು ತನ್ನ ಜೊತೆಗೆ ಸಮಾಲೋಚನೆ ನಡೆಸಿಲ್ಲ ಎನ್ನುವುದರತ್ತವೂ ನೇಪಾಳ ಗಮನ ಸೆಳೆದಿದೆ.
2020ರಲ್ಲಿ ನೇಪಾಳವು ತನ್ನ ಸಂವಿಧಾನಾತ್ಮಕ ನಕ್ಷೆಯಲ್ಲಿ ಲಿಂಪಿಯಾಧುರ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ತನ್ನ ವ್ಯಾಪ್ತಿಗೆ ಸೇರಿಸಿದ ನಂತರ, ಆ ಕುರಿತ ಯಾವುದೇ ಮೌನ ರಾಜತಾಂತ್ರಿಕವಾಗಿ ದುಬಾರಿಯಾಗಬಹುದು. ನೇಪಾಳದ ನಿಲುವನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ನೇಪಾಳ ಏಕಪಕ್ಷೀಯ ವಾದ ಮುಂದಿಡುತ್ತಿದೆ ಎಂದು ಹೊಸದಿಲ್ಲಿ ಹೇಳಿದೆ. 1954ರಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಲಿಪುಲೇಖ್ ಪಾಸ್ ಬಳಸಲಾಗುತ್ತಿದೆ. ಭಾರತೀಯ ಯಾತ್ರಿಕರು ಈ ಕಾರಿಡಾರ್ ಮೂಲಕ ದಶಕಗಳಿಂದ ಪ್ರಯಾಣಿಸುತ್ತಿದ್ದಾರೆ ಎಂದು ಭಾರತ ಹೇಳಿದೆ. “ನೇಪಾಳದ ಜೊತೆಗಿನ ಗಡಿ ಸಮಸ್ಯೆಗಳನ್ನು ದ್ವಿಪಕ್ಷೀಯ ಸಂವಾದದ ಮೂಲಕ ಪರಿಹರಿಸಬೇಕು. ಐತಿಹಾಸಿಕ ಒಪ್ಪಂದಗಳ ಪರಿಷ್ಕೃತ ವ್ಯಾಖ್ಯಾನಗಳ ಆಧಾರದ ಮೇಲೆ ಅಲ್ಲ” ಎಂದು ಭಾರತ ಹೇಳಿದೆ.
ಲಿಪುಲೇಖ್ ವಿವಾದ ಕೇವಲ ದ್ವಿಪಕ್ಷೀಯ ಸಮಸ್ಯೆಯಲ್ಲ. ಇದು ಭಾರತ, ನೇಪಾಳ ಮತ್ತು ಚೀನಾದ ಸಂಗಮ ಪ್ರದೇಶದಲ್ಲಿ ಬರುತ್ತದೆ. ಭಾರತದ ಮಟ್ಟಿಗೆ ಈ ಪ್ರದೇಶ ಟಿಬೆಟ್‌ಗೆ ಕಾರ್ಯತಂತ್ರದ ಪ್ರವೇಶ ಬಿಂದು ಹಾಗೂ ಸ್ಥಾಪಿತ ತೀರ್ಥಯಾತ್ರೆಯ ಹಾದಿಯಾಗಿದೆ. ನೇಪಾಳಕ್ಕೆ ಇದು ಸುಗೌಲಿ ಒಪ್ಪಂದದ ಸಾರ್ವಭೌಮತ್ವದ ಪ್ರಶ್ನೆಯಾಗಿದೆ. ಚೀನಾಗೆ ಭಾರತದೊಂದಿಗೆ ಮಾರ್ಗಗಳು ಮತ್ತು ಪ್ರವೇಶದ ಕುರಿತು ಸಮನ್ವಯವು ಈಗಾಗಲೇ ಸೂಕ್ಷ್ಮವಾಗಿರುವ ಗಡಿ ಭಾಗಕ್ಕೆ ಮತ್ತೊಂದು ಸಮಸ್ಯೆಯನ್ನು ಸೇರಿಸುತ್ತದೆ.
ಹೀಗಾಗಿ ತೀರ್ಥಯಾತ್ರೆಯೂ ರಾಜಕೀಯದ ಭಾಗವಾಗುತ್ತಿದೆ. ಕಾಳಿ ನದಿ ಎಲ್ಲಿಂದ ಪ್ರಾರಂಭವಾಗುತ್ತದೆ ಎನ್ನುವ ಕುರಿತು ಭಾರತ ಮತ್ತು ನೇಪಾಳದ ಭಿನ್ನಾಭಿಪ್ರಾಯ ಬಗೆಹರಿಯುವವರೆಗೂ ಈ ಪ್ರದೇಶದ ಪ್ರತಿಯೊಂದು ಚಟುವಟಿಕೆಯೂ ಕಿಡಿಯಾಗಿ ಬದಲಾಗಬಹುದು. ಬಗೆಹರಿಯದ ಗಡಿ ವಿವಾದದ ಭಾರವನ್ನು ಇದು ಹೊತ್ತುಕೊಂಡಿದೆ. ಲಿಪುಲೇಖ್ ಪದೇಪದೇ ಚರ್ಚೆಗೆ ಬರುತ್ತದೆ. ಹೊಸ ಸಂಘರ್ಷವಾಗಿ ಅಲ್ಲದಿದ್ದರೂ, ಹಳೆಯ ಸಂಘರ್ಷದ ಕಿಡಿಯಾಗಿ ಮತ್ತೆ ಹೊತ್ತಿಕೊಳ್ಳಬಹುದು.
ಮಾಹಿತಿ ಕೃಪೆ: India Today