ನಿಮ್ಮ CEO ಹೆಸರಲ್ಲಿ ಬರುತ್ತದೆ ವಾಟ್ಸಾಪ್ ಸಂದೇಶ, ತಕ್ಷಣವೇ ಹಣ ರವಾನಿಸುವಂತೆ ಬೇಡಿಕೆ; ಸೈಬರ್ ವಂಚನೆಯಲ್ಲಿ ಹೊಸತು ಈ 'ಬಾಸ್ ಸ್ಕ್ಯಾಮ್' — ಇದು ಹೇಗೆ ನಡೆಯುತ್ತದೆ?
ಸಾಂದರ್ಭಿಕ ಚಿತ್ರ | Photo Credit : magnific.com
ಅತ್ಯಂತ ತುರ್ತು ಎನ್ನಿಸುವ ನಿಯಂತ್ರಕ ನೋಟಿಸ್, ಮಾಲ್‌ವೇರ್ ತುಂಬಿದ ಜಿಪ್ ಫೈಲ್ ಮತ್ತು ಕಂಪೆನಿಯ CEO ಅವರ ಪ್ರೊಫೈಲ್ ಚಿತ್ರವನ್ನು ಹೊಂದಿರುವ ವಾಟ್ಸಾಪ್ ಸಂದೇಶ — ಇವು ಇತ್ತೀಚಿನ ಅತ್ಯಾಧುನಿಕ ಸೈಬರ್ ವಂಚನೆಯ ಹೊಸ ಅಸ್ತ್ರಗಳಾಗಿವೆ. ಇವುಗಳ ಮೂಲಕ ಈಗಾಗಲೇ ಕಂಪೆನಿಗಳು ಮತ್ತು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ದೋಚಲಾಗಿದೆ. 'ಬಾಸ್ ಸ್ಕ್ಯಾಮ್' (Boss Scam) ಎಂದು ಕರೆಯಲಾಗುವ ಈ ವಂಚನೆಯ ಕುರಿತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಎಚ್ಚರಿಕೆ ಪ್ರಕಟಣೆಯನ್ನು ಹೊರಡಿಸಿದೆ. ನಕಲಿ ಅಥವಾ ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ವಂಚಕರ ಜಾಲವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಈ ವಂಚನೆಗೆ ಬಲಿಯಾದವರಲ್ಲಿ ಅಹಮದಾಬಾದ್ ನ ರಿಯಲ್ ಎಸ್ಟೇಟ್ ಉದ್ಯಮಿ ಪ್ರವೀಣ್ ಕೂಡ ಒಬ್ಬರು. ಜೂನ್ 23ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಅವರಿಗೆ ಅಪರಿಚಿತ ಸಂಖ್ಯೆಯೊಂದರಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು.
"ಇದು ಭಾರತೀಯ ರಿಸರ್ವ್ ಬ್ಯಾಂಕ್ ಕಡೆಯಿಂದ ಬಂದಿರುವ ಪ್ರಕಟಣೆ" ಎಂದು ಆ ಸಂದೇಶದಲ್ಲಿ ತಿಳಿಸಲಾಗಿತ್ತು. "ನಿಮ್ಮ ಕಂಪೆನಿಯ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಅಪಾಯ ನಿಯಂತ್ರಣ ಕ್ರಮಗಳು ಮತ್ತು ಅಸಹಜ ಹಣಕಾಸು ವಹಿವಾಟುಗಳ ಕುರಿತು ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ, ನಿಮ್ಮ ಖಾತೆಯನ್ನು ನಿರ್ಬಂಧಿಸಲು ಅಥವಾ ಅಮಾನತುಗೊಳಿಸಲು ಕ್ರಮ ಕೈಗೊಳ್ಳಬಹುದು. ನಿಮ್ಮ ಹಣಕಾಸು ವಿಭಾಗವು ತಕ್ಷಣವೇ ಸಂಬಂಧಿತ ವಿವರಗಳನ್ನು ಪರಿಶೀಲಿಸಬೇಕು ಮತ್ತು ಅಗತ್ಯ ಸಹಕಾರವನ್ನು ನೀಡಬೇಕು ಎಂದು ವಿನಂತಿಸಲಾಗಿದೆ.
ದಯವಿಟ್ಟು ಕೇಳಲಾದ ಮಾಹಿತಿಯನ್ನು ಮೂರು ಕೆಲಸದ ದಿನಗಳೊಳಗೆ ಒದಗಿಸಿ. ಇಲ್ಲದಿದ್ದರೆ, ನಿಮ್ಮ ಖಾತೆಯ ಬಳಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು" ಎಂದು 3.3 MB ಗಾತ್ರದ ಜಿಪ್ ಫೈಲ್ ಹೊಂದಿದ್ದ ಆ ಸಂದೇಶದಲ್ಲಿ ಬರೆಯಲಾಗಿತ್ತು.
ಪ್ರವೀಣ್ ಅವರು ತಮಗೆ ಬಂದಿದ್ದ ಆ ಸಂದೇಶವನ್ನು ತಮ್ಮ ಅಕೌಂಟೆಂಟ್ ಪ್ರೀತೀಶ್ ಅವರಿಗೆ ರವಾನಿಸಿದ್ದರು. ಅಲ್ಲಿಂದ ಮುಂದೇನಾಯ್ತು ಎಂಬುದನ್ನು ಪ್ರವೀಣ್ ಅವರು 'the print'ಗೆ ಫೋನ್ ಮೂಲಕ ಈ ರೀತಿ ವಿವರಿಸಿದ್ದಾರೆ.
"ಪ್ರೀತೀಶ್ ತಮ್ಮ ಡೆಸ್ಕ್‌ಟಾಪ್ ನಲ್ಲಿ ವಾಟ್ಸಾಪ್ ವೆಬ್ ಬಳಸುತ್ತಿದ್ದರು. ಅಲ್ಲಿ ಈ ಜಿಪ್ ಫೈಲ್ ಡೌನ್‌ಲೋಡ್ ಆಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ, ನನ್ನ ಪ್ರೊಫೈಲ್ ಚಿತ್ರವನ್ನು ಹೊಂದಿದ್ದ ಖಾತೆಯಿಂದ ಅವರಿಗೆ ವಾಟ್ಸಾಪ್ ಸಂದೇಶವೊಂದು ಬಂದಿದೆ. ಅದರಲ್ಲಿ ಕೋಲ್ಕತ್ತಾ ಮೂಲದ ಕಂಪೆನಿಯೊಂದರ ಖಾತೆಗೆ 1.5 ಕೋಟಿ ರೂ. ವರ್ಗಾಯಿಸುವಂತೆ ಮತ್ತು ವಾಪಸ್ ಫೋನ್ ಮಾಡದಂತೆ ತಿಳಿಸಲಾಗಿತ್ತು. ನಾನೇ ಸಂದೇಶ ಕಳುಹಿಸಿದ್ದೇನೆ ಎಂದು ಭಾವಿಸಿ ಪ್ರೀತೀಶ್ ಆ ಹಣವನ್ನು ವರ್ಗಾಯಿಸಿದ್ದಾರೆ" ಎಂದು ಪ್ರವೀಣ್ ಹೇಳಿದ್ದಾರೆ.
ಇದೇ ರೀತಿಯ CEO ರೂಪದ ವಂಚನೆಯ ಬಗ್ಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) 2026ರ ಜೂನ್ 22ರಂದು ಹೊರಡಿಸಿದ ಎಚ್ಚರಿಕೆ ಪ್ರಕಟಣೆಯಲ್ಲಿ ಎಚ್ಚರಿಸಿದೆ. ಇದರಲ್ಲಿ ಸೈಬರ್ ಅಪರಾಧಿಗಳು ಇಮೇಲ್ ಅಥವಾ ವಾಟ್ಸಾಪ್ ಮೂಲಕ ದುರುದ್ದೇಶಪೂರಿತ ಫೈಲ್‌ಗಳನ್ನು ಕಳುಹಿಸಿ, ತುರ್ತು ನಿಯಂತ್ರಕ ನಿಯಮಗಳ ಪಾಲನೆಗೆ ಒತ್ತಾಯಿಸುವ ಮೂಲಕ ಉನ್ನತ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ.
"ಈ ಮಾಲ್‌ವೇರ್ ಒಮ್ಮೆ ಕಾರ್ಯರೂಪಕ್ಕೆ ಬಂದ ತಕ್ಷಣ, ಅದು ಅಧಿಕಾರಿಯ ವಿಂಡೋಸ್ ಡಿವೈಸ್ ಮತ್ತು ಸಕ್ರಿಯವಾಗಿರುವ ವಾಟ್ಸಾಪ್ ವೆಬ್ ಸೆಷನ್‌ಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಇದು ವಂಚಕರಿಗೆ ಅವರ ಕೈಕೆಳಗಿನ ಉದ್ಯೋಗಿಗಳಿಗೆ ಸಂದೇಶ ಕಳುಹಿಸಲು ಮತ್ತು ವಂಚನೆಯ ಹಣಕಾಸು ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ" ಎಂದು I4C ಎಚ್ಚರಿಸಿದೆ.
"ದಾಳಿಕೋರನು ಡಿವೈಸ್ ನ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡರೆ, ಅವನು ಅದರಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ ಅನ್ನು ಗುಟ್ಟಾಗಿ ಮಾರ್ಪಡಿಸುತ್ತಾನೆ. ವಂಚಕನ ನಿಯಂತ್ರಣದಲ್ಲಿರುವ ಫೋನ್ ಸಂಖ್ಯೆಯನ್ನು 'CEO' ಹೆಸರಿನಲ್ಲಿ ಉಳಿಸಿ, ಆ ಪರ್ಯಾಯ ಸಂಖ್ಯೆಯನ್ನು ಬಳಸಿಕೊಂಡು ಹಣವನ್ನು ವರ್ಗಾಯಿಸುವಂತೆ ಉದ್ಯೋಗಿಗಳಿಗೆ ಸೂಚನೆ ನೀಡುತ್ತಾನೆ" ಎಂದು ಅದು ತಿಳಿಸಿದೆ.
ಮಾಲ್‌ವೇರ್ ಡೌನ್‌ಲೋಡ್ ಆದ ನಂತರ ವಂಚಕರು ವಾಟ್ಸಾಪ್ ವೆಬ್ ಮೂಲಕ ತಮ್ಮ ಅಕೌಂಟೆಂಟ್ ನ ಕಂಪ್ಯೂಟರ್ ಗೆ ಪ್ರವೇಶ ಪಡೆದಿದ್ದಾರೆ ಎಂದು ಪ್ರವೀಣ್ ಹೇಳಿದ್ದಾರೆ.
"ವಂಚಕನು ನನ್ನ ಮತ್ತು ನನ್ನ ಅಕೌಂಟೆಂಟ್ ನಡುವಿನ ಎಲ್ಲಾ ಸಂದೇಶಗಳನ್ನು ಓದುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ನನ್ನ ಹೆಸರಿನಲ್ಲಿ ಪ್ರೀತೀಶ್‌ಗೆ ಸಂದೇಶ ಕಳುಹಿಸಿದ್ದಾನೆ. ಯಾರಿಗೂ ಫೋನ್ ಕರೆ ಮಾಡದಂತೆ ಪ್ರೀತೀಶ್‌ಗೆ ಸೂಚಿಸಿದ್ದಾನೆ. ಅವನು ಇಂಡಸ್‌ಇಂಡ್ ಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸಿದ್ದು, ತಕ್ಷಣವೇ ಹಣ ವರ್ಗಾವಣೆಯಾಗಿದೆ. ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ನನಗೆ ಸಂದೇಶ ಬಂದಾಗ, ನಾನು ತಕ್ಷಣ ಪ್ರೀತೀಶ್‌ಗೆ ಫೋನ್ ಮಾಡಿದೆ. ಆಗ ಅವರು ನಡೆದ ವಿಷಯವನ್ನು ತಿಳಿಸಿದರು" ಎಂದು 'the print' ಜತೆ ಮಾತನಾಡಿದ ಪ್ರವೀಣ್ ಹೇಳಿದ್ದಾರೆ.
ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ), 319(2) (ನಕಲಿ ಗುರುತು ಬಳಸಿ ವಂಚನೆ) ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
"ಈ ಪ್ರಕರಣದಲ್ಲಿ ಪ್ರೀತೀಶ್ ಅವರ ವಾಟ್ಸಾಪ್ ಹ್ಯಾಕ್ ಆಗಿದೆ. ಈ ಹಿಂದೆ ಎಪಿಕೆ (APK) ಫೈಲ್‌ಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಈಗ ಜಿಪ್ (ZIP) ಫೈಲ್ ಬಳಸಲಾಗುತ್ತಿದೆ" ಎಂದು ಅಧಿಕಾರಿಯೊಬ್ಬರು 'the print'ಗೆ ತಿಳಿಸಿದ್ದಾರೆ.
ಇತರ ರಾಜ್ಯಗಳ ಪೊಲೀಸರು ಸಹ ಈ 'ಬಾಸ್ ಸ್ಕ್ಯಾಮ್' ವಿರುದ್ಧ ಎಚ್ಚರಿಕೆ ಪ್ರಕಟಣೆಯನ್ನು ಹೊರಡಿಸಿದ್ದಾರೆ.
'ಬಾಸ್ ಸ್ಕ್ಯಾಮ್' ಹೇಗೆ ನಡೆಯುತ್ತದೆ?
ಮುಂಬೈ ಮತ್ತು ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಹಿರಿಯ ಸೈಬರ್ ಅಪರಾಧ ಅಧಿಕಾರಿಗಳು ಇದರ ಕಾರ್ಯವಿಧಾನವನ್ನು ವಿವರಿಸಿದ್ದಾರೆ. ಸೈಬರ್ ಅಪರಾಧಿಗಳು ಆರ್‌ಬಿಐನಂತಹ ನಿಯಂತ್ರಕ ಸಂಸ್ಥೆಗಳ ಹೆಸರಿನಲ್ಲಿ ಇಮೇಲ್ ಅಥವಾ ವಾಟ್ಸಾಪ್ ಮೂಲಕ CEO ಅಥವಾ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ.
ಈ ಸಂದೇಶಗಳಲ್ಲಿ ನಿಯಂತ್ರಕ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸುಳ್ಳು ಹೇಳಲಾಗುತ್ತದೆ ಅಥವಾ ತುರ್ತು ಭದ್ರತಾ ಸುಧಾರಣೆಗೆ ಆದೇಶಿಸಲಾಗುತ್ತದೆ. ಅತ್ಯಂತ ಕಡಿಮೆ ಅವಧಿಯೊಳಗೆ ಪ್ರತಿಕ್ರಿಯಿಸುವಂತೆ ಇದರಲ್ಲಿ ಒತ್ತಾಯಿಸಲಾಗುತ್ತದೆ.
ಅಹಮದಾಬಾದ್ ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಹೆಚ್ಚಿನ ಪ್ರಕರಣಗಳಲ್ಲಿ ಈ ಸಂದೇಶವು ಕಂಪ್ರೆಸ್ಡ್ ಜಿಪ್ ಫೈಲ್ ಅನ್ನು ಒಳಗೊಂಡಿರುತ್ತದೆ. ಇದು ಡೈನಾಮಿಕ್ ಲಿಂಕ್ ಲೈಬ್ರರಿ (DLL) ಫೈಲ್ ಜೊತೆಗೆ ದುರುದ್ದೇಶಪೂರಿತ ಎಕ್ಸಿಕ್ಯೂಟಬಲ್ (EXE) ಫೈಲ್ ಅನ್ನು ಹೊಂದಿರುತ್ತದೆ.
ಹಲವಾರು ಪ್ರಕರಣಗಳಲ್ಲಿ ಕಂಡುಬಂದಂತೆ, CEO ಆ ನಿಯಂತ್ರಕ ನಿಯಮಗಳ ಪಾಲನೆಯ ಸಂದೇಶವನ್ನು ಹಣಕಾಸು ಅಧಿಕಾರಿಗೆ ರವಾನಿಸುತ್ತಾರೆ. "ಉದ್ಯೋಗಿಯು ವಿಂಡೋಸ್ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆ ಫೈಲ್ ಅನ್ನು ಅನ್‌ಜಿಪ್ ಮಾಡಿ ರನ್ ಮಾಡಿದಾಗ, ಟ್ರೋಜನ್ ಡ್ರಾಪರ್ (Trojan Dropper) ಎಂಬ ವೈರಸ್ ಸಕ್ರಿಯಗೊಳ್ಳುತ್ತದೆ. ಈ ಮಾಲ್‌ವೇರ್ ವ್ಯವಸ್ಥೆಯಲ್ಲಿ ಶಾಶ್ವತವಾಗಿ ನೆಲೆಯೂರಿ, ಕಂಪ್ಯೂಟರ್ ಅನ್ನು ಹ್ಯಾಕ್ ಮಾಡುತ್ತದೆ ಮತ್ತು ಸಕ್ರಿಯವಾಗಿರುವ ವಾಟ್ಸಾಪ್ ವೆಬ್ ಸೆಷನ್ ಟೋಕನ್‌ಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ" ಎಂದು I4C ಎಚ್ಚರಿಕೆ ಪ್ರಕಟಣೆ ತಿಳಿಸಿದೆ.
"ಅಧಿಕಾರಿಯ ಅಸಲಿ ವಾಟ್ಸಾಪ್ ಖಾತೆಯ ಪ್ರವೇಶ ಸಿಕ್ಕ ತಕ್ಷಣ, ವಂಚಕನು ಅಕೌಂಟ್ಸ್ ಅಥವಾ ಹಣಕಾಸು ವಿಭಾಗದ ಉದ್ಯೋಗಿಗಳನ್ನು ಸಂಪರ್ಕಿಸುತ್ತಾನೆ. ನಂತರ ಅವರಿಗೆ ನಿರ್ದಿಷ್ಟ ನಕಲಿ (ಮ್ಯೂಲ್) ಬ್ಯಾಂಕ್ ಖಾತೆಗಳಿಗೆ ತಕ್ಷಣವೇ ಹಣ ಪಾವತಿಸುವಂತೆ ಸೂಚನೆ ನೀಡುತ್ತಾನೆ."
ದಿಲ್ಲಿ ಪೊಲೀಸರ ಸೈಬರ್ ಅಪರಾಧ ವಿಭಾಗದ ಅಧಿಕಾರಿಯೊಬ್ಬರು, ಇವು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ನಡೆಯುವ ದೊಡ್ಡ ಮೊತ್ತದ ವಂಚನೆಗಳಾಗಿದ್ದು, "ಇವುಗಳಲ್ಲಿ ಬಹುತೇಕ ವಂಚನೆಗಳು ಭಾರತದ ಹೊರಗಿನಿಂದ ನಡೆಯುತ್ತವೆ" ಎಂದು ಹೇಳಿದ್ದಾರೆ.
"ಜಿಪ್ ಫೈಲ್ ಮತ್ತು ವಾಟ್ಸಾಪ್ ಸಂವಹನವನ್ನು ದುರುಪಯೋಗಪಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನದ ಜ್ಞಾನದ ಅಗತ್ಯವಿರುತ್ತದೆ. ನಗದನ್ನು ಹಿಂಪಡೆಯಲು ಕೇವಲ ಮ್ಯೂಲ್ ಖಾತೆಗಳನ್ನು ಮಾತ್ರ ಭಾರತದಲ್ಲಿ ಬಳಸಲಾಗುತ್ತದೆ. ಬಾಸ್ ಸ್ಕ್ಯಾಮ್ ಈಗ ತುಂಬಾ ಮುಂದುವರಿದಿದೆ" ಎಂದು ಅವರು 'the print'ಗೆ ತಿಳಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ವಿವರಿಸಿದ ಅವರು, ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ಅಪರಾಧಿಗಳು ಸಂತ್ರಸ್ತರನ್ನು ಹೆದರಿಸುತ್ತಾರೆ, ಹೂಡಿಕೆ ವಂಚನೆಗಳಲ್ಲಿ ಸಂತ್ರಸ್ತರಿಗೆ ಆಮಿಷ ಒಡ್ಡುತ್ತಾರೆ. ಆದರೆ ಬಾಸ್ ಸ್ಕ್ಯಾಮ್‌ನಲ್ಲಿ ಇದು ಸಂಪೂರ್ಣವಾಗಿ ಬೇರೆಯವರ ಹೆಸರಿನಲ್ಲಿ (ನಕಲಿ ಗುರುತು ಬಳಸಿ) ಮಾಡುವ ವಂಚನೆಯಾಗಿದೆ ಎಂದಿದ್ದಾರೆ.
►ದಿಲ್ಲಿ-ಮುಂಬೈ ಪ್ರಕರಣ
ಇದೇ ರೀತಿಯ ಮತ್ತೊಂದು ವಂಚನೆ ಪ್ರಕರಣವನ್ನು ದಿಲ್ಲಿ ಮತ್ತು ಮುಂಬೈ ಪೊಲೀಸರು ಜಂಟಿಯಾಗಿ ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು 'the print'ಗೆ ನೀಡಿರುವ ಮಾಹಿತಿ ಪ್ರಕಾರ, ನಾಲ್ಕೈದು ಜನ ಯುವಕರು ಜಸೋಲಾ ವಿಹಾರ್‌ನಲ್ಲಿರುವ IDFC ಫಸ್ಟ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಸುಮಾರು 8 ರಿಂದ 9 ಲಕ್ಷ ರೂ. ನಗದು ಹಿಂಪಡೆಯಲು ವಿನಂತಿಸಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯಲು ಬಂದಿದ್ದ ಆ ಯುವಕರನ್ನು ನೋಡಿ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್, ತಕ್ಷಣವೇ ಅಲ್ಲಿನ ಬೀಟ್ ಕಾನ್ಸ್ಟೇಬಲ್‌ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ದಿಲ್ಲಿ ಪೊಲೀಸರು ಆ ಯುವಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಮುಂಬೈನಲ್ಲಿ ನಡೆದ 'ಬಾಸ್ ಸ್ಕ್ಯಾಮ್' ವಂಚನೆಗೂ ಇವರಿಗೂ ಇರುವ ಲಿಂಕ್ ಬಯಲಾಗಿದೆ.
"ನಿರಂತರ ತಾಂತ್ರಿಕ ವಿಶ್ಲೇಷಣೆ, ಬ್ಯಾಂಕಿಂಗ್ ವಹಿವಾಟುಗಳ ಪರಿಶೀಲನೆ, ಖಾತೆಗಳ ವಿವರಗಳ ವಿಶ್ಲೇಷಣೆ ಮತ್ತು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಕಮಿಷನ್ ಆಧಾರದ ಮೇಲೆ ಖಾತೆದಾರರನ್ನು ಬಳಸಿ ಸೈಬರ್ ವಂಚನೆಯ ಹಣವನ್ನು ವರ್ಗಾವಣೆ ಮಾಡಲು ಮತ್ತು ಹಿಂಪಡೆಯಲು ಕಾರ್ಯನಿರ್ವಹಿಸುತ್ತಿದ್ದ ದೊಡ್ಡ ಜಾಲವನ್ನು ನಮ್ಮ ತಂಡವು ಪತ್ತೆಹಚ್ಚಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈ ಪ್ರಕರಣವು ಖಾಸಗಿ ಕಂಪೆನಿಯೊಂದರ ಡೆಪ್ಯುಟಿ ಜನರಲ್ ಮ್ಯಾನೇಜರ್ (ಅಕೌಂಟ್ಸ್) ಅವರಿಗೆ ಸಂಬಂಧಿಸಿದ್ದಾಗಿದೆ. ಅವರಿಗೆ ಕಂಪೆನಿಯ ನಿರ್ದೇಶಕರ ಭಾವಚಿತ್ರವನ್ನು ಹೊಂದಿದ್ದ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶಗಳು ಬಂದಿದ್ದವು.
"ನಿರ್ದೇಶಕರ ಸೋಗು ಹಾಕಿದ್ದ ವಂಚಕನು, ತಾವು ಸಭೆಗಳಲ್ಲಿ ಬ್ಯುಸಿ ಇರುವುದರಿಂದ ಫೋನ್ ಕರೆಗಳಲ್ಲಿ ಲಭ್ಯವಿರುವುದಿಲ್ಲ ಎಂದು ಕಾರಣ ನೀಡಿ, ತಕ್ಷಣವೇ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ನನಗೆ ಸೂಚಿಸಿದ್ದರು" ಎಂದು ಸಂತ್ರಸ್ತರು ಪೊಲೀಸರಿಗೆ ತಿಳಿಸಿದ್ದಾರೆ.
ಆ ಸಂದೇಶಗಳು ನಿಜವೆಂದೇ ನಂಬಿದ ಸಂತ್ರಸ್ತರು, 2026ರ ಜೂನ್ 3 ಮತ್ತು ಜೂನ್ 15ರ ನಡುವೆ 63 ಪ್ರತ್ಯೇಕ ವಹಿವಾಟುಗಳ ಮೂಲಕ ಒಟ್ಟು 10,40,71,924 ರೂ.ಗಳನ್ನು ವಂಚಕರು ನೀಡಿದ್ದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
2026ರ ಜೂನ್ 15ರಂದು ಸಂತ್ರಸ್ತರು ನೇರವಾಗಿ ಅಸಲಿ ನಿರ್ದೇಶಕರನ್ನು ಸಂಪರ್ಕಿಸಿದಾಗ, ಅವರು ಅಂತಹ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ. ಆಗಲೇ ಈ ವಂಚನೆ ಬೆಳಕಿಗೆ ಬಂದಿದೆ.
"ಪ್ರಮುಖವಾಗಿ, ತನಿಖೆಯ ವೇಳೆ IDFC ಫಸ್ಟ್ ಬ್ಯಾಂಕ್ ನಲ್ಲಿ ಆರೋಪಿಗಳು ಹಣ ಹಿಂಪಡೆಯಲು ಬಳಸಿದ್ದ ಒಂದು ಖಾತೆಯು, ಈ ನಕಲಿ ಗುರುತಿನ ವಂಚನೆಯ ಹಣಕ್ಕೆ ನೇರವಾಗಿ ಲಿಂಕ್ ಆಗಿರುವುದು ದೃಢಪಟ್ಟಿದೆ. ಇದು ಮುಂಬೈ ವಂಚನೆಗೂ ಮತ್ತು ದಿಲ್ಲಿ ಮೂಲದ ಹಣ ಹಿಂಪಡೆಯುವ ಜಾಲಕ್ಕೂ ಇರುವ ಪ್ರಮುಖ ಕೊಂಡಿಯನ್ನು ತನಿಖಾಧಿಕಾರಿಗಳಿಗೆ ಒದಗಿಸಿದೆ" ಎಂದು ಡಿಸಿಪಿ (ಆಗ್ನೇಯ) ಹೇಮಂತ್ ತಿವಾರಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಶ್ (22), ವಂಶ್ (21), ಫೈಯಾಝ್ ಆಲಂ (22), ಅಮಿತ್ (28) ಮತ್ತು ಬಲ್ವೀರ್ ಕುಮಾರ್ (23) ಎಂಬ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಾವು ಕಮಿಷನ್ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸೈಬರ್ ವಂಚನೆಯ ಹಣ ಹಿಂಪಡೆಯುವ ಜಾಲದ ಭಾಗವಾಗಿ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿವಾರಿ 'the print'ಗೆ ತಿಳಿಸಿದ್ದಾರೆ. ವಂಚನೆಯ ಹಣವನ್ನು ಈ ಜಾಲವು ವ್ಯವಸ್ಥೆ ಮಾಡಿದ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲಾಗುತ್ತಿತ್ತು. ಆ ನಂತರ ಆ ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆದು, ಕಮಿಷನ್ ಪಡೆದುಕೊಂಡು ತಮ್ಮ ಸಹಚರರಿಗೆ ಹಸ್ತಾಂತರಿಸಲಾಗುತ್ತಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
"ಸದ್ಯ ತಲೆಮರೆಸಿಕೊಂಡಿರುವ ಈ ಜಾಲದ ಇತರ ಸದಸ್ಯರ ಒಳಗೊಳ್ಳುವಿಕೆಯನ್ನೂ ಆರೋಪಿಗಳು ಒಪ್ಪಿಕೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ. ಅವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಸೌಜನ್ಯ: theprint.in