ಜನರು ಹಲ್ಲಿಗಳಿಗೇಕೆ ಭಯಪಡುತ್ತಾರೆ?
ಸಾಂದರ್ಭಿಕ ಚಿತ್ರ | Photo Credit : magnific.com
ಹಲ್ಲಿಗಳು ಜನರಲ್ಲಿ ಪ್ಯಾನಿಕ್ ಅಟ್ಯಾಕ್, ಹೃದಯ ಬಡಿತ ಮತ್ತು ತೀವ್ರ ಆತಂಕವನ್ನು ಉಂಟುಮಾಡಬಹುದು!
ನೀವು ಹಲ್ಲಿಗಳಿಗೆ ಹೆದರುತ್ತೀರಾ? "ಅದೇನು ಮಾಡುತ್ತದೆ?" ಎಂದು ಹೇಳುವವರು ಕೂಡ ಈ ತೆವಳುವ ಸರೀಸೃಪಕ್ಕೆ ಭಯಭೀತರಾಗುತ್ತಾರೆ. ಹಲ್ಲಿ ಏನಾದರೂ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಲ್ಲಿಗಳ ಬಗ್ಗೆ ಭಯಪಡುವವರಿಗೆ ಒಂದೇ ಕೋಣೆಯಲ್ಲಿ ಅಥವಾ ಕೆಲವೊಮ್ಮೆ ಊರಿನಲ್ಲಿ ಹಲ್ಲಿ ಇದ್ದರೂ ಅಪಾಯಕಾರಿಯಾಗಿ ಅನಿಸಬಹುದು. ಹಲ್ಲಿಗಳನ್ನು ಕಂಡಾಗ ಭಯವಿಲ್ಲದವರು, ಭಯಪಡುವವರ ಆತಂಕವನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಲ್ಲಿಗಳು ಜನರಲ್ಲಿ ಪ್ಯಾನಿಕ್ ಅಟ್ಯಾಕ್, ಹೃದಯ ಬಡಿತ ಮತ್ತು ತೀವ್ರ ಆತಂಕವನ್ನು ಉಂಟುಮಾಡಬಹುದು ಎಂಬುದನ್ನು ಬಹುತೇಕರು ಅರಿತುಕೊಳ್ಳಲು ವಿಫಲರಾಗುತ್ತಾರೆ.
ಡೆಟಾಲ್ ಸ್ಪ್ರೇಗಳಿಂದ ಹಿಡಿದು ಈರುಳ್ಳಿ ಸಿಪ್ಪೆಗಳು, ಡೋರ್ ಲೈನರ್‌ಗಳು ಮತ್ತು ಬೆಳ್ಳುಳ್ಳಿಯವರೆಗೆ ಹಲ್ಲಿಗಳಿಗೆ ಹೆದರುವವರು ಅವುಗಳನ್ನು ದೂರವಿಡಲು ಎಲ್ಲವನ್ನೂ ಪ್ರಯತ್ನಿಸಿದ್ದಾರೆ. ಮನೆಯಲ್ಲಿ ಚಪ್ಪಲಿ ಹಾಕಿಕೊಂಡೇ ಓಡಾಡುತ್ತಾರೆ. ಹಾಗಿದ್ದರೂ ಕಾಲಿನಡಿಯಿಂದ ಹಲ್ಲಿ ಹಾದು ಹೋಗುತ್ತದೆ. ಹೀಗೆ ಕೆಲವರಿಗೆ ಮಾತ್ರ ಹಲ್ಲಿಗಳು ಏಕೆ ಭಯಾನಕವಾಗಿರುತ್ತವೆ ಮತ್ತು ಇನ್ನು ಕೆಲವರಿಗೆ ಏನೂ ಅನಿಸುವುದಿಲ್ಲ?
ನೋಯ್ಡಾದ ನರವಿಜ್ಞಾನ ಸಂಸ್ಥೆಯ ಮನೋವೈದ್ಯೆ ಅವರು ಹೇಳುವ ಪ್ರಕಾರ, “ಭಯವು ಒಂದು ವಸ್ತುವಿನ ಬಗ್ಗೆ ಮಾತ್ರ ಎಂಬುದು ಅಪರೂಪ ಎಂದು ನಾನು ಜನರಿಗೆ ನೆನಪಿಸುತ್ತೇನೆ. ಅದು ನಮ್ಮ ಮೆದುಳು ಅದಕ್ಕೆ ಜೋಡಿಸುವ ಅರ್ಥದ ಬಗ್ಗೆಯೂ ಇರುತ್ತದೆ. ಕೆಲವು ಮಂದಿ ಸ್ವಾಭಾವಿಕವಾಗಿ ಹಠಾತ್ ಚಲನೆಗಳು ಅಥವಾ ಅನಿರೀಕ್ಷಿತ ಪ್ರಚೋದಕಗಳಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಇತರರು ಬಾಲ್ಯದಲ್ಲಿ ಭಯಾನಕ ಅನುಭವ ಹೊಂದಿರಬಹುದು. ಅದು ಅವರ ಪ್ರತಿಕ್ರಿಯೆಯನ್ನು ರೂಪಿಸುತ್ತದೆ. ಅಸಹ್ಯವೂ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಭಯಪಡುತ್ತೇನೆ ಎಂದು ಹೇಳುವ ಬಹುತೇಕರು ವಾಸ್ತವದಲ್ಲಿ ಅಸಹ್ಯ ಭಾವನೆ ಹೊಂದಿರುತ್ತಾರೆ.”
ಅವರ ಪ್ರಕಾರ, ಭಾರತದಲ್ಲಿ ಮನೆ ಹಲ್ಲಿಗಳು ದೈನಂದಿನ ಜೀವನದ ಸಾಮಾನ್ಯ ಭಾಗವಾಗಿವೆ. ಹೀಗಾಗಿ, ಒಂದು ಮಗು ಹಲ್ಲಿ ಕಾಣಿಸಿದಾಗಲೆಲ್ಲ ಪೋಷಕರು ಕಿರುಚುವುದನ್ನು ಅಥವಾ ಕೋಣೆಯಿಂದ ಹೊರಗೆ ಧಾವಿಸುವುದನ್ನು ನೋಡುತ್ತಾ ಬೆಳೆದರೆ, ತನಗರಿವಿಲ್ಲದೆ ಅದೇ ರೀತಿಯಾಗಿ ಪ್ರತಿಕ್ರಿಯಿಸಲು ಕಲಿಯಬಹುದು. ಇದನ್ನು ಸರಳವಾಗಿ ಭಯವೆಂದು ವಿವರಿಸಲಾಗದು. ವಾಸ್ತವದಲ್ಲಿ, ಇದು ಜೀವಶಾಸ್ತ್ರ, ಅನುಭವ ಮತ್ತು ಸಾಮಾಜಿಕ ಕಲಿಕೆಯ ನಡುವಿನ ಸಂಕೀರ್ಣ ಭಾವನೆಯಾಗಿರುತ್ತದೆ.
ಕೆಲವರು ಹಲ್ಲಿ ನೋಡಿದಾಗ ಆತಂಕಪಡದೇ ಇದ್ದರೂ ಅಸ್ವಸ್ಥತೆ ಅನುಭವಿಸುತ್ತಾರೆ. ಇಂತಹ ಅನುಭವಕ್ಕೆ ಕಾರಣವೇನು? ಹೊಸ್ಮಾಟ್ ಆಸ್ಪತ್ರೆಗಳ ಕ್ಲಿನಿಕಲ್ ಮನಶ್ಯಾಸ್ತ್ರಜ್ಞ ಹೇಳುವಂತೆ, “ಹಲ್ಲಿಯೇ ಭಯ ಹುಟ್ಟಿಸುವುದಿಲ್ಲ. ಆದರೆ ಸರೀಸೃಪಕ್ಕೆ ಸಂಬಂಧಿಸಿದ ಗುಣಲಕ್ಷಣಗಳು ಭಯ ಸೃಷ್ಟಿಸುತ್ತವೆ. ಹಲ್ಲಿಗಳು ಸಾಮಾನ್ಯವಾಗಿ ಮೆದುಳಿನ ಬೆದರಿಕೆ-ಎಚ್ಚರಿಕೆ ವ್ಯವಸ್ಥೆಯನ್ನು ಪ್ರಚೋದಿಸುವ ತ್ವರಿತ, ಯಾದೃಚ್ಛಿಕ ಚಲನೆಗಳನ್ನು ಮಾಡುತ್ತವೆ. ಕೆಲ ಮಂದಿ ಅವುಗಳ ನೋಟ, ಚರ್ಮದ ರಚನೆ, ದೇಹದ ಆಕಾರ ಮತ್ತು ತ್ವರಿತವಾದ ಚಲನೆಗಳನ್ನು ಅಸಹ್ಯಕರವೆಂದು ಪರಿಗಣಿಸುತ್ತಾರೆ. ಮೆದುಳು ಸಂಭಾವ್ಯ ಅಪಾಯವನ್ನು ಗ್ರಹಿಸಿದರೆ, ದೇಹದಲ್ಲಿ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು. ಹೀಗಾಗಿ ತ್ವರಿತ ಹೃದಯ ಬಡಿತ, ಬೆವರುವುದು, ನಡುಗುವಿಕೆ ಅಥವಾ ಓಡಿ ಹೋಗುವ ಪ್ರಚೋದನೆಯಂತಹ ಲಕ್ಷಣಗಳಿಗೆ ಕಾರಣವಾಗಬಹುದು!”
ಮಾಹಿತಿ ಕೃಪೆ: ಇಂಡಿಯಾ ಟುಡೆ