ಅನುಭವಕ್ಕೆ ಮನ್ನಣೆ; ಯುವ ಆನೆಗಳಿದ್ದರೂ ಅಜ್ಜಿ ಆನೆಯೇ ಹಿಂಡಿನ ನಾಯಕಿ ಏಕೆ?
Photo Credit: magnific
ಸಾಮಾನ್ಯವಾಗಿ ಮಾನವ ಸಮಾಜಗಳಲ್ಲಿ ಯುವಜನರಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಆದರೆ ಆನೆಗಳ ಕುಟುಂಬಗಳು ವಯಸ್ಸನ್ನು ನಂಬುತ್ತವೆ. ಹೀಗಾಗಿ ಹಿಂಡಿನ ಹಿರಿಯ ಸದಸ್ಯ ಸಾಮಾನ್ಯವಾಗಿ ಹಿರಿಯ ಹೆಣ್ಣಾನೆಯಾಗಿರುತ್ತದೆ.
ಕಾಡಿನಲ್ಲಿ ಆನೆಗಳು ಬಹಳ ಆಪ್ತ ಸಂಬಂಧವಿರುವ ಕುಟುಂಬಗಳಲ್ಲಿ ವಾಸಿಸುತ್ತವೆ. ಕುತೂಹಲಕಾರಿ ವಿಚಾರವೆಂದರೆ, ಹಿರಿಯ ಹೆಣ್ಣಾನೆಗಳು ಅಥವಾ ಅಜ್ಜಿಯರು ಆನೆಗಳ ಹಿಂಡನ್ನು ಮುನ್ನಡೆಸುತ್ತಾರೆ! ಅದಕ್ಕೆ ಕಾರಣವೂ ಇಲ್ಲದಿಲ್ಲ. ಈ ಬುದ್ಧಿವಂತ ಹೆಣ್ಣಾನೆಗಳು ಕೇವಲ ಆನೆಗಳಷ್ಟೇ ಅಲ್ಲ. ಬದಲಾಗಿ, ದಶಕಗಳ ಅನುಭವ, ಸ್ಮರಣೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನು ಬಳಸಿಕೊಂಡು ತಮ್ಮ ಹಿಂಡುಗಳನ್ನು ಮುನ್ನಡೆಸುತ್ತವೆ.
ಸಾಮಾನ್ಯವಾಗಿ ಮಾನವ ಸಮಾಜಗಳಲ್ಲಿ ಯುವಜನರಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಆದರೆ ಆನೆಗಳ ಕುಟುಂಬಗಳು ವಯಸ್ಸನ್ನು ನಂಬುತ್ತವೆ. ಹೀಗಾಗಿ ಹಿಂಡಿನ ಹಿರಿಯ ಸದಸ್ಯ ಸಾಮಾನ್ಯವಾಗಿ ಹಿರಿಯ ಹೆಣ್ಣಾನೆಯಾಗಿರುತ್ತದೆ. ಬರಗಾಲದ ಸಮಯದಲ್ಲಿ ನೀರಿನ ಹೊಂಡಗಳು ಎಲ್ಲಿವೆ, ಅಪಾಯವನ್ನು ಹೇಗೆ ತಪ್ಪಿಸಬೇಕು ಮತ್ತು ಕಠಿಣ ಸಮಯದಲ್ಲಿ ಎಲ್ಲರನ್ನೂ ಸುರಕ್ಷಿತವಾಗಿ ಹೇಗೆ ಒಟ್ಟಿಗೆ ಕರೆದೊಯ್ಯಬೇಕು ಎಂಬುದನ್ನು ಅಜ್ಜಿ ಆನೆ ನೆನಪಿಸಿಕೊಳ್ಳುತ್ತದೆ. ಅಜ್ಜಿ ಆನೆಯ ಪ್ರವೃತ್ತಿ ಮತ್ತು ದೀರ್ಘಕಾಲದ ಸ್ಮರಣೆಯೇ ಹಿಂಡಿನ ಉಳಿವಿಗೆ ಮುಖ್ಯವಾಗುತ್ತದೆ.
ಕೀನ್ಯಾದ ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಈ ಹಿರಿಯ ನಾಯಕಿಯರು ನಂಬಲಾಗದಷ್ಟು ಬುದ್ಧಿವಂತ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿದಿದ್ದಾರೆ. ಶುಷ್ಕ ಋತುಗಳಲ್ಲಿ ಅವರು ತಮ್ಮ ಕುಟುಂಬಗಳನ್ನು ಗುಪ್ತ ನೀರಿನ ಮೂಲಗಳಿಗೆ ದೀರ್ಘ ಪ್ರಯಾಣದಲ್ಲಿ ಕರೆದೊಯ್ಯುತ್ತಾರೆ. ಪ್ರಶಸ್ತಿ ವಿಜೇತ PBS (ಅಮೆರಿಕದ ಪ್ರಸಿದ್ಧ ಸಾರ್ವಜನಿಕ ದೂರದರ್ಶನ ಜಾಲ) ಸರಣಿಯಾದ ‘ನೇಚರ್’ (ಸಾಕ್ಷ್ಯಚಿತ್ರ) ಪ್ರಕಾರ, ಹಿರಿಯ ಹೆಣ್ಣಾನೆಗಳು ಹಲವು ವರ್ಷಗಳಿಂದ ಭೇಟಿ ನೀಡದ ಸ್ಥಳಗಳನ್ನೂ ಹಿಂದೆ ನೋಡಿದ್ದರೆ ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತವೆ. ಕಿರಿಯ ಆನೆಗಳಿಗೆ ಇನ್ನೂ ಅಂತಹ ಜ್ಞಾನ ಇರುವುದಿಲ್ಲ.
ಹಿರಿಯ ಹೆಣ್ಣಾನೆಗಳು ಹಿಂಡನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ. ಯುನೈಟೆಡ್ ಕಿಂಗ್ಡಮ್ ನ ವಿಶ್ವಪ್ರಸಿದ್ಧ ವಿಜ್ಞಾನ ಸಂಸ್ಥೆಯಾದ ರಾಯಲ್ ಸೊಸೈಟಿ ಪ್ರಕಟಿಸುವ ಪ್ರತಿಷ್ಠಿತ ಜಾಗತಿಕ ವಿಜ್ಞಾನ ನಿಯತಕಾಲಿಕೆ ‘ಪ್ರೊಸೀಡಿಂಗ್ಸ್ ಆಫ್ ದ ರಾಯಲ್ ಸೊಸೈಟಿ ಬಿ’ಯಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಸಂಶೋಧಕರು ಸಿಂಹಗಳ ಘರ್ಜನೆಯ ಧ್ವನಿಮುದ್ರಣಗಳನ್ನು ಆನೆಗಳಿಗೆ ಕೇಳಿಸಿದ್ದರು. ಹಿರಿಯ ಹೆಣ್ಣಾನೆಗಳ ನೇತೃತ್ವದ ಹಿಂಡುಗಳು ಕಿರಿಯ ಹೆಣ್ಣಾನೆಗಳ ನೇತೃತ್ವದ ಹಿಂಡುಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಮತ್ತು ಸಮನ್ವಯದಿಂದ ಪ್ರತಿಕ್ರಿಯಿಸಿದ್ದವು. ಘರ್ಜನೆಯು ನಿಜವಾದ ಬೆದರಿಕೆಯನ್ನು ಸೂಚಿಸುತ್ತದೆಯೇ ಎಂಬುದನ್ನು ಅವು ಗುರುತಿಸಬಲ್ಲವು. ಇಂತಹ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಅನುಭವದೊಂದಿಗೆ ಬೆಳೆಯುತ್ತದೆ.
ಮಾತೃಪ್ರಧಾನ ಹಿಂಡಿನಲ್ಲಿ ಅಜ್ಜಿ ಆನೆ ನಾಯಕತ್ವ ವಹಿಸುವುದಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತದೆ. ಹಿರಿಯ ಹೆಣ್ಣಾನೆ ಗುಂಪಿಗೆ ಭಾವನಾತ್ಮಕ ಸ್ಥಿರತೆಯನ್ನು ತರುತ್ತದೆ. ಆಕೆ ಸುತ್ತಲೂ ಇರುವಾಗ ಕಿರಿಯ ಆನೆಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಸಂಘರ್ಷ ಎದುರಾದಾಗ ಹಿರಿಯ ಹೆಣ್ಣಾನೆ ಮಧ್ಯಪ್ರವೇಶಿಸಿ, ತೊಂದರೆಗೆ ಸಿಲುಕಿದ ಆನೆಗಳಿಗೆ ಸಾಂತ್ವನ ನೀಡುತ್ತದೆ. ಎಲ್ಲರನ್ನೂ ಒಟ್ಟಿಗೆ ಕರೆತರುತ್ತದೆ.
ವಿಶೇಷವಾಗಿ ಬೇಟೆಯ ಸಂದರ್ಭ ಇಡೀ ಗುಂಪನ್ನು ಅಸ್ಥಿರಗೊಳಿಸಬಹುದು. ಆನೆಗಳು ದಿಗ್ಭ್ರಮೆಗೊಳ್ಳಬಹುದು ಅಥವಾ ಖಿನ್ನತೆಗೆ ಒಳಗಾಗಬಹುದು. ಬೇಟೆಗಾರರು ಸಾಮಾನ್ಯವಾಗಿ ದೊಡ್ಡ ದಂತಗಳಿರುವ ಆನೆಗಳನ್ನು ಗುರಿಯಾಗಿಸುತ್ತಾರೆ. ಅವುಗಳಲ್ಲಿ ಮಾತೃಪ್ರಧಾನಿ ಆನೆಗಳೂ ಇರುತ್ತವೆ. ಆದರೆ ಅವುಗಳನ್ನು ಕೊಲ್ಲುವುದರಿಂದ ಕೇವಲ ಒಂದು ಪ್ರಾಣಿಗೆ ಹಾನಿಯಾಗುವುದಿಲ್ಲ; ಇಡೀ ಹಿಂಡಿನ ಮೇಲೆ ಪರಿಣಾಮ ಬೀರುತ್ತದೆ. ಅಜ್ಜಿ ಆನೆಯನ್ನು ಕಳೆದುಕೊಂಡಾಗ ಅದರ ಬುದ್ಧಿವಂತಿಕೆ, ನೆನಪು ಮತ್ತು ಸಾಮಾಜಿಕ ಸಂಬಂಧಗಳೂ ಕಳೆದುಹೋಗುತ್ತವೆ.
ಅದಕ್ಕಾಗಿಯೇ ಅನೇಕ ಸಂರಕ್ಷಣಾವಾದಿಗಳು ಮಾತೃಪ್ರಧಾನ ಆನೆಗಳನ್ನು ರಕ್ಷಿಸುವುದು ಆನೆಗಳ ಪ್ರಭೇದವನ್ನು ರಕ್ಷಿಸುವಷ್ಟೇ ಮುಖ್ಯ ಎಂದು ವಾದಿಸುತ್ತಾರೆ. ಈ ಅಜ್ಜಿಯರು ಕೇವಲ ನಾಯಕಿಯರಲ್ಲ. ಅವರು ನೆನಪುಗಳ ಸಂರಕ್ಷಕರು, ಪಾಲಕರು ಮತ್ತು ಭಾವನಾತ್ಮಕ ಆಧಾರಸ್ತಂಭಗಳು.