Photo Credit : PTI 

ಇಸ್ರೋ GSLV-F17 ನೌಕೆಯ ಮೂಲಕ EOS-05 ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸುವುದರೊಂದಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರವು ದೊಡ್ಡ ಗೆಲುವು ಸಾಧಿಸಿದೆ. ‘Naughty Boy’ ಎಂದೇ ಕರೆಯಲ್ಪಡುವ ಈ GSLV ನೌಕೆಯು ಶುಕ್ರವಾರ ನಡೆಸಿದ ಉಡಾವಣೆಯು ಹಲವು ಹೊಸ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ.

EOS-05 ಉಪಗ್ರಹವು GSLV ನೌಕೆ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು ತನ್ನ ನಿಗದಿತ ಕಕ್ಷೆಯನ್ನು ತಲುಪಿದ ಬಳಿಕ, ಭೂಸ್ಥಿರ ಕಕ್ಷೆಯಿಂದ ಕಾರ್ಯನಿರ್ವಹಿಸುವ ಭಾರತದ ಮೊದಲ ಪ್ರತ್ಯೇಕ ಇಮೇಜಿಂಗ್ ಉಪಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ.

ಈ ಉಡಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಇಸ್ರೋದ ಮತ್ತೊಂದು ಅತ್ಯುತ್ತಮ ಸಾಧನೆ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ’ ಎಂದು ಹೇಳಿದ್ದಾರೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ‘ಶ್ರೇಷ್ಠತೆ, ನಾವೀನ್ಯತೆ ಮತ್ತು ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ’ ಎಂದು ಪ್ರಧಾನಿ ಹೇಳಿದ್ದಾರೆ.

ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಇದನ್ನು ‘ಐತಿಹಾಸಿಕ ಸಾಧನೆ’ ಎಂದಿದ್ದಾರೆ.

ಈ ಬಾಹ್ಯಾಕಾಶ ಯೋಜನೆ ಇಷ್ಟೊಂದು ಮಹತ್ವದ್ದು ಯಾಕೆ?

1. ಅತಿ ಎತ್ತರದ ಕಕ್ಷೆಗೆ ಭಾರತದ ಮೊದಲ ಅರ್ಥ್ ಇಮೇಜಿಂಗ್ ಉಪಗ್ರಹ

ಹೆಚ್ಚಿನ ಭೂ-ಪರಿಶೀಲನಾ (ಅರ್ಥ್ ಅಬ್ಸರ್ವೇಶನ್) ಉಪಗ್ರಹಗಳು ಭೂಮಿಯಿಂದ ಕೆಲವೇ ನೂರು ಕಿಲೋಮೀಟರ್ ಎತ್ತರದ ಕೆಳಮಟ್ಟದ ಕಕ್ಷೆಯಲ್ಲಿ (LEO) ಕಾರ್ಯನಿರ್ವಹಿಸುತ್ತವೆ. ಆದರೆ EOS-05 ಉಪಗ್ರಹವೇ ಬೇರೆ. ಶುಕ್ರವಾರದ ಉಡಾವಣೆಯ ನಂತರ ಈ ಉಪಗ್ರಹವನ್ನು ತಾತ್ಕಾಲಿಕ ಕಕ್ಷೆಗೆ ಸೇರಿಸಲಾಗಿದ್ದು, ಇದು ತನ್ನದೇ ಆದ ಇಂಧನ ವ್ಯವಸ್ಥೆಯನ್ನು ಬಳಸಿ ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದ ಕಕ್ಷೆಯನ್ನು ತಲುಪಲಿದೆ.

ಅಷ್ಟು ಎತ್ತರದಲ್ಲಿ ಉಪಗ್ರಹದ ವೇಗ ಮತ್ತು ಭೂಮಿಯ ಭ್ರಮಣೆಯ ವೇಗ ಒಂದೇ ಆಗಿರುತ್ತದೆ. ಇದರಿಂದ ಉಪಗ್ರಹವು ಒಂದೇ ಪ್ರದೇಶದ ಮೇಲಿದ್ದುಕೊಂಡು ನಿರಂತರವಾಗಿ ನಿಗಾ ಇಡಲು ಸಾಧ್ಯವಾಗುತ್ತದೆ.

ಕೆಳಮಟ್ಟದ ಕಕ್ಷೆಯಲ್ಲಿರುವ ಉಪಗ್ರಹಗಳು ನಿರ್ದಿಷ್ಟ ಸಮಯದ ಅಂತರದಲ್ಲಿ ಮಾತ್ರ ಒಂದು ಪ್ರದೇಶದ ಚಿತ್ರ ತೆಗೆಯಬಲ್ಲವು. ಆದರೆ EOS-05 ಉಪಗ್ರಹಕ್ಕೆ ಒಂದೇ ಸಮನೆ ವಿಶಾಲ ಪ್ರದೇಶದ ಮೇಲೆ ಕಣ್ಣಿಡಲು ಸಾಧ್ಯವಿರುವುದು ಇದರ ದೊಡ್ಡ ಅನುಕೂಲ.

ಬೆಳೆಗಳ ಸ್ಥಿತಿಗತಿ, ವಿಕೋಪ ನಿರ್ವಹಣೆ, ಚಂಡಮಾರುತ, ಮೇಘಸ್ಫೋಟ ಹಾಗೂ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆಯನ್ನು ಕ್ಷಣಕ್ಷಣಕ್ಕೂ ಪಡೆದುಕೊಳ್ಳಲು ಈ ಯೋಜನೆ ನೆರವಾಗಲಿದೆ.

2. GSLV ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹ

ಇಸ್ರೋ ಅಧ್ಯಕ್ಷ ನಾರಾಯಣನ್ ಅವರ ಪ್ರಕಾರ, 2,367 ಕೆಜಿ ತೂಕದ EOS-05 ಉಪಗ್ರಹವು GSLV ರಾಕೆಟ್ ಇದುವರೆಗೆ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು GSLV ರಾಕೆಟ್‌ನ ಹೆಚ್ಚುತ್ತಿರುವ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

51.7 ಮೀಟರ್ ಎತ್ತರದ GSLV-F17 ಮೂರು ಹಂತಗಳ ರಾಕೆಟ್ ಆಗಿದ್ದು, 420.5 ಟನ್ ತೂಕ ಹೊಂದಿದೆ. ಇದರ ಮೂರನೇ ಹಂತದಲ್ಲಿ ಕ್ರಯೋಜೆನಿಕ್ ಎಂಜಿನ್ ಬಳಸಲಾಗಿದ್ದು, ಇದು ಸುಮಾರು 2,250 ಕೆಜಿ ತೂಕವನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಆದರೆ ಶುಕ್ರವಾರದ ಉಡಾವಣೆಯಲ್ಲಿ ಈ ರಾಕೆಟ್ ತನ್ನ ನಿರೀಕ್ಷಿತ ಸಾಮರ್ಥ್ಯಕ್ಕಿಂತಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ನಾರಾಯಣನ್ ಹೇಳಿದ್ದಾರೆ.

ರಾಕೆಟ್ ಉಪಗ್ರಹವನ್ನು ಸುಮಾರು 29,934 ಕಿಲೋಮೀಟರ್ ಎತ್ತರಕ್ಕೆ ತಲುಪಿಸುವ ನಿರೀಕ್ಷೆಯಿತ್ತು, ಆದರೆ ಅದು ಸುಮಾರು 31,000 ಕಿಲೋಮೀಟರ್ ಎತ್ತರಕ್ಕೆ ತಲುಪಿಸಿದೆ.

ಈಗ ಉಪಗ್ರಹವು ತನ್ನದೇ ಆದ ಇಂಧನ ವ್ಯವಸ್ಥೆಯನ್ನು ಬಳಸಿ ನಿಗದಿತ ಕಾರ್ಯನಿರ್ವಾಹಕ ಕಕ್ಷೆಗೆ ತಲುಪಲಿದೆ.

EOS-05 ಉಪಗ್ರಹದ ಅವಧಿ ಕನಿಷ್ಠ ಏಳು ವರ್ಷಗಳಾಗಿದ್ದು, ಇದು ಒಂಬತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸುವ ನಂಬಿಕೆಯಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

‘ಉಪಗ್ರಹದಲ್ಲಿರುವ ಇಂಧನ ವ್ಯವಸ್ಥೆಯನ್ನು ಬಳಸಿ ಅದನ್ನು ನಿಗದಿತ ಕಕ್ಷೆಗೆ ಕೊಂಡೊಯ್ಯುತ್ತೇವೆ. ಈ ಉಪಗ್ರಹ ಕನಿಷ್ಠ ಏಳು ವರ್ಷ ಸಕ್ರಿಯವಾಗಿರಲಿದ್ದು, ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಭರವಸೆ ನಮಗಿದೆ’ ಎಂದು ಅವರು ಹೇಳಿದ್ದಾರೆ.

3. ಕೃಷಿ ಮತ್ತು ವಿಕೋಪ ನಿರ್ವಹಣೆಗೆ ಅತ್ಯಂತ ಉಪಯುಕ್ತವಾದ ಚಿತ್ರೀಕರಣ ಸಾಮರ್ಥ್ಯ

EOS-05 ಅತ್ಯಾಧುನಿಕ ಭೂ-ಪರಿಶೀಲನಾ ಉಪಗ್ರಹವಾಗಿದ್ದು, ದೃಶ್ಯ, ಇನ್‌ಫ್ರಾರೆಡ್, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ತರಂಗಾಂತರಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.

ವಿವಿಧ ತರಂಗಾಂತರಗಳು ಭೂಮಿಯ ಮೇಲ್ಮೈ ಮತ್ತು ವಾತಾವರಣದ ಬೇರೆ ಬೇರೆ ಮಾಹಿತಿಯನ್ನು ನೀಡಬಲ್ಲವು ಎಂಬುದು ಇಲ್ಲಿ ಪ್ರಮುಖ ವಿಷಯ. ವಿಕೋಪ ನಿರ್ವಹಣೆ ಮಾತ್ರವಲ್ಲದೆ, ಕೃಷಿ, ಅರಣ್ಯ ಸಂಪತ್ತು ಮತ್ತು ಜಲಮೂಲಗಳ ಮೇಲ್ವಿಚಾರಣೆಗೆ ಈ ಉಪಗ್ರಹ ನೀಡುವ ಚಿತ್ರಗಳು ಉಪಯುಕ್ತವಾಗಲಿವೆ.

ಭೂಸ್ಥಿರ ಕಕ್ಷೆಯಿಂದ ವಿಶಾಲ ಪ್ರದೇಶಗಳ ಮೇಲೆ ನಿರಂತರವಾಗಿ ಕಣ್ಣಿಡಬಲ್ಲ ಇದರ ಸಾಮರ್ಥ್ಯವು ಕ್ಷಿಪ್ರವಾಗಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಹೆಚ್ಚು ನೆರವಾಗಲಿದೆ.

ದುರಂತಗಳ ಮುನ್ಸೂಚನೆ, ಚಂಡಮಾರುತ, ಮೇಘಸ್ಫೋಟ ಮತ್ತು ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆಗೆ ಈ ಉಪಗ್ರಹ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.

ಈ ಯೋಜನೆಯಲ್ಲಿ ಭಾಗಿಯಾದ ಹಿರಿಯ ವಿಜ್ಞಾನಿಯೊಬ್ಬರು ಈ ಉಪಗ್ರಹವನ್ನು ‘ಆಕಾಶದಲ್ಲಿರುವ ಕಣ್ಣು’ (eye in the sky) ಎಂದು ಕರೆದಿದ್ದಾರೆ. ಆದರೆ ಇಸ್ರೋ ಅಧ್ಯಕ್ಷ ನಾರಾಯಣನ್ ಅವರು EOS-05 ಅನ್ನು ‘ಗೂಢಚಾರ ಉಪಗ್ರಹ’ ಎಂದು ನೋಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಭೂ-ಪರಿಶೀಲನಾ ಉಪಗ್ರಹವು ನಿರಂತರವಾಗಿ ಭಾರತದ ಭೂಪ್ರದೇಶವನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯ ಹೊಂದಿದ್ದು, ನಿರಂತರ ಮಾಹಿತಿಯನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

4. 2021ರ ವೈಫಲ್ಯದ ಬಳಿಕ GSLV ರಾಕೆಟ್‌ ಗೆ ದೊರೆತ ಯಶಸ್ಸು

ಈ ಯೋಜನೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಇದರ ಹಿಂದಿನ ಹಿನ್ನೆಲೆಯನ್ನು ತಿಳಿಯುವುದು ಅಗತ್ಯ.

2021ರ ಆಗಸ್ಟ್ 12ರಂದು ನಡೆದ GSLV-F10/EOS-03 ಯೋಜನೆ ವಿಫಲವಾಗಿತ್ತು. ಶ್ರೀಹರಿಕೋಟಾದಿಂದ ಉಡಾವಣೆಯಾದ ಬಳಿಕ ಕ್ರಯೋಜೆನಿಕ್ ಹಂತವು ಸರಿಯಾಗಿ ಚಾಲನೆಗೊಳ್ಳದ ಕಾರಣ ಆ ಯೋಜನೆ ಕೈಕೊಟ್ಟಿತ್ತು. EOS-05 ಅದೇ ಯೋಜನೆಯ ಮುಂದುವರಿದ ಭಾಗವಾಗಿದೆ. ಆ ನಂತರದ ವಿಶ್ಲೇಷಣೆಯಲ್ಲಿ ಕ್ರಯೋಜೆನಿಕ್ ಹಂತದಲ್ಲಾದ ತಾಂತ್ರಿಕ ದೋಷವೇ ಈ ವೈಫಲ್ಯಕ್ಕೆ ಕಾರಣ ಎಂದು ತಿಳಿದುಬಂದಿತ್ತು.

ಆದ್ದರಿಂದ, ಪ್ರಸ್ತುತ GSLV-F17 ಯೋಜನೆಯ ಯಶಸ್ಸು ಕೇವಲ ಮತ್ತೊಂದು ಉಪಗ್ರಹದ ಉಡಾವಣೆ ಮಾತ್ರವಲ್ಲ. ಇದು GSLV ರಾಕೆಟ್ ಮತ್ತು ಅದರ ಕ್ರಯೋಜೆನಿಕ್ ಇಂಧನ ವ್ಯವಸ್ಥೆಯ ಕಾರ್ಯಕ್ಷಮತೆ ಹಾಗೂ ನಂಬಿಕೆಯನ್ನು ಹೆಚ್ಚಿಸುವಲ್ಲಿ ಇಸ್ರೋ ಸಾಧಿಸಿದ ಪ್ರಗತಿಯನ್ನು ತೋರಿಸುತ್ತದೆ.

ಮೊದಲ GSLV ಉಡಾವಣೆಯು 1,536 ಕೆಜಿ ತೂಕವನ್ನು ಹೊತ್ತೊಯ್ದಿತ್ತು ಎಂಬುದನ್ನು ನಾರಾಯಣನ್ ನೆನಪಿಸಿಕೊಂಡರು. ಅಂದಿನಿಂದ ಇಸ್ರೋ ರಾಕೆಟ್‌ ನ ರಚನಾತ್ಮಕ ತೂಕವನ್ನು ಕಡಿಮೆ ಮಾಡಿ, ಇಂಧನ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೂಲಕ ಅದರ ಸಾಮರ್ಥ್ಯವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ಬಂದಿದೆ.

‘ಇಂದು ನಾವು ಇದೇ ಉಡಾವಣಾ ನೌಕೆಯನ್ನು ಬಳಸಿ ಅತ್ಯಂತ ಭಾರವಾದ, ಅಂದರೆ 2,367 ಕೆಜಿ ತೂಕದ ಉಪಗ್ರಹವನ್ನು ಕಕ್ಷೆಗೆ ತಲುಪಿಸಿದ್ದೇವೆ’ ಎಂದು ಅವರು ಹೇಳಿದರು.

ಈ ವರ್ಷದ ಆರಂಭದಲ್ಲಾದ ಮತ್ತೊಂದು ಹಿನ್ನಡೆಯ ನಂತರ ಈ ಯಶಸ್ಸು ಲಭಿಸಿರುವುದು ಅತ್ಯಂತ ಮುಖ್ಯವಾಗಿದೆ. ಜನವರಿ 12ರಂದು 16 ಉಪಗ್ರಹಗಳನ್ನು ಹೊತ್ತೊಯ್ದಿದ್ದ PSLV-C62 ಯೋಜನೆಯು, ರಾಕೆಟ್‌ ನ ಮೂರನೇ ಹಂತದಲ್ಲಾದ ತಾಂತ್ರಿಕ ದೋಷದಿಂದಾಗಿ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ತಲುಪಿಸಲು ವಿಫಲವಾಗಿತ್ತು.

ಶುಕ್ರವಾರದ ಈ ಯಶಸ್ಸು, ಮುಂಬರುವ ಸಾಲು ಸಾಲು ಉಡಾವಣೆಗಳ ಹೊಸ್ತಿಲಲ್ಲಿರುವ ಇಸ್ರೋಗೆ ಹೊಸ ಉತ್ಸಾಹ ತುಂಬಿದೆ.

5. ಭೂ-ದತ್ತಾಂಶ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯ ವೃದ್ಧಿ

EOS-05 ಯೋಜನೆಯ ಅತ್ಯಂತ ದೊಡ್ಡ ಮಹತ್ವವಿರುವುದು ರಾಷ್ಟ್ರೀಯ ಅಗತ್ಯಗಳಿಗೆ ಬೇಕಾದ ಉನ್ನತ ಮಟ್ಟದ ಡೇಟಾವನ್ನು ದೇಶೀಯವಾಗಿಯೇ ಸತತವಾಗಿ ಒದಗಿಸುವ ಸಾಮರ್ಥ್ಯದಲ್ಲಿ.

ಈ ಉಪಗ್ರಹವು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆಗೆ ಬಂದ ನಂತರ, ಭೂಸ್ಥಿರ ಕಕ್ಷೆಯಿಂದ ದೇಶಕ್ಕೆ ಅಗತ್ಯವಿರುವ ಅತ್ಯಂತ ಪ್ರಮುಖ ಹಾಗೂ ‘ಕಾರ್ಯತಂತ್ರದ ದತ್ತಾಂಶ’ ಒದಗಿಸುವ ಭಾರತದ ಮೊದಲ ಪ್ರತ್ಯೇಕ ಚಿತ್ರೀಕರಣ ಉಪಗ್ರಹವಾಗಲಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

ಈ ಡೇಟಾ ಕೃಷಿ, ಜಲಸಂಪನ್ಮೂಲ ನಿರ್ವಹಣೆ, ವಿಕೋಪ ನಿರ್ವಹಣೆ ಮತ್ತು ಹವಾಮಾನ ಮೇಲ್ವಿಚಾರಣೆಯವರೆಗೆ ಹಲವು ಕ್ಷೇತ್ರಗಳಲ್ಲಿ ಬಳಕೆಗೆ ಬರಲಿದೆ.

ಭೂಮಿಯ ಕಾಯಂ ಕಕ್ಷೆಯಿಂದ ಭಾರತದ ಮೇಲೆಯೇ ನಿರಂತರವಾಗಿ ಕಣ್ಣಿಡುವ ಈ ವ್ಯವಸ್ಥೆಯು, ಕೆಳಮಟ್ಟದ ಕಕ್ಷೆಯಲ್ಲಿರುವ ಭಾರತದ ಇತರ ಉಪಗ್ರಹಗಳ ಕಾರ್ಯಕ್ಷಮತೆಗೆ ಹೆಚ್ಚುವರಿ ಬಲ ತುಂಬಲಿದೆ.

‘ನಮ್ಮ ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಇದೊಂದು ಬಹುದೊಡ್ಡ ಸಾಧನೆ. ಏಕೆಂದರೆ ರಾಷ್ಟ್ರೀಯ ಚಟುವಟಿಕೆಗಳಿಗಾಗಿ ಭೂಸ್ಥಿರ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತಿರುವ ಮೊದಲ ಭೂ-ಪರಿಶೀಲನಾ ಉಪಗ್ರಹ ಇದಾಗಿದೆ’ ಎಂದು ನಾರಾಯಣನ್ ಹೇಳಿದ್ದಾರೆ.

ಮುಂದಿನ ಹೆಜ್ಜೆ ಏನು?

ಶುಕ್ರವಾರದ ಉಡಾವಣೆಯು EOS-05 ಯೋಜನೆಯ ಆರಂಭವಷ್ಟೇ. ಪ್ರಸ್ತುತ ತಾತ್ಕಾಲಿಕ ಕಕ್ಷೆಯಲ್ಲಿರುವ ಈ ಉಪಗ್ರಹವನ್ನು, ಅದರಲ್ಲೇ ಇರುವ ಇಂಧನ ವ್ಯವಸ್ಥೆಯನ್ನು ಬಳಸಿ ಹಂತ ಹಂತವಾಗಿ ಮೇಲಕ್ಕೇರಿಸುವ ಮೂಲಕ ನಿಗದಿತ ಕಾರ್ಯನಿರ್ವಾಹಕ ಕಕ್ಷೆಗೆ ತಲುಪಿಸಲಾಗುತ್ತದೆ.

ಈ ನಡುವೆ ಇಸ್ರೋ ಮುಂಬರುವ ದಿನಗಳಲ್ಲಿ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಇನ್ನೂ ಆರು ಉಡಾವಣೆಗಳನ್ನು ನಡೆಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

ಮುಂದಿನ ಪ್ರಮುಖ ಯೋಜನೆಗಳಲ್ಲಿ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಾದ ‘ಗಗನ್‌ ಯಾನ್’ ಪ್ರಮುಖವಾದುದು.

ಗಗನ್‌ ಯಾನ್ ಯೋಜನೆಗಾಗಿ ಈಗಾಗಲೇ ಸುಮಾರು 8,000 ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ಮಾನವನ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿರುವುದರಿಂದ ಇದು ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದೆ ಎಂದು ನಾರಾಯಣನ್ ವಿವರಿಸಿದ್ದಾರೆ.

ಗಗನ್‌ ಯಾನ್ ಯೋಜನೆಯ ಭಾಗವಾಗಿ ಮಾನವರನ್ನು ಕಳುಹಿಸುವ ಮುನ್ನ ಮೂರು ಮಾನವರಹಿತ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಇಸ್ರೋ ಯೋಜಿಸಿದ್ದು, ಮೊದಲ ಮಾನವರಹಿತ ಗಗನ್‌ ಯಾನ್ ಉಡಾವಣೆಗೆ ಈ ವರ್ಷವೇ ಸಿದ್ಧತೆ ನಡೆಯುತ್ತಿದೆ.

ಸಾಮಾನ್ಯ ಉಪಗ್ರಹ ಯೋಜನೆಗಳಿಗಿಂತ ಭಿನ್ನವಾಗಿ, ಗಗನಯಾತ್ರಿಗಳ ಸುರಕ್ಷತೆಯು ನೇರವಾಗಿ ಜವಾಬ್ದಾರಿಯಾಗಿರುವುದರಿಂದ ಮಾನವ-ಚಾಲಿತ ರಾಕೆಟ್ ಹಾಗೂ ಸಂಬಂಧಿತ ವ್ಯವಸ್ಥೆಗಳಿಗೆ ವ್ಯಾಪಕ ಹಂತದ ಪರೀಕ್ಷೆಗಳು ಅಗತ್ಯವಾಗಿವೆ.

ಸೌಜನ್ಯ: Hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor