ಕನಕದಾಸರ ಸಂದೇಶ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ: ಕನಕದಾಸರು ಮಹಾನ್ ಸಮಾಜ ಸುಧಾರಕರಾಗಿದ್ದರು. ಅವರು ಅಂದು ಸಾರಿದ ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಸಂದೇಶವನ್ನು ಇಂದು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಪುರುಷರ ಜಯಂತಿಗಳನ್ನು ಆಚರಿಸಿ ಮರೆತುಬಿಡದೆ, ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಹಾತ್ಮರ ಕುರಿತು ಗ್ರಂಥಗಳನ್ನು ವಿತರಿಸುವ ಕಾರ್ಯವೂ ನಡೆಯಬೇಕು ಎಂದು ಸಲಹೆ ನೀಡಿದರು.
ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ಕೆಪಿಎಸ್ ಕಾಲೇಜಿನ ಉಪನ್ಯಾಸಕ ರಾಜಗೋಪಾಲ ವಿಭೂತೆ ಕನಕದಾಸರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ತಿಮ್ಮಪ್ಪ ನಾಯಕನಾಗಿದ್ದ ಕನಕದಾಸರು ತಮ್ಮಲ್ಲಿದ್ದ ಸಂಪತ್ತನ್ನು ದಾನ ಮಾಡಿದ ಕಾರಣಕ್ಕೆ ಚಿನ್ನಪ್ಪ ನಾಯಕ, ಕನಕ ನಾಯಕ ಎಂದು ಕರೆಯಲ್ಪಟ್ಟರು. ಬಳಿಕ ಅವರು ಕನಕದಾಸರೆಂದು ಪ್ರಸಿದ್ಧರಾದರು. ವಿಜಯನಗರ ಸಾಮ್ರಾಜ್ಯಕ್ಕೆ ಆಗಮಿಸಿ ವ್ಯಾಸರಿಂದ ಜ್ಞಾನಾರ್ಜನೆ ಪಡೆದ ನಂತರ ಸಮಾಜದಲ್ಲಿನ ಅಂಕುಡೊಂಕುಗಳನ್ನು ವಿರೋಧಿಸಿದರು. ಸುಮಾರು ಆರು ನೂರು ವರ್ಷಗಳ ಹಿಂದೆಯೇ ಸಮಾನತೆಯ ಕುರಿತು ಮಾತನಾಡಿದ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಕನಕದಾಸರು ಕೊಡೇಕಲ್ಗೂ ಭೇಟಿ ನೀಡಿದ್ದರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸುಮಾರು 600 ಕೀರ್ತನೆಗಳನ್ನು ರಚಿಸಿರುವ ಕನಕದಾಸರ ಕೀರ್ತನೆಗಳನ್ನು ಕೆಲವರು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿರುವ ಸಾಧ್ಯತೆಯಿದ್ದು, ಈ ಕುರಿತು ಸಂಶೋಧನೆಗಳು ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ದಂಡು ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕಾಳಪ್ಪ ಕವಾತಿ ಹಾಗೂ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬೀರಲಿಂಗ ಬಾದ್ಯಾಪುರ ಉಪಸ್ಥಿತರಿದ್ದರು.
ಉಪನ್ಯಾಸಕ ವೆಂಕಟೇಶ ಪಾಟೀಲ್ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ ದೇಸಾಯಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ, ನಿಂಗಣ್ಣ ಬಾಚಿಮಟ್ಟಿ, ಕೆಕೆಆರ್ಡಿಬಿ ನಾಮನಿರ್ದೇಶಿತ ಸದಸ್ಯ ವೆಂಕಟೇಶ ಹೊಸಮನಿ, ಅಬ್ದುಲ್ ಗಫರ್ ನಗನೂರಿ, ರಂಗನಗೌಡ ದೇವಿಕೇರ, ಮಲ್ಲನಗೌಡ ದೇವಿಕೇರ, ಶಿಕ್ಷಕ ಮಹಾಂತೇಶ ಗೋನಾಲ, ಕನಕಪ್ಪ ವಾಗಣಗೇರಿ, ಧರ್ಮರಾಜ ಬಡಿಗೇರ, ಮಲ್ಲೇಶಿ ಪಾಟೀಲ ನಾಗರಾಳ, ಜುಮ್ಮಣ್ಣ ಕೆಂಗುರಿ, ಪ್ರಕಾಶ ಅಲಬನೂರ, ಖಾಲಿದ್ ಅಹ್ಮದ್ ತಾಳಿಕೋಟಿ, ಭಂಡಾರೆಪ್ಪ ನಾಟೇಕಾರ್, ಮಲ್ಲಣ್ಣ ಹುಬ್ಬಳ್ಳಿ, ಶಕೀಲ್ ಅಹ್ಮದ್ ಹಾಗೂ ಧರ್ಮು ಮಡಿವಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.
ಕನಕದಾಸರ ಭಾವಚಿತ್ರದ ಮೆರವಣಿಗೆ :
ಕನಕದಾಸರ ಜಯಂತಿ ಅಂಗವಾಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ತಹಸೀಲ್ದಾರ್ ಕಚೇರಿವರೆಗೆ ನಡೆದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು.