ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ: ಶಾಸಕ ಚೆನ್ನಾರೆಡ್ಡಿ ಪಾಟೀಲ್
ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮ
ಯಾದಗಿರಿ: ಕನ್ನಡ ನಾಡಿನ ಶ್ರೇಷ್ಠ ಸಂತ ಕವಿ, ದಾಸಶ್ರೇಷ್ಠ, ಸಮಾಜ ಸುಧಾರಕ ಹಾಗೂ ಸಮಾನತೆಯ ಹರಿಕಾರ ಸಂತ ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸಂತಕವಿ ಕನಕದಾಸ ಜಯಂತ್ಯೋತ್ಸವ ಸಮಿತಿ ಯಾದಗಿರಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿ ಅವರು ಮಾತನಾಡಿದರು.
16ನೇ ಶತಮಾನದಲ್ಲಿ ಬದುಕಿದ್ದ ಕನಕದಾಸರು ತಮ್ಮ ಕೀರ್ತನೆಗಳು, ತತ್ವಪದಗಳು ಮತ್ತು ಸಾಹಿತ್ಯದ ಮೂಲಕ ಜ್ಞಾನ, ಭಕ್ತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದರು. ಅಧಿಕಾರದ ಜೀವನವನ್ನು ತೊರೆದು ದಾಸಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸಿದರು. ಅವರ ಭಾವಚಿತ್ರಕ್ಕೆ ಹಾರ ಹಾಕುವುದಕ್ಕೆ ಮಾತ್ರ ಜಯಂತಿ ಸೀಮಿತವಾಗಬಾರದು. ಅವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಮಾತನಾಡಿ, 16ನೇ ಶತಮಾನದಲ್ಲಿ ಜಾತಿ ಮತ್ತು ಕುಲ ಆಧಾರಿತ ವ್ಯವಸ್ಥೆಯ ವಿರುದ್ಧ ಕನಕದಾಸರು ಜನಸಾಮಾನ್ಯರಿಗೆ ಸಮಾನತೆಯ ಸಂದೇಶ ನೀಡಿದರು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಯ ಮೂಲಕ ಕುಲದ ಆಧಾರದ ಮೇಲೆ ನಡೆಯುತ್ತಿದ್ದ ತಾರತಮ್ಯವನ್ನು ಪ್ರಶ್ನಿಸಿದರು. ಆ ಕಾಲದಲ್ಲಿ ತಂತ್ರಜ್ಞಾನ ಅಥವಾ ಸಾಮಾಜಿಕ ಜಾಲತಾಣಗಳು ಇಲ್ಲದಿದ್ದರೂ ಕವಿತೆ ಮತ್ತು ಕೀರ್ತನೆಗಳ ಮೂಲಕ ಹಳ್ಳಿಹಳ್ಳಿಗಳಿಗೆ, ಜನಸಮುದಾಯಗಳಿಗೆ ತಮ್ಮ ವಿಚಾರಗಳನ್ನು ತಲುಪಿಸಿ ಸಮಾನತೆಯ ಸಂದೇಶ ಸಾರಿದರು ಎಂದರು.
ಯಾವುದೇ ಸಂಘಟನೆ ಅಥವಾ ಸಾಮಾಜಿಕ ರಕ್ಷಣೆಯ ಬೆಂಬಲವಿಲ್ಲದಿದ್ದರೂ ಏಕಾಂಗಿಯಾಗಿ ಧ್ವನಿ ಎತ್ತಿದ ಕನಕದಾಸರು, 16ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರರು ಹಾಗೂ ನಮ್ಮ ಭಾಗದಲ್ಲಿ ಭಕ್ತಿ ಚಳವಳಿಗೆ ಅಡಿಪಾಯ ಹಾಕಿದವರಲ್ಲಿ ಪ್ರಮುಖರಾಗಿದ್ದಾರೆ. ಇಂದು 21ನೇ ಶತಮಾನದಲ್ಲಿ ನಾವು ಕಾಣುತ್ತಿರುವ ಸಮಾನತೆ, ಹಕ್ಕುಗಳು ಮತ್ತು ರಕ್ಷಣೆಯ ಹಿಂದೆ ಇಂತಹ ಚಳವಳಿಗಳ ಪ್ರಭಾವವಿದೆ. ಅವರ ವಿಚಾರಗಳನ್ನು ಆಚರಣೆಗೆ ತರುವುದೇ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಶ್ರೀಶೈಲ ಪೂಜಾರಿ ಮಾತನಾಡಿ, ಕನಕದಾಸರು ಯಾವುದೇ ಸಮಾಜದ ಕಟ್ಟಳೆಗಳಿಗೆ ಒಳಪಡದೆ ಇಡೀ ವಿಶ್ವವನ್ನು ದೂರದೃಷ್ಟಿಯಿಂದ ನೋಡಿದ ಮಹಾಸಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರು ನೀಡಿದ ಕೊಡುಗೆಗಳು ಜನಪ್ರಿಯವಾಗಿದ್ದು, ಸಮಾಜದಲ್ಲಿ ಅವರಿಗೆ ವಿಶೇಷ ಗೌರವವಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಅವರಿಗೆ ಯೌವನದಲ್ಲಿ ಮದುವೆಯ ಯೋಚನೆ ಬಂದಿತ್ತು. ಆದರೆ, ವಿಜಯನಗರ ಸಾಮ್ರಾಜ್ಯದ ಮೇಲಿನ ದಾಳಿ ಹಾಗೂ ಯುದ್ಧದಲ್ಲಿ ಸೈನಿಕನಾಗಿ ಭಾಗವಹಿಸಿದಾಗ ಎದುರಾದ ಸಾವು-ನೋವುಗಳು ಅವರ ಜೀವನದಲ್ಲಿ ಮಹತ್ವದ ಬದಲಾವಣೆ ತಂದವು. ಜೀವನ ನಶ್ವರ ಎಂಬ ಅರಿವು ಮೂಡಿ ಅವರು ದಾಸಶ್ರೇಷ್ಠರಾದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಯುಡಾ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಬೀನ್ ಮಹಾಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಕನಕ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.