ಶಹಾಪುರ | ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ
ಶಹಾಪುರ: ಬಸವಣ್ಣನವರ ತತ್ವ, ವಿಚಾರಧಾರೆ ಹಾಗೂ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಆರೋಪ ಎದುರಿಸುತ್ತಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು, ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ವಜ್ಞ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಶಹಾಪುರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಕುಂಬಾರ, 12ನೇ ಶತಮಾನದಲ್ಲಿಯೇ ಜಾತಿ, ವರ್ಗ ಹಾಗೂ ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಬಸವಣ್ಣನವರು ನಾಡಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಅವರ ವಚನಗಳು ಮತ್ತು ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಇತ್ತೀಚೆಗೆ ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿಯಲ್ಲಿನ ಕೆಲವು ವಿಚಾರಗಳು ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಗಳಿಗೆ ಅಪಚಾರ ಉಂಟುಮಾಡುವಂತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಬಸವಾಭಿಮಾನಿಗಳು ಹಾಗೂ ಶರಣ ಸಾಹಿತ್ಯದ ಅನುಯಾಯಿಗಳ ಭಾವನೆಗಳಿಗೆ ನೋವುಂಟಾಗಿದೆ. ಸಂಶೋಧನೆಯ ಹೆಸರಿನಲ್ಲಿ ಮಹಾನ್ ದಾರ್ಶನಿಕರ ಕುರಿತು ವಿವಾದಾತ್ಮಕ ವಿಚಾರಗಳನ್ನು ಪ್ರಕಟಿಸುವಾಗ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಹೇಳಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೃತಿಯಲ್ಲಿನ ವಿವಾದಾತ್ಮಕ ಅಂಶಗಳ ಕುರಿತು ಸೂಕ್ತ ತನಿಖೆ ನಡೆಸಬೇಕು. ಕಾನೂನುಬದ್ಧವಾಗಿ ಅಗತ್ಯವಿದ್ದಲ್ಲಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಲೇಖಕ ರವಿ ಹಂಜ್ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಪ್ರಕಾಶಕರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.