ಶಹಾಪುರ | ಮಹನೀಯರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ಶರಣಪ್ಪ ಸಲಾದಪುರ
ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ
ಶಹಾಪುರ: ಕನಕದಾಸರು ಸೇರಿದಂತೆ ಅನೇಕ ಶರಣರು, ಸಂತರು ಹಾಗೂ ಮಹನೀಯರು ತಮ್ಮ ಆದರ್ಶ ಮತ್ತು ವಿಚಾರಧಾರೆಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ನಗರಸಭೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣವು ಬದುಕಿನ ಪ್ರಗತಿಗೆ ಪ್ರಮುಖ ಸಾಧನವಾಗಿದೆ. ಕುರುಬ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಕ್ಷಭೇದ ಮರೆತು ಸಹಬಾಳ್ವೆ, ಸಮಾನತೆ ಹಾಗೂ ಸಮಾಜದ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು. ಕೇವಲ ಪ್ರತಿಮೆ ಸ್ಥಾಪನೆ ಹಾಗೂ ಜಯಂತಿ ಆಚರಣೆಯಿಂದ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಅವರು ಸಾರಿದ ಮಾನವೀಯತೆ, ಸಮಾನತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಯುವ ಸಾಹಿತಿ ಸಿದ್ದಣ್ಣ ಪೂಜಾರಿ ಯಕ್ಷಿಂತಿ ವಿಶೇಷ ಉಪನ್ಯಾಸ ನೀಡಿ, ಕನಕದಾಸರು ದಾಸ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಸಾಹಿತ್ಯ, ಸಂಗೀತ, ಆಧ್ಯಾತ್ಮ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಇಂದಿಗೂ ಸಮಾಜಕ್ಕೆ ಸಮಾನತೆ ಮತ್ತು ಸಹೋದರತೆಯ ಸಂದೇಶ ಸಾರುತ್ತಿವೆ ಎಂದು ಹೇಳಿದರು.
ನಗರದ ಕನಕ ನಗರದಲ್ಲಿರುವ ಕನಕದಾಸರ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಕಾಂಗ್ರೆಸ್ ಯುವ ಮುಖಂಡ ಬಾಪುಗೌಡ ಎಸ್. ದರ್ಶನಾಪುರ ಅವರು ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನಕದಾಸರ ಕೀರ್ತನೆಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಸಮಾನತೆಯ ಸಂದೇಶ ಸಾರಿವೆ. ಅವರ ಸಾಮಾಜಿಕ ಕೊಡುಗೆ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆ ಎಂದರು. ಈ ವೇಳೆ ಕುರುಬ ಸಮಾಜದ ಮುಖಂಡರು ಕಂಬಳಿ ಹೊದಿಸಿ ಅವರನ್ನು ಸನ್ಮಾನಿಸಿದರು.
ನಗರದ ಹಾಲಭಾವಿ ರಸ್ತೆಯ ಕನಕ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನಗರಸಭೆ ಆವರಣದವರೆಗೆ ಡೊಳ್ಳು ಕುಣಿತದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಅಮಾತೆಪ್ಪ ಕಂದಕೂರ, ಶಿವುಮಹಾಂತ ಚಂದಾಪುರ, ಶರಣು ಗದ್ದುಗೆ, ಬಸವರಾಜಪ್ಪಗೌಡ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಯಲ್ಲಪ್ಪ ನರಿ, ರಫೀಕ್ ಚೌಧರಿ, ತಹಸೀಲ್ದಾರ್ ಸಿದ್ಧರೂಢ ಬನ್ನಿಕೊಪ್ಪ, ಡಾ. ಮೋನಪ್ಪ ಶಿರವಾಳ, ನೀಲಕಂಠ ಬಡಿಗೇರ, ಈರಣಗೌಡ ಮಲ್ಲಾಬಾದಿ, ಅಪ್ಪುಗೌಡ ಪಾಟೀಲ್, ಧರ್ಮಣ್ಣ ಹೊತಪೇಠ, ಅಲ್ಲಾ ಪಟೇಲ್ ಮಕ್ತಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.