ಯಾದಗಿರಿ-ಹಾವೇರಿ ನಡುವೆ ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್ ಸಂಚಾರಕ್ಕೆ ಚಾಲನೆ
ಯಾದಗಿರಿ : ಜಿಲ್ಲಾ ಕೇಂದ್ರ ಯಾದಗಿರಿಯಿಂದ ದೂರದ ರಾಣೆಬೆನ್ನೂರು-ಹಾವೇರಿಗೆ ನಿತ್ಯ ಸಂಚರಿಸಲಿರುವ ‘ಅಮೋಘವರ್ಷ’ ಹೆಸರಿನ ಎರಡು ನೂತನ ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ರವಿವಾರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಪೂಜೆ ನೆರವೇರಿಸಿ, ಅಧಿಕೃತವಾಗಿ ಉದ್ಘಾಟಿಸಿ ಸಂಚಾರಕ್ಕೆ ಚಾಲನೆ ನೀಡಿದರು.
ಲಿಂಗಸುಗೂರು, ಗಂಗಾವತಿ, ಸಿಂಧನೂರು, ವಿಜಯನಗರ (ಹೊಸಪೇಟೆ), ಹರಿಹರ, ರಾಣೆಬೆನ್ನೂರು ಹಾಗೂ ಹಾವೇರಿ ಸೇರಿದಂತೆ ದೂರದ ಊರುಗಳಿಂದ ಅಬ್ಬೆತುಮಕೂರಿಗೆ ಆಗಮಿಸುವ ಸಾವಿರಾರು ಭಕ್ತರಿಗೆ ಬಹುದಿನಗಳಿಂದ ನೇರ ಸಾರಿಗೆ ಸಂಪರ್ಕದ ಕೊರತೆ ಇತ್ತು. ಈ ಕುರಿತು ಮಠಕ್ಕೆ ಆಗಮಿಸುವ ಭಕ್ತರು ಪೂಜ್ಯರ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಯಾದಗಿರಿ ಶಾಸಕ ಚರನ್ನಾರೆಡ್ಡಿ ಪಾಟೀಲ್ ತುನ್ನೂರು, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಮಂಜುನಾಥ ಅವರೊಂದಿಗೆ ಯಾದಗಿರಿಯಿಂದ ಹಾವೇರಿಗೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಶ್ರೀಗಳು ಮಾತುಕತೆ ನಡೆಸಿದ್ದರು. ಭಕ್ತರು ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.
ಇದನ್ನು ಮನಗಂಡ ಕೆಕೆಆರ್‌ಟಿಸಿ ಎರಡು ನೂತನ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಅವುಗಳ ಸಂಚಾರಕ್ಕೆ ಭಾನುವಾರ ಶ್ರೀಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಠದ ಮಾಧ್ಯಮ ವಕ್ತಾರ ಡಾ. ಸುಭಾಷಚಂದ್ರ ಕೌಲಗಿ, ಘಟಕ ವ್ಯವಸ್ಥಾಪಕ ರಮೇಶ ತಾಳಿಕೋಟೆ, ಸಂಚಾರಿ ಅಧೀಕ್ಷಕ ಪಾಂಡುರಂಗ ಕುಲಕರ್ಣಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ ಪಾಟೀಲ್, ಸಹಾಯಕ ಸಂಚಾರಿ ನಿಯಂತ್ರಕ ಸಂಜೀವಕುಮಾರ, ವಾಹನ ಚಾಲಕರಾದ ಹಣಮಂತ, ಪರಶುರಾಮ, ಡಿಸಿ ಆಪ್ತ ಹರೀಶ, ವಿರುಪಾಕ್ಷಿ, ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾಳೆಯಿಂದ ಬಸ್ ಸಂಚಾರ :
ನೂತನ ಬಸ್‌ಗಳ ಸಂಚಾರ ನಾಳೆ ಅಥವಾ ನಾಡಿದ್ದು ಆರಂಭಗೊಳ್ಳಲಿದೆ. ಯಾದಗಿರಿಯಿಂದ ಪ್ರತಿದಿನ ಸಂಜೆ 7.30ಕ್ಕೆ ಬಸ್ ಹೊರಟು, ಬೆಳಗಿನ ಜಾವ 5.30ಕ್ಕೆ ಹಾವೇರಿ ತಲುಪಲಿದೆ. ಹಾವೇರಿಯಿಂದ ರಾತ್ರಿ 7.45ಕ್ಕೆ ಹೊರಡುವ ಬಸ್ ಬೆಳಗ್ಗೆ 6ಕ್ಕೆ ಯಾದಗಿರಿ ತಲುಪಲಿದೆ. ಯಾದಗಿರಿ, ಶಹಾಪುರ, ಸುರಪುರ, ಲಿಂಗಸುಗೂರು, ಗಂಗಾವತಿ, ವಿಜಯನಗರ, ಹರಿಹರ ಹಾಗೂ ರಾಣೆಬೆನ್ನೂರು ಮಾರ್ಗವಾಗಿ ಬಸ್ ಹಾವೇರಿಗೆ ಸಂಚರಿಸಲಿದೆ ಎಂದು ಘಟಕ ವ್ಯವಸ್ಥಾಪಕ ರಮೇಶ ತಾಳಿಕೋಟೆ ತಿಳಿಸಿದ್ದಾರೆ.