ಯಾದಗಿರಿ: ನವೆಂಬರ್ 1ರಂದು ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ (ಕನಗಹಳ್ಳಿ)ಯಲ್ಲಿ ನಡೆಯಲಿರುವ ಬೃಹತ್ ಬೌದ್ಧ ಧಮ್ಮ ದೀಕ್ಷಾ ಸಮಾರಂಭದ ಅಂಗವಾಗಿ ಅಕ್ಟೋಬರ್ 5ರಂದು ನಗರದಲ್ಲಿ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 7 ಗಂಟೆಗೆ ಮೈಲಾಪುರ ಅಗಸಿಯಿಂದ ಯಾತ್ರೆ ಆರಂಭವಾಗಲಿದೆ. ಚಕ್ರಕಟ್ಟಿ, ಗಾಂಧಿ ಚೌಕ್, ಕನಕನಗರ ಮಾರ್ಗವಾಗಿ ಅಂಬೇಡ್ಕರ್ ನಗರ ತಲುಪಲಿದೆ. ಬಳಿಕ ಅಂಬೇಡ್ಕರ್ ಚೌಕ್‌ನಲ್ಲಿ ಸಭೆ ನಡೆಯಲಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಏಕೆ ಸ್ವೀಕರಿಸಿದರು ಹಾಗೂ ಬೌದ್ಧ ಧಮ್ಮದ ಕುರಿತು ಜನಜಾಗೃತಿ ಮೂಡಿಸಲಾಗುವುದು. ಝನ್ ಮಾಂಕ್ ಡಾ. ಶಾಕು ಬೋಧಿಧಮ್ಮ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

1956ರ ಅಕ್ಟೋಬರ್ 14ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿ, ಪ್ರಬುದ್ಧ ಭಾರತದ ಮಹಾನ್ ಸಂಕಲ್ಪವನ್ನು ಜಗತ್ತಿನ ಮುಂದಿಟ್ಟರು. ಆ ಸಂಕಲ್ಪವನ್ನು ಸಾಕಾರಗೊಳಿಸುವ ಉದ್ದೇಶದಿಂದ ಕರ್ನಾಟಕದಾದ್ಯಂತ ಧಮ್ಮಾ ಜನಜಾಗೃತಿ ಯಾತ್ರೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಐತಿಹಾಸಿಕ ಸನ್ನತಿ ನೆಲದಲ್ಲಿ ಸುಮಾರು 5 ಲಕ್ಷ ಉಪಾಸಕ-ಉಪಾಸಿಕೆಯರು ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್‌ವಾದಿಗಳು, ಬೌದ್ಧ ಅನುಯಾಯಿಗಳು, ಭಿಕ್ಕು ಸಂಘ, ಉಪಾಸಕ-ಉಪಾಸಿಕಾ ಸಂಘ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಸೇರಿದಂತೆ ಎಲ್ಲ ಬಹುಜನ ಸಂಘಟನೆಗಳು ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಭಗವಂತ ಅನ್ವಾರ್, ಗೋಪಾಲ ತೇಳಗೆರಿ, ಡಾ. ಸರ್ವೋದಯ, ಶಂಕರರಾವ್ ಕೊಂಡೆ, ಕಾಶಿನಾಥ ನಾಟೇಕಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಹೊನ್ನಪ್ಪ ನಾಟೇಕಾರ್, ನಿಂಗಪ್ಪ ಬಿರನಾಳ, ಸೈದಪ್ಪ ಕೂಲೂರ್, ಶರಣು ನಾಟೇಕಾರ್, ಚಂದ್ರಕಾಂತ ಚಲುವಾದಿ, ಪರಶುರಾಮ ಚಲುವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor