ಹುಣಸಗಿ | ಹಿರಿಯ ನಾಗರಿಕರು ಹಕ್ಕು, ಕಾನೂನು ರಕ್ಷಣೆಯ ಅರಿವು ಹೊಂದಬೇಕು: ಮುದುಕಪ್ಪ ಓದನ
‘ಕಾನೂನಿನ ಅರಿವು–ನೆರವು’ ಕಾರ್ಯಕ್ರಮ
ಹುಣಸಗಿ: ಹಿರಿಯ ನಾಗರಿಕರು ತಮ್ಮ ಹಕ್ಕುಗಳು ಹಾಗೂ ಕಾನೂನುಬದ್ಧ ರಕ್ಷಣೆಯ ಕುರಿತು ಅರಿವು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ ಎಂದು ಸುರಪುರದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮುದುಕಪ್ಪ ಓದನ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ, ತಾಲೂಕು ಕಾನೂನು ಸೇವಾ ಸಮಿತಿ, ಸುರಪುರ, ನ್ಯಾಯವಾದಿಗಳ ಸಂಘ, ಸುರಪುರ, ಹುಣಸಗಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ‘ಕಾನೂನಿನ ಅರಿವು–ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ, ಅವರ ಪಾಲನೆ ಹಾಗೂ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಕಾನೂನುಗಳ ಕುರಿತು ಅರಿವಿನ ಕೊರತೆಯಿಂದ ಅನೇಕ ಹಿರಿಯ ನಾಗರಿಕರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಹಾಗೂ ಸಲಹೆ ಪಡೆಯುವ ಅವಕಾಶವನ್ನು ಹಿರಿಯ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಎಂ. ಬಸವರಾಜ ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಕಾನೂನು ನೆರವು ತಲುಪಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದರು.
ವಕೀಲ ಹಣಮಂತ್ರಾಯ ಕಟ್ಟಿಮನಿ ಉಪನ್ಯಾಸ ನೀಡಿ, 2007ರ ಹಿರಿಯ ನಾಗರಿಕರು ಮತ್ತು ಪೋಷಕರ ಪಾಲನೆ ಹಾಗೂ ಕಲ್ಯಾಣ ಅಧಿನಿಯಮದ ಕುರಿತು ವಿವರಿಸಿದರು. ಹಿರಿಯ ನಾಗರಿಕರ ಪಾಲನೆ, ಮಕ್ಕಳ ಜವಾಬ್ದಾರಿ, ಆಸ್ತಿ ಹಾಗೂ ಹಕ್ಕುಗಳ ರಕ್ಷಣೆ ಸೇರಿದಂತೆ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.
ಸುರಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನಸೂರ, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ ಹೀರೆಮಠ, ಹುಣಸಗಿ ವೃತ್ತ ನಿರೀಕ್ಷಕ ರವಿಕುಮಾರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಲಭೀಮನಾಯಕ, ವಕೀಲೆ ಜೋತಿನಾಯಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ ಚವ್ಹಾಣ, ಹುಣಸಗಿ ಪೊಲೀಸ್ ಉಪನಿರೀಕ್ಷಕ ರಾಹುಲ್ ಪವಾಡೆ ಸೇರಿದಂತೆ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ಶಿವಾನಂದ ತೋಟದ ನಿರೂಪಿಸಿದರು. ವಕೀಲ ಬಸವರಾಜ್ ಕಟ್ಟಿಮನಿ ಕಾಮನಟಗಿ ಸ್ವಾಗತಿಸಿ, ವಂದಿಸಿದರು.