ಯಾದಗಿರಿ : ಬೆಂಗಳೂರು-ಮುಂಬೈ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲಿಗೆ ಯಾದಗಿರಿ ರೈಲು ನಿಲ್ದಾಣದಲ್ಲಿ ಎರಡೂ ದಿಕ್ಕಿನಲ್ಲಿ ನಿಲುಗಡೆ ಕಲ್ಪಿಸುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, ಬೆಂಗಳೂರು-ಮುಂಬೈ ರೈಲು ಮಾರ್ಗವು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಸಮರ್ಪಕ ರೈಲು ನಿಲುಗಡೆ ಸೌಲಭ್ಯ ಕಲ್ಪಿಸುವುದರಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ತಮ್ಮ ಮನವಿಗೆ ಸ್ಪಂದಿಸಿ ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸಿರುವುದನ್ನು ಶರಣಗೌಡ ಕಂದಕೂರ ಸ್ಮರಿಸಿದ್ದಾರೆ. ರಾಜಧಾನಿ ಎಕ್ಸ್‌ಪ್ರೆಸ್, ಪದ್ಮಾವತಿ ಎಕ್ಸ್‌ಪ್ರೆಸ್, ರಾಜ್‌ಕೋಟ್ ಎಕ್ಸ್‌ಪ್ರೆಸ್, ದ್ವಾರಕಾ ಎಕ್ಸ್‌ಪ್ರೆಸ್, ಏಕ್ತಾ ನಗರ ಎಕ್ಸ್‌ಪ್ರೆಸ್ ಹಾಗೂ ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳಿಗೆ ಯಾದಗಿರಿಯಲ್ಲಿ ನಿಲುಗಡೆ ದೊರೆತಿರುವುದರಿಂದ ಜಿಲ್ಲೆಯ ಜನರಿಗೆ ಪ್ರಯಾಣದ ಅನುಕೂಲ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಜನರ ಪರವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಯಾದಗಿರಿ ರೈಲು ನಿಲ್ದಾಣದಲ್ಲಿ ಎರಡೂ ದಿಕ್ಕಿನಲ್ಲಿ ನಿಲುಗಡೆ ಕಲ್ಪಿಸುವಂತೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor