ಸುರಪುರ: ರಸ್ತೆ ಅಪಘಾತಗಳನ್ನು ತಡೆಯಲು ಹಾಗೂ ಜೀವ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ಮುದುಕಪ್ಪ ಓದನ್ ಹೇಳಿದರು.

ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಗೃಹರಕ್ಷಕ ದಳ, ತಾಲೂಕು ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಅಸೋಸಿಯೇಷನ್ ಹಾಗೂ ಕಾರು, ಲಾರಿ, ಆಟೋ ಚಾಲಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸಂಚಾರಿ ನಿಯಮಗಳ ಪಾಲನಾ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೊಲೀಸರ ಭಯಕ್ಕಾಗಿ ಸಂಚಾರಿ ನಿಯಮಗಳನ್ನು ಪಾಲಿಸಬಾರದು, ಜೀವ ರಕ್ಷಣೆಗಾಗಿ ಪಾಲಿಸಬೇಕು. ವಾಹನ ಚಲಾಯಿಸುವಾಗ ಆತುರಪಡದೆ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಐದು ನಿಮಿಷ ತಡವಾದರೂ ಪರವಾಗಿಲ್ಲ, ಸುರಕ್ಷಿತವಾಗಿ ಮನೆ ತಲುಪುವುದು ಮುಖ್ಯ. ಮನೆಯಲ್ಲಿ ಕುಟುಂಬದವರು ಕಾಯುತ್ತಿರುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಸಾರ್ವಜನಿಕರ ಹಿತರಕ್ಷಣೆಗಾಗಿ ಕಾನೂನು ಹಾಗೂ ಸಂಚಾರಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ ತಮ್ಮ ಜೊತೆಗೆ ಇತರರ ಜೀವವನ್ನೂ ರಕ್ಷಿಸಬೇಕು ಎಂದು ಹೇಳಿದರು.

ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಮತ್ತು ಸಹಪ್ರಯಾಣಿಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ವಾಹನದ ವಿಮೆ, ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು. ನಿಯಮ ಉಲ್ಲಂಘಿಸಿ ವಾಹನ ನೀಡಿದರೆ ಪೋಷಕರು ಹಾಗೂ ವಾಹನ ಮಾಲೀಕರಿಗೆ 25 ಸಾವಿರ ರೂ. ದವರೆಗೆ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಕೀಲ ಯಲ್ಲಪ್ಪ ಹುಲಿಕಲ್ ಮಾತನಾಡಿ, 18 ವರ್ಷ ತುಂಬದ ಅಪ್ರಾಪ್ತ ಮಕ್ಕಳಿಗೆ ಪೋಷಕರು ವಾಹನ ನೀಡುತ್ತಿರುವುದು ಹೆಚ್ಚಾಗಿದೆ. ಮಕ್ಕಳ ಬಳಿ ಚಾಲನಾ ಪರವಾನಗಿ ಹಾಗೂ ವಿಮೆ ಇರುವುದಿಲ್ಲ. ಅವರು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಯಾವುದೇ ರಾಜಕೀಯ ಅಥವಾ ಇತರ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಚಾರಿ ನಿಯಮ ಪಾಲಿಸಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದ ಸವಾರರಿಗೆ ನ್ಯಾಯಾಧೀಶರು ಹೂಗುಚ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ನಿಂಗರಾಜ ಮೂಲಿಮನಿ, ಆರ್‌ಟಿಒ ಅಧಿಕಾರಿ ಪ್ರಭಾಕರ, ವಕೀಲರಾದ ಬಲಭೀಮನಾಯಕ ದೇವಾಪುರ, ರಾಜಾ ಅಪ್ಪಾರಾವ್ ನಾಯಕ ಸತ್ಯಂಪೇಟೆ, ಜ್ಯೋತಿ ಎಲ್. ನಾಯಕ, ಭೀಮಣ್ಣ ಬನಸೋಡೆ, ರಾಘವೇಂದ್ರ ಭಕ್ರಿ, ಶಿವಕುಮಾರ ಹಿರೇಮಠ, ಪೊಲೀಸ್ ಪೇದೆ ದಯಾನಂದ ಜಮಾದಾರ ಸೇರಿದಂತೆ ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor