×
Ad

ಸಾಂತ್ವನ ಮಾತ್ರ ಬೇಡ, ಬರ ಪರಿಹಾರ ನೀಡಿ: ಸರ್ಕಾರದ ವಿರುದ್ಧ ಶಾಸಕ ಶರಣಗೌಡ ಕಂದಕೂರ ಆಕ್ರೋಶ

Update: 2026-07-06 18:09 IST

ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ, ಸರ್ಕಾರದ ಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸಾಂತ್ವನ ಹೇಳುವುದನ್ನು ಬಿಟ್ಟು ಪರಿಣಾಮಕಾರಿ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದರು.

ಗುರುಮಠಕಲ್ ಕ್ಷೇತ್ರದ ಯಂಪಾಡದಲ್ಲಿ 80 ಲಕ್ಷ ರೂ., ಶಿವಪೂರದಲ್ಲಿ 1.20 ಕೋಟಿ ರೂ. ಹಾಗೂ ಎಲ್ಹೇರಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳು ಭೇಟಿ ನೀಡಿ ಸಭೆ ನಡೆಸಿ ತೆರಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಾತೃಹೃದಯದಿಂದ ಸ್ಪಂದಿಸಿ ಭೀಮಾ ಮತ್ತು ಕೃಷ್ಣಾ ನದಿಗಳ ನೀರಿನ ಸಮಸ್ಯೆ ಬಗೆಹರಿಸಬೇಕು. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ಶಾಲೆಗಳು, ಆಸ್ಪತ್ರೆಗಳು ನಿರ್ಮಾಣವಾಗಿದ್ದರೂ ಶಿಕ್ಷಕರು ಹಾಗೂ ವೈದ್ಯರ ಕೊರತೆ ಇದೆ. ಜನರ ಬದುಕು ಸುಧಾರಿಸಲು ಅಗತ್ಯ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಒಣ ಬೇಸಾಯದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ಬರಬೇಕಿದೆ. ಮುಖ್ಯಮಂತ್ರಿ ಅವರ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಅಭಿವೃದ್ಧಿಯ ಹೊಳೆ ಹರಿಸುವುದಲ್ಲ, ಮೈಸೂರು ಭಾಗದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕವನ್ನೂ ಅಭಿವೃದ್ಧಿಪಡಿಸಬೇಕು ಎಂದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಘೋಷಿಸಿ ಎರಡೂವರೆ ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ. ಕೇವಲ ಘೋಷಣೆಗಳ ಸರ್ಕಾರವಾಗದೆ ರೈತರ ಬದುಕಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಗ್ರಾಮಗಳಲ್ಲಿ ಬೋರ್‌ವೆಲ್‌ಗಳ ಬೇಡಿಕೆ ಹೆಚ್ಚಿದ್ದು, ಕೆಕೆಆರ್‌ಡಿಬಿಯಿಂದ ಅನುದಾನ ಬಿಡುಗಡೆಯಾದ ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಆರ್‌ಇ ಎಇಇ ಶರಣಬಸಪ್ಪ, ಲೋಕಪಯೋಗಿ ಇಲಾಖೆ ವಿಶೇಷ ಉಪ ವಿಭಾಗ ಕೈಲಾಸ ಅನ್ವಾರ, ಉಪ ತಹಸೀಲ್ದಾರ ಅಶೋಕ ರಾಜಗಿರೆ, ಭೂ ಸೇನಾ ನಿಗಮದ ಬನ್ನಪ್ಪ ಕೋಮಾರ, ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ವಿಶ್ವನಾಥ, ನಾಗರತ್ನ ಎಲ್ಹೇರಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಎಲ್ಹೇರಿ ಗ್ರಾಮದ ಶರಣಗೌಡ ಮಾಲೀ ಪಾಟೀಲ, ಸಿದ್ದಣಗೌಡ ದಳಪತಿ ಎಲ್ಹೇರಿ, ಬಸವರಾಜ ಕಣೇಕಲ್, ಸಿದ್ದರಾಮರಡ್ಡಿ ಎಲ್ಹೇರಿ, ಅಧಿಕಾರಿಗಳು, ಜೆಸ್ಕಾಂ ಸಿಬ್ಬಂದಿಗಳು ಇತರರಿದ್ದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ ಕೆಕೆಆರ್‌ಡಿಬಿಯ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಕೆಲಸ ಮಾಡದ ಅಧಿಕಾರಿಗಳ ನಟ್ಟು-ಬೋಲ್ಟ್ ಟೈಟ್ ಮಾಡಬೇಕು. ಆಗ ಮಾತ್ರ ಅಭಿವೃದ್ಧಿ ವೇಗ ಪಡೆಯುತ್ತದೆ; ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸಬಹುದು.

-ಶಾಸಕ ಶರಣಗೌಡ ಕಂದಕೂರ, ಗುರುಮಠಕಲ್ ಕ್ಷೇತ್ರ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News