ಮತದಾನದ ಹಕ್ಕಿನ ಜಾಗೃತಿಗೆ ಬೂತ್ ಮಟ್ಟದಲ್ಲಿ ಅರಿವು ಮೂಡಿಸಿ: ಚಂದಪ್ಪ ಮುನಿಯಪ್ಪನ್ನೋರ್
ಯಾದಗಿರಿ: ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಕುರಿತು ಜಿಲ್ಲೆಯ ಆರು ತಾಲೂಕುಗಳ ಸಂಘಟನೆಯ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಮತದಾರರಿಗೆ ಸಮಗ್ರ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚಂದಪ್ಪ ಮುನಿಯಪ್ಪನ್ನೋರ್ ಸಲಹೆ ನೀಡಿದರು.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಾ. ಡಿ.ಜಿ. ಸಾಗರ ಹಾಗೂ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮನೆ ಮನೆಗೆ ತೆರಳಿ ಹೊಸ ಮತದಾರರ ಹೆಸರು ಸೇರ್ಪಡೆ, ಮತದಾರರ ಪಟ್ಟಿಯ ತಿದ್ದುಪಡಿ, ಅರ್ಜಿ ಭರ್ತಿ ಮಾಡುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಬೇಕು. ಎಸ್‌ಐಆರ್‌ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವುದು ಹಾಗೂ ಕುಟುಂಬದ ಮತದಾರರ ದಾಖಲೆಗಳನ್ನು ಬಿಎಲ್‌ಒಗಳಿಗೆ ಸಲ್ಲಿಸುವ ಕುರಿತು ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಪದಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕರಾಗಿ ಮಲ್ಲು ಪೂಜಾರಿ ಕುರುಕುಂದ ಹಾಗೂ ದೇವಿಂದ್ರಪ್ಪ ಹುಲಕಲ್ (ಜೆ) ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಬಳಿಕ ಕದಂಬ ಫೌಂಡೇಶನ್ ಹಾಗೂ ಸುವರ್ಣ ಫೋಕಸ್ ಕನ್ನಡ ದಿನಪತ್ರಿಕೆ ವತಿಯಿಂದ ಗೋವಾ ರಾಜ್ಯದಲ್ಲಿ ಪ್ರದಾನವಾದ ಬುದ್ಧ ಶಾಂತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಂದಪ್ಪ ಮುನಿಯಪ್ಪನ್ನೋರ್ ಅವರನ್ನು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗ ಅಸನಾಪುರ, ಮರೆಪ್ಪ ಕ್ರಾಂತಿ, ಎಂ. ಪಟೇಲ್, ತಾಯಪ್ಪ ಭಂಡಾರಿ, ಭೀಮಶಂಕರ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ತಿಪ್ಪಣ್ಣ ಶಳ್ಳಿಗಿ, ರಂಗಸ್ವಾಮಿ ಗುರುಮಿಟಕಲ್, ರಮೇಶ್ ಬಾಚುಮಟ್ಟಿ, ವೆಂಕಟೇಶ್ ದೇವಪುರ, ಮಲ್ಲಿಕಾರ್ಜುನ ಉರಸಗುಂಡಗಿ, ಬಲಭೀಮ ಬೇವನಿಹಳ್ಳಿ, ಸಂತೋಷ್ ಗುಂಡಹಳ್ಳಿ, ವಾಸು ಕೋಗಿಲ್ಕರ್, ನಾಗರಾಜ ಕೋಡಮ್ಮನಹಳ್ಳಿ, ನಾಗರಾಜ ಹಳಿಸಾಗರ, ಸಿದ್ದಪ್ಪ ಕೋಡಮ್ಮನಹಳ್ಳಿ, ಚನ್ನಬಸ್ಸು, ಯಲ್ಲಪ್ಪ ಚಟ್ನಳ್ಳಿ, ಶರಣಪ್ಪ ಕುರುಕುಂದಿ, ಪರಶುರಾಮ್ ಚಲವಾದಿ, ಮಲ್ಲಪ್ಪ ಚಟ್ನಳ್ಳಿ, ಹೊನ್ನಪ್ಪ ಚಟ್ನಳ್ಳಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.