ಹುಣಸಗಿ | ಒಗ್ಗಟ್ಟಿನಿಂದಲೇ ಗಾಣಿಗ ಸಮಾಜದ ಅಭಿವೃದ್ಧಿ ಸಾಧ್ಯ: ಡಾ. ಸುರೇಶ ಸಜ್ಜನ್
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಹುಣಸಗಿ: ಗಾಣಿಗ ಸಮಾಜವು ಸಂಘಟಿತವಾಗಿ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ರಾಜಕೀಯ ಸ್ಥಾನಮಾನ, ಶೈಕ್ಷಣಿಕ ಪ್ರಗತಿ ಹಾಗೂ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಡಾ. ಸುರೇಶ ಆರ್. ಸಜ್ಜನ್ ಹೇಳಿದರು.
ಪಟ್ಟಣದಲ್ಲಿ ಗಾಣಿಗ ಸಮಾಜದ ವತಿಯಿಂದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಡಾ. ಸುರೇಶ ಆರ್. ಸಜ್ಜನ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ–ಲಿಂಗಾಯತ ಸಮುದಾಯದ ವಿವಿಧ ಒಳಪಂಗಡಗಳು ತಮ್ಮದೇ ಸಂಘಟನೆಗಳನ್ನು ಕಟ್ಟಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಅದೇ ಮಾದರಿಯಲ್ಲಿ ಗಾಣಿಗ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲಿಷ್ಠಗೊಳಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಹೇಳಿದರು.
ಈ ಹಿಂದೆ ವೀರಶೈವ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಗಾಣಿಗ ಸಮಾಜದ ಅಭಿವೃದ್ಧಿಗೂ ಬಳಸಿಕೊಳ್ಳುವ ಸಂಕಲ್ಪ ಹೊಂದಿದ್ದೇನೆ. ಸಮಾಜದ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಯುವಕರು ರಾಜಕೀಯ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಬೇಕು. ಜೊತೆಗೆ ಇತರೆ ಸಮಾಜಗಳೊಂದಿಗೆ ಸೌಹಾರ್ದತೆ, ಪ್ರೀತಿ ಹಾಗೂ ಸಹಬಾಳ್ವೆಯ ಮನೋಭಾವದಿಂದ ಸಮಾಜ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಮುಖಂಡ ಗುರುಲಿಂಗಪ್ಪ ಸಜ್ಜನ್ ಮಾತನಾಡಿ, ಡಾ. ಸುರೇಶ ಸಜ್ಜನ್ ಅವರು ಸಹಕಾರ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಸಮಾಜದ ಮುಖಂಡರಾದ ಬಸವರಾಜ್ ಸಜ್ಜನ್ ಹಾಗೂ ರಾಜು ಸಾಲವಾಡಗಿ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ, ಸೈನಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ಗಾಣಿಗ ಸಮಾಜದ ನೂತನ ಅಧ್ಯಕ್ಷ ಡಾ.ಸುರೇಶ ಸಜ್ಜನ್ ಅವರನ್ನು ಸಮಾಜದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಮಾಜದ ಮುಖಂಡರಾದ ಚಂದ್ರಶೇಖರ ಬೋರಮಗುಂಡ್, ನಿಂಗನಗೌಡ ಕಲ್ಲದೇವನಹಳ್ಳಿ, ಚಂದ್ರಶೇಖರ ಸಜ್ಜನ್, ಪ್ರಕಾಶ ಸಜ್ಜನ್, ಪರಮಣ್ಣ ಕಮತಗಿ ಕಕ್ಕೇರಾ, ವಿಜಯಕುಮಾರ ಗುಡಗುಂಟಿ, ಬಸವರಾಜ್ ಸಜ್ಜನ್, ಪ್ರಕಾಶ್ ಸಜ್ಜನ್, ಪರಮಾನಂದ ಚಟ್ಟಿ, ನಾಗಪ್ಪ ಸಜ್ಜನ್, ಬಸವರಾಜ್ ಕಮತಗಿ ಕಕ್ಕೇರಾ ಸೇರಿದಂತೆ ಸಮಾಜದ ಇತರರಿದ್ದರು. ಸಂಗಮ್ಮ ಸಜ್ಜನ್ ಸ್ವಾಗತಿಸಿ ನಿರೂಪಿಸಿದರು. ಶ್ರೀಶೈಲ್ ಸಜ್ಜನ್ ವಂದಿಸಿದರು.