ಬೇಸಿಗೆ ಮುನ್ನವೇ -ಯಾದಗಿರಿ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಹೆಚ್ಚಳ!
ಕೆಂಭಾವಿ : ಅವಧಿಗೂ ಮುನ್ನವೇ ವಾಡಿಕೆಗಿಂತ ಹೆಚ್ಚು ಬಿಸಿಲಿನ ತಾಪಕ್ಕೆ ಗುರಿಯಾಗುತ್ತಿರೋ ಕಲ್ಯಾಣ ಕರ್ನಾಟಕದ ಜನರು ಬಿಸಿಗೆ ಮುನ್ನವೇ ಬಿರು ಬಿಸಿಲಿನ ತಾಪ ಎದುರಿಸಬೇಕಾದ ಅನಿವಾರ್ಯತೆ ಇದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಲ್ಯಾಣ ಕರ್ನಾಟಕದಲ್ಲಿ ಭಾರಿ ತಾಪಮಾನ ಇರುತ್ತೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇನ್ನೂ ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ನಲ್ಲಿ ಪ್ರತಿ ವರ್ಷವೂ ಬಿಸಿಲಿನ ತಾಪಮಾನ ಹೆಚ್ಚಾಗಿ ಕಂಡು ಬರುತ್ತದೆ. ಕರ್ನಾಟಕ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಈಗಾಗಲೇ ಬಿಸಿಲಿನ ಧಗೆ ಹೆಚ್ಚಾಗಿದ್ದು, ಅದರ ಪರಿಣಾಮ ಕರ್ನಾಟಕದ ಮೇಲೂ ಬೀರುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇದೀಗ ಬಿಸಿಲ ತಾಪಮಾನ ಹೆಚ್ಚಳವಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಇದೀಗ ಬಿಸಿಲ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ನಷ್ಟು ದಾಟುತ್ತಿದೆ. ಹೀಗಾಗಿ ಜಿಲ್ಲೆಯ ಜನರು ಬೇಸಿಗೆ ದಿನಗಳ ಬಗ್ಗೆ ಚಿಂತೆ ಮಾಡುವಂತಾಗಿದೆ. ಅವಧಿಗೆ ಮುನ್ನವೇ ಹೆಚ್ಚು ಬಿಸಿಲಿಗೆ ಪಕ್ಕದ ಆಂದ್ರಪ್ರದೇಶ, ತಮಿಳುನಾಡಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಅದರ ಪರಿಣಾಮವಾಗಿ ಅಲ್ಲಿನ ಬಿಸಿ ಗಾಳಿಗೆ ರಾಜ್ಯದ ಮೇಲೂ ಪರಿಣಾಮ ಬೀರಿದೆ.
ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಕಲಬುರಗಿ, ಬೀದರ್ ಸೇರಿ ಬಹುತೇಕ ಜಿಲ್ಲೆಗಳು ಸೇರಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಕನಿಷ್ಟ ತಾಪಮಾನವೂ ಕೂಡಾ 16ರಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಚಳಿಗಾಲದ ಅಂತ್ಯದ ನಡುವೆಯೆ ಬೆಸಿಗೆ ಝಳ ಕಾಲಿಟ್ಟಿದ್ದು, ಅವಧಿಗೂ ಮೊದಲೇ ರಾಜ್ಯದಲ್ಲಿ ಬೆಸಿಗೆ ಆರಂಭವಾಗಿದೆ. ಬಿಸಿಲ ನಾಡು ಕಲಬುರಗಿ ಹಾಗೂ ಯಾದಗಿರಿ, ರಾಯಚೂರಿನಲ್ಲಿ ಇದೀಗ ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಏರಿಕೆಯಾಗುತ್ತಿದೆ. ಈಗಾಗಲೇ ಯಾದಗಿರಿಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತಂಪು ಪಾನೀಯಗಳಿಗೆ ಬೇಡಿಕೆ :
ಚಳಿಗಾಲ ಇನ್ನೂ ಮುಗಿಯದೇ ಇದ್ದರೂ ಹೆಚ್ಚುತ್ತಿರುವ ಬಿಸಿಲಿನ ತಾಪವನ್ನು ತಣಿಸಿಕೊಳ್ಳಲು ಜನರು ಹಣ್ಣು-ಎಳೆನೀರು, ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಕೊಡೆ ಕೆಳಗೆ ಆಸರಿಸಿದರೆ, ಮನೆಗಳಲ್ಲಿ ಫ್ಯಾನ್, ಎಸಿ ಸೇರಿದಂತೆ ತಂಪುಕಾರಕ ಯಂತ್ರಗಳನ್ನು ನಿರಂತರವಾಗಿ ಬಳಕೆ ಮಾಡುತ್ತಿದ್ದಾರೆ.
ವಿದ್ಯುತ್ ಬೇಡಿಕೆ ಕೂಡಾ ಏರಿಕೆ :
ತಾಪಮಾನ ಏರಿಕೆ ಮತ್ತು ಶುಷ್ಕ ಹವಾಮಾನ ಮುಂದುವರಿಯುವದರಿಂದ ಯಾದಗಿರಿ, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಏರಿಕೆ ಕಂಡು ಬರುತ್ತಿದೆ. ರಾಜ್ಯದ ಇಂಧನ ಬೇಡಿಕೆ ಈಗಾಗಲೇ ಕಳೆದ ವರ್ಷದ ಗರಿಷ್ಠ ಮಟ್ಟವನ್ನು ಮೀರಿದೆ. ಕಳೆದ ವರ್ಷಕ್ಕಿಂತ ಈ ಬಾರಿ 200 ಮೆಗಾವ್ಯಾಟ್ ಹೆಚ್ಚಳವಾಗಿದೆ.
ಇನ್ನಷ್ಟು ತಾಪಮಾನ ಹೆಚ್ಚಳ :
ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಉತ್ತರ ಭಾರತದ ಭಾಗಗಳಿಂದ ಹೆಚ್ಚಾಗಿ ತೇವವಿರುವ ತಾಪಮಾನದ ಅನುಭವ ಆಗುತ್ತಿದ್ದು, ನಮ್ಮ ರಾಜ್ಯದ ಮೇಲೂ ಇದರ ಪರಿಣಾಮ ಬಿರಲಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ 33 ರಿಂದ 34 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲ ತಾಪಮಾನವಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ತಾಪಮಾನ ಏರಿಕೆಯಾಗುತ್ತದೆ. ಹೀಗಾಗಿ ಬಿಸಿಗೆ ಮುನ್ನವೇ ಜಿಲ್ಲೆಯ ಜನರು ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಷ್ಟು ಬಿಸಿಲಿನ ತಾಪ ಹೆಚ್ಚಳವಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.