ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ

ನದಿ ಕಡೆಗೆ ಬರದಂತೆ ಪೊಲೀಸ್ ಎಚ್ಚರಿಕೆ

Update: 2026-07-31 18:20 IST

ಸುರಪುರ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲಾಗುತ್ತಿದ್ದು ಸಾರ್ವಜನಿಕರು ನದಿ ದಂಡೆಯ ಕಡೆಗೆ ಬಾರದಂತೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆಯ ಜಾಗೃತಿ ಮೂಡಿಸಲಾಯಿತು.

ತಾಲೂಕಿನ ತಿಂಥಣಿ ಗ್ರಾಮದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದ ಬಳಿಯಲ್ಲಿನ ಕೃಷ್ಣಾ ನದಿಯ ದಡದಲ್ಲಿ ಪೊಲೀಸ್ ಇಲಾಖೆಯ ಎ ಎಸ್ ಐ ಬೀರಪ್ಪ ಅವರ ನೇತೃತ್ವದಲ್ಲಿ ನಡೆದ ಜಾಗೃತಿ ಪ್ರಚಾರದಲ್ಲಿ ದಯಾನಂದ ಜಮಾದಾರ ಮಾತನಾಡಿ, ಕೃಷ್ಣ ನದಿಗೆ ಈಗ 1 ಲಕ್ಷ 20 ಸಾವಿರ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವ ಕಾರಣ ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಬಟ್ಟೆ ಬರೆಯಲು ತೊಳೆಯಲು ಸ್ನಾನಕ್ಕೆ ಎಂದು ನದಿ ದಂಡೆಯ ಕಡೆಗೆ ಬರಬಾರದು. ಅಲ್ಲದೆ ನಿಮ್ಮ ಜಾನುವಾರುಗಳನ್ನು ನದಿಯ ಕಡೆ ಬಾರದಂತೆ ಎಚ್ಚರ ವಹಿಸಬೇಕು. ಹಾಗೂ ನದಿ ದಂಡೆಯಲ್ಲಿರುವ ಪಂಪ್ ಸೆಟ್ ಮೋಟರ್‌ಗಳನ್ನು ರಕ್ಷಿಸಿಕೊಳ್ಳಬೇಕು. ರಾತ್ರಿ ಇನ್ನಷ್ಟು ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತುಂಬಾ ಜಾಗೃತೆಯನ್ನು ವಹಿಸಬೇಕು ಯಾವುದೇ ಕಾರಣಕ್ಕೂ ನದಿ ದಂಡೆಗೆ ಆಗಮಿಸಿ ಕೈಕಾಲು ತೊಳೆದುಕೊಳ್ಳುವುದಾಗಲಿ ಸ್ನಾನಕ್ಕೆ ಎಂದು ಇಳಿಯುವುದಾಗಲಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ, ಅಂಬ್ರೇಶ ಚಿಕ್ಕನಹಳ್ಳಿ,ನಂದಪ್ಪ ಗಣಜಲಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ರಾಮದುರ್ಗ, ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಯಲ್ಲಪ್ಪ ಅರಳಗುಂಡಿಗಿ, ಬಿಲ್ ಕಲೆಕ್ಟರ್ ಯಂಕೋಬ ಸೇರಿದಂತೆ ದೇವಸ್ಥಾನದ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News