ಸೈದಾಪುರ: ಕರ್ನಾಟಕ ಚಾಲಕರ ಒಕ್ಕೂಟದಿಂದ ಗುರುತಿನ ಚೀಟಿ, ಆಯ್ಕೆ ಪತ್ರ ವಿತರಣೆ
ಪ್ರತಿಯೊಬ್ಬ ಚಾಲಕರೂ ಸಂಘಟಿತರಾಗಿ ಮುಂದೆ ಸಾಗಬೇಕು: ಬಸ್ಸುಗೌಡ ಚಟ್ನಳ್ಳಿ ಕರೆ
ಸೈದಾಪುರ: ಕರ್ನಾಟಕ ಚಾಲಕರ ಒಕ್ಕೂಟ ಸೈದಾಪುರ ಹೋಬಳಿ ಘಟಕದ ವತಿಯಿಂದ ಆಟೋ ಹಾಗೂ ಗೂಡ್ಸ್ ವಾಹನ ಚಾಲಕರಿಗೆ ಗುರುತಿನ ಚೀಟಿ ಮತ್ತು ನೂತನ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಸ್ಸುಗೌಡ ಚಟ್ನಳ್ಳಿ ಅವರು ಮಾತನಾಡಿ, ಚಾಲಕರ ಒಗ್ಗಟ್ಟು, ಕ್ಷೇಮಾಭಿವೃದ್ಧಿ ಹಾಗೂ ಅವರ ಹಕ್ಕುಗಳ ಹೋರಾಟದ ಕುರಿತು ಪ್ರಾಮುಖ್ಯವಾಗಿ ಬೆಳಕು ಚೆಲ್ಲಿದರು. ಚಾಲಕರ ವೃತ್ತಿ ಗೌರವವನ್ನು ಎತ್ತಿಹಿಡಿಯುವಲ್ಲಿ ಒಕ್ಕೂಟದ ಪಾತ್ರ ಹಿರಿದಾಗಿದ್ದು, ಪ್ರತಿಯೊಬ್ಬ ಚಾಲಕರೂ ಸಂಘಟಿತರಾಗಿ ಮುಂದೆ ಸಾಗಬೇಕೆಂದು ಅವರು ಕರೆ ನೀಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸೈದಾಪುರ ಪೊಲೀಸ್ ಠಾಣೆಯ ಎಎಸ್ಐ ಅಯ್ಯಪ್ಪ ಆಗಮಿಸಿದ್ದರು. ಒಕ್ಕೂಟದ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಮಲ್ಲಣ್ಣಗೌಡ, ಆಟೋ ಘಟಕದ ಅಧ್ಯಕ್ಷ ಸಾಂಗ್ಲಿಯಾನ, ಶಹಾಪುರ ತಾಲೂಕು ಅಧ್ಯಕ್ಷ ಹೊನ್ನಪ್ಪ ಜಂಗ್ಲಿ, ಗೋಗಿ ಗ್ರಾಮ ಘಟಕದ ಅಧ್ಯಕ್ಷ ತಿರುಪತಿ ಹಾಗೂ ಕಡೆಚೂರು ಗ್ರಾಮ ಘಟಕದ ಅಧ್ಯಕ್ಷ ರಾಜು ಮಡಿವಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೈದಾಪುರ ಹೋಬಳಿ ಘಟಕದ ಅಧ್ಯಕ್ಷ ಸನ್ವೀರ ನಾಯಕ ಹಾಗೂ ಗೌರವಾಧ್ಯಕ್ಷ ಶರಣಗೌಡ ಹುಣಸೆಮರ ಅವರಿಗೆ ನೂತನ ಜವಾಬ್ದಾರಿಯ ಆಯ್ಕೆ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಇದರ ಜೊತೆಗೆ ಸ್ಥಳೀಯ ಆಟೋ ಮತ್ತು ಗೂಡ್ಸ್ ಚಾಲಕರಿಗೆ ಒಕ್ಕೂಟದ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ವಿವಿಧ ಮಟ್ಟದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಇನ್ನಿತರರಿದ್ದರು.