ಯಾದಗಿರಿ: ಸೂಕ್ತ ಸಾರಿಗೆ ಬಸ್‌ಗಳ ಸೌಕರ್ಯಕ್ಕೆ ಆಗ್ರಹಿಸಿ ವಿಧ್ಯಾರ್ಥಿಗಳ ಪ್ರತಿಭಟನೆ
ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮ ದೊಡ್ಡದಾಗಿದ್ದು, ಹೋಬಳಿ ಕೇಂದ್ರವಾಗಿದೆ, ಇಲ್ಲಿಂದ ದಿನಾಲೂ ಬೆಳಿಗ್ಗೆ ಯಾದಗಿರಿ ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ಸಹಸ್ರಾರು ವಿಧ್ಯಾರ್ಥಿಗಳು ತೆರಳುತ್ತಾರೆ. ಆದರೆ ಕಳೆದ 15 ದಿನಗಳಿಂದ ಸೂಕ್ತ ಬಸ್ ಸೌಕರ್ಯವಿಲ್ಲದೆ ತೊಂದರೆ ಅನುಭವಿಸಿ ಕೊನೆಗೆ ಆಕ್ರೋಶಗೊಂಡು ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆ ಹತ್ತಿಕುಣಿಯಲ್ಲಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿದಿನ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ಗಳು ಯಾದಗಿರಿಯಿಂದ ಸೇಡಂ ಇನ್ನಿತರ ಗ್ರಾಮಗಳಿಗೆ ಬಸ್‌ಗಳು ಹೋಗಿ ಬರುತ್ತಿದ್ದವು. ಸದಾ ಬಸ್‌ಗಳು ಜನರಿಂದ ತುಂಬಿರುತ್ತವೆ, ಪರಿಣಾಮ ಚಾಲಕರು ಹತ್ತಿಕುಣಿಯಲ್ಲಿ ಬಸ್‌ಗಳನ್ನು ನಿಲ್ಲಿಸದೇ ಯಾದಗಿರಿಗೆ ಬರುತ್ತಾರೆ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವಿದ್ಯಾರ್ಥಿಗಳ ಹಲವಾರು ದಿನಗಳ ತೊಂದರೆಗಳನ್ನು ಗಮನಿಸಿದ ಗ್ರಾಮದ ಮುಖಂಡರಾದ ಶರಣಪ್ಪಗೌಡ ಮಾಲಿ ಪಾಟೀಲ್, ಭೀಮರಡ್ಡಿ ರಾಂಪೂರಹಳ್ಳಿ, ವೆಂಕಟರಡ್ಡಿ ಕೌಳೂರ, ನಾಗಪ್ಪ ಗೋಪಾಳಪುರ, ಅಂಬು ನಾಯಕ, ಮಲ್ಲಿಕಾರ್ಜುನ ಕನ್ನಡಿ, ಹಣಮಂತ ನಾಯಕ, ಶರಣು ಗಡೇದ ಇತರರು ಪ್ರತಿಭಟನೆಗೆ ಸಾಥ್ ನೀಡಿದರು.
ವಿಷಯ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ವಿರೇಶ, ಸಾರಿಗೆ ಇಲಾಖೆ ಇನ್ಸಪೆಕ್ಟರ್ ಬಸಣ್ಣಗೌಡ ಇನ್ನೊಂದು ಬಸ್ ತೆಗೆದುಕೊಂಡು ಗ್ರಾಮಕ್ಕೆ ಆಗಮಿಸಿ, ವಿಧ್ಯಾರ್ಥಿಗಳ ಹಾಗೂ ಗ್ರಾಮದ ಮುಖಂಡರ ಜೊತೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.