×
Ad

ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಆರೋಗ್ಯ ತಪಾಸಣೆ, ನಿವೇಶನ ಭರವಸೆ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

Update: 2025-09-15 21:19 IST

ಯಾದಗಿರಿ: ನನ್ನ ಅಧಿಕಾರ ವ್ಯಾಪ್ತಿಗೆ ಬರುವ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಅವಕಾಶವಿದ್ದರೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭರವಸೆ ನೀಡಿದರು.

ಯಾದಗಿರಿಯ ದೋರನಹಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ನೋಂದಣಿ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ಇದೆ. ನಮ್ಮ ಸರ್ಕಾರ ನಿಮಗೆ ಮೈತ್ರಿ ಯೋಜನೆಯಡಿ ಪಿಂಚಣಿ ನೀಡಿದೆ. ವಾಸಿಸಲು ಸ್ವಂತ ಮನೆ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಯೋಜನೆಗಳಡಿ ಉಚಿತ ನಿವೇಶನ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಜಿಪಂ ಸಿಇಓ ಲವೀಶ್ ಒರಡಿಯಾ ಮಾತನಾಡಿ,ರಾಜ್ಯದಲ್ಲೇ ಇದು ವಿಶೇಷ ಕಾರ್ಯಕ್ರಮ. ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಂವಿಧಾನದಲ್ಲಿ ನಿಮಗೂ ಮೂಲ ಸೌಲಭ್ಯಗಳ ಹಕ್ಕು ಇದೆ. ಈ ಆರೋಗ್ಯ ತಪಾಸಣೆಯಲ್ಲಿ ಹಾರ್ಮೋನ್ ಪರೀಕ್ಷೆಯೂ ಸೇರಿದ್ದು, ಒಂದು ಪರೀಕ್ಷೆಗೆ 2,000 ರೂ. ವೆಚ್ಚವಾಗುತ್ತದೆ. ಇದನ್ನು ಐಡಿಬಿಐ ಬ್ಯಾಂಕ್ ಪ್ರಾಯೋಜಿಸಿದೆ ಎಂದರು.

ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಡಿ.ಎಚ್.ಓ ಡಾ.ಮಹೇಶ ಬಿರಾದಾರ, ಕನ್ನಡ ಹೋರಾಟಗಾರ ಡಾ.ಶರಣು ಬಿ.ಗದ್ದುಗೆ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಸಂಕೀನ್, ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಮಾಯಾ ಎಸ್.ಆರ್.ನಾಯಕ, ಸಿಎಚ್‌ಸಿ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಪದ್ಮಾನಂದ ಗಾಯಕವಾಡ, ಡಾ.ಮಲ್ಲಪ್ಪ ನಾಯ್ಕಲ್, ಡಾ.ಸಂಜಯ ರಾಯಚೂರಕರ್, ಡಾ.ನೀಲಾಂಬಿಕ ಎಂ.ಜಾಪಟಿ, ಟಿಎಚ್‌ಓ ಡಾ.ರಮೇಶ ಗುತ್ತೇದಾರ, ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಶ್ರೀರಾಮುಲು, ವೈದ್ಯಾಧಿಕಾರಿಗಳು ಮತ್ತು ಅನೇಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News