ಹುಣಸಗಿ | ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದ್ದು: ಮಾನಪ್ಪ ಸತ್ಯ
ಹುಣಸಗಿ : ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ತಾಯಂದಿರ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ರಾಜನಕೋಳುರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಮಾನಪ್ಪ ಸತ್ಯ ಹೇಳಿದರು.
ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳುರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ (ಪ.ಪಂ.) ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಯಂದಿರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಕರ್ತವ್ಯ ಮುಗಿಯುವುದಿಲ್ಲ. ಮನೆಯಲ್ಲಿಯೂ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ನಡೆಯುತ್ತಿರುವ ಇದು ಎರಡನೇ ಪಾಲಕರ ಸಭೆಯಾಗಿದ್ದು, ಪಾಲಕರು ಹಾಗೂ ಶಿಕ್ಷಕರು ಪರಸ್ಪರ ಸಹಕಾರದಿಂದ ಮಕ್ಕಳ ಭವಿಷ್ಯದ ಹಾದಿಗೆ ಉತ್ತಮ ಮಾರ್ಗ ರೂಪಿಸುವುದೇ ಈ ಸಭೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ತಾಯಂದಿರು, ಪಾಲಕರು ಹಾಗೂ ಶಾಲೆಯ ಮಕ್ಕಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.