×
Ad

ಯಾದಗಿರಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ, ಪರಿಶೀಲನೆ

Update: 2025-09-28 21:14 IST

ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಇಂದು ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.

ಇಂದು ಬೆಳಿಗ್ಗೆ ಅಲಿಪುರ ತಾಂಡಾ, ಅಲಿಪುರಗಳಲ್ಲಿ ಅತಿ ವೃಷ್ಟಿಯಿಂದ ಹಾನಿಗೊಳಗಾದ ಭತ್ತ, ಇತರೆ ಬೆಳೆ ಪರಿಶೀಲಿಸಿದರು. ನಂತರ ಡಾನ್ ಬಾಸ್ಕೋ ಶಾಲೆ ಹತ್ತಿರದ ಸೇತುವೆ ಓವರ್ ಫ್ಲೋ ಆದ ಬಗ್ಗೆ ಪರಿಶೀಲನೆಯನ್ನು ಅವರು ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅತೀವೃಷ್ಟಿ,ಭೀಮಾ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವದರಿಂದ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಹಿಂದಿನ ಬೆಳೆ ಸಮೀಕ್ಷೆಯನ್ವಯ 25- ರಿಂದ 27 ಸಾವಿರ ಹೆ.ಬೆಳೆನಾಶವಾದ ಬಗ್ಗೆ ವರದಿಯಾಗಿತ್ತು. ಈಗ ಸುಮಾರು 1.11 ಲಕ್ಷಕ್ಕೂ ಅಧಿಕ ಬೆಳೆ ನಾಶವಾದ ಬಗ್ಗೆ ಅಂದಾಜಿಸಲಾಗಿದೆ. ಆದರೆ ಈ ಕುರಿತು ಪುನರ್ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ಬೆಳೆನಾಶ ವರದಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಎಲ್ಲ ಪರಿಸ್ಥಿತಿಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಮೋಬೈಲ್ ಕರೆ ಮಾಡಿ ಗಮನಕ್ಕೆ ತರಲಾಗಿದೆ ಎಂದ ಸಚಿವರು ಕಂದಾಯ ಸಚಿವರು ಕೂಡ ಜಿಲ್ಲೆಗೆ ಭೇಟಿ ನೀಡುವರು. ಜಿಲ್ಲೆಯ ಜನತೆಯೊಂದಿಗೆ ಪಕ್ಷಭೇದ ಮರೆತು ನಾವಿದ್ದೇವೆ. ವಿವಿಧ ಪಕ್ಷ,ಸಂಘಟನೆ, ಜನ ಕೂಡ ಪರಸ್ಪರ ಸಹಾಯಕ್ಕೆ ಬರುತ್ತಿದ್ದಾರೆ ಎಂದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹತ್ತಿ, ಭತ್ತ,ಹೆಸರು, ತೊಗರಿಬೇಳೆ ನಾಶವಾಗಿದೆ.ರೈತರು ಸಂಕಷ್ಟದಲ್ಲಿದ್ದು ,ಅವರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಬೆಳೆನಾಶ ಅನುಭವಿಸಿರುವ ಪ್ರತಿ ರೈತರ ಜಮೀನಿನ ಪುನರ್ ಸಮೀಕ್ಷೆ ಆಗಲಿದೆ.ಜಿಲ್ಲಾಡಳಿತ ಕೂಡ ಈ ಹಿಂದೆ ಕೃಷ್ಣ ಹಾಗೂ ಭೀಮಾ ನದಿ ಪ್ರವಾಹ ನಿರ್ವಹಿಸಿದ ಅನುಭವ ಹೊಂದಿದ್ದು, ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತರು ಹಾಗೂ ಗ್ರಾಮೀಣ ಪ್ರದೇಶಕ್ಕೆ ನೆರವಾಗಲಿದ್ದಾರೆ ಎಂದ ಅವರು ಗುರುಮಠಕಲ್, ಯಾದಗಿರಿ ಹಾಗೂ ವಡಗೇರಾ ತೀವ್ರ ತೊಂದರೆಗೆ ಒಳಗಾಗಿದ್ದು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಚಿವರು ನಂತರ, ಭೀಮಾ ನದಿ ಬ್ರೀಡ್ಜ ಕಮ್ ಬ್ಯಾರೇಜ್, ಮುಳುಗಡೆಯಾದ ಜಲಶುದ್ಧೀಕರಣ ಘಟಕ, ಹಾನಿಯಾದ ಭತ್ತದ ಬೆಳೆ,ಹಾಲಗೇರಾ ಕ್ರಾಸ್,ಗೋಡಿಯಾಳ,ಕುಮನೂರ, ಹುರುಸಗುಂಡಗಿ ಹಾಗೂ ರೋಜಾ ಶಿರವಾಳದಲ್ಲಿ ಕಾಳಜಿ ಕೇಂದ್ರಗಳಿಗೆ, ಮನೆಗಳಿಗೆ ಭೇಟಿ ನೀಡಿ ನಾಗರಿಕರಿಗೆ ಭೇಟಿ ಮಾಡಿದರು.ಅದರಂತೆ ನಾಯ್ಕಲ್,ಅಣಬಿಗಳಲ್ಲಿ, ಬೆಳೆ ಹಾನಿಯ ಬಗ್ಗೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಗರ ಶಾಸಕ ರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್,ಸಂಜೀವ್ ಸ್ಯಾಮ್ಸನ್ ಮಾಳಿಕೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News