ಸುರಪುರ: ನಾಡಿನ ಅತ್ಯಂತ ಹಿರಿಯ ಕನ್ನಡಪರ ಸಂಘಟನೆಗಳಲ್ಲಿ ಒಂದಾಗಿರುವ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ನಿಸ್ವಾರ್ಥ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಖ್ಯಾತ ಉದ್ಯಮಿ ಕಿಶೋರ ಚಂದ್ ಜೈನ್ ಹೇಳಿದರು.

ಪಟ್ಟಣದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ 84ನೇ ವರ್ಷದ ನಾಡಹಬ್ಬ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಸ್ವಾತಂತ್ರ್ಯಪೂರ್ವದಲ್ಲಿಯೇ ಈ ಸಂಘವನ್ನು ಕಟ್ಟಿ ಬೆಳೆಸಿ, ನಾಡು-ನುಡಿಗಾಗಿ ಶ್ರಮಿಸಿದ ದಿವಂಗತ ಎಂ.ಆರ್. ಬುದ್ಧಿವಂತ ಶೆಟ್ಟಿ ಹಾಗೂ ಅವರ ಗೆಳೆಯರ ಬಳಗವನ್ನು ಸ್ಮರಿಸುವುದಾಗಿ ತಿಳಿಸಿದರು. ಸಂಘದ ಮೂಲಕ ಸಾಹಿತಿಗಳು ಹಾಗೂ ಕವಿಗಳನ್ನು ಆಹ್ವಾನಿಸಿ ಕನ್ನಡ ನಾಡು-ನುಡಿಯ ಸೇವೆ ಮಾಡಿದ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಕನ್ನಡ ಸಾಹಿತ್ಯ ಸಂಘದಲ್ಲಿ ನಡೆಯುವ ಐದು ದಿನಗಳ ಕಾರ್ಯಕ್ರಮ ಕನ್ನಡಿಗರಿಗೆ ಹಾಗೂ ಸಾಹಿತ್ಯ ಪ್ರೇಮಿಗಳಿಗೆ ಹಬ್ಬದ ಸಂಭ್ರಮವನ್ನು ನೀಡುತ್ತದೆ. ಸಾಹಿತ್ಯಾಸಕ್ತರು, ಕವಿಗಳು, ಲೇಖಕರು ಮತ್ತು ಕಲಾವಿದರ ಸಾಂಸ್ಕೃತಿಕ ಉತ್ಸವವನ್ನು ವೀಕ್ಷಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಬಹಳ ಸಂತೋಷದ ಸಂಗತಿಯಾಗಿದೆ ಎಂದರು.

ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಜಗನ್ನಾಥರಾವ್ ರಫಗಾರ ಮಾತನಾಡಿ, ಆಡಂಬರದ ಬದುಕಿಗಿಂತ ಸರಳ ಮತ್ತು ಪ್ರಾಮಾಣಿಕ ಬದುಕು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನೆಮ್ಮದಿ ಎಂಬುದು ಹೊರಗಿನ ಪ್ರಪಂಚದಲ್ಲಿ ಸಿಗುವ ವಸ್ತುವಲ್ಲ; ಅದು ನಮ್ಮ ಆಲೋಚನೆ ಮತ್ತು ಮನಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಸೂಗರೇಶ ವಾರದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಜಶೇಖರ ಹುಟಗೂರ ಹಾಗೂ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದತ್ತುರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್‌ನ ಯೋಜನಾಧಿಕಾರಿ ನಾಗೇಶ ಉಪಸ್ಥಿತರಿದ್ದರು. ಪದ್ಮಾಕ್ಷಿ ಪ್ರಾರ್ಥನಾ ಗೀತೆ ಹಾಡಿದರು. ಪ್ರಕಾಶ ಆಲಬನೂರ ಸ್ವಾಗತಿಸಿದರು. ಶಿಕ್ಷಕ ಎಚ್.ವೈ. ರಾಠೋಡ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಿವರಾಜಪ್ಪ ಗೋಲಗೇರಿ, ಗೋಪಾಲಯ್ಯ ಪೋಲಂಪಲ್ಲಿ, ವಾಸುದೇವ ಓಬಳಶೆಟ್ಟಿ, ಶರಣಗೌಡ ಪಾಟೀಲ್, ಸೋಮರಾಯ ಶಖಾಪುರ, ಯಂಕಣ್ಣ ಗದ್ವಾಲ್, ಮೌನೇಶ ನಾಲವಾರ, ಗೋವಿಂದರಾಜ ಶಹಾಪುರಕರ್, ರಘುರಾಮ ಕಡಬೂರ, ಶ್ರೀರಂಗು ಮಿರಿಯಾಲ, ಜ್ಞಾನದೇವ ಪಾಣಿಭಾತೆ, ಹರೀಶ ತ್ರಿವೇದಿ, ರಮೇಶ ಡೊಳ್ಳೆ, ಲಕ್ಷ್ಮೀಕಾಂತ ಶಿರವಾಳ, ಅಮರೇಶ ಬಿ. ಕುಂಬಾರ, ರಾಘವೇಂದ್ರ ಭಕ್ರಿ, ದಿಲೀಪ್ ಗೆಜ್ಜಿ, ಸತೀಶ ಪೊಲಂಪಲ್ಲಿ, ನಾಗರಾಜ್ ಗದ್ವಾಲ್, ಮೋಹನ ತ್ರಿವೇದಿ ಸೇರಿದಂತೆ ಸಂಘದ ಮಹಿಳಾ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor