ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ; ಯುದ್ಧೋಪಾದಿಯಲ್ಲಿ ಕೆಲಸ ಮಾಡಿ: ಸಚಿವ ಶರಣಪ್ರಕಾಶ್ ಪಾಟೀಲ್ ಸೂಚನೆ
ಬರಗಾಲ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ : ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬರಗಾಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಂತೆಯೇ ಈ ಬಾರಿಯೂ ಮುಂಗಾರು ಸಮರ್ಪಕವಾಗದ ಕಾರಣ ಈಗಾಗಲೇ ಎರಡು ಬೆಳೆಗಳು ಹಾನಿಗೊಳಗಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟರೆ ಎರಡು ದಿನಗಳೊಳಗೆ ದುರಸ್ತಿ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬರ ನಿರ್ವಹಣೆಗೆ ಸರ್ಕಾರ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಬಿಡುಗಡೆಯಾಗಲಿದೆ. ಶಾಸಕರು ಸೂಚಿಸುವ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ತಕ್ಷಣವೇ ಕಾಮಗಾರಿ ಆರಂಭಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟರೂ ಜೆಸ್ಕಾಂ ಸಿಬ್ಬಂದಿ ಸಕಾಲದಲ್ಲಿ ದುರಸ್ತಿ ಮಾಡುತ್ತಿಲ್ಲ. ರೈತರಿಗೆ ನಿರಂತರ ಏಳು ಗಂಟೆಗಳ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಇಂಧನ ಸಚಿವರ ಗಮನಕ್ಕೂ ತಂದಿದ್ದರೂ ಸಮಸ್ಯೆ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಜಿಲ್ಲೆಯಲ್ಲಿ ಟಿಸಿ ದುರಸ್ತಿಗೆ ಎಷ್ಟು ಕೇಂದ್ರಗಳಿವೆ ಹಾಗೂ ಪ್ರತಿದಿನ ಎಷ್ಟು ಟಿಸಿಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಸಮಸ್ಯೆಗಳಿದ್ದರೆ ಜಿಲ್ಲಾಡಳಿತ ಅಥವಾ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು :
ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು. ಬರ ಕಾಮಗಾರಿಗಳು ಆರಂಭವಾದ ಬಳಿಕ ತಾಲೂಕು ಕೇಂದ್ರದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಹೂಡಿ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸಬೇಕು ಎಂದು ಸಚಿವ ಶರಣಪ್ರಕಾಶ ಪಾಟೀಲ್ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ವೇಣುಗೋಪಾಲ ನಾಯಕ್, ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಪಂ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಜಿಲ್ಲಾ ಮಟ್ಟದ ಅಧಕಾರಿಗಳು ಇದ್ದರು.