ಸುರಪುರ | ತಂಪು ಪಾನೀಯಗಳ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ
ಸುರಪುರ : ತಾಲೂಕಿನ ಖಾನಾಪುರ ಎಸ್.ಎಚ್. ಗ್ರಾಮ ಪಂಚಾಯಿತಿಯ ರುಕ್ಮಾಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಂಪು ಪಾನೀಯಗಳ ಸೇವನೆಯಿಂದ ಉಂಟಾಗುವ ಆರೋಗ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಇಲಿಯಾಸ್ ಪರ್ವೇಜ್ ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ತಂಪು ಪಾನೀಯಗಳ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ತಂಪು ಪಾನೀಯಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಆರೋಗ್ಯಕರ ಆಹಾರ ಮತ್ತು ಪಾನೀಯಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಂಪು ಪಾನೀಯಗಳಲ್ಲಿ ಬಳಸುವ ಕೆಲವು ಅಂಶಗಳ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಿ, ಅವುಗಳ ಸಂಯೋಜನೆ ಮತ್ತು ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಬಳಿಕ ವಿದ್ಯಾರ್ಥಿಗಳು ಆರೋಗ್ಯದ ಹಿತದೃಷ್ಟಿಯಿಂದ ತಂಪು ಪಾನೀಯಗಳ ಸೇವನೆಯನ್ನು ತಗ್ಗಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರದ ಶರಣಪ್ಪ ಹೊಸಮನಿ, ಯಲ್ಲಪ್ಪ ಪಾಟೀಲ, ರಮೇಶ ಚಿಲ್ಲಾಳ, ರಾಹುಲ್ ದಾನವಾಡ, ಚಂದ್ರು ದಾಸರ, ಹೋರಾಟಗಾರ ಭಾಗನಾಥ ಗುತ್ತೇದಾರ ಸೇರಿದಂತೆ ಎಲ್ಲಾ ಶಿಕ್ಷಕರು ಅಜಿಮ್ ಪ್ರೇಮ್ ಜಿ ಫೌಂಡೇಶನ್ ನ ಸಿಬ್ಬಂದಿಗಳು ಹಾಗೂ ನೂರಾರು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.