ಸುರಪುರ | ಶಾಖಾಪುರ ದಲಿತರ ಮೇಲಿನ ಹಲ್ಲೆಗೆ ಖಂಡನೆ; ಆರೋಪಿಗಳ ಬಂಧನಕ್ಕೆ ಆಗ್ರಹ

ಆರೋಪಿಗಳನ್ನು ಬಂಧಿಸದಿದ್ದರೆ ಸುರಪುರ ಬಂದ್ : ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಕೆ

Update: 2026-08-05 19:04 IST

ಸುರಪುರ : ಶಾಖಾಪುರ ಎಸ್.ಹೆಚ್. ಗ್ರಾಮದಲ್ಲಿ ದಲಿತ ಸಮುದಾಯದ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸುರಪುರ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಕೆ ನೀಡಿದರು.

ಶಾಖಾಪುರ ಗ್ರಾಮದ ದಲಿತ ಸಮುದಾಯದ ಜನರೊಂದಿಗೆ ಪಟ್ಟಣದ ಡಿವೈಎಸ್ಪಿ ಕಚೇರಿ ಎದುರು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ಸಮಾಧಿ ಗುಂಡಿ ತೆಗೆಯಲು ನಿರಾಕರಿಸಿದ ವಿಚಾರವನ್ನು ನೆಪವನ್ನಾಗಿ ಮಾಡಿಕೊಂಡು ದೇವಪ್ಪ ಹಾಗೂ ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಲ್ಲದೆ, ನೀರು ತರಲು ತೆರಳಿದ್ದ ವೇಳೆ ಜಾತಿ ನಿಂದನೆ ಮಾಡಿರುವುದು ಸಾಮಾಜಿಕ ಬಹಿಷ್ಕಾರದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆರೋಪಿಸಿದರು.

ಪ್ರಕರಣದಲ್ಲಿ 17 ಜನರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಗ್ರಾಮದಲ್ಲಿರುವ ದಲಿತ ಕುಟುಂಬಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಸ್ವಯಂ ಉದ್ಯೋಗಕ್ಕಾಗಿ ಧನಸಹಾಯ ನೀಡಬೇಕು. ಮಹಿಳಾ ಶೌಚಾಲಯಗಳನ್ನು ನಿರ್ಮಿಸಬೇಕು ಹಾಗೂ ಮಹಿಳೆಯ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಸುರಪುರ ಬಂದ್‌ಗೆ ಕರೆ ನೀಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಿವೃತ್ತ ಉಪನ್ಯಾಸಕ ಮಾನು ಗುರಿಕಾರ ಮಾತನಾಡಿ, ಶಾಖಾಪುರ ಸೇರಿದಂತೆ ತಾಲೂಕಿನ ಯಾವುದೇ ಭಾಗದಲ್ಲಿ ದಲಿತರ ಮೇಲೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಡಿವೈಎಸ್ಪಿ ಜಾವೇದ್ ಇನಾಂದಾರ್ ಮಾತನಾಡಿ, ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅವರ ನಿರ್ದೇಶನದಂತೆ ಆರೋಪಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಹಾಗೂ ಅಗತ್ಯವಿದ್ದಲ್ಲಿ ರೌಡಿಶೀಟರ್ ತೆರೆಯುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಪ್ರತಿಭಟನಾಕಾರರು ಗೃಹ ಸಚಿವರಿಗೆ ಉದ್ದೇಶಿಸಿದ ಮನವಿ ಪತ್ರವನ್ನು ಡಿವೈಎಸ್ಪಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಅಝೀಝ್‌ ಸಾಬ್ ಐಕೂರು, ಚಂದ್ರಶೇಖರ ಕಟ್ಟಿಮನಿ, ಸಿದ್ದಣ್ಣ ಸುರಪುರಕರ್, ಗಣಪತಿ ದೇವಿಕೇರಾ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ ದೊಡ್ಡಮನಿ ಶೆಳ್ಳಗಿ, ಶರಣಪ್ಪ ನಗನೂರ, ಖಾಜಾ ಹುಸೇನಾ ಗುಡಗುಂಟಿ, ರಾಮಣ್ಣ ಬಬಲಾದ, ಮುತ್ತುರಾಜ ಹುಲಿಕೇರಿ, ಮಹೇಶ ಸುಂಗಲಕರ್, ಸಂಗಪ್ಪ ಚಿಂಚೋಳಿ, ಹುಲಗಪ್ಪ ಬೈಲಕುಂಟಿ ಸೇರಿದಂತೆ ಶಖಾಪುರ ಎಸ್ ಹೆಚ್ ಗ್ರಾಮದ ದಲಿತ ಸಮುದಾಯದ ಮಹಿಳೆಯರು ಕೂಡ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News