ಯಾದಗಿರಿ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣ : ಸ್ಥಳಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ
ಯಾದಗಿರಿ, ಆ.5: ಜಿಲ್ಲೆಯ ಕಡೆಚೂರು–ಬಾಡಿಯಾಲ ಕೈಗಾರಿಕಾ ಪ್ರದೇಶದಲ್ಲಿರುವ ಸೀಲ್ ಲ್ಯಾಬೊರೇಟರಿ ರಾಸಾಯನಿಕ ಕಾರ್ಖಾನೆಯಲ್ಲಿ ಮಂಗಳವಾರ ತಡರಾತ್ರಿ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕಾರ್ಖಾನೆಯಲ್ಲಿ ಏಕಾಏಕಿ ವಿಷಾನಿಲ ಸೋರಿಕೆಯಾಗಿದ್ದು, ಕರ್ತವ್ಯದಲ್ಲಿದ್ದ ಕಾರ್ಮಿಕರಾದ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಆಲಂಪಳ್ಳಿ ಗ್ರಾಮದ ಕಟ್ಲಾ ಗಣೇಶ್, ಮಧ್ಯಪ್ರದೇಶದ ವಿಕ್ರಮ್ ಸಿಂಗ್ ಗೋಂಡ ಹಾಗೂ ಸಂಜಯ್ ಸಿಂಗ್ ಗೋಂಡ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮಂಚಾಲ ಹೆಮಂತ್ ಮತ್ತು ಮಂಚಾಲ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಿಲ ಸೋರಿಕೆಗೆ ಕಾರಣವಾದ ಅಂಶಗಳು, ಕಾರ್ಖಾನೆಯ ಸುರಕ್ಷತಾ ಕ್ರಮಗಳು ಹಾಗೂ ಘಟನೆಯ ಹಿನ್ನೆಲೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಗಮನಾರ್ಹವಾಗಿ, ಇದೇ ಕಾರ್ಖಾನೆಯಲ್ಲಿ ಸುಮಾರು ಆರು ತಿಂಗಳ ಹಿಂದೆ ನಡೆದಿದ್ದ ಮತ್ತೊಂದು ಅನಿಲ ಸೋರಿಕೆ ಘಟನೆಯಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದರು. ಮರುಕಳಿಸಿರುವ ಈ ಅವಘಡದಿಂದ ಕಾರ್ಮಿಕರ ಸುರಕ್ಷತೆ ಕುರಿತು ಕಾರ್ಖಾನೆ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ.
ಉನ್ನತ ಮಟ್ಟದ ತನಿಖೆಗೆ ಸೂಚನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್
ಬರ ಪರಿಶೀಲನೆಗಾಗಿ ಯಾದಗಿರಿಗೆ ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಿದ್ದು, ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಿಸಿದ ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.