ಯಾದಗಿರಿ: ಪ್ರಪಂಚದ ಜ್ಞಾನವನ್ನು ಹೊಂದಲು ಅತ್ಯುತ್ತಮ ಮಾರ್ಗವೇ ಪ್ರವಾಸವಾಗಿದ್ದು, ಪ್ರವಾಸಿ ತಾಣಗಳ ವೈವಿಧ್ಯತೆಯಿಂದ ಭಾರತ ವಿಶ್ವದಲ್ಲೇ ಜಗತ್ಪ್ರಸಿದ್ಧ ರಾಷ್ಟ್ರವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಲುಂಬಿನಿ ಗಾರ್ಡನ್‌ನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಇಲಾಖೆಯು ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ ಕೋಟೆ, ಸಣ್ಣಕೆರೆ, ಹತ್ತಿಕುಣಿ ಆಣೆಕಟ್ಟು, ಧಬಧಬಿ ಜಲಪಾತ ಸೇರಿದಂತೆ ಒಟ್ಟು 21 ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಮಾಹಿತಿ ಒದಗಿಸುವ ಉದ್ದೇಶದಿಂದ ಇಲಾಖೆಯ ವತಿಯಿಂದ 20 ಪ್ರವಾಸಿ ಮಿತ್ರರಿಗೆ ತರಬೇತಿ ನೀಡಲಾಗಿದ್ದು, ಸರದಿಯಂತೆ 13 ಮಂದಿಯನ್ನು ವಿವಿಧ ತಾಣಗಳಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಣ್ಣೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ತಿಪ್ಪಣ್ಣ, ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡರ್ ಈರಣ್ಣ, ಕಲಾಶಿಕ್ಷಕ ಮೇಘನಾಥ ಬೆಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor