Yadagiri | ಪ್ರಜಾಸೇವಾ ಕಾರ್ಯಕ್ರಮ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕರವೇ ಆಕ್ರೋಶ
ಯಾದಗಿರಿ: ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಕಾರ್ಯಕ್ರಮವನ್ನು ಹತ್ತಿಕುಣಿ ಗ್ರಾಮದಲ್ಲಿ ಕಾಟಾಚಾರದಂತೆ ನಡೆಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ಹಾಜರಿದ್ದ ಅಧಿಕಾರಿಗಳೂ ಜನರ ಅಹವಾಲುಗಳಿಗೆ ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರಿಂದ ಅರ್ಜಿಗಳನ್ನು ಕೇವಲ ಔಪಚಾರಿಕವಾಗಿ ಸ್ವೀಕರಿಸಿ, ವಿವಿಧ ಸಬೂಬುಗಳನ್ನು ಹೇಳುತ್ತಾ ಕಾಲಹರಣ ಮಾಡಲಾಗಿದೆ. ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದೆ ಮುಗ್ಧ ಜನರನ್ನು ನಿರಾಶೆಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹತ್ತಿಕುಣಿ ಗ್ರಾಮಸ್ಥರು ಗ್ರಾಮದಲ್ಲಿರುವ ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಯ ಸೇವೆಗಳನ್ನು ಗಮನದಲ್ಲಿಟ್ಟುಕೊಂಡು 24 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಗ್ರಾಮದ ಹಲವು ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರ ಇಲಾಖೆಗಳು ನಿರ್ಮಿಸಿರುವ ಹಲವು ಕಟ್ಟಡ ಕಾಮಗಾರಿಗಳು ಅರ್ಧಂಬರ್ಧ ಸ್ಥಿತಿಯಲ್ಲಿದ್ದು, ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ ಮೂರು ವರ್ಷಗಳಿಂದ ಹತ್ತಿಕುಣಿಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಉತ್ತಮ ರಸ್ತೆಗಳನ್ನೇ ಅಗೆದು ಹಾಳು ಮಾಡಲಾಗಿದೆ. ಇದರಿಂದ ಸಾರ್ವಜನಿಕರ ನಿತ್ಯ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೆಜೆಎಂ ಕಾಮಗಾರಿಯಿಂದ ಹದಗೆಟ್ಟ ಎಲ್ಲ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಬೇಕು. ಶೇ.70ರಷ್ಟು ಕಾಮಗಾರಿ ಪೂರ್ಣಗೊಳ್ಳದಿದ್ದರೂ ಬೋಗಸ್ ಬಿಲ್ ಮಾಡಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗಪ್ಪ ಗೋಪಾಳಪೂರ, ಮಲ್ಲಿಕಾರ್ಜುನ ಕನ್ನಡಿ, ಶರಣು ಮಡಿವಾಳ, ಭೀಮರಾಯ ಸಾತನೂರ, ಶರಣು ಡೋಣಗಾಂವ್, ಮಾರ್ಥಂಡ ದೇವಕರ್, ಸಾಬು ವರ್ಕನಳ್ಳಿ, ಕಾಶೀನಾಥ ಹೊನ್ನಪ್ಪನೋರ್ ಹಾಗೂ ಮಶೆಪ್ಪ ನಾಯಕ ಒತ್ತಾಯಿಸಿದ್ದಾರೆ.