Yadagiri | ಸಂಚಾರಿ ನಿಯಮ ಪಾಲಿಸಿ, ಜೀವ ಉಳಿಸಿಕೊಳ್ಳಿ: ನ್ಯಾ.ಮರುಳಸಿದ್ದಾರಾಧ್ಯ
ಯಾದಗಿರಿ: ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜೀವಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್.ಜೆ. ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ನಗರದ ಹಳೆ ಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ಸಂಚಾರಿ ನಿಯಮಗಳ ಪಾಲನಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಟೋರಿಕ್ಷಾಗಳಲ್ಲಿ ಏಳು-ಎಂಟು ಜನರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಮೂರು-ನಾಲ್ಕು ಜನರು ಸಂಚರಿಸುವುದು, ಹೆಲ್ಮೆಟ್ ಧರಿಸದೇ ಮತ್ತು ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸುವುದು ಅಪಘಾತದ ವೇಳೆ ಜೀವಕ್ಕೆ ಅಪಾಯ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಸಂಚಾರಿ ನಿಯಮಗಳನ್ನು ಪಾಲಿಸುವುದು ಕೇವಲ ಕಾನೂನು ಪಾಲನೆಯಲ್ಲ, ಜೀವ ರಕ್ಷಣೆಯ ಜವಾಬ್ದಾರಿಯೂ ಆಗಿದೆ. ಪ್ರತಿಯೊಬ್ಬರೂ ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ, ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡರ್ ಈರಣ್ಣ ಹಾಗೂ ಮಲ್ಲಿಕಾರ್ಜುನ ಶಿರಗೋಳ ಉಪಸ್ಥಿತರಿದ್ದರು.