ಸುರಪುರ: ಪಟ್ಟಣದ ಗಣೇಶ ಮೆರವಣಿಗೆ ವೇಳೆ ಆರಕ್ಷಕ ನಿರೀಕ್ಷಕ ಉಮೇಶ ಎಂ. ನಾಯಕ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದ ದೃಶ್ಯ ಹಾಗೂ ಮಲಿಕ್ ಚಾಮನಾಳ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಭಾಗವಹಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಭೀಮನಗೌಡ ಹೇಮನೂರ, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಆರಕ್ಷಕ ನಿರೀಕ್ಷಕ ಉಮೇಶ ಎಂ. ನಾಯಕ ಅವರು ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಈ ವೇಳೆ ಸಂಭ್ರಮದಲ್ಲಿ ಕೆಲವರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದು, ಬಳಿಕ ಅವರು ಕೆಳಗಿಳಿದು ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ದೃಶ್ಯವನ್ನು ನೆಪವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿ ಪೊಲೀಸ್ ಅಧಿಕಾರಿಗಳ ಮನೋಬಲ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅವರು ಹೇಳಿದರು.

ಅದೇ ರೀತಿ, ಜುಲೈ 2ರಂದು ಶಹಾಪುರದ ಬಳಿ ನಡೆದ ಮಲಿಕ್ ಚಾಮನಾಳ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಜಾವಿದ್ ಇನಾಂದಾರ್, ಸುರಪುರ ಠಾಣೆಯ ಆರಕ್ಷಕ ನಿರೀಕ್ಷಕ ಉಮೇಶ ಎಂ. ನಾಯಕ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿಸಿದರು.

ಮಲಿಕ್ ಚಾಮನಾಳ ಅವರ ವಿರುದ್ಧ ಯಾವುದೇ ರೌಡಿಶೀಟ್ ಅಥವಾ ಕ್ರಿಮಿನಲ್ ಪ್ರಕರಣ ಇಲ್ಲ. ಪ್ರೀತಿಯಿಂದ ಆಹ್ವಾನಿಸಿದ್ದರಿಂದ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದನ್ನೇ ಅಪರಾಧವೆಂಬಂತೆ ಬಿಂಬಿಸುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಭೀಮನಗೌಡ ಹೇಮನೂರ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹರಡದೆ, ಪೊಲೀಸ್ ಇಲಾಖೆಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ರಮೇಶ ದೊರೆ ಅಲ್ದಾಳ ಹಾಗೂ ವೆಂಕಟೇಶ ಬೇಟೆಗಾರ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಭೀಮು ನಾಯಕ ಮಲ್ಲಿಭಾವಿ, ನಾಗರಾಜ ನಾಯಕ ಪ್ಯಾಪ್ಲಿ, ಸಂಜೀವ ನಾಯಕ, ರಂಗನಾಥ ನಾಯಕ ಜಾಲಹಳ್ಳಿ, ವಿಜಯಕುಮಾರ ಚಿಟ್ಟಿ, ವೆಂಕಟೇಶ ನಾಯಕ ಬೈರಿಮಡ್ಡಿ, ಶ್ರೀನಿವಾಸ ನಾಯಕ ಲಕ್ಷ್ಮೀಪುರ, ದಶರಥ ನಾಯಕ, ಡಿ.ಟಿ. ಮಕಾಶಿ, ಮಾರ್ಥಂಡಪ್ಪ ದೊರಿ, ಬಸವರಾಜ ಶಹಾಪುರ, ದೇವರಾಜ ನಾಯಕ, ಮಾನಯ್ಯ ದೊರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor