×
Ad

ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಅತಿವೃಷ್ಟಿಯಿಂದ ನಷ್ಟವಾದ ರೈತರಿಗೆ ಮಾನವೀಯ ನೆಲೆಯಲ್ಲಿ ಸಮೀಕ್ಷೆ ನಡೆಸಬೇಕು : ಸಚಿವ ಶರಣಬಸಪ್ಪ ದರ್ಶನಾಪುರ

Update: 2025-09-16 18:17 IST

ಯಾದಗಿರಿ : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ನ್ಯಾಯಯುತ ಪರಿಹಾರ ದೊರಕುವಂತೆ, ಯಾವುದೇ ಅರ್ಹ ರೈತರ ಜಮೀನು ಬಿಟ್ಟುಹೋಗದಂತೆ ಸಮಗ್ರ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿವೃಷ್ಟಿಯಿಂದ ನಷ್ಟವಾದ ರೈತರಿಗೆ ಮಾನವೀಯ ನೆಲೆಯಲ್ಲಿ ಸಮೀಕ್ಷೆ ನಡೆಸಬೇಕು. ಸಲ್ಲಿಸಲಾದ ವರದಿ ಪುನರ್ ಪರಿಶೀಲನೆಯ ನಂತರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ರೈತರಿಗೆ ಬೀಜ, ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಡೀಲರ್‌ಗಳಿಂದ ಅಕ್ರಮ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿಮೆ ಹಣ ಸಕಾಲಕ್ಕೆ ಬಿಡುಗಡೆ ಆಗುವಂತೆ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಜಲಜೀವನ್‌ ಮಿಷನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಪೈಪ್‌ಲೈನ್ ಅಳವಡಿಕೆ ಕ್ರಮವನ್ನು ನೀರಿನ ಲಭ್ಯತೆ ಆಧಾರವಾಗಿ ಕೈಗೊಳ್ಳಬೇಕು. ಜಲಧಾರೆ ಯೋಜನೆಯಡಿಯಲ್ಲಿ ಬಾಕಿ ಉಳಿದಿರುವ ಓಹೆಚ್ಡಿ ಕಾಮಗಾರಿಗಳಿಗೆ ಸ್ಥಳ ಗುರುತಿಸಿ ವೇಗ ಹೆಚ್ಚಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸರಬರಾಜು ತಡೆಗೆ ತೀವ್ರ ನಿಗಾ ವಹಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ತಕ್ಷಣ ದುರಸ್ತಿ ಅಥವಾ ಬದಲಾವಣೆಗೊಳ್ಳಬೇಕು. ಸ್ವಂತ ಅಂಗನವಾಡಿ ಕಟ್ಟಡಗಳಿಲ್ಲದ ಕಡೆ ಸ್ಥಳ ಗುರುತಿಸಬೇಕು. ಹಾಳಾದ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು. ಜೊತೆಗೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ಸುಧಾರಣೆಗೆ ತಕ್ಷಣ ಕ್ರಮಕೈಗೊಳ್ಳಲು ಆದೇಶಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ, ಸಂಸದ ಜಿ.ಕುಮಾರ್ ನಾಯಕ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ್ ನಾಯಕ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News