ಶಹಾಪುರ | ಮಹಿಳಾ ಸಮಾನತೆಗೆ ಧ್ವನಿ ಎತ್ತಿದ ಪ್ರಜಾಪ್ರಭುತ್ವವಾದಿ ಬಸವಣ್ಣ: ಡಾ.ಜಯದೇವಿ ಗಾಯಕವಾಡ
ಶಹಾಪುರ :ಮಹಿಳೆಯರನ್ನು ಕೀಳು ಎಂದು ಕಾಣುತ್ತಿದ್ದ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ವೇದಾಗಮಗಳು ಸಾರುತ್ತಿದ್ದ ಕಾಲಘಟ್ಟದಲ್ಲೇ ಮಹಿಳಾ ಸಮಾನತೆಗೆ ಧ್ವನಿ ಎತ್ತಿದ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಎಂದು ಡಾ. ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು.
ನಗರದ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಆಯೋಜಿಸಿದ್ದ ತಿಂಗಳ ಬಸವ ಬೆಳಕು–129ನೇ ಸಭೆಯಲ್ಲಿ ಅವರು “ಶಿವಶರಣೆಯರ ವಚನಗಳಲ್ಲಿ ವೈಚಾರಿಕತೆ” ವಿಷಯದ ಕುರಿತು ಅನುಭಾವಿಯಾಗಿ ಮಾತನಾಡಿದರು.
ಮಹಿಳೆಯರು ಸಮಾಜದಲ್ಲಿ ಕಾಣಿಸಿಕೊಳ್ಳಬಾರದು ಎಂಬ ನಿಷೇಧವಿದ್ದ ಕಾಲದಲ್ಲಿ, ಅವರನ್ನು ಅನುಭವ ಮಂಟಪಕ್ಕೆ ಆಹ್ವಾನಿಸಿ ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುವ ಅವಕಾಶ ಕಲ್ಪಿಸಿದ್ದು ಬಸವಣ್ಣನವರ ಮಹತ್ತರ ಸಾಧನೆ ಎಂದು ಅವರು ಹೇಳಿದರು.
ಆಯ್ದಕ್ಕಿ ಮಾರಯ್ಯ ಶರಣರು ಕಾಯಕ ಮರೆತು ವಿಚಾರಮಂಥನದಲ್ಲಿ ತೊಡಗಿದ್ದಾಗ, ಆಯ್ದಕ್ಕಿ ಲಕ್ಕಮ್ಮ ‘ಹೋಗಯ್ಯ’ ಎಂದು ಎಚ್ಚರಿಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ಮಹಿಳೆಯರ ವೈಚಾರಿಕ ಶಕ್ತಿಯನ್ನು ಬಸವಣ್ಣ ಗುರುತಿಸಿದ್ದರ ಸಾಕ್ಷ್ಯ ಇದಾಗಿದೆ ಎಂದರು.
“ಕನ್ನೆಯ ಸ್ನೇಹವೇ ಕೂಡಲ ಸಂಗಮ ದೇವನ ನಿಲುವು” ಎಂಬ ಬಸವಣ್ಣನವರ ವಚನದ ಮೂಲಕ ಮಹಿಳೆಯರಿಗೆ ಸ್ವತಂತ್ರ ವೈಚಾರಿಕ ಮಾರ್ಗವನ್ನು ತೆರೆದಿದ್ದಾರೆ ಎಂದು ತಿಳಿಸಿದರು. ಸತ್ಯಕ್ಕ, ಕಾಳವ್ವೆ, ಕದಿರೆಯ ರೆಮ್ಮವ್ವೆ ಸೇರಿದಂತೆ ಅನೇಕ ವಚನಕಾರ್ತಿಯರ ವಚನಗಳು ಜಡ ವ್ಯವಸ್ಥೆಯನ್ನು ಪ್ರಶ್ನಿಸುವ ಶಕ್ತಿಯನ್ನು ಹೊಂದಿವೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಲಬುರಗಿ ವಿಶ್ವವಿದ್ಯಾಲಯದ ಡಾ. ಎಂ.ಬಿ. ಕಟ್ಟಿ, ಕುಂಬಾರ, ಕಂಬಾರ, ಕಮ್ಮಾರ, ಹಡಪದ, ಚಮ್ಮಾರ ಇವು ಉದ್ಯೋಗಗಳೇ ಹೊರತು ಜಾತಿಗಳಲ್ಲ. ಆದರೆ ಸ್ಥಾಪಿತ ವ್ಯವಸ್ಥೆ ಕಾಯಕಗಳನ್ನು ಜಾತಿಗಳಾಗಿ ಪರಿವರ್ತಿಸಿ ಸಮಾಜದಲ್ಲಿ ಮೇಲು–ಕೀಳು ಭಾವನೆ ಸೃಷ್ಟಿಸಿದೆ ಎಂದು ಹೇಳಿದರು.
ಗುಂಡಣ್ಣ ಕಲಬುರ್ಗಿ ಮಾತನಾಡಿ, ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಭಾರತೀಯ ಶಿಕ್ಷಣ ನೀತಿ ವಿಫಲವಾದ ಪರಿಣಾಮ ಸಮಾಜದಲ್ಲಿ ಜಾತೀಯತೆ, ಅಂಧಶ್ರದ್ಧೆ, ದೇವರು–ದೆವ್ವ, ಜೋತಿಷ್ಯಗಳಂತಹ ಕಲ್ಪನೆಗಳು ಬಲಿಷ್ಠವಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಭಾಷಣದಲ್ಲಿ ವಿಶ್ವಾರಾಧ್ಯ ಸತ್ಯಂಪೇಟೆ, ಸಮಾಜದ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಗತಿಗೆ ಅಡ್ಡಿಯಾಗಿರುವುದು ಓದು ಮತ್ತು ಆಲೋಚನೆಗಳ ಕೊರತೆ ಎಂದರು. ಪ್ರಶ್ನೆ ಹುಟ್ಟಿದಾಗಲೇ ಸತ್ಯದ ಅನಾವರಣವಾಗುತ್ತದೆ ಎಂದು ಹೇಳಿದರು.
ಸಭೆಯ ಸಾನಿಧ್ಯವನ್ನು ಗುರುಮಠಕಲ್ಲ ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮಿಗಳು ವಹಿಸಿದ್ದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಸಂಪು, ಪೂಜಾ ಹಾಗೂ ಶರಾವತಿ ವಚನ ಪ್ರಾರ್ಥನೆ ಸಲ್ಲಿಸಿದರು. ಲಕ್ಷ್ಮಣ ಲಾಳಸೇರಿ ಶರಣು ಸಮರ್ಪಣೆ ಮಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಷಣ್ಮುಖ ಅಣಬಿ, ಪಂಪಣ್ಣಗೌಡ ಮಳಗ, ಚೆನ್ನಪ್ಪ ಹರನೂರ, ಸಂಗಣ್ಣಗೌಡ ವಡಿಗೇರಿ, ಮರೆಪ್ಪ ಅಣಬಿ, ಶಿವಕುಮಾರ ಕರದಳ್ಳಿ, ಶಿವಲಿಂಗಪ್ಪ ಎಚ್.ಎಂ., ತಿಪ್ಪಣ್ಣ ಶಿಕ್ಷಕರು, ಶಿವಯೋಗಪ್ಪ ಹವಾಲ್ದಾರ, ಸೃಷ್ಟಿ ಬಸವರಾಜ ನಂದಿ, ಪಲ್ಲವಿ ಜಾಲವಾದಿ, ಲಲಿತಾ ಶರಣಪ್ಪ ಯಡ್ರಾಮಿ, ಸಿದ್ದಲಿಂಗಪ್ಪ ಆನೇಗುಂದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.