×
Ad

ಯಾದಗಿರಿ | ವಿಬಿ ಜಿ ರಾಮ್ ಜಿ ವಾಪಸ್ ಪಡೆದು ನರೇಗಾ ಪುನರ್‌ಸ್ಥಾಪನೆಗೆ ಆಗ್ರಹಿಸಿ ಎಐಕೆಕೆಎಂಎಸ್ ಪ್ರತಿಭಟನೆ

Update: 2026-01-27 21:56 IST

ಯಾದಗಿರಿ : ವಿಬಿ ಜಿ ರಾಮ್ ಜಿ ಯೋಜನೆಯನ್ನು ತಕ್ಷಣವೇ ವಾಪಸ್ ಪಡೆದು, ಉದ್ಯೋಗ ಖಾತ್ರಿ ಹೊಂದಿರುವ ನರೇಗಾ ಯೋಜನೆಯನ್ನು ಪುನರ್‌ಸ್ಥಾಪಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಯಾದಗಿರಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ಮನವಿ ಸಲ್ಲಿಸಿ ಮಾತನಾಡಿದ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ತಮ್ಮ ಊರುಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ 2005ರಲ್ಲಿ ಜಾರಿಗೊಂಡ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿತ್ತು ಎಂದು ಹೇಳಿದರು. ಆದರೆ ಉದ್ಯೋಗ ಖಾತ್ರಿ ಇಲ್ಲದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರ ಬದುಕನ್ನೇ ಅಪಾಯಕ್ಕೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಒಳಸುರಿವುಗಳ ದರ ಹೆಚ್ಚಳ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಹಾಗೂ ಪ್ರಾಕೃತಿಕ ವಿಕೋಪಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ಆಸರೆಯಾಗಿರುವ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವುದು ಭಾರೀ ಅನ್ಯಾಯ ಎಂದು ಅವರು ಎಚ್ಚರಿಸಿದರು.

ಪ್ರತಿ ಕೇಂದ್ರ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ಹಣ ಕಡಿತಗೊಳಿಸಲಾಗುತ್ತಿದ್ದು, ಇದೀಗ ಹೊಸ ಯೋಜನೆಯ ಮೂಲಕ ಗ್ರಾಮೀಣ ಉದ್ಯೋಗ ಖಾತ್ರಿಗೆ ಕೊಡಲಿ ಪೆಟ್ಟು ನೀಡಲಾಗಿದೆ ಎಂದು ಟೀಕಿಸಿದರು. ನರೇಗಾ ಯೋಜನೆಯಿಂದ 12 ಕೋಟಿಗೂ ಹೆಚ್ಚು ಜನರು ಜೀವನ ಸಾಗಿಸುತ್ತಿದ್ದು, ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿತ್ತು ಎಂದರು.

ಹೊಸ ಯೋಜನೆಯಂತೆ ಕೂಲಿ ವೆಚ್ಚದ ಶೇ.60ನ್ನು ಕೇಂದ್ರ ಸರ್ಕಾರ ಹಾಗೂ ಶೇ.40ನ್ನು ರಾಜ್ಯ ಸರ್ಕಾರ ಭರಿಸಬೇಕಿರುವುದರಿಂದ, ಕೂಲಿ ಕಾರ್ಮಿಕರಿಗೆ ದುಡಿದ ಹಣ ಸಮಯಕ್ಕೆ ಸಿಗುತ್ತದೆಯೇ ಎಂಬ ಅನುಮಾನವಿದೆ. ಈಗಾಗಲೇ ರಾಜ್ಯ ಸರ್ಕಾರ ಹಣಕಾಸಿನ ಕೊರತೆ ಉಲ್ಲೇಖಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಹೇಳಿದರು.

ನರೇಗಾ ಯೋಜನೆಯಡಿ ಕೆಲಸ ಕೇಳುವ ಹಕ್ಕು, ಸ್ಪಷ್ಟ ಕ್ರಿಯಾ ಯೋಜನೆಗಳು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಅವಕಾಶವಿತ್ತು. ಆದರೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಸ್ಪಷ್ಟ ಕ್ರಿಯಾ ಯೋಜನೆಗಳಿಲ್ಲದಿರುವುದು ಗ್ರಾಮೀಣ ಬದುಕಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ನರೇಗಾ ಯೋಜನೆಯನ್ನು ವಿಸ್ತರಿಸಿ ವರ್ಷಕ್ಕೆ 200 ಮಾನವ ದಿನಗಳ ಕೆಲಸ ಹಾಗೂ 600 ರೂ. ಕೂಲಿ ನೀಡಬೇಕಿತ್ತು. ಬದಲಾಗಿ ಹೊಸ ಯೋಜನೆಯಿಂದ ನಿರುದ್ಯೋಗ ಮತ್ತು ವಲಸೆ ಹೆಚ್ಚಾಗಲಿದೆ ಎಂದು ಹೇಳಿದರು.

ಆದ್ದರಿಂದ ಕೇಂದ್ರ ಸರ್ಕಾರವು ವಿಬಿ ಜಿ ರಾಮ್ ಜಿ ಯೋಜನೆಯನ್ನು ತಕ್ಷಣವೇ ವಾಪಸ್ ಪಡೆದು, ನರೇಗಾ ಯೋಜನೆಯನ್ನು ಪುನರ್‌ಸ್ಥಾಪಿಸಬೇಕು. ಇಲ್ಲದಿದ್ದರೆ ಗ್ರಾಮೀಣ ಬದುಕಿನ ರಕ್ಷಣೆಗೆ ದೇಶವ್ಯಾಪಿ ಬಲಿಷ್ಠ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ ಹಿರೇಬಾನರ್, ಉಪಾಧ್ಯಕ್ಷರಾದ ಸಿದ್ದಪ್ಪ ಬಡಿಗೇರ, ಜಮಾಲ್‌ಸಾಬ್‌, ಸಹ ಕಾರ್ಯದರ್ಶಿ ಸುಭಾಷ್‌ಚಂದ್ರ ಬಾವನೋರ್‌, ಜಿಲ್ಲಾ ಸಮಿತಿ ಸದಸ್ಯರಾದ ರಾಜು ಹಿಮ್ಲಾಪುರ, ಮರೆಪ್ಪ ಹಂಪಿನ್, ಮಲ್ಲಪ್ಪ, ಸಿದ್ದಪ್ಪ, ಶೇಖರ್, ಶರಣಪ್ಪ, ಬಸಪ್ಪ, ತರಭಿ, ಸುಶೀಲಮ್ಮ, ರುದ್ರಮ್ಮ, ಭೀಮಮ್ಮ, ಅಭಿದ ಬೇಗಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News